ಎಚ್.ಡಿ.ಕೋಟೆಯಲ್ಲಿ ಗರಿಗೆದರಿದ ರಾಜಕೀಯ
Team Udayavani, Dec 12, 2017, 12:53 PM IST
ಮೈಸೂರು: ಶಾಸಕ ಎಸ್.ಚಿಕ್ಕಮಾದು ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ಚುನಾವಣೆಗೆ ಇನ್ನೂ 3-4 ತಿಂಗಳು ಇರುವಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರನ್ನು ಜೆಡಿಎಸ್‌ಗೆ ಕರೆತರಲು ಒಂದು ಗುಂಪು ಪ್ರಯತ್ನ ನಡೆಸಿದ್ದರೆ, ಜೆಡಿಎಸ್ ತಾಲೂಕು ಘಟಕ ಚಿಕ್ಕಮಾದು ಅವರ ಕುಟುಂಬದ ಬೆನ್ನಿಗೆ ನಿಂತಿದೆ.
ಚಿಕ್ಕಮಾದು ಅವರ ಪುತ್ರ ಹುಣಸೂರು ತಾಲೂಕು ಹನಗೋಡು ಕ್ಷೇತ್ರದ ಜಿಪಂ ಸದಸ್ಯ ಸಿ.ಅನಿಲ್ ಕುಮಾರ್‌ರಿಗೆ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ನಿರ್ಣಯ ಕೈಗೊಂಡಿದೆ. ಈ ಸಂಬಂಧ ಮಂಗಳವಾರ ನೂರಾರು ಮುಖಂಡರು ಬೆಂಗಳೂರಿಗೆ ತೆರಳಿ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಾಡಲಿದ್ದಾರೆ.
ಸೋಮವಾರ ಹ್ಯಾಂಡ್‌ಪೋಸ್ಟ್‌ನ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಎಚ್.ಡಿ.ಕೋಟೆ ಹಾಗೂ ಸರಗೂರು ಜೆಡಿಎಸ್ ಘಟಕಗಳ ವತಿಯಿಂದ ಕರೆಯಲಾಗಿದ್ದ ತಾಪಂ, ಜಿಪಂ ಹಾಗೂ ಪಪಂ ಸದಸ್ಯರ ಸಭೆಯಲ್ಲಿ ಅನಿಲ್ ಕುಮಾರ್‌ರಿಗೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ನೀಡಬೇಕು ಎಂದು ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿದೆ ಎಂದು ಎಚ್.ಡಿ.ಕೋಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಸುರೇಂದ್ರ ಡಿ.ಗೌಡ ತಿಳಿಸಿದ್ದಾರೆ.
ಇತ್ತ ಜೆಡಿಎಸ್‌ನ ಜಿಪಂ ಸದಸ್ಯ ಎಂ.ಪಿ.ನಾಗರಾಜು ಅವರ ಒಂದು ಗುಂಪು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ಕೊಡಿಸಲು ತೀವ್ರ ಪ್ರಯತ್ನ ನಡೆಸಿದೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ವರ್ಗಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಜಿಪಂ ಮಾಜಿ ಸದಸ್ಯರಾಗಿದ್ದ ಬೀಚನಹಳ್ಳಿ ಚಿಕ್ಕಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಡಿಎಸ್‌ನ ದೊಡ್ಡನಾಯ್ಕ ಅವರ ವಿರುದ್ಧ ಗೆಲುವು ಸಾಧಿಸಿದ್ದರು.
2013ರ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದ ಮಾಜಿ ಶಾಸಕರಾಗಿದ್ದ ಎಸ್.ಚಿಕ್ಕಮಾದು ಅವರನ್ನು ದಿಢೀರ್ ಬೆಳವಣಿಗೆಯಲ್ಲಿ ಎಚ್.ಡಿ.ಕೋಟೆಯಿಂದ ಸ್ಪರ್ಧಿಸುವಂತೆ ಸೂಚಿಸಲಾಗಿತ್ತು. ಹೀಗಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ದೊಡ್ಡನಾಯ್ಕ, ಅಸಮಾಧಾನ ವ್ಯಕ್ತಪಡಿಸದೆ ದುಡಿದ ಪರಿಣಾಮ ಚಿಕ್ಕಮಾದು ಅವರು ಕ್ಷೇತ್ರಕ್ಕೆ ಹೊಸಬರಾದರೂ 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಇತ್ತ ಸಂಸದ ಆರ್.ಧ್ರುವನಾರಾಯಣರ ಜತೆಗೆ ಹೊಂದಾಣಿಕೆಯಾಗದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಚಿಕ್ಕಣ್ಣ ಅವರು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅವರು ಜಿಲ್ಲಾ ಬಿಜೆಪಿ ಅಧ್ಯಕ್ಷ ನಂತರ ಬಿಜೆಪಿಗೂ ರಾಜೀನಾಮೆ ನೀಡಿ ಮತ್ತೆ ಕಾಂಗ್ರೆಸ್ ಸೇರುವ ಯತ್ನ ನಡೆಸಿ ಸಿಎಂ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದ್ದರು. ಆದರೆ, ಸಂಸದ ಧ್ರುವನಾರಾಯಣ ಅವರ ಪ್ರಬಲ ವಿರೋಧ ಹಿನ್ನೆಲೆಯಲ್ಲಿ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ.
ಈ ಮಧ್ಯೆ ಎಚ್.ಡಿ.ಕುಮಾರಸ್ವಾಮಿ ಅವರು ಚಿಕ್ಕಮಾದು ಪುತ್ರ ಅನಿಲ್ ಕುಮಾರ್‌ರಿಗೆ ದೂರವಾಣಿ ಕರೆ ಮಾಡಿ, ಚಿಕ್ಕಣ್ಣ ಪಕ್ಷ ಸೇರ್ಪಡೆ ಹಿನ್ನಲೆಯಲ್ಲಿ ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷದ ವರಿಷ್ಠರು ಚಿಕ್ಕಣ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಸ್ವಾಗತಿಸುತ್ತೇವೆ. ಅವರು ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡಲಿ, ಚುನಾವಣೆ ಟಿಕೆಟ್ ಅನ್ನು ಚಿಕ್ಕಮಾದು ಅವರ ಪುತ್ರ ಅನಿಲ್ ಕುಮಾರ್‌ರಿಗೆ ನೀಡಿ ಎಂದು ತಾಲೂಕು ಘಟಕದಿಂದ ಒಂದೇ ಹೆಸರನ್ನು ರಾಜ್ಯ ಸಮಿತಿಗೆ ಶಿಫಾರಸು ಮಾಡುತ್ತೇವೆ.
-ಸುರೇಂದ್ರ ಡಿ.ಗೌಡ, ಅಧ್ಯಕ್ಷರು, ತಾಲೂಕು ಜೆಡಿಎಸ್ ಅಧ್ಯಕ್ಷರು, ಎಚ್.ಡಿ.ಕೋಟೆ
ಜೆಡಿಎಸ್ ಸಮಾವೇಶದಲ್ಲಿ ಚಿಕ್ಕಣ್ಣ ಸೇರ್ಪಡೆ: ಪೂರ್ವಭಾವಿಯಾಗಿ ಈಗಾಗಲೇ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜು, ಜೆಡಿಎಸ್ ಮುಖಂಡ ಪೊ›.ಕೆ.ಎಸ್.ರಂಗಪ್ಪ ಮತ್ತಿತರರ ನೇತೃತ್ವದಲ್ಲಿ ಚಿಕ್ಕಣ್ಣ ಅವರನ್ನು ಜೆಡಿಎಸ್ ರಾಜಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಬಳಿ ಕರೆದೊಯ್ದು ಪಕ್ಷ ಸೇರ್ಪಡೆ ಸಂಬಂಧ ಮಾತುಕತೆ ನಡೆಸಲಾಗಿದೆ. ಇದಕ್ಕೆ ಒಪ್ಪಿಗೆ ನೀಡಿರುವ ವರಿಷ್ಠರು ಬುಧವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಜೆಡಿಎಸ್ ಎಸ್‌ಸಿ, ಎಸ್‌ಟಿ ಘಟಕದ ಸಮಾವೇಶದಲ್ಲಿ ಚಿಕ್ಕಣ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆಂದು ತಿಳಿದುಬಂದಿದೆ.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.