ಮೀಸಲಾತಿ ಎಂಬುದು ಭರವಸೆ
Team Udayavani, Nov 26, 2017, 12:39 PM IST
ಬೆಂಗಳೂರು: “ಬಹುತೇಕ ಎಲ್ಲ ಸಮುದಾಯಗಳು ಮೀಸಲಾತಿ ಇಲ್ಲದೆ ಪ್ರಗತಿ ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ತಲುಪುತ್ತಿವೆ. ಆದರೆ, ಮೀಸಲಾತಿಯೇ ಅಭಿವೃದ್ಧಿಯಲ್ಲ. ಅದೊಂದು ಭರವಸೆ ಅಷ್ಟೇ’ಎಂದು ಮಾಜಿ ಸಂಸದ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅಭಿಪ್ರಾಯಪಟ್ಟರು.
ಅರಮನೆ ಮೈದಾನದಲ್ಲಿ ಶನಿವಾರ ಎಸ್. ಬಂಗಾರಪ್ಪ ಪ್ರತಿಷ್ಠಾನ ಮತ್ತು ಎಸ್. ಬಂಗಾರಪ್ಪ ವಿಚಾರ ವೇದಿಕೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ 85ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಅವರು ಮತನಾಡಿದರು.
ಒತ್ತಡದ ಶಿಕ್ಷಣ ವ್ಯವಸ್ಥೆಯಿಂದ ಪ್ರತಿಯೊಂದು ಜಾತಿ-ಸಮುದಾಯಗಳೂ ಮೀಸಲಾತಿಗೆ ಜೋತುಬೀಳುತ್ತಿವೆ. ಮೀಸಲಾತಿ ದೊರೆಯದಿದ್ದರೆ ಪ್ರಗತಿ ಸಾಧ್ಯವೇ ಇಲ್ಲ ಎಂಬ ಮನಸ್ಥಿತಿಗೆ ತಲುಪುತ್ತಿವೆ. ಆದ್ದರಿಂದ ಮೊದಲು ಶಿಕ್ಷಣ ವ್ಯವಸ್ಥೆ ಬದಲಾಗಿ “ಆಯ್ಕೆಯ ಶಿಕ್ಷಣ ವ್ಯವಸ್ಥೆ’ ಅಸ್ತಿತ್ವಕ್ಕೆ ಬರಬೇಕಿದೆ ಎಂದು ಹೇಳಿದರು.
ಹಿಂದುಳಿದ ವರ್ಗದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದ ಬಂಗಾರಪ್ಪ ಒಂದು ರಾಜ್ಯದ ಅತ್ಯುನ್ನತ ಹುದ್ದೆಗೆ ಏರಲು ಹಾಗೂ ತನ್ನದೇ ಆದ ದೂರದೃಷ್ಟಿ ಹೊಂದಲು ಸಾಧ್ಯವಾಗಿದ್ದು ಸಂವಿಧಾನದ ಕೊಡುಗೆ. ಇಲ್ಲದಿದ್ದರೆ, ನಮಗೆ ಬಂಗಾರಪ್ಪ ಸೇರಿದಂತೆ ನಾವ್ಯಾರೂ ಇರುತ್ತಿರಲಿಲ್ಲ. ಈ ಸಂವಿಧಾನವನ್ನು ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ತಿಳಿಸಿದರು.
ಇನ್‌ವೆಸ್ಟ್ ರಾಜಕಾರಣ: ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಹಿಂದೆ ಎಲ್ಲರನ್ನೂ ಒಳಗೊಂಡ “ಇನ್‌ಕ್ಲೂéಸಿವ್ ರಾಜಕಾರಣ’ ಇತ್ತು. ಆದರೆ, ಇಂದು “ಇನ್‌ವೆಸ್ಟ್ ರಾಜಕಾರಣ’ ಚಾಲ್ತಿಯಲ್ಲಿದೆ. ಈ ಇನ್‌ವೆಸ್ಟ್ ರಾಜಕಾರಣವು ಎಲ್ಲ ಕ್ಷೇತ್ರವನ್ನೂ ವಾಣಿಜ್ಯೀಕರಣಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ರಂಗಕರ್ಮಿ ಪ್ರಸನ್ನ ಅವರಿಗೆ “ರಂಗ ಬಂಗಾರ’ ಮತ್ತು ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಅವರಿಗೆ “ಜಾನಪದ ಬಂಗಾರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟ ಶಿವರಾಜ್‌ಕುಮಾರ್, ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ತಿಲಕ್‌ಕುಮಾರ್, ಪ್ರತಿಷ್ಠಾನದ ಅಧ್ಯಕ್ಷ ಎಸ್. ಮಧು ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಹಟ-ಚಟಗಾರರು!: ಎಸ್. ಬಂಗಾರಪ್ಪ ಹಟಗಾರ ಮತ್ತು ಜೆ.ಎಚ್. ಪಟೇಲ್ ಚಟಗಾರ. ಈ ಹಟ-ಚಟಗಳ ಮಿಶ್ರಣ ಬಿ.ಎಸ್.ಯಡಿಯೂರಪ್ಪ! ಅವಿಭಜಿತ ಶಿವಮೊಗ್ಗ ಜಿಲ್ಲೆಯ ಮಾಜಿ ಮುಖ್ಯಮಂತ್ರಿಗಳ ಕುರಿತು ಮಾಜಿ ಸಚಿವ ಎಚ್. ವಿಶ್ವನಾಥ್ ಅವರ ವಿಶ್ಲೇಷಣೆ ಇದು. ಬಂಗಾರಪ್ಪ ಅವರ ಜಯಂತ್ಯೋತ್ಸವದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಎಚ್. ವಿಶ್ವನಾಥ್, “ರಾಜ್ಯಕ್ಕೆ ಶಿವಮೊಗ್ಗ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಆ ಪೈಕಿ ಕಡಿದಾಳು ಮಂಜಪ್ಪ ಮದರ್ ತೆರೆಸಾ ಇದ್ದಂತೆ. ಉಳಿದ ಮೂವರಲ್ಲಿ ಬಂಗಾರಪ್ಪ ಹಟಗಾರ. ಪಟೇಲ್ ಚಟಗಾರ. ಈ ಹಟ-ಚಟಗಳ ಮಿಶ್ರಣ ಯಡಿಯೂರಪ್ಪ’ ಎಂದು ಬಣ್ಣಿಸಿದರು.
ಬಡವರ ಸುಲಿಗೆ ಮಾಡುವ ತೆರಿಗೆ ಬೇಡ: ಸಮಾನ ತೆರಿಗೆ ಹೆಸರಿನಲ್ಲಿ ಬಡವರ ಸುಲಿಗೆ ಮಾಡಲಾಗುತ್ತಿದೆ. ಸಮಾನತೆ ಮತ್ತು ಸಮಾಜವಾದ ಮಾತನಾಡುವವರು ಕೈ ಉತ್ಪಾದಕರಿಗೆ ತೆರಿಗೆ ವಿನಾಯ್ತಿ ನೀಡಬೇಕು ಎಂದು ರಂಗಕರ್ಮಿ ಪ್ರಸನ್ನ ಆಗ್ರಹಿಸಿದರು.
“ಜನಸಾಮಾನ್ಯರು ಮತ್ತು ತೆರಿಗೆ ನೀತಿ’ ಕುರಿತ ಚಿಂತನದಲ್ಲಿ ಮಾತನಾಡಿ, ಸಮಾಜವಾದ ಎಂದು ಹೇಳುವುದೇ ಆದಲ್ಲಿ, ಸರಕು ಸೇವಾ ತೆರಿಗೆ (ಜಿಎಸ್‌ಟಿ) ಸರಿಪಡಿಸಬೇಕು. ಬಡವರನ್ನು ಸುಲಿಗೆ ಮಾಡಿ ಅರಮನೆಯಲ್ಲಿ ಬದುಕಬಾರದು ಎಂದು ತೀಕ್ಷ್ಣವಾಗಿ ಹೇಳಿದ ಅವರು, ಕೈಮಗ್ಗ ಸೇರಿದಂತೆ ಕೈ ಉತ್ಪಾದಕರಿಗೆ ತೆರಿಗೆ ವಿನಾಯ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಸ್ಮಾರ್ಟ್ ಸಿಟಿ ಮತ್ತು ನಗರ ಸಂಸ್ಕೃತಿ ಅವಾಂತರಗಳಲ್ಲಿ ಗ್ರಾಮ ಸಂಸ್ಕೃತಿಯನ್ನು ಸಂಕೇತಗಳಿಗೆ ಸೀಮಿತಗೊಳಿಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ ಪ್ರಸನ್ನ, ಕನ್ನಡಿಗರು ಅಭಿಮಾನ ಶೂನ್ಯರಲ್ಲ. ನಮ್ಮ ಸಂಸ್ಕೃತಿ-ಪರಂಪರೆ ಬಗ್ಗೆ ಗೌರವ ಸಲ್ಲಿಸುವುದು ನಮಗೆ ಗೊತ್ತಿದೆ.
ಆದರೆ, ದುರಂತವೆಂದರೆ, ಎಲ್ಲವನ್ನೂ ಸಾಂಕೇತಿಕಗೊಳಿಸುವ ಪ್ರವೃತ್ತಿ ಶುರುವಾಗಿಬಿಟ್ಟಿದೆ. ಸುಕ್ರಿ ಬೊಮ್ಮಗೌಡ ಅವರಂತಹ ಅನೇಕ ಕಲಾವಿದರು ಹಳ್ಳಿ-ಹಳ್ಳಿಗಳಲ್ಲಿ ಇದ್ದಾರೆ. ಆದರೆ, ಅವರನ್ನು ನಾವು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅವರ ಗಾಯನವನ್ನು ನಾವು ಹೊಸಕಿಹಾಕಿ, ಸಂಕೇತಕ್ಕೆ ಆ ಕಲೆಯನ್ನು ಸೀಮಿತಗೊಳಿಸುತ್ತಿದ್ದೇವೆ ಎಂದು ಸೂಚ್ಯವಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.