ಅರ್ಧ ಮೀಸೆ
Team Udayavani, Dec 3, 2017, 6:15 AM IST
ಇಂದಿನ ದಿನಮಾನದಲ್ಲಿ ದೇಶ ಸುತ್ತುವುದಾಗಲೀ ಕೋಶ ಓದುವುದಾಗಲೀ ಮಹಾ ದೊಡ್ಡ ಕೆಲಸವೇನಲ್ಲ. ದುಡ್ಡಿದ್ದರೆ ವಿದೇಶ ಪ್ರವಾಸಮಾಡಿ ದೊಡ್ಡ ದೊಡ್ಡ ರಾಷ್ಟ್ರಗಳನ್ನೆಲ್ಲ ಕಣ್ಣಾರೆ ಕಂಡು ಬರಬಹುದು. ಊರಲ್ಲಿಯೇ ಇದ್ದು ಕಡಿಮೆ ಖರ್ಚಿನಲ್ಲಿ ನಾಟಕ, ತೇರು, ಜಾತ್ರೆಗಳಲ್ಲಿ ತಿರುಗಾಡಿ ಸಂತೋಷ ಪಡಬಹುದು. ಟೀವಿ, ಮೊಬೈಲು, ಇಂಟರ್‌ನೆಟ್ಟುಗಳಲ್ಲಿ ಮುಳುಗಿ ಇಡೀ ಪ್ರಪಂಚದ ವಿಸ್ಮಯವನ್ನು ನೋಡಿ ಪುಳಕಿತರಾಗಬಹುದು. ಆದರೆ ನನ್ನ ದೃಷ್ಟಿಯಲ್ಲಿ ಇದೆಲ್ಲಕ್ಕಿಂತಲೂ ಮಿಗಿಲಾದ ಜೀವನದುದ್ದಕ್ಕೂ ನೆನಪಾದಾಗಲೆಲ್ಲ ನೆನೆನೆನೆದು ಸಂಭ್ರಮಿಸಬಹುದಾದ ಇನ್ನೊಂದು ವಿಷಯವಿದೆ.
ಅದೆಂದರೆ ಎಲ್ಲರಂತೆ ಶುಭ ವಿವಾಹ ಮಹೋತ್ಸವ ಮಾಡಿಕೊಂಡು ಮದುವೆ ಮರುದಿನ ಪ್ರಪ್ರಥಮ ಬಾರಿಗೆ ತನ್ನ ಹೆಂಡತಿಯನ್ನು ಸಂಗಡ ಕರೆದುಕೊಂಡು ಮಾವನ ಮನೆಗೆ ಹೋಗುವುದರಲ್ಲಿ ಇರುವ ಸಂಭ್ರಮ-ಸಂತೋಷದ ಮುಂದೆ ಮಿಕ್ಕೆಲ್ಲವೂ ತೃಣ ಸಮಾನವೆಂದು ನನ್ನ ಭಾವನೆ! ಆ ಸ್ವಾಗತ, ಆದರ-ಸತ್ಕಾರ, ನಿಂತಲ್ಲಿ ನೀರು ಕುಂತಲ್ಲಿ ಮಣೆ, ಸಿಹಿಸಿಹಿ ಖಾದ್ಯಗಳು, ಅಳಿಯ ದೇವರು ಸ್ವಲ್ಪವೂ ಬೇಸರಿಸದಂತೆ ಸದಾ ಎಚ್ಚರ, ಹೆಂಡತಿಗಂತೂ ತನ್ನ ಪತಿರಾಯನನ್ನು ಎಲ್ಲರೂ ಮೆಚ್ಚಿಕೊಳ್ಳಬೇಕೆಂಬ ವಿಶೇಷ ಕಾಳಜಿ-ಒಂದೇ ಎರಡೇ ಅನುಭವಿಸಿದವರಿಗೇ ಗೊತ್ತು ಆ ಸುಖ! ಎಲ್ಲರಿಗೂ ಪದೇ ಪದೇ ಬರುತ್ತದೆಯೇ ಆ ಭಾಗ್ಯ? ಆಯುಷ್ಯದಲ್ಲಿ ಒಮ್ಮೆ ಮಾತ್ರ ಬರುವಂತಹ ಆ ಅಮೃತ ಘಳಿಗೆಯನ್ನು ನನಗೆ ನನ್ನ ಜೀವನದಲ್ಲಿ ಅನುಭವಿಸಲು ಸಾಧ್ಯವಾಗಲಿಲ್ಲವಲ್ಲ- ಎಂದು ನಾನು ಇಂದಿಗೂ ಆಗಾಗ ಬಿಡುವಾದಾಗ, ಒಬ್ಬನೇ ಇರುವಾಗ ಚಿಂತಿಸಿ ದುಃಖ ಪಟ್ಟಿದ್ದಿದೆ.
“”ನಾಳೆ ಬೆಳಗ್ಗೆ ನಿನ್ನ ತವರುಮನೆಗೆ ಅಂದರೆ ನನ್ನ ಮಾವನ ಮನೆಗೆ ಹೋಗೋಣ. ಏಳು ಗಂಟೆಗೆಲ್ಲ ರೆಡಿಯಾಗಬೇಕು. ಬಾಡಿಗೆ ಕಾರಿನವನಿಗೆ ಅಷ್ಟು ಹೊತ್ತಿಗೆ ನಮ್ಮ ಮನೆಗೇ ಬರಲು ಹೇಳಿದ್ದೇನೆ. ಮೊದಲ ಸಲ ಮಾವನ ಮನೆಗೆ ಕಾರಿನಲ್ಲಿ ಜುಂ ಎಂದು ಹೋಗಬೇಡವೇ? ಆಮೇಲೆ ಹೇಗೂ ಮುಂದೆಲ್ಲ ಸಾರಿಗೆ ಬಸ್ಸಿನಲ್ಲಿ ಹೋಗುವುದು ಇದ್ದೇ ಇದೆ!”
ಹೆಂಡತಿಗೆ ರಾತ್ರಿ ಊಟಕ್ಕೆ ಕುಳಿತಾಗ ಎಲ್ಲ ವಿಷಯ ಹೇಳಿ ಮುಗಿಸಿದೆ. ಅವಳು ರಾತ್ರಿ ಮಲಗುವ ಮುಂಚೆಯೇ ತನ್ನ ಬ್ಯಾಗನ್ನು ತುಂಬಿದ್ದೇ ತುಂಬಿದ್ದು. ಒಂದಲ್ಲ ಎರಡಲ್ಲ ಮೂರು ಬ್ಯಾಗುಗಳ ತುಂಬ ಸೀರೆ ವಸ್ತ್ರ, ನನ್ನ ಬಟ್ಟೆಗೊಂದು ಪ್ರತ್ಯೇಕ ಸೂಟುಕೇಸು. ನೋಡಿದವರಿಗೆ ಇದೇನೋ ತಿಂಗಳುಗಟ್ಟಲೆ ಉಳಿಯುವ ತಯಾರಿ ಎಂದೆನಿಸುವಂತಿತ್ತು.
ರಾತ್ರಿರೇವಂ… ಎನ್ನುವಂತೆ ರಾತ್ರಿ ಸರಿದು ಬೆಳಗಿನ ಜಾವದ ಅಲಾರಾಂ ಹೊಡೆಯಿತು. ಅವಳು ಎದ್ದು ಸ್ನಾನ, ಚಹಾ-ತಿಂಡಿ ತಯಾರಿಗೆ ಒಳಗೆ ಹೋದಳು. ನಾನು ಬಾತ್‌ರೂಮಿಗೆ ಹೋಗಿ ದಾಡಿ ಪೆಟ್ಟಿಗೆ ನೀರು ತೆಗೆದುಕೊಂಡು ದೀಪದೆದುರು ಬಂದು ನಿಂತೆ-ದಾಡಿ ಮಾಡಿಕೊಳ್ಳಲು. ಆಗಲೇ ನನಗೆ ನನ್ನ ಅದೃಷ್ಟ ಕೈಕೊಟ್ಟಿದ್ದು!
ಗಡ್ಡ ಒಳ್ಳೇ ನುಣುಪಾಗಿರಲಿ ಎಂದು ಹೊಸ ಬ್ಲೇಡು ಹಾಕಿದ್ದೇ ತಪ್ಪಾಗಿ ಹೋಯಿತು. ಗಡ್ಡ ಮುಗಿಸಿ ಮೀಸೆಯ ಹತ್ತಿರ ಕೈ ತಂದಿದ್ದೇ ತಂದಿದ್ದು ಏನು ಅಜಾಗ್ರತೆಯಾಯಿತೋ ಏನು ಮಣ್ಣೋ ಗಡಿಬಿಡಿಯಲ್ಲಿ ಕೈ ಜಾರಿ ಮೀಸೆಯ ಮೇಲೆ ಬ್ಲೇಡು ಹರಿದು ಮೂಗಿನ ಕೆಳಗೆ ಒಂದು ಬದಿ ಪಕ್ಕ ಖಾಲಿಯಾಗಿ ಬಿಡಬೇಕೆ? ಎಂಥ ಘಾತವಾಗಿ ಹೋಯಿತು!
ಕಲ್ಪನಾತೀತವಾದ ಅವಘಡ ಆಗಿಯೇ ಬಿಟ್ಟತು. ಎಷ್ಟೋ ವರ್ಷಗಳಿಂದ ಲಾಲನೆಪಾಲನೆ ಮಾಡಿ ಪೋಷಿಸಿಕೊಂಡು ಬಂದ ಮೀಸೆಗೆ ಈ ದುರ್ಗತಿಯಾಗಿ ಬಿಡುವುದೆ? ಆಕಸ್ಮಿಕ ಅನಾಹುತವಾದ ಅವಸರದಲ್ಲಿ ಕಿಂ ಕರ್ತವ್ಯ ಮೂಢನಾಗಿ ಹೆಂಡತಿಯನ್ನು ಕೂಗಿದೆ. ಅವಳು ಬಂದು ನನ್ನ ಅವತಾರ ನೋಡಿ-
“”ಇದೆಂಥ ಕೆಲಸ ಮಾಡಿಕೊಂಡಿರಿ!”- ಎಂದು ತನ್ನ ಹಣೆ ಹಣೆ ಮುಟ್ಟಿಕೊಂಡಳು, ಅಳಬೇಕೋ ನಗಬೇಕೋ ಗೊತ್ತಾಗದೆ ! ಈಗೇನು ಮಾಡುವುದು? ಮೂಗಿನ ಕೆಳಗೆ ಇನ್ನೊಂದು ಪಕ್ಕದಲ್ಲಿ ಉಳಿದ ಮೀಸೆಯನ್ನೂ ಪೂರ್ತಿ ಬೋಳಿಸಿಕೊಳ್ಳುವುದೊಂದೇ ಉಳಿದಿರುವ ಏಕೈಕ ಮಾರ್ಗ! ನನ್ನ ದುಃಖ ಯಾರಿಗೆ ಹೇಳಲಿ? ಹೇಳುವಂತೆಯೂ ಇಲ್ಲ ಬಿಡುವಂತೆಯೂ ಇಲ್ಲ. ಬಾಯಿಬಿಟ್ಟು ಹೇಳುವುದೇನು- ಮುಖ ನೋಡಿದರೇ ಗೊತ್ತಾಗುತ್ತಿತ್ತು ಎಲ್ಲ ಕರ್ಮಕಥೆ. ಸ್ನಾನ ಮಾಡಿದೆ. ನನ್ನ ಮುಖ ದಶಾವತಾರ ಆಟದ ಹೆಣ್ಣು ವೇಷದವರ ಮುಖವಾಗಿತ್ತು. ಅಷ್ಟರಲ್ಲಿ ಬಾಡಿಗೆ ಕಾರಿನವನೂ ಬಂದ. ನನ್ನ ಮುಖ ಕಂಡು ಆವಾಕ್ಕಾಗಿ ನಿಂತುಬಿಟ್ಟ. ನಮ್ಮ ಮನೆಯವರೆಗೆ ಬಂದ ಬಗ್ಗೆ ದುಡ್ಡು ಕೊಟ್ಟು ಆತನನ್ನು ವಾಪಾಸು ಕಳಿಸಿಬಿಟ್ಟೆ. ಹೆಂಡತಿಯನ್ನು ಕರೆದು- “”ಈ ಬೋಳು ಮುಖ ಹೊತ್ತು ಮಾವನ ಮನೆಗೆ ಹೋಗುವುದಾದರೂ ಹೇಗೆ? ಇನ್ನು ಹದಿನೈದು ದಿನ ಬಿಟ್ಟು ಆಮೇಲೆ ಹೋಗೋಣ. ಅಷ್ಟರೊಳಗೆ ಮೀಸೆ ಸ್ವಲ್ಪವಾದರೂ ಬಂದೀತು” ಎಂದೆ. ಅವಳು ಮಾತಾಡಲಿಲ್ಲ. ತನ್ನಷ್ಟಕ್ಕೆ ತಾನೇ ನಗುತ್ತ, “”ಆಯ್ತು, ಚಹಾ ಕುಡಿಯಲು ಬನ್ನಿ” ಎಂದು ಒಳಗೆ ನಡೆದಳು.
– ಗೋಪಾಲಕೃಷ್ಣ ಹೆಗಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.