ಕರಾವಳಿಯ ತಗ್ಗುಪ್ರದೇಶ ಮುಳುಗಡೆಯಾಗಲಿದೆಯೆ?
Team Udayavani, Dec 10, 2017, 10:51 AM IST
ಉಡುಪಿ: ಭವಿಷ್ಯದಲ್ಲಿ ಕರಾವಳಿಯ ತಗ್ಗು ಪ್ರದೇಶಗಳು ಮುಳುಗಡೆಯಾಗಲಿವೆಯೆ? “ಹೌದು’ ಎನ್ನುತ್ತಾರೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿವೃತ್ತ ಹಿರಿಯ ವಿಜ್ಞಾನಿ ಡಾ| ಕೆ.ಜೆ. ರಾವ್. ಇದು ಏಕೆ, ಯಾವಾಗ, ಪರಿಹಾರಗಳೇನು ಎನ್ನುವುದರತ್ತ ಅವರು “ಉದಯವಾಣಿ’ ಜತೆ ಮಾತನಾಡಿದ್ದಾರೆ.
ನೀವು ನಾಲ್ಕು ವರ್ಷಗಳ ಹಿಂದೆ ಉಡುಪಿಗೆ ಬಂದಾಗ 70 ವರ್ಷಗಳ ಅನಂತರ ಕರಾವಳಿಗೆ ಇರುವ ಅಪಾಯವನ್ನು ತಿಳಿಸಿದ್ದಿರಿ. ಈಗ 20 ವರ್ಷ ಅನ್ನುತ್ತೀರಿ? ನಾಲ್ಕೇ ವರ್ಷಗಳಲ್ಲಿ ನಿಮ್ಮ ಎಚ್ಚರಿಕೆಯ ಭವಿಷ್ಯ ಭಾರೀ ಹತ್ತಿರಕ್ಕೆ ಬಂದಿದೆಯಲ್ಲ? ಆಗ ಹೇಳಿದ್ದು ಹೌದು. ಈಗ ಹೇಳುತ್ತಿರುವುದೂ ನಿಜ. ಸಮುದ್ರದ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಇನ್ನು 20-30 ವರ್ಷಗಳಲ್ಲಿ ಕರಾವಳಿ ಪ್ರದೇಶಕ್ಕೆ ಅಪಾಯ ಕಾದಿದೆ ಎಂದು ಜಾಗತಿಕ ವಿಜ್ಞಾನ ನಿಯತಕಾಲಿಕ “ನೇಚರ್’ ಕಳೆದ ವಾರ ವರದಿ ಮಾಡಿದೆ.
ಸಮುದ್ರದ ನೀರಿನ ಮಟ್ಟ ಏರುವುದು ಹೇಗೆ?
ಮಳೆ ಬಂದು ಸಮುದ್ರದಲ್ಲಿ ಮಟ್ಟ ಏರುವುದಲ್ಲ. ಹಿಮನದಿಗಳು, ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ
ಗಳಲ್ಲಿರುವ ನೀರ್ಗಲ್ಲುಗಳ ಪದರ ಕರಗಿ ಭಾರೀ ಪ್ರಮಾಣದಲ್ಲಿ ನೀರು ಸಾಗರ ಸೇರುವುದರಿಂದ ಸಮುದ್ರದ ನೀರಿನ ಮಟ್ಟ ಏರುತ್ತದೆ. ತಾಂಜಾನಿಯಾದ ಕಿಲಿಮಂಜಾರೊ ಪರ್ವತದ ಹಿಮಶಿಖರ, ದಕ್ಷಿಣ ಧ್ರುವದ ಕಿಂಗ್ಸ್ ಬೇ, ಟ್ವೀಟ್ಸ್ ಹಿಮಪರ್ವತ ಇನ್ನಿಲ್ಲವಾಗುತ್ತಿವೆ. ಭಾರತದಲ್ಲಿಯೂ ಗಂಗೋತ್ರಿಯ ಹಿಮ ಪರ್ವತಗಳು ಕರಗುತ್ತಿವೆ. ಹಿಮಾಲಯದ ಅನೇಕ ಹಿಮಪರ್ವತಗಳ ಸ್ಥಿತಿಯೂ ಹೀಗೆಯೇ ಇದೆ. ದಕ್ಷಿಣ ಧ್ರುವದಲ್ಲಿ ರಷ್ಯಾದ ವಿಜ್ಞಾನಿಗಳು ಭೂಮಿಯನ್ನು 3.5 ಕಿ.ಮೀ. ಆಳಕ್ಕೆ ಕೊರೆದು, ಹಿಂದಿನ ಮತ್ತು ಈಗಿನ ಉಷ್ಣಾಂಶ ವ್ಯತ್ಯಾಸವನ್ನು ಪತ್ತೆಹಚ್ಚಿದ್ದಾರೆ. ಇದರ ಪ್ರಕಾರ
ಇತ್ತೀಚಿನ ವರ್ಷಗಳಲ್ಲಿ ವಾತಾವರಣದ ಉಷ್ಣಾಂಶ ಒಂದು ಡಿಗ್ರಿ ಸೆ. ಏರಿದೆ. ಇನ್ನೊಂದು ಡಿಗ್ರಿ ಸೆ. ಏರಿಕೆ ಸಹ್ಯ. ಅದಕ್ಕಿಂತ ಹೆಚ್ಚಾದರೆ ಪರಿಸ್ಥಿತಿ ಕೈಮೀರುತ್ತದೆ.
ಅಪಾಯದ ಮುನ್ಸೂಚನೆ ಕಂಡುಬಂದಿದೆಯೆ?
ಸಮುದ್ರದಲ್ಲಿ ಸಿಗುವ ಹವಳಗಳಲ್ಲಿ ಬ್ಯಾಕ್ಟೀರಿಯಾ ಗಳಿರುತ್ತವೆ. ಸಮುದ್ರ ಜೀವಜಾಲದಲ್ಲಿ ಆಗುತ್ತಿರುವ ವ್ಯತ್ಯಯದಿಂದ ಅವು ಬಿಳಿಚಿಕೊಳ್ಳುತ್ತಿವೆ. ಹವಳ ವೆಂದರೆ ಸಂಪತ್ತು. ಧ್ರುವಕರಡಿಯಂತಹ ಅಪರೂಪದ ತಳಿಗಳು ನಾಶವಾಗುತ್ತಿವೆ. ಇದು ಕಳೆದ ನೂರು ವರ್ಷಗಳಲ್ಲಿ ಕಂಡುಬಂದಿರುವ ಪರಿಣಾಮ.
ಹಿಮದ ರಾಶಿಯೆಲ್ಲ ಕರಗಿದರೆ ಸಮುದ್ರದ ನೀರಿನ ಮಟ್ಟ ಎಷ್ಟು ಏರಬಹುದು?
ವಿಶ್ವದ ಎಲ್ಲ ಹಿಮದ ರಾಶಿ ಕರಗಿದರೆ ಸಮುದ್ರದ ನೀರಿನ ಮಟ್ಟ 65 ಅಡಿ ಏರಬಹುದು. ಈಗ ಆ ಮಟ್ಟಕ್ಕೆ ತಲುಪಿಲ್ಲ. ಆದರೆ ದಕ್ಷಿಣ ಧ್ರುವದ ಹಿಮಪರ್ವತಗಳ ಹಿಮಹೊದಿಕೆ ಜಾರಿ ಸಮುದ್ರಕ್ಕೆ ಹೋಗುತ್ತಿದೆ. ಇದರ ಪರಿಣಾಮ ನೀರಿನ ಮಟ್ಟ 11 ಅಡಿ ಏರಲಿದೆ. ಆರು ಅಡಿ ಏರಿದರೂ ಲಂಡನ್, ಫ್ಲೋರಿಡಾ, ವಿಯೆಟ್ನಾಂನ ವೋಚಿಮನ್, ಭಾರತದಲ್ಲಿ ಕೊಚ್ಚಿ ಯಿಂದ ಹಿಡಿದು ಮುಂಬಯಿ ವರೆಗಿನ ಕರಾವಳಿ ಪ್ರದೇಶಗಳಿಗೆ ಅಪಾಯವಿದೆ ಎಂದು “ನೇಚರ್’ ವರದಿ ಮಾಡಿದೆ.
ಅಪಾಯವೆಂದರೆ ಏನರ್ಥ?
ಕರಾವಳಿಯ ತಗ್ಗು ಪ್ರದೇಶಗಳು ಮುಳುಗಬಹುದು. ಸಮುದ್ರ ತೀರ ದಿಂದ 8-10 ಕಿ.ಮೀ. ವರೆಗೆ ಇದರ
ಪರಿಣಾಮ ಉಂಟಾಗಬಹುದು. ಕರಾವಳಿಯ ಹಿನ್ನೀರು ಪ್ರದೇಶಗಳು ಇದಕ್ಕೆ ಕಾರಣವಾಗಬಹುದು. ಆಗ ಜನ ಎತ್ತರ ಪ್ರದೇಶಕ್ಕೆ ಸ್ಥಳಾಂತರವಾಗಬೇಕಾಗುತ್ತದೆ. ಸಾಧ್ಯವಾ ದಷ್ಟೂ ಎತ್ತರದಲ್ಲಿ ನೆಲೆ ನಿಲ್ಲುವುದು ಕ್ಷೇಮ.
ಹಿಮರಾಶಿ ಕರಗಲು ಏನು ಕಾರಣ?
ಅಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೆ„ಡ್‌ನ್ನು ವಾತಾವರಣಕ್ಕೆ ಕೊಡುತ್ತಿದ್ದೇವೆ. ತೈಲ ಕ್ಷೇತ್ರದ ಜಾಗತಿಕ ದಿಗ್ಗಜಗಳ ಪ್ರಾಯೋಜನೆಯಲ್ಲಿ ಜಾಗತಿಕ ತಾಪಮಾನ ಏರಿಕೆ ಆಗುತ್ತಿಲ್ಲವೆಂಬ ಮಿಥ್ಯಾ ಪ್ರಚಾರವೂ ನಡೆಯುತ್ತಿದೆ. ಅವರಿಗೆ ಅವರ ವ್ಯಾಪಾರ ವಹಿವಾಟು ಮುಖ್ಯ.
ಇದಕ್ಕೆ ಪರಿಹಾರಾರ್ಥ ಯಾವ ಪ್ರಯತ್ನಗಳು ನಡೆಯುತ್ತಿವೆ ?
ಪರಿಸರ ಮಾಲಿನ್ಯವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಸೌರ ವಿದ್ಯುತ್ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಹಿಂದೆ ಇದು ದುಬಾರಿ ಯಾಗಿದ್ದರೂ ಈಗ ಅಗ್ಗವಾಗುತ್ತಿದೆ. ಸೌರ ವಿದ್ಯುತ್ತನ್ನು ಬ್ಯಾಟರಿ ಯಲ್ಲಿ ಅಳವಡಿಸುವ ಪ್ರಯತ್ನ ನಡೆಯುತ್ತಿದೆ. ಎಲಾನ್ ಮಸ್ಕ್ ಅವರು ಸ್ಪೇಸ್ ಎಕ್ಸ್, ಸೋಲಾರ್ ಎಕ್ಸ್, ಟೆಸ್ಲಾ ಕಂಪೆನಿಗಳನ್ನು ಹುಟ್ಟುಹಾಕಿದ್ದಾರೆ. ಲೀಥಿಯಂ ಬ್ಯಾಟರಿ ಸಕಾರಣ ಬೆಲೆಯಲ್ಲಿ ಸಿಗುತ್ತಿದೆ. ಸೌರ ಬ್ಯಾಟರಿಯಿಂದ ಓಡುವ ಕಾರುಗಳು ಮಾರುಕಟ್ಟೆಗೆ ಬಂದಿವೆ. ಅಫ್ಘಾನಿಸ್ಥಾನದಲ್ಲಿ ಲೀಥಿಯಂ ಹೇರಳವಾಗಿರುವುದರಿಂದಲೇ ಪ್ರಧಾನಿ ನರೇಂದ್ರ ಮೋದಿ ಆ ದೇಶದ ಜತೆಗೆ ಸ್ನೇಹಸಂಬಂಧಕ್ಕೆ ಆದ್ಯತೆ ನೀಡಿದ್ದಾರೆ. ಮುಂದೊಂದು ದಿನ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸ ಬೇಕಾಗಬಹುದು. ಆದ್ದರಿಂದಲೇ ಸೌರ ವಿದ್ಯುತ್‌ಗೆ ಆದ್ಯತೆ ನೀಡಲಾಗುತ್ತಿದೆ. ಸೌರ ವಿದ್ಯುತ್ ಉತ್ಪಾ ದಿಸುತ್ತಿರುವ ಮೊದಲ ಹತ್ತು ದೇಶಗಳಲ್ಲಿ ಭಾರತ ಇಲ್ಲ. ಇನ್ನೆರಡು ವರ್ಷಗಳಲ್ಲಿ ಇದು ಸಾಧ್ಯವಾಗ ಬಹುದು. ಸೌರ ವಿದ್ಯುತ್ ಬೆಲೆ ಯೂನಿಟ್‌ಗೆ 2.30 ರೂ.ಗೆ ಇಳಿದಿದೆ.
ರೋಬೋಟ್, ಕೃತಕ ಬುದ್ಧಿಮತ್ತೆಯಿಂದ ಉದ್ಯೋಗನಷ್ಟ ಅಪಾಯ
ಭವಿಷ್ಯದಲ್ಲಿ ಜಗತ್ತು ರೋಬೋಟ್ ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಎಐ)ಗಳ ಮುನ್ನಡೆಯಿಂದ ಶೇ. 47ರಷ್ಟು ಉದ್ಯೋಗ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಭಾರತದಲ್ಲಿ ಇದರ ಪ್ರಮಾಣ ಶೇ. 68 ಆಗಬಹುದು ಎಂದು ಅಂದಾಜಿಸಲಾಗಿದೆ. ಎಲ್ಲ ಕೆಲಸಗಳನ್ನು ರೋಬೋಟ್‌ಗಳು ಮಾಡಲಿವೆ. ಮನುಷ್ಯರಿಗೆ ಕೆಲಸವೇ ಇಲ್ಲವೆಂದಾಗುತ್ತದೆ. ಅಂಕಿ-ಅಂಶಗಳ ಅಪಾರ ಸಂಗ್ರಹವಿದ್ದು, ಅದನ್ನು ರೋಬೋಟ್ ತತ್‌ಕ್ಷಣ ಒದಗಿಸುತ್ತದೆ. ಇದು ವಕಾಲತ್ತು ಮಾಡುತ್ತದೆ, ವೈದ್ಯನಾಗಿ ಶಸ್ತ್ರಚಿಕಿತ್ಸೆ ನಡೆಸುತ್ತದೆ, ಇಬ್ಬರು ಚಾಲಕರು ಮಾಡುವ ಕೆಲಸವನ್ನು ಅವರಿಗಿಂತ ಮುನ್ನ ಒಂದೇ ರೋಬೋಟ್ ಮಾಡಬಲ್ಲುದು. ರೋಬೋಟಿಯರ್‌ಗೆ ಚೀನ ಪೌರತ್ವ ನೀಡಿದೆ, ಜಪಾನ್ ಮನೆ ಕೊಟ್ಟಿದೆ. “ಯಾರೂ ಕೆಲಸಕ್ಕೆ ಬರಬೇಡಿ, ನಿಮಗೆ ಸಂಬಳ ಕೊಡುತ್ತೇವೆ’ ಎಂದು ಸ್ವಿಟ್ಸರ್ಲಂಡ್ ಈಗಾಗಲೇ ಬಹಿರಂಗವಾಗಿ ಹೇಳಿದೆ.
ಭವಿಷ್ಯದ ಅಪಾಯಗಳಿಗೆ ಇನ್ನೆಷ್ಟು ಉದಾಹರಣೆ ಬೇಕು? 2029ರಲ್ಲಿ ಯಂತ್ರ ಶಕ್ತಿ, ಮಾನವ ಶಕ್ತಿಗಿಂತ ಹೆಚ್ಚು ಆಗಲಿದೆ ಎಂದು ಕೃತಕ ಬುದ್ಧಿಮತ್ತೆ ತಜ್ಞ ಕ್ರುಸೆಲ್ ಭವಿಷ್ಯ ನುಡಿದಿದ್ದಾರೆ. ಬಗೆ ಬಗೆಯ ಊಟ ತಯಾರಿಯಂತಹ ಕೆಲಸಗಳನ್ನು ಮಾತ್ರ ಮಾನವ ಮಾಡಬೇಕಾಗಬಹುದು. ಅತ್ಯಾಕರ್ಷಣೆಯ ಐಟಿಯಿಂದ ಹಿಡಿದು ಕೃಷಿಯವರೆಗೆ ಎಲ್ಲ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಎಲ್ಲ ಕೆಲಸಗಳನ್ನೂ ಮಾಡುವ ಸಾಮರ್ಥ್ಯ ರೋಬೋಟ್‌ಗಳಿಗಿರುತ್ತದೆ. ಅದು ದುಬಾರಿಯೂ ಆಗಿರುವುದಿಲ್ಲ. ಇನ್ನು 20 ವರ್ಷಗಳಲ್ಲಿ ಸಮಾಜದ ಚಿತ್ರಣವೇ ಬದಲಾಗಲಿದೆ. ಇದನ್ನು ಹೇಗೆ ನಿಭಾಯಿಸಬೇಕೆಂಬ ಬಗೆಗೆ ಜಗತ್ತು ಚಿಂತನೆ ನಡೆಸಬೇಕಾಗುತ್ತದೆ. – ಡಾ| ಕೆ.ಜೆ. ರಾವ್
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.