ಶಾನ್ ಮಾರ್ಷ್ ಅಜೇಯ ಶತಕ
Team Udayavani, Dec 4, 2017, 6:50 AM IST
ಅಡಿಲೇಡ್: ಶಾನ್ ಮಾರ್ಷ್ ಅವರ ಅಜೇಯ ಶತಕದಿಂದಾಗಿ ಆಸ್ಟ್ರೇಲಿಯ ತಂಡವು ಇಂಗ್ಲೆಂಡ್ ತಂಡದೆದುರಿನ ಆ್ಯಶಸ್ ಸರಣಿಯ ಹೊನಲು ಅಹರ್ನಿಶಿ ಪಂದ್ಯದಲ್ಲಿ 8 ವಿಕೆಟಿಗೆ 442 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇದಕ್ಕುತ್ತರವಾಗಿ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿದ್ದು ದ್ವಿತೀಯ ದಿನದಾಟದ ಅಂತ್ಯಕ್ಕೆ ಸ್ಟೋನ್‌ಮ್ಯಾನ್ ಅವರನ್ನು ಕಳೆದುಕೊಂಡಿದ್ದು 29 ರನ್ ಗಳಿಸಿದೆ.
ಪಂದ್ಯದ ಮೊದಲ ದಿನ ಮಳೆಯಿಂದ ಕೆಲವು ತಾಸಿನ ಆಟ ನಷ್ಟವಾಗಿತ್ತು. ಇದರಿಂದಾಗಿ ಆಸ್ಟ್ರೇಲಿಯ 4 ವಿಕೆಟಿಗೆ 209 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ದ್ವಿತೀಯ ದಿನ ರನ್ ಖಾತೆ ತೆರೆಯುವ ಮೊದಲೇ 36 ರನ್ ಗಳಿಸಿದ್ದ ಹ್ಯಾಂಡ್ಸ್‌ಕಾಂಬ್ ಅವರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಮಾರ್ಷ್ ಅವುರ ಟಿಮ್ ಪೈನ್ ಜತೆಗೂಡಿ ಆರನೇ ವಿಕೆಟಿಗೆ 85 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಆತಿಥೇಯ ತಂಡದ ಉತ್ತಮ ಮೊತ್ತಕ್ಕೆ ಕೊಡುಗೆ ಸಲ್ಲಿಸಿದರು.
ಮಾರ್ಷ್ ಮತ್ತು ಪೈನ್ ಎಚ್ಚರಿಕೆಯಿಂದ ಇಂಗ್ಲೆಂಡ್ ದಾಳಿಯನ್ನು ನಿಭಾಯಿಸಿದರು. ಈ ಜೋಡಿಯನ್ನು ಮುರಿಯಲು ಅನುಭವಿ ಬೌಲರ್ ಸ್ಟುವರ್ಟ್ ಬ್ರಾಡ್ ಯಶಸ್ವಿಯಾದರು. 102 ಎಸೆತಗಳಿಂದ 57 ರನ್ ಗಳಿಸಿದ್ದ ಪೈನ್ ಅವರನ್ನು ಬ್ರಾಡ್ ಎಲ್‌ಬಿ ಬಲೆಗೆ ಬೀಳಿಸಿದರು. ಸ್ಟಾರ್ಕ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಆಸ್ಟ್ರೇಲಿಯ ಬೇಗನೇ ಆಲೌಟ್ ಆಗಬಹುದೆಂದು ಭಾವಿಸಲಾಗಿತ್ತು. ಆದರೆ ಮಾರ್ಷ್ ಮತ್ತು ಪ್ಯಾಟ್ ಕಮಿನ್ಸ್ 8 ವಿಕೆಟಿಗೆ ಮತ್ತೆ 99 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಕಾರಣ ಆಸ್ಟ್ರೇಲಿಯದ ಮೊತ್ತ 400ರ ಗಡಿ ದಾಟುವಂತಾಯಿತು. ಈ ವೇಳೆ ಮಾರ್ಷ್ ಅವರು ಶತಕ ಸಿಡಿಸಿದ ಸಂಭ್ರಮ ಆಚರಿಸಿದರು. ಕಮಿನ್ಸ್ 44 ರನ್ ಗಳಿಸಿ ಔಟಾದರೆ ಆಸ್ಟ್ರೇಲಿಯ 8 ವಿಕೆಟಿಗೆ 442 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಾಗ ಮಾರ್ಷ್ 126 ರನ್ ಗಳಿಸಿದ್ದರು. 231 ಎಸೆತ ಎದುರಿಸಿದ್ದ ಅವರು 15 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದರು. ಇದು ಅವರ ಬಾಳ್ವೆಯ 5ನೇ ಮತ್ತು ತವರಿನಲ್ಲಿ 2ನೇ ಶತಕವಾಗಿದೆ. ಈ ಹಿಂದೆ ಅವರು ಹೋಬರ್ಟ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 188 ರನ್ ಗಳಿಸಿದ್ದರು. ಅಹರ್ನಿಶಿ ಪಂದ್ಯದಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯದ ನಾಲ್ಕನೇ ಆಟಗಾರ ಎಂಬ ಗೌರವಕ್ಕೆ ಮಾರ್ಷ್ ಪಾತ್ರರಾಗಿದ್ದಾರೆ.
ಚೊಚ್ಚಲ ಟೆಸ್ಟ್ ಆಡುತ್ತಿರುವ ಕ್ರೆಗ್ ಓವರ್ಟನ್ 105 ರನ್ನಿಗೆ 3 ವಿಕೆಟ್ ಕಿತ್ತು ಮಿಂಚಿದರು. ಬ್ರಾಡ್ 72 ರನ್ನಿಗೆ 2 ವಿಕೆಟ್ ಪಡೆದರು.
ಎಚ್ಚರಿಕೆಯ ಆಟವಾಡಿದ ಇಂಗ್ಲೆಂಡ್ ಅಂತಿಮ ಅವಧಿಯ ಆಟ ಕೊನೆಯ ಹಂತದಲ್ಲಿ ಆರಂಭಿಕ ಸ್ಟೋನ್‌ಮ್ಯಾನ್ ಅವರ ವಿಕೆಟನ್ನು ಕಳೆದುಕೊಂಡಿತು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್ 8 ವಿಕೆಟಿಗೆ 442 (ವಾರ್ನರ್ 47, ಖ್ವಾಜಾ 53, ಸ್ಮಿತ್ 40, ಹ್ಯಾಂಡ್ಸ್‌ಕಾಂಬ್ 36, ಶಾನ್ ಮಾರ್ಷ್ 126 ಔಟಾಗದೆ, ಟಿಮ್ ಪೈನ್ 57, ಪ್ಯಾಟ್ ಕಮಿನ್ಸ್ 44, ಬ್ರಾಡ್ 72ಕ್ಕೆ 2, ಓವರ್ಟನ್ 105ಕ್ಕೆ 3); ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ ಒಂದು ವಿಕೆಟಿಗೆ 29 (ಸ್ಟೋನ್‌ಮ್ಯಾನ್ 18).
ಎಕ್ಸ್‌ಟ್ರಾ ಇನ್ನಿಂಗ್ಸ್
*ಅಹರ್ನಿಶಿ ಪಂದ್ಯದಲ್ಲಿ ಇದು ಆಸ್ಟ್ರೇಲಿಯ (8 ವಿಕೆಟಿಗೆ 442 ರನ್) ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. ಬ್ರಿಸ್ಬೇನ್‌ನಲ್ಲಿ ಪಾಕಿಸ್ಥಾನ ವಿರುದ್ಧ 429 ರನ್ ಪೇರಿಸಿದ್ದು ಈ ಹಿಂದಿನ ಗರಿಷ್ಠ ಮೊತ್ತವಾಗಿದೆ. ಅಹರ್ನಿಶಿ ಪಂದ್ಯದಲ್ಲಿ ಇದು ಮೊದಲ ಇನ್ನಿಂಗ್ಸ್‌ನಲ್ಲಿ ದಾಖಲಾದ ನಾಲ್ಕನೇ ಗರಿಷ್ಠ ಮೊತ್ತವಾಗಿದೆ.
* ಟೆಸ್ಟ್‌ನಲ್ಲಿ ಶಾನ್ ಮಾರ್ಷ್ 5ನೇ ಮತ್ತು ತವರಿನಲ್ಲಿ ಆಡಿದ 19 ಇನ್ನಿಂಗ್ಸ್‌ನಲ್ಲಿ ಹೊಡೆದ 2ನೇ ಶತಕವಾಗಿದೆ. ಈ ಹಿಂದೆ ಹೋಬರ್ಟ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ದ 188 ರನ್ ಹೊಡೆದಿದ್ದರು. ಮಾರ್ಷ್ ಅಹರ್ನಿಶಿ ಪಂದ್ಯದಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯದ ನಾಲ್ಕನೇ ಆಟಗಾರರಾಗಿದ್ದಾರೆ. ಈ ಹಿಂದೆ ಉಸ್ಮಾನ್ ಖ್ವಾಜಾ, ಸ್ಟೀವನ್ ಸ್ಮಿತ್ ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ ಶತಕ ಹೊಡೆದಿದ್ದರು.
* ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಎದುರಾಳಿ ತಂಡ ಇನ್ನಿಂಗ್ಸ್ ಡಿಕ್ಲೇರ್ ಮಾಡಿರುವುದು ಇದು 11ನೇ ಸಲವಾಗಿದೆ. ಈ ಹಿಂದೆ 2007ರಲ್ಲಿ ಗಾಲೆಯಲ್ಲಿ ನಡೆದ ಟೆಸ್ಟ್‌ನಲ್ಲಿ ಶ್ರೀಲಂಕಾ 8 ವಿಕೆಟಿಗೆ 499 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.