ಲುಕ್‌ನಿಂದ ಆಕರ್ಷಿಸಿ ಖಡಕ್ ನುಡಿದ ಯೋಗಿರಾಜ್ !
Team Udayavani, Nov 24, 2017, 10:37 AM IST
ಉಡುಪಿ: ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ್ತಾ ಏಕಾಂಗಿಗಳಾಗಿ ಮತ್ತು ಸಹ ಸಂತರು, ಅನುಯಾಯಿಗಳೊಂದಿಗೆ ಗುಂಪಾಗಿ ಆಗಮಿಸುತ್ತಿದ್ದ ಸಂತರ ಗಡಣದ ನಡುವೆ ಇಕ್ಕೆಲಗಳಲ್ಲಿ ಗನ್‌ಮ್ಯಾನ್‌ಗಳ ಜತೆಯಲ್ಲಿ ಲಗುಬಗನೆ ಹೆಜ್ಜೆ ಹಾಕಿದವರು ಉಜ್ಜೆ„ನಿಯ ಮಹಾಮಂಡಲೇಶ್ವರ್ ಯೋಗಿರಾಜ್ ಶ್ರೀ ಸ್ವಾಮಿ ಮಹಂತ ರಾಮೇಶ್ವರ ದಾಸ್ ಜೀ ಮಹಾರಾಜ್.
ಬಂದೂಕುಧಾರಿಗಳ ಜತೆಗೆ ಹತ್ತಾರು ಅನುಯಾಯಿಗಳು, ಗುಂಗುರು ಕೂದಲಿನ ಮೇಲೊಂದು ಮುಂಡಾಸು, ಕುತ್ತಿಗೆಯಲ್ಲಿ ಎದ್ದು ತೋರುವ ಸರ, ಕೈಯಲ್ಲಿ ಟ್ಯಾಟೂ, ಭುಜದಲ್ಲಿ ಶಾಲು, ಅರ್ಧತೋಳಿನ ಬಿಳಿ ಅಂಗಿ ಮತ್ತು ಬಿಳಿ ಪಂಚೆಯೊಂದಿಗೆ ದೃಢವಾದ ಹೆಜ್ಜೆ ಹಾಕಿ ನೆರೆದಿದ್ದವರ ಗಮನ ಸೆಳೆದ 30ರ ಆಸುಪಾಸಿನ ಈ ಸ್ವಾಮೀಜಿಯ ಹಿಂದೆ ಇದ್ದ ಹಿರಿಯ ಸಂತರ ಸಂಖ್ಯೆಯೂ ದೊಡ್ಡದಿತ್ತು. ಹೆಜ್ಜೆ ಹೆಜ್ಜೆಗೂ ಗನ್‌ಮ್ಯಾನ್‌ಗಳು ಅವರನ್ನು ಅನುಸರಿಸುತ್ತಲೇ ಇದ್ದರು.
ಧರ್ಮಸಂಸದ್ ಸಭಾಂಗಣ ವೀಕ್ಷಿಸಿದ ಯೋಗಿರಾಜ್ ಮುಂದಾಳತ್ವದ ಉಜೈನಿಯ ಸಂತರು ಅನಂತರ ಸ್ವಯಂ ಸೇವಕರ ಆಹ್ವಾನದ ಮೇರೆಗೆ ಕೃಷ್ಣಪ್ರಸಾದ ಭೋಜನಾಲಯಕ್ಕೆ ತೆರಳಿ ಕೃಷ್ಣಪ್ರಸಾದ ಸ್ವೀಕರಿಸಿದರು. ಊಟೋಪಚಾರ ಸೇರಿದಂತೆ ಧರ್ಮಸಂಸದ್‌ನ ವ್ಯವಸ್ಥೆ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಯೋಗಿರಾಜ್ ತುಸು ವಿರಮಿಸದೆಯೂ ಅಲ್ಲಿಂದ ನಿರ್ಗಮಿಸಲು ಅನುವಾದರು. ಅಲ್ಲಿಯೇ ಯೋಗಿರಾಜ್ ಅವರನ್ನು ಮಾತಿಗೆಳೆದಾಗ ಹಿಂದೂತ್ವದ ಫೈರ್ ಬ್ರಾಂಡ್‌ಗಳಂತೆ ಕಟುವಾಗಿ ಮತ್ತು ಸ್ಪಷ್ಟವಾಗಿ ತಮ್ಮ ನಿಲುವನ್ನು ಬಿಚ್ಚಿಟ್ಟರು.
ರಾಮ ಜನ್ಮಭೂಮಿ ಪಾಕ್‌ನಲ್ಲಿದೆಯೇ?
ರಾಮಮಂದಿರ ನಿರ್ಮಾಣ ಆಗಿಯೇ ಆಗುತ್ತದೆ. ರಾಮಮಂದಿರ ನಿರ್ಮಾಣವಾಗಬೇಕಾಗಿರುವ ರಾಮಜನ್ಮಭೂಮಿ ನಮ್ಮ ದೇಶದಲ್ಲಿಯೇ ಇದೆ. ಅದೇನು ಪಾಕಿಸ್ಥಾನದಲ್ಲಿ ಇಲ್ಲ. ಸಂವಿಧಾನವನ್ನು ಗೌರವಿಸುತ್ತೇವೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವುದಿಲ್ಲ. ಸೌಹಾರ್ದಯುತವಾಗಿ ರಾಮಮಂದಿರ ನಿರ್ಮಾಣವಾಗಲಿದೆ. ವಿಹಿಂಪ ಪದಾಧಿಕಾರಿಗಳು, ಉಮಾಭಾರತಿ ಎಲ್ಲರೂ ಸೇರಿ ರಾಮಂದಿರದ ನಿರ್ಧಾರ ಮಾಡುತ್ತಾರೆ. ಭಗವಾನ್ ರಾಮ್‌ಲಾಲ್ ರಾಮಮಂದಿರದಲ್ಲಿ ಶೀಘ್ರ ವಿರಾಜಮಾನವಾಗಲಿದ್ದಾರೆ. ರಾಮಮಂದಿರ ಈಗ ನಿರ್ಮಾಣವಾಗದಿದ್ದರೆ ಇನ್ಯಾವಾಗ ಎಂದು ಪ್ರಶ್ನಿಸಿದರು ಯೋಗಿರಾಜ್.
ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.