ಹಾಸ್ಯಲೇಖಕಿಯ ಜೊತೆಗೆ ಮಾತುಕತೆ
Team Udayavani, Dec 8, 2017, 3:23 PM IST
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾಸ್ಯ ಮಿಳಿತವಾದ ವಿಶಿಷ್ಟ ಬರವಣಿಗೆಯಿಂದ ಹಾಸ್ಯ ಸಾಹಿತಿಯಾಗಿ ಪ್ರಸಿದ್ಧಿ ಪಡೆದವರು ಭುವನೇಶ್ವರಿ ಹೆಗಡೆ. ಉತ್ತರಕನ್ನಡ ಜಿಲ್ಲೆಯ ಕತ್ರಗಾಲದಲ್ಲಿ ಜನಿಸಿ ಅರ್ಥಶಾಸ್ತ್ರ ಮತ್ತು ಮನಃಶಾಸ್ತ್ರಗಳೆರಡರಲ್ಲಿಯೂ ಪದವಿ ಪಡೆದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ದಶಕಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದಾರೆ.
ಇವರ ಸುಮಾರು 500ಕ್ಕೂ ಹೆಚ್ಚು ಪ್ರಬಂಧಗಳು ರಾಜ್ಯದ ವಿವಿಧ ದಿನಪತ್ರಿಕೆಗಳಲ್ಲಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಮುಗುಳು, ನಕ್ಕು ಹಗುರಾಗಿ, ಎಂಥದು ಮಾರಾಯೆ, ವಲಲ ಪ್ರತಾಪ ಸೇರಿದಂತೆ ಹತ್ತಾರು ಕೃತಿಗಳನ್ನು ರಚಿಸಿರುವ ಇವರು ರೇಡಿಯೋ ನಾಟಕಗಳನ್ನು, ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಅಂಕಣಗಾರ್ತಿಯಾಗಿಯೂ, ಉಪನ್ಯಾಸಕಾರರಾಗಿಯೂ ಹೆಸರು ಮಾಡಿದವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪುರಸ್ಕಾರ, ಹುಬ್ಬಳ್ಳಿಯ ಅವ್ವ ಪ್ರತಿಷ್ಠಾನದ ಅವ್ವ ಪ್ರಶಸ್ತಿ, ಇನ್ಫೋಸಿಸ್ ಫೌಂಡೇಶನ್‌ನ ಸುಧಾ ಮೂರ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಇವರ ಉಡಿಯಲ್ಲಿವೆ.
ಇತ್ತೀಚೆಗೆ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಹಮ್ಮಿಕೊಂಡಿದ್ದ ಉಡುಪಿ ಜಿಲ್ಲಾ ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳ ನಾಲ್ಕನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಸವಿನುಡಿ ಹಬ್ಬ- 2017ರ ಉದ್ಘಾಟನೆಗಾಗಿ ಗಂಗೊಳ್ಳಿಗೆ ಆಗಮಿಸಿದ್ದರು. ಆ ಬೆಳಗಿನ ಸಮಯ ಸಿಕ್ಕ ಕೊಂಚ ಅವಕಾಶದಲ್ಲಿ ಭುವನೇಶ್ವರಿ ಹೆಗಡೆಯವರೊಂದಿಗೆ ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳಾದ ಸ್ನೇಹಾ, ಸಮ್ರಿನ್, ನಮಿತಾ ಖಾರ್ವಿ, ರೆಝಿನಾ, ನಯಾಝ್, ಮತ್ತು ಶ್ರೀನಾಥ ಭಟ್ ಪುಟ್ಟದೊಂದು ಮಾತುಕತೆ ನಡೆಸಿದರು. ಅದರ ಆಯ್ದ ಭಾಗ ಇಲ್ಲಿದೆ.
ಸ್ನೇಹಾ : ಮೇಡಂ ನಿಮ್ಮ ಬಾಲ್ಯ ಜೀವನ ಮತ್ತು ಸಾಹಿತ್ಯದ ಪೂರಕತೆಯ ಬಗೆಗೆ ಸ್ವಲ್ಪ ತಿಳಿಸುವಿರಾ?
ಭುವನೇಶ್ವರಿ ಹೆಗಡೆ : ನಾನು ಹುಟ್ಟಿ ಬೆಳೆದಿದ್ದೆಲ್ಲ ಹಳ್ಳಿಯಲ್ಲಿ. ನಮ್ಮದು ಈಗಿನ ಕಾಲದ ಮಕ್ಕಳಂತೆ ಒತ್ತಡದ ಜೀವನ ಆಗಿರಲಿಲ್ಲ. ಬಾಲ್ಯದ ಪ್ರತೀ ಗಳಿಗೆಗಳನ್ನೂ ಎಂಜಾಯ್ ಮಾಡುತ್ತಿದ್ದೆವು. ಅತ್ಯಂತ ಸಹಜ ಸೊಗಸಾದ ಮತ್ತು ಒತ್ತಡವಿಲ್ಲದ ಸುಂದರ ಬಾಲ್ಯ ನಮ್ಮದಾಗಿತ್ತು. ವಿರಾಮದ ವೇಳೆಗಳಲ್ಲಿ ಬೆಟ್ಟಗುಡ್ಡಗಳನ್ನು ಅಲೆಯುತ್ತಾ, ಪ್ರಕೃತಿಯೊಂದಿಗೆ, ಸುತ್ತಲಿನ ಜನರೊಂದಿಗೆ ನಗುನಗುತ್ತಾ ಕಳೆದ ಕ್ಷಣಗಳೇ ನನ್ನ ಹಾಸ್ಯ ಬರಹಗಳಿಗೆ ನಿಜವಾದ ಸ್ಫೂರ್ತಿ.
ಸಮ್ರಿನ್ : ಹಾಸ್ಯ ಸಾಹಿತಿಯಾಗಿ ತಮ್ಮ ದೃಷ್ಟಿಯಲ್ಲಿ ಹಾಸ್ಯ ಎಂದರೆ ಏನು?
ಭುವನೇಶ್ವರಿ ಹೆಗಡೆ : ಹಾಸ್ಯ ಎಂದರೆ ನಂಜಿಲ್ಲದ ನಗು. ನಗುವು ಹೃದಯವನ್ನು ಅರಳಿಸುವ ಪ್ರಮುಖ ಅಸ್ತ್ರ . ಅದೊಂದು ಸಹಜವಾದ ಅಹಿಂಸಾತ್ಮಕವಾದ ಸೃಜನಾತ್ಮಕವಾದ ಮುಕ್ತ ಮನಸ್ಸಿನ ಅಭಿವ್ಯಕ್ತಿ. ಜೀವನದ ಆವಶ್ಯಕತೆ ಕೂಡ ಹೌದು.
ರೆಝಿನಾ : ಸಾಹಿತ್ಯಗಳಲ್ಲಿ ವಿವಿಧ ಪ್ರಾಕಾರಗಳಿದ್ದರೂ ಹಾಸ್ಯವನ್ನೇ ಪ್ರಮುಖವಾಗಿ ಆಯ್ದುಕೊಂಡಿದ್ದು ಯಾಕೆ?
ಭುವನೇಶ್ವರಿ ಹೆಗಡೆ : ಈಗಾಗಲೇ ಹೇಳಿದಂತೆ ನನ್ನ ಸಹಜ ಸುಂದರ ಬಾಲ್ಯದ ಒಡನಾಟಗಳೇ ಇದಕ್ಕೆ ಮೂಲ ಪ್ರೇರಣೆ. ನಮ್ಮಲ್ಲಿ ಬೋರು ಎನ್ನಿಸುವಂಥ ದಿನಗಳಿರಲಿಲ್ಲ. ನನ್ನ ತಂದೆಯ ಬದುಕು, ಅವರ ಮಾತಿನ ರೀತಿ-ನೀತಿಗಳು, ಓದು, ಶಾಲಾದಿನಗಳಲ್ಲಿನ ಅಧ್ಯಯನಗಳು ಎಲ್ಲವೂ ನನ್ನನ್ನ ಹಾಸ್ಯಸಾಹಿತಿಯಾಗುವಲ್ಲಿ ದಿಕ್ಕು ತೋರಿದವು. ಎಲ್ಲಕ್ಕಿಂತ ಹೆಚ್ಚಾಗಿ ಹಾಸ್ಯ ಮನಸ್ಸನ್ನು ನೇರವಾಗಿ ತಲುಪಬಲ್ಲ ಅತೀ ಸುಲಭ ಮಾಧ್ಯಮವೂ ಹೌದು.
ನಯಾಝ್ : ರಾಜಕೀಯ ಮತ್ತು ವಿದ್ಯಾರ್ಥಿ ಈ ಬಗೆಗೆ ನಿಮ್ಮ ಅಭಿಪ್ರಾಯವೇನು?
ಭುವನೇಶ್ವರಿ ಹೆಗಡೆ : ಈಗಿನ ಸನ್ನವೇಶದಲ್ಲಿ ತೀರಾ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯದ ಬಗೆಗೆ ಅತೀ ಎನ್ನಿಸುವಂತಹ ಒಲವನ್ನು ಬೆಳೆಸಿಕೊಳ್ಳುವುದು ಸರಿಯಲ್ಲ. ನಾಯಕತ್ವದ ಗುಣಗಳನ್ನು ಕಲಿಯಬೇಕು. ಮೊದಲು ವ್ಯಕ್ತಿಗತ ನೆಲೆಯಲ್ಲಿ ಬದುಕನ್ನು ಸಮರ್ಪಕವಾಗಿ ಕಟ್ಟಿಕೊಳ್ಳುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು. ನಾವು ಒಳ್ಳೆಯದಾದರೆ ದೇಶವೂ ಒಳ್ಳೆಯದಾಗುತ್ತದೆ. ರಾಜಕೀಯ ವಿದ್ಯಾರ್ಥಿಗಳ ಕಡೆಯ ಆಯ್ಕೆಯಾಗಿದ್ದರೆ ಒಳ್ಳೆಯದು. ಅದನ್ನು ಮೀರಿ ಒಳ್ಳೆಯ ಅವಕಾಶಗಳು ಇದ್ದರೆ ಖಂಡಿತ ಬಳಸಿಕೊಳ್ಳಿ.
ಶ್ರೀನಾಥ ಭಟ್ : ಇತ್ತೀಚಿನ ದಿನಗಳಲ್ಲಿ ಹಾಸ್ಯೋತ್ಸವ ನಗೆಹಬ್ಬಗಳ ಹೆಸರಿನಲ್ಲಿ ಹಾಸ್ಯ ಕೇವಲ ಮಾರಾಟದ ಸರಕಾಗಿಬಿಟ್ಟಿದೆ ಮತ್ತು ಹಾಸ್ಯ ಹಳಸಲು ಎನ್ನಿಸುವಂತೆ ಕಾಣುತ್ತದೆ. ಈ ಬಗೆಗೆ?
ಭುವನೇಶ್ವರಿ ಹೆಗಡೆ : ನಿಜ, ಒಮ್ಮೊಮ್ಮೆ ನನಗೂ ಹಾಗೆ ಅನ್ನಿಸುತ್ತದೆ. ಆದರೆ, ಅಲ್ಲಿಯೂ ಸೃಜನಾತ್ಮಕ ಹಾಸ್ಯಗಳನ್ನು ಹೇಳಬಲ್ಲವರು ಹಲವು ಜನರಿದ್ದಾರೆ. ಹಾಸ್ಯ ಅಭಾಸಗಳನ್ನು ಅಸಹ್ಯಗಳನ್ನು ಸೃಷ್ಟಿಸುವಂತಿರಬಾರದು. ನನ್ನ ಪ್ರಕಾರ ಸಾಹಿತ್ಯದ ಲಿಖೀತ ಹಾಸ್ಯವೇ ಉತ್ತಮವಾದುದು. ಬರೆಯುವ ಖುಷಿಯೂ ದೊಡ್ಡದು. ಯಾವುದೇ ಆದರೂ ಅತಿಯಾಗದಿರಲಿ ಎನ್ನೋದಷ್ಟೇ ಆಶಯ.
ನಮಿತಾ ಖಾರ್ವಿ : ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಓದುವ ಹವ್ಯಾಸ ಕಡಿಮೆ ಆಗುತ್ತಿದೆಯಲ್ಲವೆ?
ಭುವನೇಶ್ವರಿ ಹೆಗಡೆ : ಖಂಡಿತ ಹೌದು. ಆ ಬಗೆಗೆ ಬೇಸರವಿದೆ. ಎಲ್ಲರೂ ವೇಗದ ಬದುಕನ್ನು ಆಶ್ರಯಿಸಿದಂತೆ ಕಾಣುತ್ತದೆ. ಎಲ್ಲರೂ ಇದಕ್ಕೆ ಕಾರಣವನ್ನು ಮಾಧ್ಯಮಗಳ ಮೇಲೆ ಹಾಕುತ್ತಾರೆ. ಅವುಗಳೂ ಓದಿಗೆ ನೆರವಾಗುವುದುಂಟು. ಆದರೆ ಪುಸ್ತಕದ ಓದು ನೀಡುವಷ್ಟು ಖುಷಿಯನ್ನು ಅವುಗಳು ನೀಡಲಾರವು. ನಮ್ಮ ನೆರೆಯಲ್ಲಿರುವ ಎಪ್ಪತ್ತರ ಆಸುಪಾಸಿನ ಭವಾನಿ ಎನ್ನುವ ವೃದ್ಧೆ ಈ ಹೊತ್ತಿಗೂ ದಿನಕ್ಕೆ ಕನಿಷ್ಠ ಮೂರು ಪುಸ್ತಕಗಳನ್ನು ಓದಿ ಮುಗಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ ಅದರಲ್ಲೇ ತಮ್ಮ ಜೀವನದ ಸುಖವನ್ನು ಕಂಡುಕೊಳ್ಳುತ್ತಾರೆ. ಅದು ನಿಜವಾದ ಓದಿನ ಸಾರ್ಥಕತೆ. ಪುಸ್ತಕ ಓದಿಸುವ ಪ್ರಯತ್ನವನ್ನು ಸಂಬಂಧಿಸಿದವರು ನಿರಂತರವಾಗಿ ಮಾಡಬೇಕಿದೆ.
ಸ್ನೇಹಾ : ಮಕ್ಕಳ ನಾಟಕಗಳು ಸೇರಿದಂತೆ ಬಹಳಷ್ಟು ಪುಸ್ತಕಗಳನ್ನು ಬರೆದಿದ್ದೀರಿ. ಅವುಗಳಲ್ಲಿ ನಿಮಗೆ ಹೆಚ್ಚು ಇಷ್ಟವಾಗಿದ್ದು ಯಾವುದು?
ಭುವನೇಶ್ವರಿ ಹೆಗಡೆ : ಹುಂ. ನನಗೆ ತುಂಬಾ ಇಷ್ಟವಾಗಿದ್ದು ಎಂದರೆ ನನ್ನ ಎಂಥದು ಮಾರಾಯೆ ಕೃತಿ. ಸ್ವಲ್ಪ ಮನಶಾಸ್ತ್ರೀಯ ನೆಲೆಯಲ್ಲಿ ದೈನಂದಿನ ಘಟನೆಗಳನ್ನು ವಿಶ್ಲೇಷಿಸಿ ಬರೆದ ಕೃತಿ ಅದು. ಅದಕ್ಕೆ ಬಹಳಷ್ಟು ಪ್ರಶಸ್ತಿಗಳು ಬಂದಿವೆ.
ಸಮ್ರಿನ್ : ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯ ಬಗೆಗೆ ನಿಮ್ಮ ಅಭಿಪ್ರಾಯ?
ಭುವನೇಶ್ವರಿ ಹೆಗಡೆ : ಶೈಕ್ಷಣಿಕ ವ್ಯವಸ್ಥೆ ಚೆನ್ನಾಗಿಯೇ ಇದೆ. ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದರೂ ಉತ್ತಮವಾದುದನ್ನು ಆಯ್ದುಕೊಂಡು ಅನುಸರಿಸಿಕೊಂಡು ಹೋಗುವ ಮನಸ್ಥಿತಿ ಬಹಳ ಮುಖ್ಯ. ಜೀವನಮುಖೀಯಾಗಿ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಎತ್ತರಕ್ಕೇರಬೇಕಿದೆ.
ರೆಝಿನಾ: ಈ ಹಿಂದೆ ಉಪನ್ಯಾಸಕ ವೃತ್ತಿ ಮತ್ತು ಬರಹ ಉಪನ್ಯಾಸ ಎಲ್ಲವನ್ನೂ ಹೇಗೆ ಹೊಂದಿಸಿಕೊಂಡು ಹೋಗುತ್ತಿದ್ರಿ?
ಭುವನೇಶ್ವರಿ ಹೆಗಡೆ : ಹೌದು, ಓರ್ವ ಬರಹಗಾರನಿಗೆ ಸಮಯದ ಹೊಂದಾಣಿಕೆ ಬಹಳ ಮುಖ್ಯ. ಸಿಗುವ ಸಣ್ಣ ವಿರಾಮದ ಸಮಯಗಳಲ್ಲಿ ಮುಂದಿನ ಬರಹಗಳ ಬಗೆಗೆ ಆಲೋಚಿಸುತ್ತಿದ್ದೆ. ರಾತ್ರಿಯ ನೀರವ ವಾತಾವರಣದಲ್ಲಿ ಬರೆಯುವುದೆಂದರೆ ಉತ್ಸಾಹ ಜಾಸ್ತಿ. ಮನಸ್ಸಿದ್ದರೆ ಮಾರ್ಗ ಅಷ್ಟೆ.
ನಯಾಝ್ : ಸಮಾಜದಲ್ಲಿ ಕಂಡುಬರುತ್ತಿರುವ ಸ್ತ್ರೀಯರ ಮೇಲಿನ ದೌರ್ಜನ್ಯ ದಬ್ಟಾಳಿಕೆಗಳ ಕುರಿತು ಏನು ಹೇಳುವಿರಿ?
ಭುವನೇಶ್ವರಿ ಹೆಗಡೆ : ಮಹಿಳೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಪ್ರಬಲರಾಗುವತ್ತ ಗಮನ ಹರಿಸಬೇಕಿದೆ. ಕರಾಟೆಯಂತಹ ಆತ್ಮರಕ್ಷಣೆಯ ತಂತ್ರಗಳನ್ನು ಕಲಿಯಬೇಕಿದೆ. ಕೆಲವು ಹುಡುಗಿಯರು ಆಕರ್ಷಣೆಯ ಹಿಂದೆ ಬಿದ್ದು ದುಷ್ಕರ್ಮಿಗಳ ಬಲೆಯಲ್ಲಿ ಬೀಳುತ್ತಾರೆ. ನನ್ನದೊಂದು ಕಿವಿಮಾತಿದೆ. ಪ್ರೀತಿಯ ಹೆಸರಿನಲ್ಲಿ ಯಾರನ್ನೂ ಕೂಡ ಶೇಕಡ ನೂರಕ್ಕೆ ನೂರು ನಂಬದಿರಿ. ಶೇಕಡ ಒಂದರಷ್ಟಾದರೂ ಸಂಶಯಿಸಿ ಪ್ರಶ್ನಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಿ.
ಶ್ರೀನಾಥ ಭಟ್ : ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕೇಂದ್ರ ಸರಕಾರ ಜಾರಿಗೊಳಿಸಿದ ನೋಟ್ ಬ್ಯಾನ್ ಮತ್ತು ಜಿಎಸ್‌ಟಿ ಬಗೆಗೆ ನಿಮ್ಮ ಅಭಿಪ್ರಾಯ?
ಭುವನೇಶ್ವರಿ ಹೆಗಡೆ : ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಆರಂಭದಲ್ಲಿ ಸ್ವಲ್ಪ ಎಡರು-ತೊಡರುಗಳು ಸಹಜ. ಆದರೆ, ಮುಂದಿನ ದಿನಗಳಲ್ಲಿ ಈ ಕಾರ್ಯ ಉತ್ತಮ ಫಲವನ್ನು ನೀಡಲಿರುವುದರಲ್ಲಿ ಸಂಶಯವಿಲ್ಲ.
ನಮಿತಾ ಖಾರ್ವಿ : ಮೇಡಂ ವಿದ್ಯಾರ್ಥಿಗಳಿಗೆ ನಿಮ್ಮ ಕಿವಿಮಾತು!
ಭುವನೇಶ್ವರಿ ಹೆಗಡೆ : ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದದ್ದು. ಕಳೆದ ಸಮಯ ಮತ್ತೆ ಬರಲಾರದು. ಒಂದು ನಿರ್ದಿಷ್ಠ ಗುರಿಯನ್ನಿಟ್ಟುಕೊಂಡು ಎಲ್ಲಾ ತಮಾಷೆ, ಹಾಸ್ಯ, ಗಮ್ಮತ್ತುಗಳ ನಡುವೆ ಓದಿನ ಬಗೆಗೆ ಗಂಭೀರ ದೃಷ್ಟಿಯನ್ನಿಟ್ಟುಕೊಳ್ಳಿ. ಆ ನಿಟ್ಟಿನಲ್ಲಿ ಪರಿಶ್ರಮ ಹಾಕಿ. ಒಳ್ಳೆಯವರಾಗಿರಿ. ಶುಭವಾಗಲಿ.
ನರೇಂದ್ರ ಎಸ್. ಗಂಗೊಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.