ಮಸೀದಿ ಕೆಡವಿದವರಿಂದಲೇ ಗೋರಿ ನೆಲಸಮದ ಹೊಂಚು
Team Udayavani, Dec 5, 2017, 4:34 PM IST
ಬೆಂಗಳೂರು: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿದವರೇ ಕರ್ನಾಟಕದ ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯ ಗೋರಿಯನ್ನು ನೆಲಸಮ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾದ್ ಕಳವಳ ವ್ಯಕ್ತಪಡಿಸಿದರು.
ಗೌರಿ ಮೆಮೋರಿಯಲ್ ಟ್ರಸ್ಟ್ ಉದ್ಘಾಟನೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲವರು ಕರ್ನಾಟಕವನ್ನು ಕೋಮುವಾದಿ ರಾಜ್ಯವಾಗಿ ಮಾಡಲು ಹೊರಟಿದ್ದಾರೆ. ಮೈಸೂರಿನಲ್ಲಿ ಕಾನೂನು ಉಲ್ಲಂ ಸಿ, ಪೊಲೀಸರ ಮೇಲೆ ದಬ್ಟಾಳಿಕೆ ಮಾಡಿದ್ದಾರೆ. ಕರಾವಳಿಯಲ್ಲಿ ಆಗಾಗ ಕೋಮುಗಲಭೆ ಸೃಷ್ಟಿಸುತ್ತಿರುತ್ತಾರೆ.
ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯ ಗೋರಿಯ ಕಲ್ಲನ್ನು ಕೀಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಘಟನೆಯನ್ನು ಖಂಡಿಸಲೇಬೇಕು ಎಂದರು. ಗೌರಿ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನು ವಿಳಂಬ ಮಾಡದೇ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿಬೇಕು. ಮಾನವ ವಿರೋಧಿ ಸಂಸ್ಕೃತಿಗಳಿಗೆ ಸದಾ ಧಿಕ್ಕಾರವಿರಲಿ ಎಂದು ಹೇಳಿದರು.
ಪತ್ರಕರ್ತ ಸಿದ್ಧಾರ್ಥ್ ವರದರಾಜನ್ ಮಾತನಾಡಿ, ಗೌರಿ ಎಲ್ಲವನ್ನೂ ಮುಕ್ತವಾಗಿ ಬರೆಯುತ್ತಿದ್ದಳು ಇದನ್ನು ಸಹಿಸಲಾಗದವರು ಅವಳನ್ನು ಕೊಂದಿದ್ದಾರೆ. ಸಾಮಾಜಿಕ ಚಿಂತಕ ಪ್ರೊ.ಎಂ.ಎಂ.ಕಲಬುರಗಿ, ದಾಬೋಲ್ಕರ್ ಮೊದಲಾದರ ಕೊಲೆಯ ಆರೋಪಿಗಳು ಇನ್ನು ಸಿಕ್ಕಿಲ್ಲ. ಈ ಮಧ್ಯೆ ದೇಶದಲ್ಲಿ ವ್ಯತಿರಿಕ್ತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಪದ್ಮಾವತಿ ಸಿನಿಮಾವನ್ನು ಟೀಕಿಸುವ ಬರದಲ್ಲಿ ಜನ ಪ್ರತಿನಿಧಿಗಳೇ ಕೆಟ್ಟ ಪದಗಳ ಬಳಕೆ ಮಾಡಿರುವುದು ಶೋಚನೀಯ ಎಂದರು.
ಸಾಮಾಜಿಕ ಜಾಲತಾಣದ ಮೇಲೂ ಸೈಬರ್ ಕಾನೂನಿನ ಮೂಲಕ ಹಿಡಿತ ಸಾಧಿಸುತ್ತಿದ್ದಾರೆ. ನರೇಂದ್ರ ಮೋದಿ, ಆದಿತ್ಯನಾಥ್ ಮೊದಲಾದವರನ್ನು ಪ್ರಶ್ನಿಸಿದವರ ವಿರುದ್ಧ ಎಫ್ಐಆರ್ ದಾಖಲಾಗುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತಿದೆ. ಅತ್ಯಂತ ಅಪಾಯಕಾರಿ ಯುಗದಲ್ಲಿ ನಾವಿದ್ದೇವೆ. ಕೆಲವರು ತಮ್ಮ ನಿಲುವನ್ನು ವಿರೋಧಿಸುವ ಸಾಹಿತಿಗಳನ್ನು, ಪತ್ರಕರ್ತರನ್ನು, ಸಿನಿಮಾ ನಿರ್ದೇಶಕರನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ ಎಂದು ಹೇಳಿದರು.
ಸಾಹಿತಿ ದೇವನೂರು ಮಹಾದೇವ ಮಾತನಾಡಿ, ಗೌರಿಯ ಕೊಲೆ, ಕೊಲೆಯಷ್ಟೇ ಅಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದಿರುವ ದಾಳಿ. ಗೌರಿ ಸ್ಮಾರಕ ಟ್ರಸ್ಟ್, ಗೌರಿ ಕೇಂದ್ರಿತವಾಗದೆ ಗೌರಿ ಲಂಕೇಶ್‌ರ ವಿಚಾರಗಳ ಕೇಂದ್ರವಾಗಬೇಕು, ಚಳವಳಿಯಲ್ಲಿ ಅನೇಕ ವೈರುತ್ವವನ್ನು ಎದುರಿಸಬೇಕಾಗುತ್ತದೆ. ಅದನ್ನೆಲ್ಲಾ ಮೀರಿ ನಿಲ್ಲಬೇಕು. ಲಂಕೇಶ್‌ರ ಟೀಕೆ-ಟಿಪ್ಪಣಿ ಕೃತಿ ಅಧ್ಯಯನ ವಿಷಯವಾಗಿ, ಈ ಟ್ರಸ್ಟ್ ಅಡಿಯಲ್ಲಿ ಚರ್ಚೆಗಳನ್ನು ಹುಟ್ಟಿ ಹಾಕಬೇಕು ಎಂದು ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಸಮಾಜದಲ್ಲಿ ಹಣದ ಮೇಲೆ ವ್ಯವಹಾರ ನಡೆಯುತ್ತಿದೆ. ಚಪ್ಪಲಿ ಬಿಡುವ ಜಾಗದಲ್ಲಿ ಇರಬೇಕಾದ ಹಣವಿಂದು ಅಡುಗೆ ಮನೆ ಪ್ರವೇಶ ಮಾಡಿರುವುದು ದುರಂತ ಎಂದರು. ಚಿಂತಕ ಎ.ಕೆ. ಸುಬ್ಬಯ್ಯ, ರೈತ ಸಂಘದ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಲೇಖಕಿ ಕೆ. ನೀಲಾ, ಕವಿತಾ ಲಂಕೇಶ್, ದೊಡ್ಡಪಾಳ್ಯ ನರಸಿಂಹ ಮೂರ್ತಿ, ಡಾ. ವಿಜಯಮ್ಮ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.