ಸಚಿವ ಖಾದರ್ ಘೋಷಿಸಿದ್ದ ಯೋಜನೆ
Team Udayavani, Nov 20, 2017, 11:49 AM IST
ಮಹಾನಗರ: ಮಾಜಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಕನಸಿನ ಯೋಜನೆಯಾದ ‘ಹೆಲ್ತ್ ಕಿಯೋಸ್ಕ್’ (ಆರೋಗ್ಯ ಸಹಾಯ ಕೇಂದ್ರ) ಆರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ಹಾಗೂ ಉಳ್ಳಾಲ ವ್ಯಾಪ್ತಿಯಲ್ಲಿ 4 ಕೇಂದ್ರಗಳ ಆರಂಭಕ್ಕೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.
ಜನಸಾಮಾನ್ಯರಿಗೆ ಆವಶ್ಯಕ ಆರೋಗ್ಯ ಸೇವೆ ನೀಡುವ ಹಾಗೂ ಅವರಿಗೆ ದೊರಕುವ ಆರೋಗ್ಯ ಸವಲತ್ತುಗಳ ಬಗ್ಗೆ ಅರಿವು ಮೂಡಿಸಲು ‘ಹೆಲ್ತ್ ಕಿಯೋಸ್ಕ್’ ಆರಂಭಿಸುವುದಾಗಿ ಖಾದರ್ ಆರೋಗ್ಯ ಸಚಿವರಾಗಿದ್ದಾಗ ಪ್ರಕಟಿಸಿದ್ದರು. ಅವರ ಖಾತೆ ಬದಲಾಗಿದ್ದರಿಂದ ಯೋಜನೆಗೆ ವಿಶೇಷ ಒತ್ತು ನೀಡಲು ಸಾಧ್ಯವಾಗಿರಲಿಲ್ಲ. ಈಗ ಯೋಜನೆ ಜಾರಿಗೆ ತರಬೇಕು ಎಂಬ ಹಂಬಲದಿಂದ ಆಹಾರ ಸಚಿವ ಖಾದರ್ ಅವರು ಆರೋಗ್ಯ ಇಲಾಖೆಗೆ ಸೂಚನೆ ನೀಡಿದ ಪರಿಣಾಮ ‘ಹೆಲ್ತ್ ಕಿಯೋಸ್ಕ್’ ಆರಂಭಕ್ಕೆ ಸಿದ್ಧತೆ ನಡೆದಿದೆ.
ಜಿಲ್ಲೆಯ ಒಟ್ಟು 9 ಪ್ರದೇಶಗಳಲ್ಲಿ ‘ಹೆಲ್ತ್ ಕಿಯೋಸ್ಕ್’ ಆರಂಭವಾಗಲಿದೆ. ಸರ್ವೆ ಮಾಡಿ ಸ್ಥಳ ಗುರುತಿಸುವಿಕೆ ಪೂರ್ಣಗೊಂಡಿದ್ದು, ಯೋಜನೆ ಅನುಷ್ಠಾನದ ಕಾಮಗಾರಿಗೆ ಶೀಘ್ರ ಚಾಲನೆ ಸಿಗಲಿದೆ. ತಾಯಿ-ಮಕ್ಕಳ ಆರೋಗ್ಯ ಸೇವೆ ಜತೆಗೆ ಬಿ.ಪಿ. ತಪಾಸಣೆ, ಡಯಾಬಿಟಿಸ್ ಪರೀಕ್ಷೆ ಹಾಗೂ ಪ್ರಾಥಮಿಕ ಹಂತದ ಕ್ಯಾನ್ಸರ್ ತಪಾಸಣೆ ಮುಂತಾದ ಸೇವೆ ಸಿಗಲಿದೆ.
ಕಬ್ಬಿಣ, ಫೈಬರ್/ಅಲ್ಯೂಮಿನಿಯಂ ಅಥವಾ ಇತರ ಲೋಹಗಳಿಂದ ಕಿಯೋಸ್ಕ್ ನಿರ್ಮಿಸಲಾಗುವುದು. ಅದರ ಸುತ್ತಳತೆ 10×10 ಅಡಿಗಳಾಗಿರುತ್ತದೆ. ರೋಗಿಗಳ ಪರೀಕ್ಷೆಗೆ ಪ್ರತ್ಯೇಕ ಸ್ಥಳಾವಕಾಶ, ಕುಳಿತು ಕೊಳ್ಳಲು ಆಸನ, ಬಿಪಿ, ಶುಗರ್, ಇತರ ಪರೀಕ್ಷೆಯ ಉಪಕರಣಗಳು, ತೂಕದ ಯಂತ್ರ ಮುಂತಾದ ವಸ್ತುಗಳು ಇರಲಿವೆ. ಆಯಾ ವ್ಯಾಪ್ತಿಯ ಮಹಿಳಾ ಆರೋಗ್ಯ ಸಮಿತಿ ಈ ಕಿಯೋಸ್ಕ್ ಬಗ್ಗೆ ಜನರಿಗೆ ಅರಿವು ನೀಡಿ, ಆವಶ್ಯಕ ಆರೋಗ್ಯ ಸೇವೆಯನ್ನು ಇಲ್ಲಿ ಪಡೆಯುವಂತೆ ಪ್ರೇರೇಪಿಸುವ ಕೆಲಸ ನಡೆಸಲಿದೆ. ಪ್ರಾಥಮಿಕ ಆರೋಗ್ಯ ಸೇವೆಯನ್ನು ಕಲ್ಪಿಸುವ ಜತೆಗೆ ಸರಕಾರದ ಇತರ ಆರೋಗ್ಯ ಸೇವೆಗಳ ಬಗ್ಗೆ ಅರಿವು ಹಾಗೂ ರೋಗಗಳನ್ನು ತಡೆಗಟ್ಟುವ ಕುರಿತ ಮಾಹಿತಿಗಳನ್ನು ಇಲ್ಲಿ ನೀಡಲಾಗುವುದು.
ಮೆಡಿಕಲ್ ಕಾಲೇಜಿಗೆ ಜವಾಬ್ದಾರಿ?
ಬೆಳಗ್ಗೆ 9ರಿಂದ ಸಂಜೆ ವರೆಗೆ ತೆರೆದಿರಿಸುವ ಯೋಚನೆ ಇದ್ದು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಅವರು ಮಧ್ಯಾಹ್ನದವರೆಗೆ ಕ್ಷೇತ್ರ ಕಾರ್ಯ ನಡೆಸುವ ಕಾರಣ ಅಲ್ಲಿಯ ತನಕ ನಿಗದಿತ ಮೆಡಿಕಲ್ ಕಾಲೇಜಿನ ತಜ್ಞರು ಕಾರ್ಯ ನಿರ್ವಹಿಸುವಂತಾದರೆ ಉತ್ತಮ ಎಂಬ ಅಭಿಪ್ರಾಯವಿದೆ. ಹೀಗಾಗಿ ಮೆಡಿಕಲ್ ಕಾಲೇಜಿನ ಜತೆಗೆ ಮಾತುಕತೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಆರ್‌ಸಿಎಚ್ ಅಧಿಕಾರಿ ಡಾ| ಅಶೋಕ್ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಜನ ಸಾಮಾನ್ಯರ ಆರೋಗ್ಯ ಸೇವೆಗೆ ಕಿಯೋಸ್ಕ್
ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಹೆಲ್ತ್ ಕಿಯೋಸ್ಕ್ ಆರಂಭಿಸುವ ಕುರಿತು ಘೋಷಿಸಲಾಗಿತ್ತು. ಇದರನ್ವಯ ಮಂಗಳೂರಿಗೆ 5 ಹಾಗೂ ಉಳ್ಳಾಲ ವ್ಯಾಪ್ತಿಗೆ 4 ಹೆಲ್ತ್ ಕಿಯೋಸ್ಕ್ ಗಳನ್ನು ತೆರೆಯಲು ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಜನಸಾಮಾನ್ಯರಿಗೆ ಆರೋಗ್ಯ ಸೇವೆಯು ಅತ್ಯಂತ ಸುಲಭವಾಗಿ ದೊರೆಯಬೇಕೆಂಬ ಉದ್ದೇಶದಿಂದ ಜನನಿಬಿಡ ಪ್ರದೇಶದಲ್ಲಿ ಹೆಲ್ತ್ ಕಿಯೋಸ್ಕ್ಗಳನ್ನು
ತೆರೆಯಲಾಗುವುದು.
– ಯು.ಟಿ.ಖಾದರ್,
ಆಹಾರ ಖಾತೆ ಸಚಿವರು
ಉದ್ದೇಶಿತ ಸ್ಥಳಗಳು
ಮಂಗಳೂರು ವ್ಯಾಪ್ತಿ: ಕೃಷ್ಣಾಪುರ, ಮೀನಕಳಿಯ, ಜಪ್ಪಿನ ಮೊಗರು, ಸರಿಪಲ್ಲ, ಅಳಕೆ
ಉಳ್ಳಾಲ ವ್ಯಾಪ್ತಿ: ಕೋಟೆಪುರ, ತೊಕ್ಕೊಟ್ಟು ಬಸ್ ನಿಲ್ದಾಣ, ಕುಲಾಲ ಭವನ, ಒಳಪೇಟೆ, ಅಂಬೇಡ್ಕರ್ ಭವನ
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.