ಜಲವರ್ಣದಲ್ಲಿ ಜಲತರಂಗ
Team Udayavani, Nov 24, 2017, 3:52 PM IST
ಮಳೆಗಾಲದ ಇಳೆಯ ಸೊಬಗನ್ನು ಕವಿ ತನ್ನ ಕಾವ್ಯದ ಮೂಲಕ ವರ್ಣಿಸುವಂತೆ, ಸಂಗೀತಜ್ಞ ಮೇಘಮಲ್ಹಾರ ರಾಗವನ್ನು ಹಾಡುವಂತೆ, ಚಿತ್ರಕಲಾವಿದ ಚಿತ್ರಕಾವ್ಯವನ್ನು ಬರೆಯುತ್ತಾನೆ. ಕುಂಭದ್ರೋಣ ಮಳೆ, ಬಿರುಗಾಳಿ ಮಳೆಗೆ ಬಾಗಿಬಳುಕಿದ ಪ್ರಕೃತಿ, ಜುಳುಜುಳು ಹರಿವ ನೀರು, ಕೆಸರು ಬಣ್ಣದ ನೆರೆ, ಭೋರ್ಗರೆವ ಜಲಪಾತ, ಅಬ್ಬರದಲೆಗಳ ಸಾಗರ, ಎಲ್ಲೆಂದರಲ್ಲಿ ಕಾಣುವ ಹಚ್ಚಹಸುರು, ಬೀಸುವ ಗಾಳಿಗೆ ತಲೆಯೊಡ್ಡಿ ನರ್ತಿಸುವ ಮರಗಿಡಗಳು- ಇವೆಲ್ಲವನ್ನು ಅನುಭವಿಸಿದ ಕಲಾವಿದ, ತನ್ನ ಅನುಭವವನ್ನು ಕಲಾಕೃತಿಯ ಮೂಲಕ ತೆರೆದಿಡುತ್ತಾನೆ. ಅಬ್ಬರಿಸುವ ಮಳೆಯ ರಭಸವನ್ನು ಬ್ರಶ್ ಸ್ಟ್ರೋಕ್‌ಗಳಿಂದ ಸಾದೃಶ್ಯವಾಗಿ ವರ್ಣಗಳ ಪಸರುವಿಕೆಯಿಂದ ಮೂಡಿಸುತ್ತಾನೆ. ಪ್ರಕೃತಿಯ ಚೆಲುವನ್ನು ಮತ್ತಷ್ಟು ಗಂಭೀರಗೊಳಿಸಿ ರೂಪಿಸುತ್ತಾನೆ. ಮಳೆಯ ರಭಸಕ್ಕೆ ಕಾಣುವ ಅಸ್ಪಷ್ಟ ನಿಸರ್ಗ ಕಲಾವಿದನ ಕುಂಚದಲ್ಲಿ ಪಾರದರ್ಶಕವಾಗಿ ಕಾಣುತ್ತದೆ. ಆ ದೃಶ್ಯವನ್ನು ಕಾಣುವಾಗ ನಾವೂ ಮಳೆಯಲ್ಲಿ ತೊಯ್ಯುತ್ತಿದ್ದೇವೆಯೋ ಅನ್ನಿಸುತ್ತದೆ. ಅಂತಹ ಸಾದೃಶ್ಯ ದೃಶ್ಯವನ್ನು ಕಲಾವಿದ ಮೋಹನ್ ಕುಮಾರ್ ತನ್ನ ಜಲವರ್ಣ ಚಿತ್ರಗಳಲ್ಲಿ ಹೆಣೆದಿದ್ದಾರೆ. ಉಡುಪಿಯ ಹವಾನಿಯಂತ್ರಿತ ಗ್ಯಾಲರಿ “ದೃಷ್ಟಿ’ಯಲ್ಲಿ ಈಚೆಗೆ ನಡೆದ ಅವರ ರುದ್ರರಮಣೀಯ ಸಾಗರದೃಶ್ಯಗಳ ಅಮೋಘ ಕಲಾಪ್ರದರ್ಶನ ಕಲಾಭಿಮಾನಿಗಳಿಗೆ ರಸದೌತಣ ನೀಡಿತು. ಕಲಾಸಂಸ್ಥೆ ಆರ್ಟಿಸ್ಟ್ಸ್ ಫೋರಂ, ರಜತ ಮಹೋತ್ಸವದ ಅಂಗವಾಗಿ ತನ್ನ ಬಳಗದ ಕಲಾವಿದರ ಸರಣಿ ಕಲಾಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಇದು ಮೂರನೆಯ ಕಲಾಪ್ರದರ್ಶನವಾಗಿದೆ. ಖ್ಯಾತ ಕಲಾವಿದ ರಮೇಶ್ ರಾಯರ ನೇತೃತ್ವದಲ್ಲಿ ಕಲಾಪ್ರದರ್ಶನ ಸಾಂಗವಾಗಿ ನೆರವೇರುತ್ತಿದೆ.
ಮಂಗಳೂರಿನ ಕೆನರಾ ಪ್ರೌಢಶಾಲೆ ಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಸೃಜನಶೀಲ ಕಲಾವಿದ ಪೆರ್ಮುದೆ ಮೋಹನ್ ಕುಮಾರ್ ಶೈಕ್ಷಣಿಕವಾಗಿಯೂ ಸಾಧನೆಗೈದು ಪ್ರಶಸ್ತಿ ಪುರಸ್ಕೃತರಾದವರು. ನಿಸರ್ಗದೃಶ್ಯ ಚಿತ್ರಣ ದಲ್ಲಿ ಸಿದ್ಧಹಸ್ತರಾಗಿರುವ ಇವರ ರುದ್ರ ರಮಣೀಯ ನಿಸರ್ಗದೃಶ್ಯಗಳನ್ನು ನೋಡು ತ್ತಿದ್ದರೆ ನೋಡುತ್ತಲೇ ಇರೋಣ ಅನ್ನಿಸುತ್ತದೆ.
ಮೋಹನ್ ಕುಮಾರರ ಜಲವರ್ಣ ಕಲಾಕೃತಿಗಳಲ್ಲಿ ಕೆಲವಂಶಗಳನ್ನು ನಾವು ಗಮನಿಸಬಹುದು. ಒದ್ದೆ ಕಾಗದದ ಮೇಲೆ ಜಲವರ್ಣವನ್ನು ಇಳಿಯಬಿಟ್ಟು ಮೈವಳಿಕೆ ಸೃಷ್ಟಿಸಿ ಬೇಕಾದೆಡೆ ಕೆಲವೇ ಬ್ರಶ್‌ಸ್ಟ್ರೋಕ್‌ಗಳಿಂದ ಅಮೂರ್ತ-ಅಸ್ಪಷ್ಟ ಆಕಾರ ರೂಪಿಸಿ ಅದನ್ನು ವೀಕ್ಷಕರ ಮನದೊಳಗೆ ಪೂರ್ಣಗೊಳಿಸುವ ತಂತ್ರ ವನ್ನು ಹೆಣೆಯುತ್ತಾರೆ. ಇದು ಸುಲಭದ ಕೈಚಳಕವಲ್ಲ, ಅನುಭವದ ಹೂರಣವಿದು. ಇನ್ನೊಂದು ವಿಶೇಷತೆಯೆಂದರೆ, ಒಂದೊಂದು ಕಲಾಕೃತಿಯನ್ನು ಒಂದೊಂದು ವರ್ಣಛಾಯೆ ಪ್ರಧಾನವಾಗಿರಿಸಿ ಚಿತ್ರಿಸಿರು ವುದು. ಒಂದೊಂದು ವರ್ಣಛಾಯೆ ಒಂದೊಂದು ಹೊತ್ತನ್ನು ಸೂಚಿಸುತ್ತದೆ. ವರ್ಣಛಾಯೆಯಿಂದಲೇ ಅದು ಮುಂಜಾವಿನ ದೃಶ್ಯವೋ ಮೋಡ ಮುಸುಕಿದ ಹೊತ್ತೋ ಇಳಿಹೊತ್ತಿನ ದೃಶ್ಯವೋ ಹಚ್ಚಹಸುರಿನ ನಿಸರ್ಗವೋ ಮಳೆಗಾಲದ ತೊಯ್ದ ಪ್ರಕೃತಿಯೋ ವರ್ಷಧಾರೆಯ ಗೌಜಿಯೋ ಸಿಡಿಲಬ್ಬರವೋ ಎಂಬುದನ್ನು ವೀಕ್ಷಕ ಆಸ್ವಾದಿಸಿ ಅನುಭವಿಸಬಹುದು.
ಈ ಪ್ರದರ್ಶನದಲ್ಲಿ ಇರಿಸಿದ್ದ ಕಲಾಕೃತಿಗಳಲ್ಲಿ ಕಂಡ ಮಳೆಗಾಲದ ಕಡಲು, ಅಲೆಗಳಬ್ಬರಕ್ಕೆ ಎದ್ದು-ಬಿದ್ದು ಬರುತ್ತಿರುವ ಮೀನುಗಾರರ ದೋಣಿಗಳು, ಲಂಗರು ಹಾಕಿದ್ದರೂ ನೀರಿನಲೆಗಳ ಮೇಲೆ ನರ್ತಿಸುತ್ತಿರುವ ದೋಣಿಗಳು, ಕಡಲು-ಬಾನು ಒಟ್ಟಾಗಿ ಮೂಡಿದ ದೃಶ್ಯ… ಇವನ್ನೆಲ್ಲ ನೋಡಿದಾಗ ಮೈನವಿರೇಳುತ್ತದೆ. ನಾವು ಪ್ರಕೃತಿಯ ಕೂಸಾಗಿ ಪ್ರಕೃತಿ ಯೊಂದಿಗೆ ಲೀನವಾಗುತ್ತೇವೆ. ಮೋಹನ್ ಕುಮಾರರ ಕೈಚಳಕ ಅಷ್ಟು ಮನೋಜ್ಞವಾಗಿದೆ.
ಉಪಾಧ್ಯಾಯ ಮೂಡುಬೆಳ್ಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.