ಜಯದೇವ ಫ್ಲೈಓವರ್ ನೆಲಸಮಕ್ಕೆ ದಿನಗಣನೆ
Team Udayavani, Nov 21, 2017, 12:17 PM IST
ಬೆಂಗಳೂರು: ಮೆಟ್ರೋ ಮಾರ್ಗಕ್ಕಾಗಿ ಬನ್ನೇರುಘಟ್ಟ ರಸ್ತೆಯ ಜಯದೇವ ಹೃದ್ರೋಗ ಆಸ್ಪತ್ರೆ ಬಳಿ ಇರುವ ಮೇಲ್ಸೇತುವೆ (ಮಾರೇನಹಳ್ಳಿ ಮೇಲ್ಸೇತುವೆ) ನೆಲಸಮಕ್ಕೆ ಸಂಚಾರ ಪೊಲೀಸರ ಅನುಮತಿ ದೊರಕಿದ್ದು, ಸೇತುವೆ ಧ್ವಂಸಕ್ಕೆ ದಿನಗಣನೆ ಶುರುವಾಗಿದೆ. ಪರಿಣಾಮ ಐಟಿ ಕಂಪೆನಿಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ವಾಹನ ಸಂಚಾರ ಅಕ್ಷರಶಃ ನರಕವಾಗಲಿದೆ.
ಆರ್.ವಿ. ರಸ್ತೆ-ಸಿಲ್ಕ್ಬೋರ್ಡ್ ಜಂಕ್ಷನ್ ನಡುವಿನ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಮೇಲ್ಸೇತುವೆ ನೆಲಸಮಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಸಂಚಾರ ಪೊಲೀಸರ ಅನುಮತಿಯೂ ದೊರಕಿದೆ. ಅಲ್ಲದೆ, ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪೆನಿ (ಎಚ್‌ಸಿಸಿ) ಮತ್ತು ಯುಆರ್‌ಸಿ ಕನ್‌ಸ್ಟ್ರಕ್ಷನ್‌ಗೆ ಟೆಂಡರ್ ನೀಡಲಾಗಿತ್ತು, ಸಿವಿಲ್ ಕಾಮಗಾರಿಯ ಯೋಜನಾ ವೆಚ್ಚ 797.29 ಕೋಟಿ ರೂ. ಆಗಿದೆ. ಕಾಮಗಾರಿ ದಿನಾಂಕ ನಿಗದಿ ಮಾತ್ರ ಬಾಕಿ ಇದೆ.
ಅನುಮತಿ ದೊರಕಿದೆ – ಬಿಎಂಆರ್‌ಸಿ: ಆರ್.ವಿ. ರಸ್ತೆ-ಸಿಲ್ಕ್ಬೋರ್ಡ್ ಜಂಕ್ಷನ್ ನಡುವೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸಂಚಾರ ಪೊಲೀಸರಿಂದ ಅನುಮತಿ ದೊರಕಿದ್ದು, ಕಾಮಗಾರಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ನೆಲಸಮಗೊಳಿಸುವ ಕಾರ್ಯ ಶೀಘ್ರದಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಕೈಗೆತ್ತಿಕೊಳ್ಳಲಿದ್ದು, ಹೀಗೆ ಮೆಟ್ರೋ ಕಾಮಗಾರಿಗಾಗಿ ಧ್ವಂಸಗೊಳ್ಳುತ್ತಿರುವ ಮೊದಲ ಮೇಲ್ಸೇತುವೆ ಇದಾಗಿದೆ. ದಶಕದ ಹಿಂದಷ್ಟೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸುಮಾರು 21 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಈ ಮೇಲ್ಸೇತುವೆಯು ಬನ್ನೇರುಘಟ್ಟ ಮಾರ್ಗದ ಸಿಗ್ನಲ್ ಮುಕ್ತ ಸಂಚಾರ ಸೇವೆ ಒದಗಿಸುತ್ತಿದೆ.
ಆದರೆ, ಈಗ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ನೆಲಸಮಗೊಳಿಸಲಾಗುತ್ತಿದೆ. ಇಲ್ಲಿ ಮೂರು ಗ್ರೇಡ್ ಸೆಪರೇಟರ್‌ಗಳು ಹಾಗೂ ಎರಡು ಮೆಟ್ರೊ ಮಾರ್ಗಗಳನ್ನು ಒಳಗೊಂಡ ಐದು ಹಂತಗಳ ಸಂಚಾರ ವ್ಯವಸ್ಥೆ ಬರಲಿದೆ. ಒಂದು ಇಂಟರ್‌ಚೇಂಜ್ ಮೆಟೋ ನಿಲ್ದಾಣವೂ ಇಲ್ಲಿ ನಿರ್ಮಾಣಗೊಳ್ಳಲಿದೆ. ಮೇಲ್ಸೇತುವೆಯನ್ನು ನೆಲಸಮಗೊಳಿಸಲಾಗುತ್ತದೆ.
ಆದರೆ, ಈಗಿರುವ ಕೆಳಸೇತುವೆ ಹಾಗೆಯೇ ಉಳಿಸಿಕೊಳ್ಳಲಾಗುವುದು. ಡೇರಿ ವೃತ್ತದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸಂಪರ್ಕಿಸುವ ಬನ್ನೇರುಘಟ್ಟ ರಸ್ತೆಯಲ್ಲಿರುವ ಈ ಕೆಳಸೇತುವೆ ಮೊದಲ ಹಂತದಲ್ಲಿ ಇರಲಿದೆ. ಕೆಳಸೇತುವೆಯ ಮೇಲೆ ನೆಲಮಟ್ಟದಲ್ಲಿ ಎರಡೂ ದಿಕ್ಕುಗಳಲ್ಲಿ ರಸ್ತೆ ನಿರ್ಮಿಸಲಾಗುತ್ತದೆ. ಅವು ಎರಡನೇ ಹಂತದಲ್ಲಿ ಬರಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಏನೇನು ಬರುತ್ತೆ?: ಎತ್ತರಿಸಿದ (ಎಲಿವೇಟೆಡ್) ಚತುಷ್ಪಥ ರಸ್ತೆ ಮೂರನೇ ಹಂತದಲ್ಲಿ ನಿರ್ಮಾಣವಾಗಲಿದೆ. ಈ ಮೂರು ರಸ್ತೆಗಳ ಮೇಲ್ಭಾಗದಲ್ಲಿ ಒಂದರ ಮೇಲೆ ಒಂದರಂತೆ ಎರಡು ಪ್ರತ್ಯೇಕ ಮೆಟ್ರೋ ಮಾರ್ಗಗಳು (ಆರ್.ವಿ ರಸ್ತೆ ನಿಲ್ದಾಣಬೊಮ್ಮಸಂದ್ರ ಮಾರ್ಗ ಹಾಗೂ ಗೊಟ್ಟಿಗೆರೆನಾಗವಾರ ಮಾರ್ಗ) ಬರಲಿವೆ. ಈ ಎರಡೂ ಮಾರ್ಗಗಳನ್ನು ಒಳಗೊಂಡು ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣ ನಿರ್ಮಾಣವಾಗಲಿದೆ. ಇದು ನಗರದ ಇತರ ಮೆಟ್ರೋ ನಿಲ್ದಾಣಗಳಿಗಿಂತ ಭಿನ್ನವಾಗಿರಲಿದೆ.
ಜಯದೇವ ಬಳಿಯ 8 ಕಿ.ಮೀ. ಮೆಟ್ರೋ ಮಾರ್ಗವು ಜಯದೇವ ಆಸ್ಪತ್ರೆ ಆವರಣದಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು. ಇದಕ್ಕೆ ಆಸ್ಪತ್ರೆ ಆಕ್ಷೇಪ ವ್ಯಕ್ತಪಡಿಸಿತು. ಪರಿಣಾಮ ಆಸ್ಪತ್ರೆಯ ವಿರುದ್ಧ ದಿಕ್ಕಿನಲ್ಲಿರುವ ಸ್ಥಳಕ್ಕೆ ವರ್ಗಾವಣೆಗೊಂಡಿತ್ತು. ಇದಕ್ಕೂ ವಾಣಿಜ್ಯ ಕಟ್ಟಡಗಳು ಹಾಗೂ ಹಿರಿಯ ನಾಗರಿಕರ ಮನೆಗಳು ಸೇರಿದಂತೆ ಸುಮಾರು 90ಕ್ಕೂ ಹೆಚ್ಚು ಮನೆಗಳು ನೆಲಸಮಗೊಳ್ಳುತ್ತಿದ್ದವು.
ಈ ಬದಲಾವಣೆಯನ್ನು ಖಂಡಿಸಿ ಜಯದೇವ ಇಂಟರ್‌ಚೇಂಜ್ ಮೆಟ್ರೋ ಸಂತ್ರಸ್ತರ ವೇದಿಕೆ ವಿರೋಧ ವ್ಯಕ್ತಪಡಿಸಿತ್ತು. ಎತ್ತರಿಸಿದ ಮಾರ್ಗದಿಂದ ನಿವಾಸಿಗಳಿಗೆ ತೊಂದರೆಯಾಗಲಿದ್ದು, ಈ ಮಾರ್ಗವನ್ನು ಸುರಂಗ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂದೂ ವೇದಿಕೆ ಆಗ್ರಹಿಸಿತ್ತು.
ಆದರೆ, ಸುರಂಗ ಮಾರ್ಗ ನಿರ್ಮಾಣ ವೆಚ್ಚ ದುಪ್ಪಟ್ಟು ಆಗಲಿದೆ. ಈ ಹಿನ್ನೆಲೆಯಲ್ಲಿ ಎರಡೂ ಮಾರ್ಗಗಳನ್ನು ಕೈಬಿಟ್ಟು, ರಸ್ತೆ ಮಧ್ಯದಿಂದ ಮಾರ್ಗ ನಿರ್ಮಾಣಕ್ಕೆ ನಿಗಮ ನಿರ್ಧರಿಸಿತು. ಇದರಿಂದ ಕಟ್ಟಡಗಳನ್ನು ಕೆಡಹುವುದು ತಪ್ಪಲಿದೆ. ಈ ಕಾಮಗಾರಿಯನ್ನು 36 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ.
ಪರ್ಯಾಯ ವ್ಯವಸ್ಥೆ: ಮೇಲ್ಸೇತುವೆ ನೆಲಸಮಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಮಾರೇನಹಳ್ಳಿ ರಸ್ತೆ ಮಾರ್ಗವಾಗಿ ವಾಹನ ಸಂಚಾರಕ್ಕೆ ಪೊಲೀಸರು ಅವಕಾಶ ಕಲ್ಪಿಸಲಿದ್ದಾರೆ. ಭಾರೀ ವಾಹನಗಳು ರಾಗಿಗುಡ್ಡದಿಂದ ತಿಲಕನಗರ ಪೊಲೀಸ್ ಠಾಣೆ ಮಾರ್ಗದಲ್ಲಿ ತೆರಳಿ, ಅಲ್ಲಿ ತಿರುವು ಪಡೆದುಕೊಂಡು ಹೊಸೂರು ರಸ್ತೆಗೆ ತೆರಳಬಹುದು. ಅದೇ ರೀತಿ, ಹೊಸೂರು ರಸ್ತೆಯಿಂದ ಬರುವ ಭಾರೀ ವಾಹನಗಳು ಬನ್ನೇರುಘಟ್ಟ ರಸ್ತೆ ಬಳಿ ಎಡಕ್ಕೆ ತಿರುಗಿ, ಮೈಕೋ ಲೇಔಟ್ ಪೊಲೀಸ್ ಠಾಣೆ ಮೂಲಕ ಕನಕಪುರ ರಸ್ತೆಗೆ ತೆರಳಲು ಅನುವು ಮಾಡಿಕೊಡಲು ಚಿಂತನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.