ಏಕದಿನ: ಕೊಹ್ಲಿಗೆ ವಿಶ್ರಾಂತಿ, ರೋಹಿತ್ ನಾಯಕ
Team Udayavani, Nov 28, 2017, 6:30 AM IST
ನಾಗ್ಪುರ: ಕೊನೆಗೂ ಕ್ಯಾಪ್ಟನ್ ಕೊಹ್ಲಿಗೆ ವಿಶ್ರಾಂತಿ ಸಿಕ್ಕಿದೆ. ಶ್ರೀಲಂಕಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಿಂದ ಕೊಹ್ಲಿ ಹೊರಗುಳಿಯಲಿದ್ದು, ರೋಹಿತ್ ಶರ್ಮ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಸೋಮವಾರ ನಾಗ್ಪುರದಲ್ಲಿ ಸಭೆ ಸೇರಿದ ರಾಷ್ಟ್ರೀಯ ಆಯ್ಕೆಗಾರರು ಶ್ರೀಲಂಕಾ ವಿರುದ್ಧದ ಹೊಸದಿಲ್ಲಿ ಟೆಸ್ಟ್ ಹಾಗೂ ಅನಂತರದ ಏಕದಿನ ಸರಣಿಗೆ ತಂಡಗಳನ್ನು ಅಂತಿಮಗೊಳಿಸಿದರು.
ವರ್ಷಾರಂಭದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಭಾರತ ತಂಡವನ್ನು ಇದೇ ವೇಳೆ ಆಯ್ಕೆ ಮಾಡಬೇಕಿತ್ತು. ಆಯ್ಕೆ ಸಮಿತಿ ಸದಸ್ಯರಾದ ಎಂ.ಎಸ್.ಕೆ. ಪ್ರಸಾದ್, ದೇವಾಂಗ್ ಗಾಂಧಿ ಮತ್ತು ಶರಣ್‌ದೀಪ್ ಸಿಂಗ್-ಈ ಮೂರೂ ಮಂದಿ ನಾಗ್ಪುರದಲ್ಲಿ ಒಟ್ಟುಗೂಡಿದ್ದರು. ಆದರೆ ಮೂಲವೊಂದರ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಕೂಡ ಆಯ್ಕೆ ಪ್ರಕ್ರಿಯೆ ವೇಳೆ ಹಾಜರಿರಬೇಕಿತ್ತು. ಅವರಿಗೆ ಮುಂಬಯಿಯಲ್ಲಿ ವಿಮಾನ ತಪ್ಪಿದ್ದರಿಂದ ಸೂಕ್ತ ಸಮಯಕ್ಕೆ ನಾಗ್ಪುರಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆಫ್ರಿಕಾ ಪ್ರವಾಸದ ತಂಡಗಳನ್ನು ಹೊಸದಿಲ್ಲಿ ಟೆಸ್ಟ್ ಪಂದ್ಯದ ವೇಳೆ ಅಂತಿಮಗೊಳಿಸಲು ನಿರ್ಧರಿಸಲಾಯಿತು ಎಂದು ತಿಳಿದು ಬಂದಿದೆ.
ಕೊಹ್ಲಿ, ಧವನ್‌ಗೆ “ತವರಿನ ಟೆಸ್ಟ್’
ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದು ಕೊಹ್ಲಿ ಪಾಲಿನ “ತವರಿನ ಟೆಸ್ಟ್’ ಆದ್ದರಿಂದ ಅವರು ಆಡಬಯಸಿದರು ಎಂದು ತೀರ್ಮಾನಿಸಬಹುದಾಗಿದೆ. ಏಕದಿನದ ಬಳಿಕ ನಡೆಯುವ ಟಿ20 ಸರಣಿಗೆ ಕೊಹ್ಲಿ ಮರಳುವ ಸಾಧ್ಯತೆ ಇದೆ.
ನಾಗ್ಪುರ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಎಡಗೈ ಆರಂಭಕಾರ ಶಿಖರ್ ಧವನ್ ಹೊಸದಿಲ್ಲಿ ಪಂದ್ಯಕ್ಕೆ ಮರಳಿದ್ದಾರೆ. ಇದು ಧವನ್ ಪಾಲಿಗೂ ತವರಿನ ಟೆಸ್ಟ್ ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಇಲ್ಲಿ ಆರಂಭಿಕರ ಸ್ಥಾನಕ್ಕೆ ತೀವ್ರ ಪೈಪೋಟಿ ಕಂಡುಬರುವುದರಲ್ಲಿ ಅನುಮಾನವಿಲ್ಲ.
ಅಯ್ಯರ್, ಕೌಲ್ ಪ್ರವೇಶ
ಏಕದಿನ ಸರಣಿಯಲ್ಲಿ ಇಬ್ಬರು ಹೊಸಬರು ಅವಕಾಶ ಪಡೆದಿದ್ದಾರೆ. ಇವರೆಂದರೆ ಮುಂಬಯಿಯ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮತ್ತು ಪಂಜಾಬ್‌ನ ಮಧ್ಯಮ ವೇಗಿ ಸಿದ್ಧಾರ್ಥ ಕೌಲ್. ಇವರಲ್ಲಿ ಅಯ್ಯರ್ ಈಗಾಗಲೇ ಟಿ20 ತಂಡದಲ್ಲಿ ಕಾಣಿಸಿಕೊಂಡು ನ್ಯೂಜಿಲ್ಯಾಂಡ್ ವಿರುದ್ಧ ಪಾದಾರ್ಪಣೆಯನ್ನೂ ಮಾಡಿರುತ್ತಾರೆ. ಏಕದಿನದಲ್ಲಿ ಇವರು ಕೊಹ್ಲಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಕೌಲ್ ಅವರನ್ನು ಶಾದೂìಲ್ ಠಾಕೂರ್ ಜಾಗಕ್ಕೆ ಸೇರಿಸಿಕೊಳ್ಳಲಾಗಿದೆ. ಕೌಲ್ ಈವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಆದರೆ ಭಾರತ “ಎ’ ಪರ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸ, ನ್ಯೂಜಿಲ್ಯಾಂಡ್ “ಎ’ ಸರಣಿ ಹಾಗೂ ಈಗ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಭರವಸೆಯ ಬೌಲಿಂಗ್ ನಡೆಸಿದ್ದಾರೆ. 50 ಪ್ರಥಮ ದರ್ಜೆ ಪಂದ್ಯಗಳಿಂದ 175 ವಿಕೆಟ್, 52 ಲಿಸ್ಟ್ ಎ ಪಂದ್ಯಗಳಿಂದ 98 ವಿಕೆಟ್ ಹಾರಿಸಿದ್ದಾರೆ. ಸಿದ್ಧಾರ್ಥ ಕೌಲ್ 2008ರ, ವಿರಾಟ್ ಕೊಹ್ಲಿ ಸಾರಥ್ಯದ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯನೂ ಹೌದು!
ಉಳಿದಂತೆ ಏಕದಿನ ತಂಡದಲ್ಲಿ ಯಾವುದೇ ಬದಲಾವಣೆ ಗೋಚರಿಸಿಲ್ಲ. ಮದುವೆಯ ಕಾರಣ 2 ಟೆಸ್ಟ್‌ಗಳಿಂದ ಹೊರಗುಳಿದಿದ್ದ ಭುವನೇಶ್ವರ್ ಕುಮಾರ್ ಮರಳಿದ್ದಾರೆ. ಪಾಂಡ್ಯ, ಬುಮ್ರಾ, ಚಾಹಲ್, ಕುಲದೀಪ್, ಅಕ್ಷರ್ ಪಟೇಲ್ ಮುಂದುವರಿದಿದ್ದಾರೆ. ಇದು ಟೀಮ್ ಇಂಡಿಯಾದ ಬೌಲಿಂಗ್ ವೈವಿಧ್ಯವನ್ನು ಸಾರುತ್ತದೆ.
ಭಾರತ ತಂಡಗಳು
ದಿಲ್ಲಿ ಟೆಸ್ಟ್ ಪಂದ್ಯಕ್ಕೆ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆ.ಎಲ್. ರಾಹುಲ್, ಶಿಖರ್ ಧವನ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮ, ವೃದ್ಧಿಮಾನ್ ಸಾಹಾ, ಆರ್. ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ, ವಿಜಯ್ ಶಂಕರ್.
ಏಕದಿನ ಸರಣಿಗೆ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಸಿದ್ಧಾರ್ಥ ಕೌಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.