ಶಿವಮೊಗ್ಗ ಎಸ್ಪಿ ಕಚೇರಿಯಿಂದಲೇ ಆನೆದಂತ ಕಳವು!
Team Udayavani, Nov 29, 2017, 7:00 AM IST
ಶಿವಮೊಗ್ಗ: ನಂಬಲಸಾಧ್ಯ ಎನಿಸಿದರೂ ಇದು ಸತ್ಯ. ಹೆಮ್ಮೆಯ ಪ್ರತೀಕವೆಂದು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಇಡಲಾಗಿದ್ದ ಆನೆದಂತವೇ ಕಳ್ಳತನವಾಗಿದೆ. ಜಿಲ್ಲೆಯ ರಕ್ಷಣೆಯ ಹೊಣೆ ಹೊತ್ತ ರಕ್ಷಣಾಧಿಕಾರಿಗಳ ಕಚೇರಿಯಲ್ಲಿಯೇ ಕಳ್ಳತನ ನಡೆದಿದ್ದು, ಇಂತಹ ದ್ದೊಂದು ಘಟನೆ ನಡೆದಿದೆ ಎಂದು ಹೇಳಿಕೊಳ್ಳಲಾಗದ ಸ್ಥಿತಿ ಪೊಲೀಸ್ ಇಲಾಖೆಯದ್ದಾಗಿದೆ. ವಿಶೇಷವೆಂದರೆ, ಇದು ಕಳುವಾಗಿದ್ದು ಯಾವಾಗ ಎಂಬುದೇ ಗೊತ್ತಿಲ್ಲ? 2011ರ ಫೆ.8ರ ವರೆಗೆ ಇದು ಕಚೇರಿಯಲ್ಲಿತ್ತು ಎಂಬುದಷ್ಟೇ ಗೊತ್ತು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಇಲಾಖಾ ಮಟ್ಟದಲ್ಲಿ ತನಿಖೆ ಆರಂಭವಾಗಿದೆ.
ಬಿ.ಎಚ್.ರಸ್ತೆಯಲ್ಲಿರುವ ಡಿಪಿಒ (ಜಿಲ್ಲಾ ಪೊಲೀಸ್ ಕಚೇರಿ)ಎಸ್ಪಿ ಕೊಠಡಿಯಲ್ಲಿ ಹಿಂದಿ ನಿಂದಲೂ ಬೆಲೆ ಕಟ್ಟಲಾಗದ ಭಾರೀ ಮೌಲ್ಯದ ದಷ್ಟ ಪುಷ್ಟವಾದ ಆನೆದಂತ ಇತ್ತು. ಇದು ಎಸ್ಪಿ ಕೊಠಡಿಯ ಪ್ರಮುಖ ಆಕರ್ಷಣೆಯಾಗಿತ್ತು. ಅರಣ್ಯ ಇಲಾಖೆ ಹಲವು ವರ್ಷಗಳ ಹಿಂದೆ ಈ ದಂತವನ್ನು ಎಸ್ಪಿ ಕಚೇ ರಿಗೆ ನೀಡಿತ್ತು ಎಂದು ಹೇಳಲಾಗುತ್ತಿದ್ದು, ಜಿಲ್ಲೆಯ ನೂತನ ಎಸ್ಪಿಯಾಗಿ ನೇಮಕಗೊಂಡವರು ಅಧಿಕಾರ ಸ್ವೀಕರಿಸುವಾಗ ಫೋಟೋ ತೆಗೆಯುವ ಸಂದರ್ಭದಲ್ಲಿ ಈ ದಂತ ಚಿತ್ರದಲ್ಲಿ ಸಾಮಾನ್ಯವಾಗಿ ಕಾಣುತ್ತಿತ್ತು.
ಬೆಳಕಿಗೆ ಬಂದದ್ದು ಹೇಗೆ?
ಎಸ್‌ಪಿ ಕಚೇರಿ ಆವರಣದಲ್ಲಿ ಹಳೆಯ ಶಿಲಾ ಶಾಸನಗಳು ಇದ್ದು, ಇವುಗಳಿಗೆ ಭದ್ರತೆ ಇಲ್ಲ ಎಂಬ ಮಾತು ಕೇಳಿ ಬಂತು. ಹೀಗಾಗಿ, ಇವನ್ನು ಕುವೆಂಪು ವಿವಿಯಲ್ಲಿ ಆರಂಭಗೊಳ್ಳಲಿರುವ ಪ್ರಾಕ್ತನ ಶಾಸ್ತ್ರ ವಿಭಾಗಕ್ಕೆ ಹಸ್ತಾಂತರಿಸುವುದು ಸೂಕ್ತ ಎಂಬ ಚರ್ಚೆ ನಡೆಯುತ್ತಿರುವಾಗ ಎಸ್‌ಪಿ ಕಚೇರಿಯಲ್ಲಿ ಇರುವ ಇಂತಹ ವಸ್ತುಗಳನ್ನು ಪಟ್ಟಿ ಮಾಡುವ ಕೆಲಸ ಆರಂಭ ವಾಯಿತು. ಆಗ ಅಲ್ಲಿದ್ದ ಸಿಬಂದಿಯೊಬ್ಬರು ಎಸ್‌ಪಿ ಕಚೇರಿಯೊಳಗೆ ಇರುವ ದಂತವನ್ನು ಕೂಡ ಈ ಪಟ್ಟಿಗೆ ಸೇರಿಸುವುದು ಸೂಕ್ತ ಎಂದರು. ಇದನ್ನು ಕೇಳಿದ ಎಸ್ಪಿಗೆ ಆಶ್ಚರ್ಯವಾಯಿತು. ತಮ್ಮ ಕಚೇರಿಯಲ್ಲಿ ದಂತ ಎಲ್ಲಿದೆ ಎಂದು ನೋಡಿದಾಗ ಅದು ಅಲ್ಲಿರಲಿಲ್ಲ. ಇದು ಬೆಳಕಿಗೆ ಬರುತ್ತಿರುವಂತೆಯೇ ಇಲಾಖೆಯೊಳಗೆ ತಲ್ಲಣ ಆರಂಭವಾಯಿತು.
ಹೊಸದಾಗಿ ಜಿಲ್ಲಾ ರಕ್ಷಣಾಧಿಕಾರಿ ವರ್ಗಾವಣೆ ಯಾಗಿ ಇಲ್ಲಿಗೆ ಬಂದಾಗ ನವೀಕರಣ ಕಾರ್ಯ ನಡೆಯುತ್ತಿರುತ್ತದೆ. ಕೆಲವೊಮ್ಮೆ ಮಧ್ಯದಲ್ಲಿಯೂ ನಡೆಯುತ್ತಿರುತ್ತದೆ. ಇಂತಹ ಸಮಯದಲ್ಲಿ ಅನೇಕ ವಸ್ತುಗಳನ್ನು ಗೋದಾಮಿಗೆ ಹಾಕಲಾಗುತ್ತದೆ. ಹೀಗಾಗಿ ತತ್‌ಕ್ಷಣವೇ ಜಾಗೃತರಾದ ಎಸ್ಪಿ ಅಭಿನವ್ ಖರೆ ಅವರು ಗೋದಾಮು ಸಹಿತ ಇಡೀ ಕಚೇರಿ
ಯನ್ನು ಜಾಲಾಡುವಂತೆ ಸೂಚಿಸಿದರು. ಆದರೆ, ದಂತ ಮಾತ್ರ ಪತ್ತೆಯಾಗಲೇ ಇಲ್ಲ.
ಆ ಬಳಿಕ ಇದನ್ನು ಗಂಭೀರವಾಗಿ ಪರಿಗಣಿಸಿದ ಅಭಿನವ್ ಖರೆ ಅವರು ಪ್ರಕರಣದ ಬೆನ್ನು ಹತ್ತಿದರು. ಪ್ರತಿ ಹಂತವನ್ನು ಪರಿಶೀಲನೆಗೆ ಒಳಪಡಿಸಿದರು. ಆಗ 2011ರ ಫೆ.8ರ ವರೆಗೆ ಇದು ಕಚೇರಿಯಲ್ಲಿತ್ತು ಎಂದು ತಿಳಿದು ಬಂತು. ಬಳಿಕವಷ್ಟೇ ಇದು ಕಾಣೆಯಾಗಿದೆ ಎಂಬುದು ಗೊತ್ತಾಯಿತು. ಈ ಅವಧಿಯಲ್ಲಿ ಮುರುಗನ್, ರಮಣ್ ಗುಪ್ತಾ, ಕೌಶಲೇಂಧ್ರ ಕುಮಾರ್, ರವಿ ಡಿ.ಚನ್ನಣ್ಣನವರ್ ಅವರು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿದ್ದಾರೆ.
ದಂತ ಕಳವು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆ ತೀವ್ರಗೊಂಡಿತು. ಅಪರ ಎಸ್ಪಿ ನೇತೃತ್ವದಲ್ಲಿ ಇಲಾಖಾ ವಿಚಾರಣೆ (ಡಿಇ)ಆರಂಭಗೊಂಡಿದ್ದು ನಾನಾ ದೃಷ್ಟಿಕೋನದಿಂದ ತನಿಖೆ ನಡೆಸಲಾಗುತ್ತಿದೆ. ಇದರ ಫಲವಾಗಿ ಮೊದಲ ಹಂತದಲ್ಲಿ ಗುಪ್ತ ಶಾಖೆ (ಸಿಬಿ)ಯ ಎಲ್ಲಾ ಸಿಬಂದಿಯನ್ನು ಡಿಪಿಒದಿಂದ ಹೊರಗೆ ಕಳಿಸಲಾಗಿದೆ. ಮುಂದಿನ ಸೂಚನೆ ಬರುವ ತನಕ ಡಿಪಿಒದತ್ತ ಸುಳಿಯದಂತೆ ತಿಳಿಸಲಾಗಿದೆ. ಎಸ್ಪಿಯೊಂದಿಗೆ ಸದಾ ನೇರ ಸಂಪರ್ಕದಲ್ಲಿರುವ ಗುಪ್ತ ಶಾಖೆಯ ಸಿಬಂದಿಯೇ ಸಾರಸಗಟಾಗಿ ಎತ್ತಂಗಡಿಯಾಗಿರುವುದು, ದಂತ ನಾಪತ್ತೆ ಪ್ರಕರಣ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳ
ಮಟ್ಟದಲ್ಲಿ ನಡೆಯುತ್ತಿರುವುದು, ಅನಿವಾರ್ಯವಾದರೆ ಸಿಒಡಿ ತನಿಖೆ ನಡೆಸಲು ಅಧಿಕಾರಿಗಳು ಚಿಂತನೆ ನಡೆಸಿರುವುದು ಡಿಪಿಒದ ಸಿಬಂದಿಯಲ್ಲಿ ನಡುಕ ಹುಟ್ಟಿಸಿದೆ.
ಈ ಕಳವು ಪ್ರಕರಣ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಅಲ್ಲದೆ ರಕ್ಷಣೆ ಒದಗಿಸಬೇಕಾದವರ ಕಚೇರಿಯಲ್ಲೇ ಕಳುವು ನಡೆದಿರುವುದರಿಂದ ಮರ್ಯಾದೆಯ ಪ್ರಶ್ನೆಯೂ ಎದುರಾಗಿದೆ. ಈ ದಂತ ನಾಪತ್ತೆಯಾಗಿರೋದು ಇದೀಗ ಗೊತ್ತಾಗಿದ್ದರೂ ಯಾವಾಗ ಕಳುವಾಗಿದೆ ಎಂಬುದು ತಿಳಿದಿಲ್ಲ. ಇಲ್ಲಿಯವರೆಗೆ ಇದರ ಕಳುವಿನ ವಿಚಾರ ಏಕೆ ಯಾರಿಗೂ ಗೊತ್ತಾಗಲಿಲ್ಲ? ಯಾರೂ ಗಮನಿಸಲಿಲ್ಲ? ಎಂಬುದು ಕೂಡ ಯಕ್ಷಪ್ರಶ್ನೆಯಾಗಿದೆ.
24/7 ಭದ್ರತೆ ಇರುವ, ಸಿಬಂದಿ ಗಸ್ತು ಹೊಂದಿರುವ ಎಲ್ಲಕ್ಕಿಂತ ಮುಖ್ಯವಾಗಿ ಸಿಸಿ ಕ್ಯಾಮರಾ ವ್ಯವಸ್ಥೆಯುಳ್ಳ, ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲಾ ಪೊಲೀಸ್ ಇಲಾಖೆಯ ಆಡಳಿತ ಕಚೇರಿಯ ಕಟ್ಟಡದ ಎಸ್ಪಿ ಕೊಠಡಿಯಿಂದಲೇ ದಂತ ನಾಪತ್ತೆಯಾಗಿರುವುದು ಇಲಾಖೆಯ ಹಿರಿಯ ಅಧಿಕಾರಿಗಳ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಸದ್ಯ ಇಲಾಖೆಯೊಳಗೆ ತನಿಖೆ ನಡೆಯುತ್ತಿದ್ದು, ಯಾವುದೇ ಮಾಹಿತಿಯನ್ನು ಯಾರೂ ಬಿಟ್ಟು ಕೊಡುತ್ತಿಲ್ಲ. ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಎಸ್ಪಿ ಕೂಡ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಪತ್ರಿಕಾ ಕಚೇರಿಗೆ ಅಲೆದಾಟ
ಯಾವ ಎಸ್ಪಿ ಅಧಿಕಾರ ಸ್ವೀಕರಿಸುವಾಗ ದಂತ ಇತ್ತು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ನಿರ್ಧರಿಸಿರುವ ಇಲಾಖೆ ಇದಕ್ಕಾಗಿ ಪ್ರಮುಖ ಪತ್ರಿಕಾ ಕಚೇರಿಗಳ ಬಾಗಿಲು ಬಡಿಯಲಾರಂಭಿಸಿದೆ. ಈ ಹಿಂದಿನ ಎಸ್ಪಿಗಳ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ತೆಗೆದಿರುವ ಭಾವಚಿತ್ರಗಳು ಬೇಕಿತ್ತು. ಅವನ್ನೆಲ್ಲ ಒಟ್ಟುಗೂಡಿಸಿ ಒಂದು ಪುಸ್ತಕ ಹೊರತರುತ್ತಿದ್ದೇವೆ ಎನ್ನುವ ಸಿಬಂದಿ ವಾಸ್ತವ ಸಂಗತಿಯನ್ನು ಮಾತ್ರ ಬಾಯಿಬಿಡುತ್ತಿಲ್ಲ. ಆದರೆ, ಪತ್ರಿಕಾ ಕಚೇರಿಗಳಿಂದಲೂ ಇಲಾಖೆಯ ಪ್ರಯತ್ನಕ್ಕೆ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ನಾಪತ್ತೆಯಾಗಿರುವ ದಂತ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.