ಉಡುಪಿ: ಐತಿಹಾಸಿಕ ಧರ್ಮಸಂಸದ್ ನಾಳೆಯಿಂದ
Team Udayavani, Nov 23, 2017, 6:00 AM IST
ಉಡುಪಿ: ಹಲವು ಆಯಾಮಗಳಲ್ಲಿ ಐತಿಹಾಸಿಕವೆನಿಸ ಲಿರುವ ರಾಷ್ಟ್ರೀಯ ಮಟ್ಟದ ಧರ್ಮಸಂಸದ್ ಅಧಿವೇಶನ
ನ. 24ರಂದು ಆರಂಭಗೊಳ್ಳಲಿದ್ದು ಉಡುಪಿ ನಗರ ಕೇಸರಿ ಬಣ್ಣದಿಂದ ಅಲಂಕರಣಗೊಂಡು ಸಿದ್ಧಗೊಂಡಿದೆ.
1984ರಲ್ಲಿ ಆರಂಭಗೊಂಡ ಧರ್ಮಸಂಸದ್ ಇದುವರೆಗೆ ಒಟ್ಟು 11 ಸಭೆಗಳನ್ನು ನಡೆಸಿದೆ. ಎರಡನೇ ಸಭೆ 1985ರಲ್ಲಿ ಉಡುಪಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದಿತ್ತು. 2005-06ನೇ ಸಾಲಿನಲ್ಲಿ ಆರು ಕಡೆ ನಡೆದ ಧರ್ಮಸಂಸದ್ ಮತ್ತೆ ಸಭೆ ಸೇರಿರಲಿಲ್ಲ. ಆರು ಕಡೆ ನಡೆದಾಗ ದಕ್ಷಿಣದ ಸಭೆ ತಿರುಪತಿಯಲ್ಲಿ ನಡೆದಿತ್ತು. ಒಂದು ದಶಕದ ಬಳಿಕ ಸಾವಿರಾರು ಸಂತರು ಸಭೆ ಸೇರಲಿರುವ ಕಾರಣ ಈಗಿನ ಧರ್ಮಸಂಸದ್ ಬಹಳ ಪ್ರಾಮುಖ್ಯ ಪಡೆದುಕೊಂಡಿದೆ.
ಸಂತರ ಆಗಮನ: ಪ್ರತಿಷ್ಠಿತ ಸಾಧು ಸಂತರು, ಸ್ವಾಮೀಜಿ, ಮಹಾ ಮಂಡಲೇಶ್ವರರು ಸುಮಾರು 2,000 ಸಂಖ್ಯೆಯಲ್ಲಿ ಈ 12ನೇ ಧರ್ಮ ಸಂಸದ್‌ನಲ್ಲಿ ಸೇರಲಿದ್ದಾರೆ. ಮಂಗಳ ವಾರದಿಂದಲೇ ಸಾಧುಸಂತರ ಆಗಮನ ಆರಂಭಗೊಂಡಿದ್ದು ಬುಧವಾರದವರೆಗೆ ಇವರ ಸಂಖ್ಯೆ 200 ದಾಟಿದೆ. ನಾಳೆ ಇವರ ಆಗಮನದ ಸಂಖ್ಯೆ ಹೆಚ್ಚಾಗಲಿದೆ. ಅವರು ಉಳಿದುಕೊಳ್ಳಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರದ ಬಳಿಕ ವ್ಯವಸ್ಥೆಗೊಳಿಸಿದ್ದರೂ ಮಂಗಳವಾರ ಬಂದ ಸಾಧುಗಳಿಗೂ ವ್ಯವಸ್ಥೆ ಮಾಡುವಷ್ಟು ಮನೆಯವರು ಮುಂದೆ ಬಂದಿರುವುದು 1969ರ ಇತಿಹಾಸದ ಪುನರಾವರ್ತನೆ ಎಂದು ಬಣ್ಣಿಸಲಾಗುತ್ತಿದೆ. 1969ರ ವಿಹಿಂಪ ಪ್ರಾಂತ ಸಮ್ಮೇಳನದಲ್ಲಿ ಸಾವಿರಾರು ಪ್ರತಿನಿಧಿಗಳಿಗೆ ಮನೆ ಬಾಗಿಲು ತೆರೆದು ಆತಿಥ್ಯ ನೀಡಿದ ದಾಖಲೆ ಉಡುಪಿ ನಗರಕ್ಕೆ ಇದೆ. ಈಗ ಅದೇ ಜನತೆ ಸಾಧುಸಂತರಿಗೆ ಮನೆ ಬಾಗಿಲನ್ನು ತೆರೆದಿದೆ.
ಅಲಂಕರಣ: ಧರ್ಮಸಂಸದ್ ನಡೆಯುವ ಕಲ್ಸಂಕದ ರೋಯಲ್ ಗಾರ್ಡನ್ ಮಂಗಳವಾರದಿಂದಲೇ ಜನಜಂಗುಳಿಗೆ ನಾಂದಿ ಹಾಡಿದೆ. ಮಣಿಪಾಲ, ಉಡುಪಿಯ ಹಲವು ವೃತ್ತಗಳು, ಬಸ್ ನಿಲ್ದಾಣಗಳು ಏಕಕಾಲದಲ್ಲಿ 150 ಕಿ.ಮೀ. ಉದ್ದದಷ್ಟು ಕೇಸರಿ ಧ್ವಜಗಳಿಂದ ಅಲಂಕೃತವಾಗಿವೆ.
ಉಡುಪಿಗೆ ಆಗಮಿಸುವ ಹೊರಗಿನವರಿಗೆ ಕಲ್ಸಂಕ ಪ್ರದೇಶಕ್ಕೆ ತಲುಪುವುದೂ ಸುಲಭ. ಸಿಟಿ ಬಸ್ ನಿಲ್ದಾಣದಿಂದ ಒಂದೇ ಬಸ್ ಸ್ಟಾಪ್‌ನಲ್ಲಿ ಕಲ್ಸಂಕ ಸಿಗುತ್ತದೆ. ಮಣಿಪಾಲದಿಂದ ಬರುವವರಿಗೂ ಕುಂದಾಪುರದಿಂದ ಅಂಬಾಗಿಲು ಮೂಲಕ ಬರುವವರಿಗೂ ಅನುಕೂಲವಾಗಿದೆ.
ಎಲ್ಲೆಲ್ಲ ಸಾರ್ವಜನಿಕ ಪ್ರವೇಶ ?
ಧರ್ಮಸಂಸದ್ ಉದ್ಘಾಟನಾ ಸಮಾರಂಭ ಹೊರತುಪಡಿಸಿ ಧರ್ಮಸಂಸದ್ ಗೋಷ್ಠಿಗಳಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶವಿಲ್ಲ. ಏಕೆಂದರೆ ಇದರಲ್ಲಿ ಸಾಧುಸಂತರು ಮುಕ್ತವಾಗಿ ಚರ್ಚೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ. ನ. 23ರ ಸಂಜೆ 4ಕ್ಕೆ ಉದ್ಘಾಟನೆಗೊಳ್ಳುವ ಅಪೂರ್ವ ಪ್ರದರ್ಶಿನಿ ಮಾತ್ರ 26ರ ತನಕ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ನ. 26 ಅಪರಾಹ್ನ ನಡೆಯುವ ಹಿಂದೂ ಸಮಾಜೋತ್ಸವದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದು.
– ವೇದಿಕೆಗೆ ಇಲ್ಲ ರಾಜಕಾರಣಿಗಳು
ಧರ್ಮಸಂಸದ್ ಮತ್ತು ಹಿಂದೂ ಸಮಾಜೋತ್ಸವದ ವೇದಿಕೆಯಲ್ಲಿ ಯಾವುದೇ ರಾಜಕಾರಣಿಗಳಿಗೆ ಪ್ರವೇಶ ಇರುವುದಿಲ್ಲ. ಆದರೆ ಯೋಗಿ ಆದಿತ್ಯನಾಥ, ಉಮಾಶ್ರೀಭಾರತಿ ಅಂತಹವರನ್ನು ರಾಜಕಾರಣಿಯಾಗದೆ ಸಂತರಾಗಿ ಪರಿಗಣಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್‌ನ ನಾಯಕರು ತಿಳಿಸಿದ್ದಾರೆ.
- ಕಲಾಪ ವಿವರ
ನ. 24ರ ಬೆಳಗ್ಗೆ 10 ಗಂಟೆಗೆ ಸ್ವಾಮೀಜಿಗಳನ್ನು ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಿಂದ ಪೂರ್ಣಕುಂಭ ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು. ರೋಯಲ್ ಗಾರ್ಡನ್‌ನಲ್ಲಿ ಸೇರಿದ ಬಳಿಕ ಧರ್ಮ ಸಂಸದ್ ಉದ್ಘಾಟನೆ ನಡೆಯಲಿದೆ. ಅಪರಾಹ್ನ ಮತ್ತು ನ. 25ರಂದು ನಿರ್ಣಯ ಮೇಲಿನ ಚರ್ಚೆ ನಡೆಯಲಿದೆ. ನ. 26ರ ಬೆಳಗ್ಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮತ್ತು ಧರ್ಮಸಂಸದ್‌ನಲ್ಲಿ ಸಮಾಜ ಪ್ರಮುಖರ ಸಭೆ, ನಿರ್ಣಯ ಅಂಗೀಕಾರ ಸಭೆ ನಡೆಯಲಿದೆ.
- ಹಿಂದೂ ಸಮಾಜೋತ್ಸವ
ನ. 26ರ ಅಪರಾಹ್ನ ಜೋಡುಕಟ್ಟೆಯಿಂದ ಎಂಜಿಎಂ ಕಾಲೇಜಿನ ಮೈದಾನದವರೆಗೆ ಆಕರ್ಷಕ ಶೋಭಾಯಾತ್ರೆ, ಬೃಹತ್ ಹಿಂದೂ ಸಮಾಜೋತ್ಸವ ಸಂಪನ್ನಗೊಳ್ಳಲಿದೆ.
ವಿಹಿಂಪ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ನಾಯಕರು ಉಡುಪಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಕಾರ್ಯಕ್ರಮದ ಯಶಸ್ಸಿಗಾಗಿ ಬೆಂಗಳೂರು, ಹುಬ್ಬಳ್ಳಿ ಹೀಗೆ ದೂರದೂರುಗಳಿಂದ ಮತ್ತು ಅವಿಭಜಿತ ದ.ಕ. ಜಿಲ್ಲೆಯ ನಾನಾ ಭಾಗಗಳಿಂದ ಬಂದ ವಿಹಿಂಪ, ಬಜರಂಗ ದಳದ ನೂರಾರು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಈ ಕೆಲಸಕ್ಕೆ ಯಾವುದೇ ರೀತಿ ಪಾವತಿಗಳಿಲ್ಲ. ರಾತ್ರಿ ಉಡುಪಿಗೆ ಬಂದು ಬೆಳಗ್ಗೆದ್ದು ಕೆಲಸ ಮುಗಿಸಿ ಹೋಗುವ ನೂರಾರು ಕಾರ್ಯಕರ್ತರ ಪಡೆ ವಿಶೇಷ. ಇನ್ನು ನಾಲ್ಕೈದು ದಿನ ಇವರ ಸಂಖ್ಯೆ, ಕೆಲಸದ ಪ್ರಮಾಣ ಹೆಚ್ಚಿಗೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.