ಬದಲಿ ಆಟಗಾರರ ಬಳಕೆಯೇ ಸೂಪರ್ ಪವರ್…
Team Udayavani, Dec 9, 2017, 12:37 PM IST
ಶ್ರೀಲಂಕಾ ತಂಡದ ನಾಯಕ ದಿನೇಶ್ ಚಂಡಿ ಮಾಲ್ ದೆಹಲಿ ಟೆಸ್ಟ್‌ನಲ್ಲಿ ಒಂದೂವರೆ ಶತಕದ ದೀರ್ಘ ಇನಿಂಗ್ಸ್ ಮೂಲಕ ಟೆಸ್ಟ್ ಉಳಿಸಿಕೊಳ್ಳುವ ಸಾಹಸ ನಡೆಸಿ ತಮ್ಮ ಬ್ಯಾಟಿಂಗ್ ಕೌಶಲ ಪ್ರದರ್ಶಿಸಿರುವುದನ್ನು ಮೆಚ್ಚಿಕೊಳ್ಳುತ್ತ ಅವರ
ಚರ್ಚಾಸ್ಪದ ಮಾತುಗಳತ್ತಲೂ ಗಮನ ಹರಿಸಬೇಕಾಗಿದೆೆ. ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಆಟಗಾರ ಬೇಕು ಎಂದು ಅವರು ಧ್ವನಿ ಎತ್ತಿದ್ದಾರೆ. ನಿಜ, ಕೊಹ್ಲಿ ಆಟದ ದಾಖಲೆ, ವಿಶ್ವದಾಖಲೆಗಳ ಲೆಕ್ಕಾಚಾರಗಳಲ್ಲೇ ಮುಳುಗಿದವರಿಗೆ ಇದು ಹೊಸ ಅಂಶ!
ಸ್ವತಃ ಭಾರತೀಯರಾಗಿ ನಮ್ಮ ದೇಶ ಗೆಲ್ಲಲಿ ಎಂಬ ಭಾವ ಸಹಜವಾದರೂ ಏಕಪಕ್ಷೀಯ ಫಲಿತಾಂಶ ಯಾವತ್ತೂ ಖುಷಿಕೊಡುವಂಥವಲ್ಲ. ಗಾಲೆ ಟೆಸ್ಟ್‌ನಲ್ಲಿ ಶ್ರೀಲಂಕಾದ ಅಸೆಲಾ ಗುಣರತ್ನೆ ಹೆಬ್ಬೆಟ್ಟಿನ ಗಾಯಕ್ಕೊಳಗಾಗಿ ಮೊದಲ ದಿನವೇ ಆಡುವ ತಂಡದ ಹನ್ನೊಂದರ ಪಟ್ಟಿಯಿಂದ ಹೊರಬಿದ್ದರು. ಈಗಿನ ಐಸಿಸಿ ನಿಯಮಗಳ ಪ್ರಕಾರ ಬದಲಿ ಫೀಲ್ಡರ್‌ಗಳನ್ನು ಪಡೆಯಲು ಅವಕಾಶವಿದೆ. ರನ್ ಓಡುವ ರನ್ನರ್ ಕೊಡದಿದ್ದುದೂ ಸರಿ. ಆದರೆ ಆ ಪಂದ್ಯದುದ್ದಕ್ಕೂ ಭಾರತದ 11 ಫಿಟ್ ಆಟಗಾರರ ಎದುರು ಲಂಕಾ ಪಡೆ ಪರಮಾವಧಿ 10 ಬ್ಯಾಟ್ಸ್‌ಮನ್, ಬೌಲರ್ ಜೊತೆ ಏಗಬೇಕಾಯಿತು. ಇದಕ್ಕೊಂದು ಪರಿಹಾರ ಬೇಡವೇ?
ಮೊದಲ ಅವಧಿಯ ಸೌಲಭ್ಯ
ಲಂಕಾದ ನಾಯಕ ಚಂಡಿಮಾಲ್ ಪ್ರಕಾರ, ಓರ್ವ ಆಟಗಾರ ಟೆಸ್ಟ್‌ನ ಮೊದಲ ಅವಧಿಯಲ್ಲಿಯೇ ಗಾಯಾಳುವಾದರೆ ಆತನ ಬದಲು ಸಂಪೂರ್ಣ ಟೆಸ್ಟ್ ಆಡಲು ಅವಕಾಶವಿರುವ ಪರಿಪೂರ್ಣ ಆಟಗಾರನನ್ನು ತೆಗೆದುಕೊಳ್ಳಲು ಐಸಿಸಿ ಅವಕಾಶ ಕೊಡಬೇಕು. ನೆನಪಿಸಿಕೊಳ್ಳಿ, ಭಾರತದ ಶ್ರೀಲಂಕಾ ಪ್ರವಾಸದ ಮೊದಲ ಟೆಸ್ಟ್ ನಡೆದಿದ್ದು ಗಾಲೆಯಲ್ಲಿ. ಪಂದ್ಯದ ಮೊದಲ ಅವಧಿಯಲ್ಲಿಯೇ ಗಾಯಾಳುವಾದ ಅಸೆಲಾ ಗುಣರತ್ನೆ ಆಸ್ಪತ್ರೆ ಪಾಲಾದರು. ಬೌಲಿಂಗ್ ಬಿಡಿ, ಎರಡೂ ಇನಿಂಗ್ಸ್‌ನಲ್ಲಿ ಅವರು ಲಂಕಾ ಪರ ಬ್ಯಾಟ್ ಮಾಡಲಾಗಲಿಲ್ಲ. ಅಂದರೆ 11 ಆಟಗಾರರಿಂದ ಕೂಡಿದ್ದ ಭಾರತ 10 ಆಟಗಾರರಿದ್ದ ಲಂಕಾ ವಿರುದ್ಧ ಜಯ ಸಾಧಿಸಿತು. ಇದು ನ್ಯಾಯವೇ ಎಂಬ ಪ್ರಶ್ನೆ ಈ ಹೊತ್ತಿನದು.
ಗಾಯಾಳು ಬ್ಯಾಟ್ಸ್‌ಮನ್‌ಗೆ ರನ್ನರ್ ಒದಗಿಸುವ ನಿಯಮ ಮತ್ತು ಇದರಿಂದ ಅನ್‌ಫಿಟ್ ಬ್ಯಾಟ್ಸ್‌ಮನ್‌ಗಳು ಕೂಡ ಪಂದ್ಯದಲ್ಲಿ ಪಾಲ್ಗೊಳ್ಳುವುದು, ಸುಸ್ತಾದ ಬ್ಯಾಟ್ಸ್‌ಮನ್ ಬದಲಿ ಆಟಗಾರ ರನ್ನರ್ ರೂಪದಲ್ಲಿ ಹಲವು ಬಾರಿ ಗೆಲುವಿಗೆ ಸಹಾಯ ಮಾಡಿದ್ದು ನೋಡಿದ್ದೇವೆ. ಈ ನಿಯಮ, ಸೌಲಭ್ಯ ಬೇಕಾಗಿಲ್ಲ. ಇದಕ್ಕೆ ಐಸಿಸಿ ನೋ ಎಂದಾಗ ಸ್ವಾಗತವೇ ಸಿಕ್ಕಿತ್ತು. ಆದರೆ ಪಂದ್ಯದ ಮೊದಲ ಅವಧಿಯಲ್ಲಿಯೇ ಗಾಯಾಳುವಾದವರಿಗೆ ಬದಲಿ ಪರಿಪೂರ್ಣ ಆಟಗಾರನನ್ನು ಕೊಡುವುದು ನ್ಯಾಯಬದ್ಧವಲ್ಲವೇ? ಬದಲಿ ಪರಿಪೂರ್ಣ ಆಟಗಾರ ಎಂದರೆ ಆ ಆಟಗಾರ ಬ್ಯಾಟಿಂಗ್, ಬೌಲಿಂಗ್ ಕೂಡ ಮಾಡಬಹುದು ಎಂದರ್ಥ.
ಸಾಮಾನ್ಯವಾಗಿ ತಂಡದ ಸ್ಪರ್ಧೆಗಳಲ್ಲಿ ಈ ರೀತಿಯ ಪರಿಪೂರ್ಣ ಬದಲಾವಣೆಗಳನ್ನೇ ನೋಡುತ್ತೇವೆ.
ಫುಟ್ಬಾಲ್, ಹಾಕಿ, ಕಬಡ್ಡಿ, ವಾಲಿಬಾಲ್… ಮೊದಲಾವುಗಳಲ್ಲಿ ಇಂಥ ಬದಲಾವಣೆಗೆ ಅವಕಾಶಗಳುಂಟು. ಬದಲಿ ಆಟಗಾರರ ಮೇಲೆ ಯಾವುದೇ ಕಡಿವಾಣವಿಲ್ಲ.
ಕಬಡ್ಡಿಯಲ್ಲಿ ರೈಡರ್‌ಗಳ ಕೊರತೆ ಕಾಣಿಸಿದಾಗ ಸಬ್ಸಿಟ್ಯೂಷನ್ ಮೂಲಕ ಹೊಸ ರೈಡರ್‌ಗೆ ಅವಕಾಶ ಸಿಕ್ಕುವುದನ್ನು ಕಾಣುತ್ತೇವೆ. ಇದು ಸ್ಪರ್ಧಾ ಮಟ್ಟದ ಏರಿಕೆಗೆ ಕಾರಣವಾಗುತ್ತದೆಯೇ ವಿನಃ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಇಂಥ ಕೆಲವು ಷರತ್ತಿಗೊಳಪಟ್ಟು ಕ್ರಿಕೆಟ್‌ನಲ್ಲಿ ಈ ನಿಯಮವನ್ನು ಏಕೆ ಜಾರಿಗೆ ತರಬಾರದು ಎಂದು ಚಾಂಡಿಮಲ್ ಪ್ರಶ್ನಿಸಿದ್ದಾರೆ.
ಬದಲಿಯ ದ್ವಂದ್ವಗಳು
ಗಾಯದ ಸಮಸ್ಯೆ ಗಂಭೀರವಾಗಿರುವ ಸಂದರ್ಭದಲ್ಲಿ ಪಂದ್ಯದ ಅವಧಿಯನ್ನು ಪರಿಗಣಿಸಬೇಕಿಲ್ಲ ಎಂಬ ವಾದವೂ ಇದೆ. 1963ರಲ್ಲಿ ಇಂಗ್ಲೆಂಡ್ ಲಾರ್ಡ್ಸ್ ಟೆಸ್ಟ್‌ನಲ್ಲಿ ಎರಡು ಎಸೆತಕ್ಕೆ ಆರು ರನ್ ಗಳಿಸಿದರೆ ಆಸೀಸ್ ವಿರುದ್ಧ ಗೆಲುವು ಸಾಧಿಸುತ್ತಿತ್ತು. ಆದರೆ 9ನೇ ವಿಕೆಟ್ ಬಿದ್ದಿದ್ದರಿಂದ ಎಡಗೈಗೆ ಸಂಪೂರ್ಣವಾಗಿ ಬ್ಯಾಂಡೇಜ್ ಕಟ್ಟಿಸಿಕೊಂಡೇ ಕೋಲಿನ್ ಕೌಡ್ರಿ ಬ್ಯಾಟಿಂಗ್‌ಗೆ ಇಳಿದರು. ಅದೃಷ್ಟಕ್ಕೆ ಅವರು ಆಡದ ತುದಿಯಲ್ಲಿಯೇ ಆರು ಚೆಂಡು ಕಳೆದಿದ್ದರಿಂದ ಪಂದ್ಯ ಡ್ರಾ ಆಯಿತು. ಇಂತಹ ಸಂದರ್ಭದಲ್ಲಿ ಪರಿಪೂರ್ಣ ಬದಲಿ ಆಟಗಾರರನ್ನು ಕೊಡಬಹುದೇ ಎಂಬ ಕುತೂಹಲಕಾರಿ ಜಿಜಾnಸೆಯೂ ಇದೆ!
ಇದಕ್ಕಿಂತ ಸ್ವಾರಸ್ಯವಾದ ಪ್ರಸಂಗ ಬೆಂಗಳೂರಿನಲ್ಲಿ ನಡೆದಿತ್ತು. 1986-87ರ ಭಾರತ ಪಾಕ್ ಟೆಸ್ಟ್. ನಾಯಕರಿಬ್ಬರೂ ಪಿಚ್ ನೋಡಿ ಇದು ವೇಗಿಗಳ ಸ್ವರ್ಗ ಎಂದು ತಂಡದ 11ರಲ್ಲಿ ಒಬ್ಬ ಹೆಚ್ಚುವರಿ ವೇಗಿಯನ್ನು ಸೇರಿಸಿಕೊಂಡರು.
ಮೊದಲ ಎಸೆತದಿಂದಲೇ ಪಿಚ್‌ನಲ್ಲಿ ಚೆಂಡು 70, 80 ಡಿಗ್ರಿಯಲ್ಲಿ ತಿರುಗಲಾರಂಭಿಸಿತು. ಆ ಟೆಸ್ಟ್ ಆಡಿದ ವೇಗಿಗಳಲ್ಲಿ ಕಪಿಲ್‌ರ 23, ವಾಸಿಂ ಅಕ್ರಂರ 13ರ ಹೊರತು ಇಮ್ರಾನ್‌ಖಾನ್ 5, ರೋಜರ್ ಬಿನ್ನಿ 3 ಓವರ್‌ನಷ್ಟೇ ಬೌಲ್ ಮಾಡಿದರು. ಪಾಕ್‌ನ ಎಡಗೈ ವೇಗಿ ಹೆಚ್ಚುವರಿಯಾಗಿ ಸೇರ್ಪಡೆಗೊಂಡ ವಸಿಂ ಜಾಫರ್ ಒಂದೇ ಒಂದು
ಓವರ್ ಬೌಲ್ ಮಾಡಲಿಲ್ಲ. ಬ್ಯಾಟಿಂಗ್ ನಡೆಸಿದ್ದು 11ನೇ ಕ್ರಮಾಂಕದಲ್ಲಿ. ಸೂಪರ್ ಸಬ್ ಅವಕಾಶವಿದ್ದರೆ,
ಮೊದಲ ಅವಧಿಯಲ್ಲಿಯೇ ಎರಡೂ ತಂಡ ಬಿನ್ನಿ, ಜಾಫರ್‌ರನ್ನು ಪೆವಿಲಿಯನ್‌ಗೆ ಅಟ್ಟುತ್ತಿತ್ತು. ಇಂತಹ ಸಂದರ್ಭಗಳನ್ನು ಕೂಡ ನಿಭಾಯಿಸುವ ಅವಕಾಶ ನೀಡುವುದು ಅಥವಾ ಈ ಹರಾಕಿರಿಗಳೇ ಕ್ರಿಕೆಟ್‌ನ ವೈಶಿಷ್ಟ್ಯವನ್ನು ಉಳಿಸುತ್ತವೆ ಎಂದು ಅಡಿಟಿಪ್ಪಣಿ ಬರೆಯಬೇಕೆ ಎಂಬುದು ಕೂಡ ಚರ್ಚೆಯಾಗಬೇಕಾಗಿದೆ.
ಸೂಪರ್ ಸಬ್ ನಿಯಮ ಬಂದಿತ್ತು!
ಕೆಲ ವರ್ಷಗಳ ಹಿಂದೆ ಐಸಿಸಿ ಸೂಪರ್ ಸಬ್ ಎಂಬ ನಿಯಮವನ್ನು ಏಕದಿನ ಕ್ರಿಕೆಟ್‌ನಲ್ಲಿ ಪ್ರಾಯೋಗಿಕವಾಗಿ ಆರು ತಿಂಗಳ ಮಟ್ಟಿಗೆ ಜಾರಿಗೆ ತಂದಿತ್ತು. ಟಾಸ್‌ಗೆ ಮುನ್ನ ಆಡುವ ತಂಡಗಳು ಸೂಪರ್ ಸಬ್ ಆಟಗಾರನನ್ನೂ ಹೆಸರಿಸಿ ತಂಡವನ್ನು ಪ್ರಕಟಿಸಬಹುದು. ಪಂದ್ಯದ ಯಾವುದೇ ಸಂದರ್ಭದಲ್ಲಿ ಆಡುವ ಆಟಗಾರನ ಬದಲು ಸೂಪರ್ ಸಬ್‌ನ್ನು ಬಳಸಬಹುದು. ದಾಖಲೆಗಳ ಪ್ರಕಾರ ಇಂಗ್ಲೆಂಡ್‌ನ ವಿಕ್ರಂ ಸೋಲಂಕಿ ಎಕ್ಟ್ರಾ ಆಟಗಾರನಾಗಿ ಬ್ಯಾಟಿಂಗ್, ಬೌಲಿಂಗ್ ಪಡೆದ ಮೊದಲ ಸೂಪರ್ ಸಬ್ ಆಗಿ ದಾಖಲಾದರು. 2005ರ ಜುಲೈ 7ರಂದು ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಅವರು ಸೈಮನ್ ಜೋನ್ಸ್‌ಗೆ ಬದಲಿಯಾಗಿ ಆಡಿದರು. ಭಾರತದ ಸುರೇಶ್ ರೈನಾ, ಆಫ್ರಿಕಾದ ಜಸ್ಟಿನ್ ಓನ್‌ಟಾಂಗ್ ಕೂಡ ಸೂಪರ್ ಸಬ್ ಆಗಿದ್ದುಂಟು.
ದುರಂತವೆಂದರೆ ಈ ಹೊಸ ನಿಯಮ ಕೇವಲ ಟಾಸ್ ಗೆದ್ದ ತಂಡಕ್ಕಷ್ಟೇ ಸಹಾಯ ಮಾಡುವಂತೆ ರೂಪಿತವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ತಂಡ ಬೌಲರ್‌ನ್ನು ಸೂಪರ್ ಸಬ್ ಎಂದು ಹೆಸರಿಸಿದ್ದರೆ ಅದು ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಆಡುವ 11ರಲ್ಲಿ ಸೇರಿಸಬಹುದು. ದ್ವಿತೀಯ ಇನಿಂಗ್ಸ್‌ನಲ್ಲಿ ಬೌಲರ್ ಸೂಪರ್ ಸಬ್‌ನ್ನು ಆಡಿಸಿದರೆ ಸಮತೋಲನ ಖಚಿತ. ಇದರಿಂದ ಟಾಸ್ ಗೆದ್ದ ತಂಡದ 12 ಆಟಗಾರರ ಎದುರು 11 ಜನ ಆಡುವ ಸ್ಥಿತಿ ಬಹುಪಾಲು ಸಂದರ್ಭಗಳಲ್ಲಿ ನಿರ್ಮಾಣವಾಯಿತು. ವಿವಾದದ ಹೊಗೆ ಕಂಡ ಐಸಿಸಿ ಆ ಪ್ರಯೋಗಕ್ಕೆ ಅಲ್ಲಿಯೇ ತೆರೆ ಎಳೆಯಿತು.
1999ರ ಕ್ಯಾಂಡಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 188 ರನ್ ಗಳಿಸಿದ್ದರೆ ಶ್ರೀಲಂಕಾ ಮೂರು ವಿಕೆಟ್ ಕಳೆದುಕೊಂಡು 139 ರನ್ ಗಳಿಸಿದ ಸಂದರ್ಭ. ಕ್ಯಾಚ್ ಒಂದಕ್ಕೆ ಓಡಿದ ಸ್ಟೀವ್ ವಾ ಹಾಗೂ ಜೇಸನ್ ಗಿಲೆಸ್ಪಿ ಮುಖಾಮುಖೀ ಡಿಕ್ಕಿಯಾಗುತ್ತಾರೆ. ಒಂದರ್ಥದಲ್ಲಿ ಆಗ ಶ್ರೀಲಂಕಾ ಬ್ಯಾಟಿಂಗ್ ಸಮಯದಲ್ಲಿ ಕಾಂಗರೂಗಳು ಎರಡು ವಿಕೆಟ್ ಕಳೆದುಕೊಂಡಂತೆ ಆಯಿತು! ಇಬ್ಬರೂ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರುತ್ತಾರೆ. ಆ ಇಡೀ ಟೆಸ್ಟ್‌ನಲ್ಲಿ ಆಸೀಸ್ 9 ಆಟಗಾರರ ಬೌಲ್ ಬ್ಯಾಟ್ ತಂಡವಾಯಿತು. ಮಾನವೀಯತೆಯ ಹೊರತಾಗಿ,
ಇದೇ ಟೆಸ್ಟ್ ಉದಾಹರಣೆಯಲ್ಲಿ ಸ್ಟೀವ್ ಗಿಲೆಸ್ಪಿ ಒಂದು ಇನಿಂಗ್ಸ್ ಬ್ಯಾಟಿಂಗ್ ಹಾಗೂ ಗಿಲೆಸ್ಪಿ 12 ಓವರ್ ಬೌಲ್ ಮಾಡಿದ್ದಾರೆ ಎಂದಾಗ ಪರಿಪೂರ್ಣ ಬದಲಿ ಆಟಗಾರನ ನಿಯಮ ಹೆಚ್ಚು ಪಕ್ವವಾಗಿರಬೇಕಾಗುತ್ತದೆ. ಗಾಯಾಳುವಾಗಿರುವುದನ್ನು ಖಚಿತಪಡಿಸಲು ತಟಸ್ಥ ಮೆಡಿಕಲ್ ಅಧಿಕಾರಿಯನ್ನೂ ನೇಮಿಸಬೇಕಾಗುತ್ತದೆ. ನಿಯಮವೊಂದು ದುರುಪಯೋಗ ಆಗದಂತೆ ನೋಡಿಕೊಳ್ಳುವುದರ ಹೊಣೆಯನ್ನು ಯಾರು ಹೊರಬೇಕು ಎಂಬುದನ್ನೂ ನಿರ್ಧರಿಸಬೇಕಾಗುತ್ತದೆ.
ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.