ಕಲ್ಲಿದ್ದಲು ಪೂರೈಸಲು ಎಸ್‌ಸಿಸಿಎಲ್ ಸಮ್ಮತಿ
Team Udayavani, Dec 10, 2017, 6:55 AM IST
ಬೆಂಗಳೂರು: ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿರುವ ಸಿಂಗರೇಣಿ ಕೊಲೈರಿಸ್ ಕಂಪನಿ ಲಿಮಿಟೆಡ್ (ಎಸ್‌ಸಿಸಿಎಲ್) ತಕ್ಷಣವೇ ಒಂದು ರೈಲ್ವೆ ಲೋಡ್‌ನಷ್ಟು ಕಲ್ಲಿದ್ದಲು ಪೂರೈಸಲು ಒಪ್ಪಿರುವುದರಿಂದ ಸದ್ಯದಲ್ಲೇ ನಿತ್ಯ 400 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುವ ನಿರೀಕ್ಷೆ ಇದೆ.
ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ್ ಅವರು ಗುರುವಾರ ಹೈದರಾಬಾದ್‌ನಲ್ಲಿ ಎಸ್‌ಸಿಸಿಎಲ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಂಸ್ಥೆಯು ಒಂದು ರೈಲ್ವೆ ಲೋಡ್ ಕಲ್ಲಿದ್ದಲು ಪೂರೈಸಲು ಒಪ್ಪಿದೆ. ಜತೆಗೆ ಜನವರಿಯಿಂದ ಮತ್ತೂಂದು ರೈಲ್ವೆ ಲೋಡ್ ಕಲ್ಲಿದ್ದಲು ಪೂರೈಸುವ ಭರವಸೆ ನೀಡಿದ್ದು, ಜನವರಿ ಹೊತ್ತಿಗೆ ಉತ್ಪಾದನೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ರಾಯಚೂರಿನ ಆರ್‌ಟಿಪಿಎಸ್ ಸ್ಥಾವರಕ್ಕೆ ವಾರ್ಷಿಕ 80 ಲಕ್ಷ ಟನ್ ಕಲ್ಲಿದ್ದಲು ಪೂರೈಕೆ ಸಂಬಂಧ ಎಸ್‌ಸಿಸಿಎಲ್, ವೆಸ್ಟರ್ನ್ ಕೋಲ್ ಫೀಲ್ಡ್ (ಡಬ್ಲ್ಯುಸಿಎಲ್), ಮಹಾನದಿ ಕೋಲ್ ಫೀಲ್ಡ್$Õ (ಎಂಸಿಎಲ್) ಸಂಸ್ಥೆಗಳೊಂದಿಗೆ ಕೆಪಿಸಿಎಲ್ ಒಡಂಬಡಿಕೆ ಮಾಡಿಕೊಂಡಿದೆ. ಈ ಪೈಕಿ ಎಸ್‌ಸಿಸಿಎಲ್, ಎಂಸಿಎಲ್ ಸಂಸ್ಥೆಯಿಂದ ಶೇ.100ರಷ್ಟು ಕಲ್ಲಿದ್ದಲು ಪೂರೈಕೆಯಾಗುತ್ತಿದ್ದು, ಡಬ್ಲ್ಯುಸಿಎಲ್ ಸಂಸ್ಥೆಯಿಂದ ಒಡಂಬಡಿಕೆಯ ಶೇ.50ರಷ್ಟು ಕಲ್ಲಿದ್ದಲು ಪೂರೈಕೆಯಾಗದ ಕಾರಣ ಉತ್ಪಾದನೆ ಕುಸಿದಿತ್ತು.
ಆ ಹಿನ್ನೆಲೆಯಲ್ಲಿ ನ.9ರಂದು ಕುಮಾರ ನಾಯಕ್ ಅವರು ಎಸ್‌ಸಿಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಹೆಚ್ಚುವರಿಯಾಗಿ ಕಲ್ಲಿದ್ದಲು ಪೂರೈಕೆ ಒಡಂಬಡಿಕೆಯಂತೆ ಕಲ್ಲಿದ್ದಲು ಪೂರೈಸಲು ಮನವಿ ಮಾಡಿದ್ದರು. ಅದರಂತೆ ತಕ್ಷಣ ಒಂದು ರೈಲ್ವೆ ಲೋಡ್ ಕಲ್ಲಿದ್ದಲು ಪೂರೈಸಲು ಒಪ್ಪಿದ್ದ ಸಂಸ್ಥೆಯು ಡಿಸೆಂಬರ್‌ನಿಂದ ಮತ್ತೂಂದು ರೈಲ್ವೆ ಲೋಡ್ ಪೂರೈಸುವ ಭರವಸೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಕುಮಾರ್ ನಾಯಕ್ ಗುರುವಾರ ಎಸ್‌ಸಿಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.
ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ್, “ಕಳೆದ ತಿಂಗಳು ಎಸ್‌ಸಿಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿದ್ದಾಗ ನವೆಂಬರ್‌ನಲ್ಲಿ ಒಂದು ಹಾಗೂ ಡಿಸೆಂಬರ್‌ನಲ್ಲಿ ಮತ್ತೂಂದು ರೈಲ್ವೆ ಲೋಡ್ ಕಲ್ಲಿದ್ದಲು ಪೂರೈಸುವ ಭರವಸೆ ನೀಡಿದ್ದರು. ಅದರಂತೆ ಕಳೆದ ತಿಂಗಳು ಒಂದು ರೈಲ್ವೆ ಲೋಡ್ ಪೂರೈಕೆ ಆರಂಭವಾಗಿದ್ದು, ಒಟ್ಟು ಪ್ರಮಾಣ ಐದು ರೈಲ್ವೆ ಲೋಡ್‌ಗೆ ಏರಿಕೆಯಾಗಿತ್ತು. ತಕ್ಷಣ ಮತ್ತೂಂದು ರೈಲ್ವೆ ಲೋಡ್‌ನಷ್ಟು ಕಲ್ಲಿದ್ದಲು ಪೂರೈಸಬೇಕೆಂಬ ಮನವಿಗೂ ಸ್ಪಂದಿಸಿದೆ ಎಂದು ಹೇಳಿದರು.
ಅದರಂತೆ ತಕ್ಷಣದಿಂದಲೇ ಒಂದು ರೈಲ್ವೆ ಲೋಡ್‌ನಷ್ಟು ಕಲ್ಲಿದ್ದಲು ಪೂರೈಕೆಯಾಗಲಿದ್ದು, ಒಟ್ಟು ಆರು ರೈಲ್ವೆ ಲೋಡ್‌ಗೆ ಏರಿಕೆಯಾಗಲಿದೆ. ಇದರಿಂದ ಹಾಲಿ ಉಷ್ಣ ವಿದ್ಯುತ್ ಉತ್ಪಾದನೆ ಜತೆಗೆ ಸುಮಾರು 400 ಮೆಗಾವ್ಯಾಟ್‌ನಷ್ಟು ಹೆಚ್ಚು ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ. ಜನವರಿಯಿಂದ ಮತ್ತೂಂದು ರೈಲ್ವೆ ಲೋಡ್ ಕಲ್ಲಿದ್ದಲು ಪೂರೈಸಬೇಕೆಂಬ ಮನವಿಗೂ ಸಂಸ್ಥೆ ಒಪ್ಪಿರುವುದರಿಂದ ಮುಂದಿನ ತಿಂಗಳು ಉತ್ಪಾದನೆ ಇನ್ನೂ 400 ಮೆಗಾವ್ಯಾಟ್‌ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಕಲ್ಲಿದ್ದಲು ಪೂರೈಕೆಗೆ ರೈಲ್ವೆ ಸಂಪರ್ಕವೂ ಮುಖ್ಯವಾಗಿದ್ದು, ಆ ಹಿನ್ನೆಲೆಯಲ್ಲಿ ದಕ್ಷಿಣ ಕೇಂದ್ರ ರೈಲ್ವೆ ವಿಭಾಗದ ಮುಖ್ಯಸ್ಥರನ್ನು ಭೇಟಿಯಾಗಿ ಕಲ್ಲಿದ್ದಲು ಪೂರೈಕೆಗೆ ಪೂರಕವಾಗಿ ರೈಲ್ವೆ ಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಯಿತು. ಅವರು ಸಹ ಅಗತ್ಯ ರೈಲ್ವೆ ಸಂಪರ್ಕ ಕಲ್ಪಿಸುವ ಭರವಸೆ ನೀಡಿದ್ದಾರೆ. ಹಾಗಾಗಿ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಹೆಚ್ಚಳವಾದರೆ ಪರಿಸ್ಥಿತಿ ಸುಧಾರಿಸಲಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.