ಸಂವಿಧಾನ ಗೌರವಿಸುವವರನ್ನು ಬೆಂಬಲಿಸಿ


Team Udayavani, Dec 10, 2017, 2:55 AM IST

samvidana.jpg

ಕರ್ನಾಟಕ ಕೆಥೋಲಿಕ್‌ ಕ್ರೈಸ್ತ ಧರ್ಮ ಪ್ರಾಂತ್ಯದ ಮಹಾ ಧರ್ಮಾಧ್ಯಕ್ಷ, ಬೆಂಗಳೂರಿನ ಆರ್ಚ್‌ಬಿಷಪ್‌ ಡಾ. ಬರ್ನಾರ್ಡ್‌ ಮೊರಾಸ್‌ ಅವರ ಗುರುದೀಕ್ಷೆಗೆ ಸುವರ್ಣಮಹೋತ್ಸವ. ಈ ಹಿನ್ನೆಲೆಯಲ್ಲಿ ಸಂದರ್ಶನ.

– ಧಾರ್ಮಿಕತೆಯ ವಿಚಾರಕ್ಕೆ ಬರುವುದಾದರೆ ಈಗಿನ ತಲೆಮಾರಿನವರಲ್ಲಿ ಏನಾದರೂ ಪ್ರಮುಖ ಬದಲಾವಣೆ ಕಾಣಿಸುತ್ತಿದೆಯೇ? ಅಂದರೆ ನೀವು ಬಾಲ್ಯದಲ್ಲಿ ಎರಡೂವರೆ ಗಂಟೆ ಚರ್ಚ್‌ಗೆ ನಡೆದುಕೊಂಡು ಹೋಗುತ್ತಿದ್ದವರು. ಅದೇ ರೀತಿಯ ಗುಣ ಈಗಿನ ತಲೆಮಾರಿನವರಲ್ಲಿ ಇದೆಯೇ?  
ಇಲ್ಲ. ಈಗೇನಾಗಿದೆಯೆಂದರೆ ಎಲ್ಲವೂ ಬೇಗನೆ ಆಗಿಬಿಡಬೇಕು. ಹಿಂದಿನ ಕಾಲದಲ್ಲಿ ಚರ್ಚ್‌ಗೆ ಕಷ್ಟಪಟ್ಟು ಹೋಗುತ್ತಿದ್ದರು. 2-3 ಗಂಟೆಯಾದರೂ ಈ ಪವಿತ್ರ ಸ್ಥಳದಲ್ಲಿರುತ್ತಿದ್ದರು. ಈಗ ಎಲ್ಲವೂ ಶಾರ್ಟ್‌ ಆಗಿರಬೇಕು. ಒಂದು ಗಂಟೆ ಅಂದರೆ ಒಂದು ಗಂಟೆಯಷ್ಟೆ. ಅದಕ್ಕಿಂತ ಹೆಚ್ಚಿಲ್ಲ. ಒಟ್ಟಲ್ಲಿ ಎಲ್ಲರೂ ಬ್ಯುಸಿ. ಆದರೆ ಹಾಗೆಂದು ಚರ್ಚ್‌ಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ, ಯುವ ಜನರು ಧರ್ಮದಿಂದ ವಿಮುಖರಾಗುತ್ತಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಮೆಟ್ರೋಪಾಲಿಟನ್‌ ಮತ್ತು ನಗರ ಪ್ರದೇಶಗಳಲ್ಲಿ ಈ ರೀತಿಯ ಬದಲಾವಣೆ ಹೆಚ್ಚಾಗಿ ಕಾಣಿಸುತ್ತದೆ. ಹಳ್ಳಿಗಳಲ್ಲಿ ಹೀಗಿಲ್ಲ.  ಯೂರೋಪ್‌ನ ಯುವ ಜನಾಂಗದಲ್ಲಿ ಧಾರ್ಮಿಕತೆಯಲ್ಲಿ ಆಸಕ್ತಿ ಕುಂದುತ್ತಿರುವುದನ್ನು ನಾನು ನೋಡಿದ್ದೇನೆ.  ಆದರೆ ನಾನು ಗಮನಿಸಿರುವಂತೆ, ಇಂಥ ಸ್ಥಿತಿ ಭಾರತದಲ್ಲಿ, ಅಥವಾ ಕರ್ನಾಟಕದಲ್ಲಿ ಇಲ್ಲ. ಧಾರ್ಮಿಕತೆಯೇನೂ ಕಡಿಮೆಯಾಗಿಲ್ಲ. 

– ಆ ಕಾಲದಲ್ಲಿ ನಿಮ್ಮಂಥವರು ಸೇವೆ ಮಾಡಲು ಈ ಮಾರ್ಗಕ್ಕೆ ಬಂದಿರಿ. ಈಗಿನ ಯುವಕರ ಬಗ್ಗೆ ಏನನ್ನಿಸುತ್ತೆ? 
ನಿಸ್ಸಂಶಯವಾಗಿಯೂ ಧಾರ್ಮಿಕ ಗುರುವಿನ ಪಥವನ್ನು ಆಯ್ಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಕುಸಿಯುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಬಹು ಮುಖ್ಯ ಕಾರಣವೆಂದರೆ ಕುಟುಂಬ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳು. ಈಗಿನವೆಲ್ಲ ಚಿಕ್ಕ ಕುಟುಂಬಗಳು. ಒಂದು ಮನೆಯಲ್ಲಿ ಹೆಚ್ಚೆಂದರೆ 2-3 ಮಕ್ಕಳಿರುತ್ತವೆ. ಅವರನ್ನು ಕಾಂಪಿಟೇಟಿವ್‌ ಯುಗದಲ್ಲಿ ಸ್ಪರ್ಧಿಸುವುದಕ್ಕಾಗಿಯೇ ಸಜ್ಜುಗೊಳಿಸಲಾಗುತ್ತಿದೆ. ಹೀಗಾಗಿ ಧರ್ಮ ಮಾರ್ಗದಲ್ಲಿ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದಿನ ಕಾಲದಲ್ಲಿ ಮನೆಯ ತುಂಬೆಲ್ಲ ಮಕ್ಕಳಿರುತ್ತಿದ್ದರು, ಆದರೆ ಮನೆ ಚಿಕ್ಕದಾಗಿ ಇರುತ್ತಿತ್ತು. ಇವತ್ತು ಮನೆ ದೊಡ್ಡದಾಗಿದೆ, ಮನೆಯಲ್ಲಿನ ಜನ ಕಡಿಮೆಯಾಗಿದ್ದಾರೆ. ಆದರೆ ಒಂದು ವಿಷಯವನ್ನು ಗಮನಿಸಬೇಕು. ಇಂದು ಹೆಚ್ಚಿನ ಸಮಸ್ಯೆಗಳು- ಬಿಕ್ಕಟ್ಟುಗಳು ಉದ್ಭವವಾಗುತ್ತಿರುವುದೇ ಈ ಚಿಕ್ಕ ಕುಟುಂಬಗಳಲ್ಲಿ. ಮಕ್ಕಳೀಗ ಅಣ್ಣ-ಅಕ್ಕನ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ಅದಕ್ಕಾಗಿಯೇ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಆಧುನಿಕ ಕುಟುಂಬ ವ್ಯವಸ್ಥೆಯ ದುರಂತ ಪ್ರತಿಫ‌ಲನ.

– ಚರ್ಚ್‌ಗಳು ವಿದೇಶಿ ದೇಣಿಗೆ ತೆಗೆದುಕೊಂಡು ದುರ್ಬಳಕೆ ಮಾಡಿಕೊಳ್ಳುತ್ತವೆ ಎನ್ನುವ ಆರೋಪವಿದೆ. ಇದೆಷ್ಟು ಸತ್ಯ?
ನೋಡಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿಬಿಡುವುದು ಸರಿಯಲ್ಲ. ಯಾರೋ ಒಬ್ಬರು ದುರ್ಬಳಕೆ ಮಾಡಿದರೆ ಎಲ್ಲಾ 
ಚರ್ಚ್‌ಗಳೂ ಹಾಗೆ ಮಾಡುತ್ತವೆ ಎಂದೇಕೆ ಭಾವಿಸಲಾಗುತ್ತದೆ? ಈಗ ನಾನು ತಪ್ಪು ಮಾಡಿದೆ ಎಂದರೆ, ಇಡೀ ಚರ್ಚ್‌ ತಪ್ಪು ಮಾಡಿತು ಎಂದರ್ಥವೇನು? ಹಾಗೆಂದು ಚರ್ಚ್‌ಗಳಲ್ಲಿರುವವರೆಲ್ಲರೂ ಸಂತರು ಎಂದು ನಾನು ಹೇಳುತ್ತಿಲ್ಲ.  ಬ್ಲ್ಯಾಕ್‌ಶಿಪ್‌ಗ್ಳು ಎಲ್ಲೆಡೆಯೂ ಇರುತ್ತವೆ. ಆದರೆ ಇಂಥವರು ಬೇರೆ ಧರ್ಮಗಳಲ್ಲಿಲ್ಲವೇ? ಎಲ್ಲಾ ಧರ್ಮಗಳಲ್ಲೂ ಇದ್ದಾರೆ. ನೋಡಿ ಎಲ್ಲಾ ಕಾಲದಲ್ಲೂ ಇಂಥವರು ಇದ್ದೇ ಇರುತ್ತಾರೆ. 

ಹೌದು ನಾನೀಗ ಒಂದು ಪ್ರಶ್ನೆ ಕೇಳುತ್ತೇನೆ. ಚರ್ಚ್‌ಗಳು ಸಮಾಜಕ್ಕೆ ಒಳ್ಳೆಯದನ್ನೇ ಮಾಡಿಲ್ಲವೇನು? ಶಿಕ್ಷಣ, ಆರೋಗ್ಯ, ಸಮಾಜಸೇವಾ ಸಂಸ್ಥೆಗಳನ್ನು ಕಟ್ಟಿ ಹಳ್ಳಿಹಳ್ಳಿಗಳಿಗೆ ಹೋಗಿ ಜಾತಿಭೇದ ಮಾಡದೇ ಬಡವರನ್ನು ಪ್ರೀತಿಸಿ ಅವರನ್ನು ಮೇಲೆ ತಂದವರು-ತರಲು ಪ್ರಯತ್ನಿಸುತ್ತಿರುವವರು ಯಾರು? ಸರ್ಕಾರವೇ ಕಾಲಿಡದ ಜಾಗಗಳಲ್ಲಿ ಹೋಗಿ ಅಲ್ಲಿನ ಜನರ ಸೇವೆ ಮಾಡುತ್ತಿರುವವರು ಯಾರು? ನೋಡಿ ಯಾರಾದರೂ ತಪ್ಪು ಮಾಡಿದರೆ ಅವರ ವಿರುದ್ಧ ಕ್ರಮ ಜರುಗಿಸಲಿ, ಅದಕ್ಕೆ ಕಾನೂನುಗಳಿವೆ, ಕಠಿಣ ನಿಯಮಗಳಿವೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಆದರೆ ಜನರಲೈಸ್‌ ಮಾಡುವುದು ಸರಿಯಲ್ಲ.

– ಆದರೆ ಸೇವೆಯ ಹೆಸರಲ್ಲಿ ಮತಾಂತರ ಮಾಡುತ್ತಾರೆ ಎನ್ನುವ ಆರೋಪವಿದೆಯಲ್ಲ…
ಇದೊಂದು ಆರೋಪವನ್ನು ನಾವು ಪದೇ ಪದೇ ಕೇಳುತ್ತಲೇ ಇರುತ್ತೇವೆ. ನಾವು ಏನೇ ಸಮಾಜ ಸೇವೆ ಮಾಡಿದರೂ “ಓಹ್‌ ಇದೆಲ್ಲ ಮತಾಂತರ ಮಾಡಲು ಮಾಡುತ್ತಿದ್ದಾರೆ’ ಎನ್ನಲಾಗುತ್ತದೆ. ನಾನು ಹೀಗೆ ಆರೋಪಿಸುವವರಿಗೆ ಕೇಳುತ್ತೇನೆ, ನಾವು ಸಾವಿರಾರು ಕುಷ್ಟರೋಗಿಗಳ, ಏಡ್ಸ್‌ ರೋಗಿಗಳ ಆರೈಕೆ ಮಾಡುತ್ತಿದ್ದೇವೆ. ಅವರ ದೇಖರೇಖೀಯನ್ನು ನಿಮಗೊಪ್ಪಿಸಿಬಿಡುತ್ತೇವೆ. ನೀವು ಅವರ ಸೇವೆ ಮಾಡುತ್ತೀರಾ? ಇವರೆಲ್ಲರನ್ನೂ ನಾವು ಮತಾಂತರ ಮಾಡುತ್ತಿದ್ದೆವು ಎಂದಾದರೆ ದೇಶದಲ್ಲಿ ಇಂದಿಗೂ ಕ್ರಿಶ್ಚಿಯನ್ನರು ಅಲ್ಪಸಂಖ್ಯಾತರಾಗಿ ಇರುತ್ತಿದ್ದರಾ?  ಸುಮ್ಮನೇ ಆರೋಪ ಮಾಡಬೇಕು ಅಂತ ಮಾಡುತ್ತಾರೆ ಅಷ್ಟೆ. ಇನ್ನು ಶಾಲೆಗಳ ವಿಷಯಕ್ಕೆ ಬರುವುದಾದರೆ, ಕ್ರಿಶ್ಚಿಯನ್‌ ಶಾಲೆಯೊಂದು ಮಗುವನ್ನು ಕನ್ವರ್ಟ್‌ ಮಾಡಿದ ಒಂದೇ ಒಂದು ಉದಾಹರಣೆ ಕೊಡಿ ನೋಡೋಣ? ಮತಾಂತರ ನಡೆಯುತ್ತದೆ ಎನ್ನುವುದಾದರೆ ಅದೇಕೆ ಇಂದಿಗೂ ಜನರು “ನಮ್ಮ ಮಗುವಿಗೆ ಅಡ್ಮಿಷನ್‌ ಕೊಡಿ ಅಂತ ನಮ್ಮ ಶಾಲೆಗೇಕೆ ಬರುತ್ತಿದ್ದರು?’. ಅಷ್ಟಕ್ಕೂ ಶಿಸ್ತು ಕಲಿಸಲಾಗುತ್ತದೆ ಎಂಬ ಕಾರಣಕ್ಕಾಗಿ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಬಳಿಗೆ ಕಳುಹಿಸುತ್ತಾರೆ.

ಬೇಕಿದ್ದರೆ ಕಾರ್ಮೆಲ್‌ ಸಂಸ್ಥೆಗೆ ಹೋಗಿ ನೋಡಿ ಅಲ್ಲಿ 50 ಮಕ್ಕಳಿವೆ. ರಸ್ತೆ ಬದಿಯಲ್ಲಿ ಸಿಕ್ಕ ಮಕ್ಕಳವು. ಸರ್ಕಾರವೇ ತಂದು ನಮ್ಮ ಬಳಿ ಬಿಟ್ಟಿದೆ. ಆ ಮಕ್ಕಳನ್ನು ಎತ್ತಿಕೊಂಡು  ನಂಬರ್‌ 1 ನಂಬರ್‌ 2 ಮಾಡಿಸಬೇಕು. ನಮ್ಮ ಮನೆಯಲ್ಲೇ ಒಬ್ಬರು ಹಾಸಿಗೆ ಹಿಡಿದಿದ್ದರೆ ಅವರನ್ನು ನೋಡಿಕೊಳ್ಳುವುದು ಎಷ್ಟು ಕಷ್ಟವಾಗುತ್ತದೆ ಹೇಳಿ? ಆಯಾಗಳೂ ಕೂಡ ಪ್ರೀತಿಯಿಂದ ಸೇವೆ ಮಾಡುವುದಿಲ್ಲ. ಹಣದಿಂದ ಪ್ರೀತಿಯನ್ನು ಖರೀದಿಸಲು ಸಾಧ್ಯವಾಗುವುದಿಲ್ಲವಲ್ಲ? ನಾವು ಕಷ್ಟದಲ್ಲಿರುವವರ ಸೇವೆ ಮಾಡಲು ಕಾರಣವಿದೆ. “”ಪರರಿಗೆ ನೀವು ಏನು ಮಾಡುತ್ತೀರೋ, ಅದು ನನ್ನ ಹೆಸರಲ್ಲಿ ನನಗೇ ಮಾಡಿದಂತೆ’ ಎನ್ನುವುದು ಪ್ರಭು ಕ್ರಿಸ್ತರ ಮಾತು. ನಾವು ಜನಸೇವೆಯನ್ನು ದೇವರಿಗೆ ಮಾಡುವ ಸೇವೆ ಎಂದು ನೋಡುತ್ತೇವೆ. 

– ರಾಜ್ಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳು ಬಂದಿವೆ. ಅವುಗಳೊಡನೆ ಚರ್ಚ್‌ ಸಂಬಂಧ ಹೇಗಿದೆ?
ಒಳ್ಳೆಯ ಪ್ರಶ್ನೆ. ನಾನು ಯಾವುದೇ ಪಕ್ಷದ ಸರ್ಕಾರವಿರಲಿ ಅವರೊಂದಿಗೆ ಒಳ್ಳೆಯ ಸ್ನೇಹವಿಟ್ಟುಕೊಂಡಿದ್ದೇನೆ. ಕಾಂಗ್ರೆಸ್‌ ಸರ್ಕಾರವಂತಲೇ ಅಲ್ಲ, ಹಿಂದೆ ಯಡಿಯೂರಪ್ಪ ಅಧಿಕಾರದಲ್ಲಿ ದ್ದಾಗಲೂ ಅವರೊಂದಿಗೆ ನಮ್ಮ ಸಂಬಂಧ ಉತ್ತಮವಾಗಿಯೇ ಇತ್ತು.  ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ನವರನ್ನು ನಾನು ಕ್ರಿಸ್ಮಸ್‌ ಮತ್ತು ಇತರೆ ಹಬ್ಬಗಳಂದು ಆಹ್ವಾನಿಸುತ್ತೇನೆ. ಒಟ್ಟಲ್ಲಿ ಈ ಪಕ್ಷಗಳೊಂದಿಗೆ ನಮ್ಮ ಚರ್ಚ್‌ ಉತ್ತಮ ಬಾಂಧವ್ಯ ಹೊಂದಿದೆ. 

– ಗುಜರಾತ್‌ನಲ್ಲಿ ಬಿಷಪ್‌ ಅವರು ಸೆಕ್ಯುಲರ್‌ ಪಾರ್ಟಿಗೆ ಸಪೋರ್ಟ್‌ ಮಾಡಿ ಎಂದು ಕರೆಕೊಟ್ಟು ವಿವಾದಕ್ಕೀಡಾಗಿದ್ದಾರೆ. ಈ ಬಗ್ಗೆ ನೀವೇನನ್ನುತ್ತೀರಿ? ಇಲ್ಲಿಯೂ ಚುನಾವಣೆಗಳು ಬರುತ್ತಿವೆ…
ಅವರ ಮನಸ್ಸಿನಲ್ಲಿ ಏನಿತ್ತೋ ನನಗೆ ಗೊತ್ತಿಲ್ಲ. ನಾನು ಹೇಳುವುದೇನೆಂದರೆ ಚರ್ಚ್‌ ಎಂದಿಗೂ ರಾಜಕೀಯೇತರವಾದದ್ದು. ವೈಯಕ್ತಿಕವಾಗಿ ನನ್ನ ಅಭಿಪ್ರಾಯವೇನೇ ಇರಬಹುದು. ಆದರೆ ಒಂದು ಚರ್ಚ್‌ ಆಗಿ ನಾವು “ಆ ಪಾರ್ಟಿಗೆ ಬೆಂಬಲಿಸಿ ಈ ಪಾರ್ಟಿಗೆ ಬೆಂಬಲಿಸಿ’ ಎಂದು ಹೇಳಲು ಹೋಗುವುದಿಲ್ಲ. ಏಕೆಂದರೆ ನಮ್ಮಲ್ಲಿಗೆ ಬರುವವರಲ್ಲಿಯೇ ಒಬ್ಬೊಬ್ಬರು ಬಿಜೆಪಿಯ ಬೆಂಬಲಿಗರಿರುತ್ತಾರೆ, ಇನ್ನೊಬ್ಬರು ಕಾಂಗ್ರೆಸ್‌ ಬೆಂಬಲಿಗರಾಗಿರಬಹುದು, ಮಗದೊಬ್ಬರು ಜೆಡಿಎಸ್‌ ಅನ್ನು ಸಪೋರ್ಟ್‌ ಮಾಡುತ್ತಿರಬಹುದು. ಒಂದು ಪಕ್ಷಕ್ಕೆ ಮತ ನೀಡಲು ಕರೆ ನೀಡಿದರೆ ನಾನು ಅವರ ನಡುವೆ ಒಡಕು ಮೂಡಿಸಿದಂತಾಗುತ್ತದೆ. ಹೀಗಾಗಿ ನಾನು ಹೇಳುವುದಿಷ್ಟೆ-ಯಾರು ಸಂವಿಧಾನವನ್ನು ಗೌರವಿಸುತ್ತಾರೋ ಅವರನ್ನು ಬೆಂಬಲಿಸಿ. 

– ಗುಜರಾತ್‌ನ ಬಿಷಪ್ಪರು  ರಾಷ್ಟ್ರವಾದಿ ಶಕ್ತಿಗಳಿಂದ ದೂರವಿರಿ ಎಂದೂ ಹೇಳಿದ್ದಾರೆ. 
ಇಲ್ಲಿ ರಾಷ್ಟ್ರೀಯವಾದವನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಅವರ ಮನಸ್ಸಿನಲ್ಲಿ ಏನಿದೆಯೋ ನನಗೆ ತಿಳಿಯದು. ಆದರೆ ನನ್ನನ್ನು ಕೇಳುವುದಾದರೆ, ನಮ್ಮ ದೇಶವನ್ನು ಪ್ರೀತಿಸುವುದು ರಾಷ್ಟ್ರೀಯತೆ. ಯಾರು ದೇಶವನ್ನು ಪ್ರೀತಿ ಸುತ್ತಾರೋ ಅವರು ಸಂವಿಧಾನವನ್ನು ಪ್ರೀತಿಸುತ್ತಾರೆ ಎಂದರ್ಥ. 

– ಬೆಂಗಳೂರು ಮಹಾಧರ್ಮಕ್ಷೇತ್ರದ ಆರ್ಚ್‌ ಬಿಷಪ್‌ ಆಗಿ ಈ 14 ವರ್ಷದಲ್ಲಿ ತುಂಬಾ ಖುಷಿ ಕೊಟ್ಟ ಸಂಗತಿ ಯಾವುದು? 
ತುಂಬಾ ಸವಾಲುಗಳಿದ್ದವು. ಆದರೆ ನನಗೆ ನೆಮ್ಮದಿ ಕೊಟ್ಟ ಸಂಗತಿಯೆಂದರೆ ಪ್ರಾರ್ಥನೆಯ ವಿಷಯದಲ್ಲಿ ಉಂಟಾಗಿದ್ದ ಭಾಷಾ ಗೊಂದಲ ಸಾಕಷ್ಟು ಪರಿಹಾರವಾಗಿದೆ ಎನ್ನುವುದು. 

– ನಿಮಗೆಷ್ಟು ಭಾಷೆ ಬರುತ್ತದೆ?
ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್‌ನ ಮೇಲೆ ಹಿಡಿತ ಚೆನ್ನಾಗಿದೆ. ಹಿಂದಿ ಅರ್ಥ ಆಗುತ್ತದೆ. ತಮಿಳ್‌ನಲ್ಲಿ ಪ್ರಾರ್ಥನೆ ಮಾಡಬಲ್ಲೆ. ಆದರೆ ಮಾತನಾಡಲಿಕ್ಕೆ ಕಷ್ಟ ಆಗುತ್ತದೆ. ಇನ್ನು ಗುರುದೀಕ್ಷೆ ಪಡೆಯುವ ವೇಳೆ ಲ್ಯಾಟಿನ್‌ ಕಲಿತಿದ್ದೇನೆ. 

– ರಾಜ್ಯದ ಜನರಿಗೆ ನಿಮ್ಮ ಸಂದೇಶವೇನು? 
ಲವ್‌ ಯುವರ್‌ ನೇಬರ್‌ ಆ್ಯಸ್‌ ಯು ಲವ್‌ ಯುವರ್‌ಸೆಲ್ಫ್.

ಧರ್ಮ ಮತ್ತು ಮೊಬೈಲ್‌ 
“ಸೋಷಿಯಲ್‌ ಮೀಡಿಯಾ ಎನ್ನುವುದು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟತನವನ್ನೂ ಪಸರಿಸುತ್ತಿದೆ. ಎಷ್ಟು ಜನರ ಜೀವನ ಇದರಿಂದಾಗಿ ಹಾಳಾಗಿಲ್ಲ? ನೋಡಿ ಆ ಬ್ಲೂವೇಲ್‌ ಆಟದಿಂದ ಎಷ್ಟೊಂದು ಮಕ್ಕಳು ಜೀವಕಳೆದುಕೊಂಡರೋ?’  ಅಂತರ್ಜಾಲದ ಬೆಳವಣಿಗೆ, ಅದರಲ್ಲೂ ಸೋಷಿಯಲ್‌ ಮೀಡಿಯಾಗಳ ಋಣಾತ್ಮಕ ಪ್ರಭಾವದ ಬಗ್ಗೆ ಮಾತನಾಡುತ್ತಾ ರೆವರೆಂಡ್‌ ಬರ್ನಾರ್ಡ್‌ ಮೊರಾಸ್‌ ಹೀಗಂದರು. “”ಮಕ್ಕಳು ಯಾವಾಗ ನೋಡಿದರೂ ಮೊಬೈಲ್‌ನಲ್ಲೇ ಇರುತ್ತಾರೆ.

ತಮ್ಮ ಸುತ್ತಲಿರುವ ನೈಜ ಜಗತ್ತನ್ನು ಕತ್ತೆತ್ತಿ ನೋಡುವುದನ್ನೇ ಅವರು ಮರೆತುಬಿಟ್ಟಿದ್ದಾರೆ. ಇದರಿಂದಾಗಿ  ಅವರ ಯೋಚನೆಯ ವೈಖರಿ ಬದಲಾಗಿ ಬಿಟ್ಟಿದೆ. ಇಂದು ಶಾಲೆ ಕಾಲೇಜುಗಳು ಬರೀ ಗಣಿತ, ವಿಜ್ಞಾನ ಕಲಿಸಿದರೇನು ಬಂತು? ಇಂಥ ನವಮಾಧ್ಯಮಗಳ ಅಪಾಯದ ಬಗ್ಗೆ, ಸದ್ಬಳಕೆಯ ಬಗ್ಗೆ ಶಾಲೆಗಳು ಪಾಠ ಮಾಡಬೇಕು. ಮಕ್ಕಳಿಗೆ ಸರಿಯಾಗಿ ಮೊಬೈಲ್‌, ಅಂತರ್ಜಾಲ ಬಳಸುವುದನ್ನು ಕಲಿಸಿಕೊಡಿ ಎಂದು ನಾನು ನಮ್ಮ ಶಿಕ್ಷಕರಿಗೆ ಹೇಳುತ್ತಿರುತ್ತೇನೆ.” 

ಇನ್ನು “ಯಾವ ಹಿನ್ನೆಲೆಯ ಮಕ್ಕಳು(ಅಂದರೆ ಯಾವ ಧರ್ಮ, ಸಂಸ್ಕೃತಿ, ಆರ್ಥಿಕತೆಯ ಮಕ್ಕಳು) ಹೆಚ್ಚಾಗಿ ಮೊಬೈಲ್‌ ದಾಸರಾಗಿದ್ದಾರೆ?’ ಎಂಬುದನ್ನು ತಿಳಿದುಕೊಳ್ಳಲು ಅಧ್ಯಯನಕ್ಕೆ ಆದೇಶ ನೀಡಿದೆ. “”ಸುದೈವವಶಾತ್‌. ಯಾವ ಮಕ್ಕಳು ಮಂದಿರಗಳಿಗೆ, ಚರ್ಚ್‌ಗಳಿಗೆ, ಮಸೀದಿಗಳಿಗೆ ಹೋಗುತ್ತಾರೋ ಅಂದರೆ ಸ್ಪಿರುಚುವಲ್‌ ಆಗಿದ್ದಾರೋ ಅವರು ಮೊಬೈಲ್‌ ದಾಸ್ಯದಿಂದ ದೂರ ಉಳಿದಿದ್ದಾರೆ ಎನ್ನುವುದು ಇದರಿಂದ ತಿಳಿಯಿತು. ಇದಕ್ಕಾಗಿಯೇ, ನೀವು ಹಿಂದೂವಾಗಿರಿ, ಕ್ರಿಶ್ಚಿಯನರಾಗಿರಿ ಅಥವಾ ಮುಸಲ್ಮಾನರಾಗಿರಿ, ಮಕ್ಕಳಲ್ಲಿ ಸ್ಪಿರುಚುವಾಲಿಟಿ ಯನ್ನು ಬೆಳೆಸಬೇಕು” ಎಂದು ಸಲಹೆ ನೀಡುತ್ತೇನೆ.

ಆರೋಗ್ಯದ ಗುಟ್ಟೇನು?
76ರ ಇಳಿ ವಯಸ್ಸಲ್ಲೂ ಪಾದರಸದಂತೆ ಓಡಾಡುವ ಸದಾ ಹಸನ್ಮುಖೀ ಡಾ. ಮೊರಾಸ್‌ ಅವರ ಆರೋಗ್ಯದ, ಚೈತನ್ಯದ ಗುಟ್ಟೇನು ಎಂಬ ಪ್ರಶ್ನೆಗೆ ಅವರು ನಗುತ್ತಾ ಉತ್ತರಿಸುವುದು-“ದೇವರ ಕೃಪೆ’ ಎಂದು!  ಕಡುಕಷ್ಟದ ದಿನಚರಿ ಡಾ. ಮೊರಾಸ್‌ರದ್ದು. ನಿತ್ಯ ಬೆಳಗ್ಗೆ 4.30-5 ಗಂಟೆಯೊಳಗೆ ಏಳುವ ಅವರು ರಾತ್ರಿ 10.30-11 ಗಂಟೆಯೊಳಗೆ ನಿದ್ದೆ ಮಾಡುತ್ತಾರೆ. ಬೆಳಗಾವಿ ಧರ್ಮಪ್ರಾಂತ್ಯದಲ್ಲಿದ್ದಾಗ ಪ್ರತಿನಿತ್ಯ ಒಂದು ಗಂಟೆ ವಾಕಿಂಗ್‌ ಮಾಡಿ ಅಭ್ಯಾಸವಿತ್ತಂತೆ. ಆದರೆ ಬೆಂಗಳೂರಿಗೆ ಬಂದಾಗಿನಿಂದ ಕಚೇರಿಯ ಕೆಲಸ, ಸಭೆಗಳು, ಹಳ್ಳಿಗಳ ಚರ್ಚ್‌ಗಳ ದೇಖರೇಖೀ ನೋಡಿಕೊಳ್ಳುವ ಬಿಡುವಿಲ್ಲದ ದಿನಚರಿ .ಆದರೂ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಈಗ 45 ನಿಮಿಷ ಟ್ರೆಡ್‌ಮಿಲ್‌ ಮೇಲೆ ವಾಕ್‌ ಮಾಡುತ್ತಾರೆ, ಇಲ್ಲವೇ ಇಂಡೋರ್‌ ಸೈಕ್ಲಿಂಗ್‌ ಮಾಡುತ್ತಾರಂತೆ. 

ಮಂಗಳೂರು ನಗರಿ ಕಮ್ಯುನಲ್‌ ಅಲ್ಲ…
ಕಳೆದ ಕೆಲವು ವರ್ಷಗಳಿಂದ ಮಂಗಳೂರಿಗೆ ಕಮ್ಯುನಲ್‌ ಸಿಟಿ ಎಂಬ ಹಣೆಪಟ್ಟಿ ಅಂಟಿಸಲಾಗುತ್ತಿರುವುದನ್ನು  ರೆವರೆಂಡ್‌ ಬರ್ನಾರ್ಡ್‌ ಮೊರಾಸ್‌ ವಿರೋಧಿಸುತ್ತಾರೆ.  ಮಂಗಳೂರು ಅಂದಿಗೂ ಶಾಂತವಾಗಿತ್ತು, ಇಂದಿಗೂ ಶಾಂತವಾಗಿದೆ ಎಂಬುದು ಅವರ ನಿಲುವು.  “”ಮಂಗಳೂರಿಗರು ಸುಶಿಕ್ಷಿತ ಜನ. ಧರ್ಮ ಧರ್ಮಗಳ ನಡುವೆ ಸಾಮರಸ್ಯವಿದೆ. ಎಲ್ಲರೂ ಸ್ನೇಹ-ಹೊಂದಾಣಿಕೆಯಿಂದ ಬದುಕುತ್ತಿದ್ದಾರೆ. ಕೆಲವು ಭಾಗಗಳಲ್ಲಿ ಕೋಮು ಘರ್ಷಣೆಗಳು ಆಗಿರಬಹುದು. ಆದರೆ ಅದಕ್ಕಾಗಿ ಮಂಗಳೂರಿಗೆ ಕಮ್ಯುನಲ್‌ ಎಂಬ ಋಣಾತ್ಮಕ ಹಣೆಪಟ್ಟಿ ಹಚ್ಚುವುದನ್ನು ನಾನು ಒಪ್ಪುವುದಿಲ್ಲ” ಎನ್ನುವ ಡಾ. ಮೊರಾಸ್‌ “”ಆದರೂ ಒಮ್ಮೊಮ್ಮೆ ಏನೋ ಆಗಿಹೋಗುತ್ತದೆ. ಅದೇಕೆ ಜನ ಹೊಡೆದಾಡುತ್ತಾರೆ, ಈ ದ್ವೇಷದ ಕಿಚ್ಚು ಹೇಗೆ ಹೊತ್ತಿಕೊಳ್ಳುತ್ತದೋ ನನಗೆ ಗೊತ್ತಿಲ್ಲ. ಕೆಲವರು ದ್ವೇಷವನ್ನೇಕೆ ಬಿಡುತ್ತಿಲ್ಲ” ಎಂಬ ಪ್ರಶ್ನೆಯನ್ನೂ ಎದುರಿಡುತ್ತಾರೆ. 

ವಿವಾಹದ ಕಗ್ಗಂಟು
“”ಅಂತಧರ್ಮೀಯ ವಿವಾಹಕ್ಕೆ ವೈಯಕ್ತಿಕವಾಗಿ ನನ್ನ ಸಹಮತಿಯಿಲ್ಲ, ಆದರೆ ಯಾರಾದರೂ ಈ ರೀತಿಯ ವಿವಾಹವಾದರೆ ಅದನ್ನು ನಾನು ವಿರೋಧಿಸುವುದೂ ಇಲ್ಲ”. ಭಿನ್ನ ಸಂಸ್ಕೃತಿ, ಆಚಾರ, ವಿಚಾರಗಳ ಹುಡುಗ-ಹುಡುಗಿ ಮದುವೆಯಾಗುವುದರಿಂದ ಉದ್ಭವವಾಗುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಮಹಾಧರ್ಮಾಧ್ಯಕ್ಷರು ಹೇಳಿದ ಮಾತುಗಳಿವು. 

“”ಈ ಆಧುನಿಕ ಯುಗದಲ್ಲಿ ವಿವಿಧ ಧರ್ಮೀಯರ ನಡುವೆ ಮದುವೆಗಳು ನಡೆಯುತ್ತಿವೆ. ಇದು ವಾಸ್ತವ. ಇದನ್ನು ಅಲ್ಲಗಳೆಯುವುದಕ್ಕಂತೂ ಸಾಧ್ಯವಿಲ್ಲ. ಮುಂದೆಯೂ ಈ ರೀತಿಯ ಮದುವೆಗಳು ಆಗುತ್ತವೆ. ಆದರೆ “”ಅಂತಧರ್ಮೀಯ ವಿವಾಹವಾದವರು ಅನೇಕ ಸಮಸ್ಯೆ ಎದುರಿಸುತ್ತಾರೆ. ಈ ಸಮಸ್ಯೆಗಳಿಗೆ ಏಗಲಾರದೆ ಆ ಮದುವೆಗಳು ಮುರಿದುಬೀಳುವ ಸಾಧ್ಯತೆಗಳು ಅಧಿಕವಾಗಿರುತ್ತವೆ. ಹೀಗಾಗಿ ಈ ರೀತಿಯ ವಿವಾಹವಾದವರಿಗೆ ಸಹಾಯ ಮಾಡುವ ಅಗತ್ಯ ತುಂಬಾ ಇದೆ. ಆಯಾ ಧರ್ಮದ ನಾಯಕರು ಸಹಾಯಕ್ಕೆ ಬರಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ಯಾವುದೇ ಧರ್ಮದ ವಿವಾಹಿತರಿರಲಿ ಅವರಿಗೆ ಮತ್ತು ಅವರ ಪೋಷಕರಿಗೆ ಆಪ್ತಸಮಾಲೋಚನೆಗಳ ಮೂಲಕ ಧೈರ್ಯ ತುಂಬಿ, ಸಾಂತ್ವನ ನೀಡಿ, ಆ ದಾಂಪತ್ಯವನ್ನು ಕಾಪಾಡುವ ಪ್ರಯತ್ನ ಮಾಡುತ್ತಿದ್ದೇವೆ.” ಎಂದರು ಮೊರಾಸ್‌. 

ರಾಜ್ಯದಲ್ಲಿ ಕ್ರೈಸ್ತರು ಸೇಫ್
ಹೌದು  2008ರಲ್ಲಿ ಚರ್ಚ್‌ಗಳ ಮೇಲೆ ದಾಳಿಗಳಾಗಿದ್ದವು. ಆದರೆ ಅದೆಲ್ಲ ಹಠಾತ್ತಾಗಿ ನಡೆದುಹೋಯಿತು. ಈಗ ರಾಜ್ಯದಲ್ಲಿ ಒಂದು ಸಮುದಾಯವಾಗಿ ಕ್ರೈಸ್ತರು  ಅಪಾಯ ವನ್ನೇನೂ ಎದುರಿಸುತ್ತಿಲ್ಲ. ಅವರ ಭದ್ರತೆಗೆ ಅಪಾಯ ಇರುವುದನ್ನು ನಾನು ನೋಡಿಲ್ಲ. ಕ್ರೈಸ್ತರು-ಹಿಂದೂಗಳು- ಮುಸಲ್ಮಾನರ ನಡುವಿನ ಬಾಂಧವ್ಯ ಚೆನ್ನಾಗಿಯೇ ಇದೆ. 

– ರಾಘವೇಂದ್ರ ಆಚಾರ್ಯ

ಟಾಪ್ ನ್ಯೂಸ್

3-Tulu-language

Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Bhargavastra: ಡ್ರೋನ್‌ ದಾಳಿ ತಡೆಗೆ ಸೇನಾಗೆ ಭಾರ್ಗವಾಸ್ತ್ರ

Bhargavastra: ಡ್ರೋನ್‌ ದಾಳಿ ತಡೆಗೆ ಸೇನಾಗೆ ಭಾರ್ಗವಾಸ್ತ್ರ

2-saif

Saif Ali Khan: ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Tulu-language

Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ

6-kumbamela

Maha Kumbh Mela 2025: ಬಾಬಾ ವೇಷ

Army Day 2025:ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ

Army Day 2025: ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ

Kenchappa-Gowda

ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ

Army

Army Day: ಇಂದು ಭಾರತೀಯ ಸೇನಾ ದಿನ; ಸೈನಿಕರಿಗೆ ಸಲಾಂ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

3-Tulu-language

Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.