ಎಲ್ಲಿ ಮರೆಯಾದವು “ಅಂದದೂರು’ ಬೆಂಗಳೂರಿನ ಸೇಬು ತೋಪುಗಳು?
Team Udayavani, Dec 13, 2017, 12:25 PM IST
ಬೆಂಗಳೂರಿನಲ್ಲಿ ಮಾಯವಾಗಿರುವುದು ಸೇಬು ಮರವೊಂದೇ ಅಲ್ಲ. ಒಂದು ಕಾಲದಲ್ಲಿ ಉದ್ಯಾನ ನಗರಿ ಎಂಬ ಹೆಸರನ್ನು ಹೊತ್ತಿದ್ದ ಬೆಂಗಳೂರು ಇಂದು ಅಕ್ಷರಶಃ ಕಾಂಕ್ರೀಟ್ ಕಾಡಾಗಿ ಬಿಟ್ಟಿದೆ. ಭೂಮಿಯ ಬೆಲೆ ಏರುತ್ತಲೇ ಬಂದಿ ರು ವುದರಿಂದ ಎಷ್ಟೋ ಕಡೆಗಳಲ್ಲಿದ್ದ ಬಂಗಲೆಗಳು ಮಾಯವಾ ಗಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ತಥಾಕಥಿತ ಮಾಸ್ಟರ್‌ಪ್ಲಾನ್‌ಗಳ ದೆಸೆಯಿಂದ ಮರಗಳನ್ನು ಬೆಳೆಸುವುದಕ್ಕೆ ಅವಕಾಶವೇ ಇಲ್ಲದಂತಾಗಿದೆ.
ಇತ್ತೀಚೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ| ಟಿ.ವಿ. ರಾಮಚಂದ್ರ ಅವರು ಬೆಂಗಳೂರಿನ ಹವಾಮಾನ ಹಾಗೂ ಪರಿಸರಕ್ಕೆ ಉಂಟಾಗಿರುವ ಹಾನಿಯ ಬಗ್ಗೆ ಮಾಡಿದ ವಿದ್ವತೂ³ರ್ಣ ಭಾಷಣವನ್ನು ಕೇಳಿ ನಿಜಕ್ಕೂ ಭಾವಪರವಶನಾದೆ. ಬೆಂಗಳೂರಿನ ಇಂದಿನ ಈ ದುಃಸ್ಥಿತಿಗೆ ಕಾರಣ ಈ ಮಹಾನಗರದ ಸಸ್ಯಶ್ಯಾಮಲ ಸಂಪತ್ತಿಗೆ ಹಾಗೂ ಇಲ್ಲಿನ ನೀರಾವರಿ ಕೆರೆಗಳಿಗೆ ವಿವೇಚನಾ ರಹಿತವಾಗಿ ಮಾಡಲಾಗಿರುವ ಹಾನಿ. ಕಳೆದ ಶುಕ್ರವಾರ ಉಡುಪಿ ಯಲ್ಲಿ ಮಾಡಿದ ಭಾಷಣದಲ್ಲಿ ಈ ವಿಜ್ಞಾನಿ ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕಾಲದಲ್ಲಿ ಬೆಂಗಳೂರಿನಲ್ಲಿದ್ದ ಸೇಬು ತೋಪುಗಳು ಹೇಗೆ ನಿರ್ನಾಮವಾದವು ಎಂಬುದರತ್ತ ಸಭಾಸದರ ಗಮನ ಸೆಳೆದರು. ಅಂದ ಹಾಗೆ ರಾಜ್ಯ ರಾಜಧಾನಿಯ ಚಳಿಗಾಲದಲ್ಲಿನ ತಾಪಮಾನ ತೀರಾ ಕೆಳಮಟ್ಟಕ್ಕೆ ಕುಸಿದು ಸೊನ್ನೆ ಡಿಗ್ರಿಗೂ ತಲುಪುತ್ತಿತ್ತು ಎಂದು ಹೇಳಿದರೆ ಇಂದು ಯಾರಾದರೂ ನಂಬಲು ಸಾಧ್ಯವೆ?
ಬೆಂಗಳೂರು ಹಾಗೂ ರಾಜ್ಯದ ಇತರ ಕೆಲವು ಪ್ರಮುಖ ನಗರ ಪ್ರದೇಶಗಳಲ್ಲಿ ಸ್ಥಿರಾಸ್ತಿ ವ್ಯವಹಾರ ಅಭಿವೃದ್ಧಿಗೆ (ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್) ಒತ್ತು ನೀಡುವ ಮಂದಿ, ಪ್ರೊ| ರಾಮಚಂದ್ರ ಅವರ ಮಾತನ್ನು “ವಿಶ್ವದ ಸರ್ವನಾಶ ಕುರಿತ ಇನ್ನೊಂದು ಭವಿಷ್ಯವಾಣಿ’ ಎಂದು ಸಾರಾಸಗಟಾಗಿ ತಳ್ಳಿ ಹಾಕುವ ಸಾಧ್ಯತೆ ಯಿದೆ, ಆದರೂ ನಿಜವಾದ ಚಿಂತನಶೀಲರಾದ ವಿವೇಕಿಗಳು ಬೆಂಗಳೂ ರಿ ನಲ್ಲಿಂದು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ. ಪ್ರೊ| ರಾಮಚಂದ್ರ ಅವರ ಕಳಕಳಿಯ ಮಾತುಗಳು ಈ ವಾರದ ಮಟ್ಟಿಗೆ ಉಳಿದೆಲ್ಲ ಸಾರ್ವಜನಿಕ ವ್ಯವಹಾರಗಳನ್ನು ಮರೆತು ಕೇವಲ ತೋಟಗಾರಿಕೆಯ ವಿಷಯವನ್ನೇ ಚಿಂತಿಸುವಂತೆ ಮಾಡಿದೆ.
ಬೆಂಗಳೂರಿಗರ ಪೈಕಿ ಹೆಚ್ಚಿನವರು ಕ್ರಿಕೆಟ್ ಕ್ರೀಡೆಯ ಸೈದ್ಧಾಂತಿಕ ವಿವರಗಳಲ್ಲೇ ಕಳೆದು ಹೋಗುತ್ತಿರುವವರು. ಇಂಥವರು 1950ರ ದಶಕದ ವೇಗದ ಹಾಗೂ ನಿಧಾನಗತಿಯ ಬೌಲರ್ ಬಾಬ್ ಆ್ಯಪಲ್‌ಯಾರ್ಡ್ ಬಗ್ಗೆ ಕೇಳಿರಬಹುದೇನೋ. ಆದರೆ ನಿಶ್ಚಿತವಾ ಗಿಯೂ ಅವರು ಬೆಂಗಳೂರಿನ ಆ್ಯಪಲ್‌ಯಾರ್ಡ್ (ಸೇಬು ತೋಟಗಳ) ಬಗ್ಗೆ ಕೇಳಿರಲಾರರು! ಬೆಂಗಳೂರಿನ ಮಟ್ಟಿಗೆ ಸೇಬು ಮರವೆಂದರೆ ಅದು ಎಂದೋ ಸಾವು ಕಂಡ ಓಬೀರಾಯನ ಕಾಲದ ಮರವಾಗಿ ಪರಿಗಣಿತವಾಗಿದೆ. ಹಿಂದೊಮ್ಮೆ ಅದು ಇಲ್ಲಿನ ಪ್ರಮುಖ ತೋಟಗಾರಿಕಾ ಬೆಳೆಯಾಗಿತ್ತು ಎಂಬುದನ್ನು ಹೆಚ್ಚಿನ ವರು ನಂಬಲು ಸಿದ್ಧರಿಲ್ಲ. ಈ ಸಂಗತಿ ವಿಚಿತ್ರವೆಂದು ಕಾಣಿಸೀತು ಆದರೂ ಇದು ನಿಜ. ಹಿಂದೂ ಧರ್ಮಕ್ಕೆ ಪರಿವರ್ತನೆಗೊಂಡಿದ್ದ ಅಮೆರಿಕನ್ ವ್ಯಕ್ತಿಯಾದ ಸತ್ಯಾನಂದ (ಸ್ಯಾಮುವೆಲ್ ಸ್ಟೋಕ್ಸ್) ಹಿಮಾಚಲ ಪ್ರದೇಶಕ್ಕೆ ಸೇಬನ್ನು ಪರಿಚಯಿಸುವುದಕ್ಕೂ ಮುನ್ನವೇ ಇದನ್ನು ಬೆಂಗಳೂರಿನಲ್ಲಿ ಬೆಳೆಯಲಾಗುತ್ತಿತ್ತು. ಅಲ್ಲದೆ ಬೆಂಗಳೂ ರಿನ ವಾತಾವರಣ ಶಿಮ್ಲಾ ಅಥವಾ ಊಟಿಯಂತೆಯೇ ಇತ್ತು. ಇದು ಅನೇಕ ರಾಜ ಮಹಾರಾಜರುಗಳ ಹಾಗೂ ಇತರ ಸಿರಿವಂತ ವ್ಯಕ್ತಿಗಳ ಪಾಲಿಗೆ ಬೇಸಿಗೆಯ ರಾಜಧಾನಿಯಾಗಿತ್ತು.
ಮೈಸೂರು ರಾಜ್ಯದ ಮುಖವಾಣಿಯಾಗಿದ್ದ ಮೈಸೂರ್ ಇನ್‌ಫಾರ್ಮೆಶನ್ ಬುಲೆಟಿನ್‌ನಲ್ಲಿ ಆಗಿನ ಸೂಪರಿಂಟೆಂಡೆಂಟ್ ಆಫ್ ಗಾರ್ಡನ್ಸ್ (ಈಗಿನ ತೋಟಗಾರಿಕೆ ಇಲಾಖೆಯ ನಿರ್ದೇಶಕರ ಹುದ್ದೆಗೆ ಸಮನಾದ ಹುದ್ದೆ) ಕೆ. ನಂಜಪ್ಪ ಅವರು 1947ರ ಅಕ್ಟೋಬರ್‌ನಲ್ಲಿ ಮೈಸೂರು ರಾಜ್ಯದ ಮುಖ್ಯ ಹಾಗೂ ಜನಪ್ರಿಯ ಹಣ್ಣುಗಳ ಬೆಳೆಗಳ ಬಗ್ಗೆ ಬರೆದಿದ್ದರು. ಈ ಹಣ್ಣುಗಳ ವಿವರಗಳ ಜತೆಗೆ ವಿವಿಧ ಸೇಬು ತಳಿಗಳ ಬಗೆಗೂ ಉಲ್ಲೇಖೀಸಿದ್ದರು. ಈ ಬರಹದಲ್ಲಿ ಎಲ್ಲಕ್ಕಿಂತ ಮೊದಲಿಗೆ ಅವರು ಪ್ರಸ್ತಾವಿಸಿದ್ದು ಸೇಬನ್ನೇ. ಬಳಿಕವಷ್ಟೇ ವಿವಿಧ ದ್ರಾಕ್ಷಿ ತಳಿಗಳು, ಸೀಮೆ ಹಲಸು (ದೀವಿ ಹಲಸು), ಪಪ್ಪಾಯಿ, ಸ್ಯಾಪೋಡಿಲ್ಲಾ, ಅನಾನಸು ಹಾಗೂ ಸೀಬೆ ಹಣ್ಣುಗಳನ್ನು ಉಲ್ಲೇಖೀಸಿದ್ದರು. ಈಗ 70 ವರ್ಷಗಳ ಬಳಿಕ ಯಾರಾದರೂ “ಬೆಂಗಳೂರಿನಲ್ಲಿ ಸೇಬು ಕೃಷಿ’ ಎಂಬ ಮಾತೆತ್ತಿದರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕೂಡ ಹುಬ್ಬೇರಿಸಿ ಯಾರು. “ಸಸ್ಯಕಾಶಿ’ ಎಂಬ ಶ್ಲಾಘನೆಗೆ ಪಾತ್ರವಾಗಿರುವ ಲಾಲ್‌ಬಾಗ್‌ನಲ್ಲಿ ಕೂಡ ಇಂದು ಒಂದೇ ಒಂದು ಸೇಬಿನ ಮರ ಕಣ್ಣಿಗೆ ಬೀಳುವುದಿಲ್ಲ. ಮೈಸೂರಿನ ದಿವಾನ್ ಮಿರ್ಜಾ ಸಾಹೇಬರು ಮೈಸೂರಿನಲ್ಲಿ ಸರ್ವಾರ್ಪಣ ಭಾವದಿಂದ ಸೇವೆ ಸಲ್ಲಿಸಿದ್ದ ಪ್ರಖ್ಯಾತ ಜರ್ಮನ್ ತೋಟಗಾರಿಕಾ ತಜ್ಞ ಡಾ| ಜಿ.ಎಚ್. ಕ್ರುಂಬೀಗಲ್ ಅವರ ಜತೆಗೆ ನಿಂತಿರುವ ಫೋಟೋ ಒಂದಿದೆ. ಅದರಲ್ಲಿ ಇಬ್ಬರೂ ಅಂದು ಬೆಂಗಳೂರಿನಲ್ಲಿ ಬೆಳೆಯಲಾಗುತ್ತಿದ್ದ ಪ್ರಖ್ಯಾತ “ರೋಮನ್ ಬ್ಯೂಟಿ’ ಸೇಬು ಹಣ್ಣುಗಳ ಬುಟ್ಟಿಯೊಂದನ್ನು ಹಿಡಿದು ನಿಂತಿದ್ದಾರೆ. ದುರದೃಷ್ಟ ವಶಾತ್ ಇದು ಕಪ್ಪು – ಬಿಳುಪು ಛಾಯಾಚಿತ್ರ. “ಲಾಲ್‌ಭಾಗ್ ಜರ್ನಲ್’ನ ಹಳೆಯ ಸಂಚಿಕೆಯೊಂದರಲ್ಲಿ ಪ್ರಕಟವಾಗಿತ್ತು. ಈಚಿನ ದಿನಗಳಲ್ಲಿ ಲಾಲ್‌ಭಾಗ್‌ನ “ಕುಂಬ್ರಿàಗಲ್ ಹಾಲ್’ ಕಟ್ಟಡದ ನೆಲಸಮದ ಬಗ್ಗೆ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯೂ ನಡೆದಿದೆ. ಕರ್ನಾಟಕಕ್ಕೆ ವಿಶ್ವ ಪ್ರಸಿದ್ಧ ಬೃಂದಾವನದ ವಿನ್ಯಾಸವನ್ನು ರೂಪಿಸಿಕೊಟ್ಟವರೇ ಗುಸ್ತಾಫ್ ಹಾನ್ ಕ್ರುಂಬೀಗಲ್. ನಾವು ಅವರನ್ನು ಎಂದೂ ಮರೆಯುವ ಹಾಗೇ ಇಲ್ಲ.
ರಾಜ್ಯದಲ್ಲಿ ಹಿಂದೆ ನಡೆದಿದ್ದ ಉದ್ಯಾನ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದಂತೆ ನಾವು ನೆನಪಿಸಿಕೊಳ್ಳಬೇಕಾದ ಇನ್ನೊಂದು ಹೆಸರು ನಗರದ ಹಸುರೀಕರಣಕ್ಕೆ ದೇಣಿಗೆ ನೀಡಿದ್ದ ಸರಕಾರಿ ಉದ್ಯಾನ ವನಗಳ ಆಡಳಿತ ನಿರ್ವಹಣಾಧಿಕಾರಿ (ಸೂಪರಿಂಟೆಂಡೆಂಟ್ ಆಫ್ ಗವರ್ನಮೆಂಟ್ ಗಾರ್ಡನ್ಸ್) ಎಚ್. ಸಿ. ಜವರಯ್ಯ ಅವರದು. ಇವರು ಮೈಸೂರು ರಾಜ್ಯದ ಸೇಬು ಕೃಷಿಯ ಬಗೆಗೊಂದು ಗ್ರಂಥವನ್ನೂ ರಚಿಸಿದ್ದರು. ರಾಜ್ಯದ ಸೇಬು ಬೆಳೆಗಾರರಲ್ಲಿ ದೊಡ್ಡ ಮಟ್ಟಿನಲ್ಲಿ ಸೇಬು ಕೃಷಿ ಮಾಡಿದವರಲ್ಲಿ ಅಸ್ಸಾಂನಲ್ಲಿದ್ದ ಬ್ರಿಟಿಷ್ ಚಹಾ ಎಸ್ಟೇಟ್ ಮಾಲೀಕ ಮೆಕ್ ಐಸಾಕ್ ಅವರೂ ಒಬ್ಬರು. ಸುಮಾರು 1920ರ ವೇಳೆಗೆ ಅವರು ತಿಪ್ಪಗೊಂಡನ ಹಳ್ಳಿಯ ಸಮೀಪ, ಅರ್ಕಾವತಿ ನದಿಯ ದಂಡೆಯ ಮೇಲೆ 900 ಎಕರೆ ಪ್ರದೇಶದಲ್ಲಿ ಸೇಬು ತೋಟವೊಂದನ್ನು ಅಭಿವೃದ್ಧಿಪಡಿಸಿದ್ದರು. ಮುಂದೆ ಅರ್ಕಾವತಿ ಬತ್ತಿ ಹೋಗಿ ಮೆಕ್ ಐಸಾಕ್ ಅವರ ಸೇಬು ತೋಟವೂ ಮಾಯವಾದುದರಲ್ಲಿ ಅಚ್ಚರಿ ಯೇನೂ ಇಲ್ಲ. ಈ ವರ್ಷ ರಾಜ್ಯದ ಈ ಭಾಗದಲ್ಲಿ ವಿಪರೀತ ಮಳೆ ಯಾಗಿದೆ. ಇದು ಒಂದು ಪವಾಡವನ್ನೇ ಸೃಷ್ಟಿಸಿದೆ. ಅರ್ಕಾವತಿಗೆ ಮರುಜೀವ ಬಂದಿದೆ. ಈ ವರ್ಷ ಇಲ್ಲಿಂದ ನೀರೆತ್ತಿ ನಗರಕ್ಕೆ ಪೂರೈಸಲಾಗುವುದೆಂದು ಬೆಂಗಳೂರು ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿ ಹೇಳಿದೆ. ಅರ್ಕಾವತಿ ಹಿಂದಿನಂತೆಯೇ ಹರಿಯುವಂತಾಗಲಿ, ಶತಮಾನಗಳ ಹಿಂದೆ ಬತ್ತಿಹೋದ ಸರಸ್ವತೀ ನದಿಯ ಗತಿ ಇದಕ್ಕೆ ಬಾರದಿರಲಿ ಎಂದು ಹಾರೈಸೋಣ.
ಬೆಂಗಳೂರಿನಲ್ಲಿ ಹಿಂದೆ ಬೆಳೆಯಲಾಗುತ್ತಿದ್ದ ರೋಮನ್ ಬ್ಯೂಟಿ ಸೇಬು ಎಲ್ಲ ದೃಷ್ಟಿಯಿಂದಲೂ ಚಂದದ ಹಣ್ಣು. ಅದು ಗಾತ್ರದಲ್ಲಿ ದೊಡ್ಡದು, ಬಹುದಿನಗಳ ಕಾಲ ತಾಜಾತನ ಕಳೆದುಕೊಳ್ಳದೆ ಉಳಿ ಯುತ್ತಿದ್ದ ಸೇಬು ಅದು. ತಾಜಾತನದ ಮಟ್ಟಿಗೆ ಅದು ಕುಲು ಸೇಬಿಗಿಂತಲೂ ಒಂದು ಕೈ ಮೇಲೆ ಎಂಬಂತಿತ್ತು. ಕನ್ನಡದ ಪ್ರಖ್ಯಾತ ಕವಿ, ಪ್ರಬಂಧಕಾರ ವಿ. ಸೀತಾರಾಮಯ್ಯ (ವಿ.ಸೀ.) ಅವರು ತಮ್ಮ “ಹಿರಿಯರು ಗೆಳೆಯರು’ ಪುಸ್ತಕದಲ್ಲಿ ಹೇಳಿರುವ ಮಾತನ್ನು ಕೇಳಿ – 1914ರಲ್ಲಿ ಪ್ರಥಮ ಜಾಗತಿಕ ಯುದ್ಧ ಆರಂಭವಾಗುವವರೆಗೂ ಇಂದು ನಾವು ಯಾವ ಪ್ರದೇಶವನ್ನು ವಿಶ್ವೇಶ್ವರಪುರ ಎಂದು ಕರೆಯುತ್ತಿದ್ದೇವೋ ಆ ಪ್ರದೇಶದ ತುಂಬೆಲ್ಲ ಸೇಬು, ಅಂಜೂರ ಹಾಗೂ ದ್ರಾಕ್ಷಿ ತೋಟಗಳಿದ್ದವು. ನಗರದ ಇಂದಿನ ಪ್ಯಾಲೇಸ್ ಆರ್ಚರ್ಡ್ಸ್ (ಈ ಪ್ರದೇಶ ಇಂದು ಸದಾಶಿವ ನಗರವಾಗಿದೆ), ಮೈಸೂರು ರಸ್ತೆ, ಹೆಬ್ಟಾಳ, ಗಂಗೇನಹಳ್ಳಿ , ಆನೆಕಲ್ ರಸ್ತೆ ಹಾಗೂ ಲಾಲ್‌ಬಾಗಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಸೇಬನ್ನು ಬೆಳೆಯ ಲಾಗುತಿತ್ತು. ಈ ನಡುವೆ ಹೇಸರಘಟ್ಟದ ತೋಟಗಾರಿಕಾ ಕೇಂದ್ರವೇ ಬೆಂಗಳೂರಿನ ಸೇಬಿನ ತವರುಮನೆಯಾಗಿತ್ತೆನ್ನಬಹುದು. ಇಂದು ಈ ಹೇಸರಘಟ್ಟ ಕೇಂದ್ರದ ಒಂದು ಭಾಗದಲ್ಲಿ ಭಾರತೀಯ ತೋಟಗಾರಿಕೆ/ಉದ್ಯಾನಕೃಷಿ ಸಂಶೋಧನ ಕೇಂದ್ರವಿದೆ.
ಗಮನಿಸಬೇಕು ಪ್ರೊ| ರಾಮಚಂದ್ರ ಅವರು ಮೊನ್ನೆಯ ಭಾಷ ಣದಲ್ಲಿ ಯಾವ ಕಾಳಜಿಯನ್ನು ಆತಂಕವನ್ನು ವ್ಯಕ್ತಪಡಿಸಿದ್ದರೋ ಅದನ್ನು ಸರಕಾರಿ ಹಾಗೂ ಖಾಸಗಿ ತೋಟಗಾರಿಕೆ ಉದ್ಯಾನ ಕೃಷಿ ತಜ್ಞರು, ಅಂತೆಯೇ ಬೆಂಗಳೂರಿನಲ್ಲಿನ ನರ್ಸರಿಗಳ ಮಾಲೀಕರು/ ನಿರ್ವಹಣಕಾರರು ಎಷ್ಟೋ ಸಮಯದ ಹಿಂದೆಯೇ ವ್ಯಕ್ತಪಡಿಸಿ ದ್ದರು. ಪತ್ರಿಕೆಗಳು ಅಭಿವೃದ್ಧಿ ಕಾರ್ಯಕ್ರಮಗಳ ನೇತ್ಯಾತ್ಮಕ ಮುಖಗಳ ಹಾಗೂ ಪರಿಸರ ನಾಶದ ಬಗ್ಗೆ ಲೇಖನಗಳನ್ನು ಪ್ರಕಟಿಸಲಾರಂಭಿಸುವುದಕ್ಕೆ ಎಷ್ಟೋ ವರ್ಷಗಳ ಮೊದಲೇ ಬರಹ, ಭಾಷಣಗ ಳ ಮೂಲಕ ಈ ಬಗ್ಗೆ ಎಚ್ಚರಿಸಿದ್ದರು. ವಾಯುಗುಣ ವೈಪರೀತ್ಯದಿಂದಾಗಿ ಮತ್ತು ವಾತಾವರಣದಲ್ಲಿ ಉಷ್ಣತೆಯ ಏರಿಕೆಯಿಂದಾಗಿ ಸೇಬು ಮರಗಳಿಗೆ ಹಾನಿಯುಂಟಾಗುವ ಬಗೆಗೂ ಆತಂಕ ವ್ಯಕ್ತಪಡಿಸಿದ್ದರು. ಸೇಬು ಬೆಳೆಗೆ ಇಂಥ ಬಿಸಿ ಹವೆ ಏನೇನೂ ಒಗ್ಗದು ಎಂದು ಈ ತಜ್ಞರು ಹೇಳುತ್ತಲೇ ಇದ್ದರು. ಹವಮಾನ ತಜ್ಞರು ಇಂಥ ವಾದವನ್ನು ಒಪ್ಪಲು ತಯಾರಿರಲಿಲ್ಲ.
ಆದರೂ ಸ್ವಾತಂತ್ರ್ಯನಂತರದ ವರ್ಷಗಳಲ್ಲಿ ತೋಟಗಾರಿಕಾ ಇಲಾಖೆಯ ನಿರ್ದೇಶಕರಾಗಿ ಹೆಸರು ಮಾಡಿದ ಡಾ| ಎಂ.ಎಚ್. ಮರಿಗೌಡ ಅವರು ಸೇಬು ತೋಟಗಳಿಗೆ ಎದುರಾದ ಸಮಸ್ಯೆಯ ಮೂಲ ಯಾವುದೆಂದು ಸ್ಪಷ್ಟವಾಗಿ ಗುರುತಿಸಿದ್ದರು. ಸೇಬು ಗಿಡಗಳನ್ನು ಮರಳಿ ನೆಡುವ ಕೆಲಸವನ್ನು ರೈತರು ಕೈಗೊಳ್ಳಲೇ ಇಲ್ಲ. ರೋಮನ್ ಬ್ಯೂಟಿ ಸೇಬಿನ ಗಿಡದ ಬೇರುಕಾಂಡಗಳನ್ನು ಆಸ್ಟ್ರೇ ಲಿಯ ದಿಂದ ತರಿಸಿಕೊಳ್ಳಬೇಕಿತ್ತು. ಬೆಂಗಳೂರಿನ ಹವೆಯಲ್ಲಿ ಒಂದು ಸೇಬಿನ ಮರದ ಆಯುಷ್ಯ ಎಂಟರಿಂದ ಹತ್ತು ವರ್ಷಗಳು. ವರ್ಷಕ್ಕೆ ಎರಡು ಬೆಳೆ ತೆಗೆಯಬಹುದಿತ್ತು. ಸಾಂಪ್ರದಾಯಿಕ ತಳಿಗಳಿಗೆ ಹೋಲಿಸಿದರೆ ಈ ಅವಧಿ ತೀರಾ ಚಿಕ್ಕದು. ಜತೆಗೆ ಕಳ್ಳಕಾಕರ ಕಾಟ ಬೇರೆ. ಬೆಳೆಗಾರರು ಸೇಬಿನ ಮರಗಳನ್ನು ಕಿತ್ತೂ ಗೆದು ಅವುಗಳಿಗೆ ಮುಕ್ತಿ ಕರುಣಿಸಿದ್ದು, ಇನ್ನೆಂದೂ ಹೊಸ ಗಿಡಗಳನ್ನು ಬೆಳೆಯದೆ ಹೋದುದು ಬಹುಶಃ ಇದೇ ಕಾರಣದಿಂದ.
ಹಾಗೇ ನೋಡಿದರೆ ಬೆಂಗಳೂರಿನಲ್ಲಿ ಹೀಗೆ ಮಾಯವಾಗಿರು ವುದು ಸೇಬು ಮರವೊಂದೇ ಅಲ್ಲ. ಇತರ ಅನೇಕ ಸಂಗತಿಗಳು ಹೇಳ ಹೆಸರಿಲ್ಲದೆ ಕಣ್ಮರೆಯಾಗಿವೆ. ಒಂದು ಕಾಲದಲ್ಲಿ ಉದ್ಯಾನ ನಗರಿ ಎಂಬ ಹೆಸರನ್ನು ಹೊತ್ತಿದ್ದ ಬೆಂಗಳೂರು ಇಂದು ಅಕ್ಷರಶಃ ಕಾಂಕ್ರೀಟ್ ಕಾಡಾಗಿ ಬಿಟ್ಟಿದೆ. ಭೂಮಿಯ ಬೆಲೆ ಏರುತ್ತಲೇ ಬಂದಿ ರು ವುದರಿಂದ ಎಷ್ಟೋ ಕಡೆಗಳಲ್ಲಿದ್ದ ಬಂಗಲೆಗಳು ಮಾಯವಾ ಗಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ತಥಾಕಥಿತ ಮಾಸ್ಟರ್‌ಪ್ಲಾನ್‌ಗಳ ದೆಸೆಯಿಂದ ಮರಗಳನ್ನು ಬೆಳೆಸುವುದಕ್ಕೆ ಅವಕಾಶವೇ ಇಲ್ಲ ಎಂಬಂತಾಗಿದೆ. ಪ್ರಾಧಿಕಾರ ನೀಡುವ ಪ್ರತಿ ನಿವೇಶನದಲ್ಲಿ ಮನೆಕಟ್ಟುವವರು ಒಂದು ಮನೆಗೆ ಎರಡರಂತೆ ಮರಗಳನ್ನು ಬೆಳೆಸಬೇಕೆಂಬ ನಿಯಮ ಹಿಂದೆ ಇತ್ತು. ಇಂದಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಸ್ಟರ್ ಪ್ಲಾನ್ ಸೃಷ್ಟಿಕರ್ತರು ಅಥವಾ ಸೂಕ್ಷ್ಮತೆ ಯಿಲ್ಲದ ಇಂಜಿನಿಯರ್ ಸಾಹೇಬರುಗಳು ಕಟ್ಟಡಗಳ ಸುತ್ತ ಸಾಕಷ್ಟು “ಸೆಟ್‌ಬ್ಯಾಕ್’ ಜಾಗಕ್ಕೆ ಅವಕಾಶವಿರದ ರೀತಿಯಲ್ಲಿ ನಿರ್ಮಾಣ ಕಾರ್ಯಕ್ಕೆ ನಾಂದಿ ಹಾಡುವ ಮೂಲಕ ಮಹಾನಗರದ ಎಲ್ಲವನ್ನೂ ಒಳಗೊಳ್ಳುವ “ಅಡಕ ಅಭಿವೃದ್ಧಿ’ಗೆ ಅವಕಾಶ ಮಾಡಿ ಕೊಡುತ್ತಿದ್ದಾರೆ! ಮನೆಗಳನ್ನು ಹಾಗೂ ವಾಣಿಜ್ಯ ಕಟ್ಟಡಗಳನ್ನು ರಸ್ತೆಗೆ ತಾಗಿಕೊಳ್ಳುವಂತೆ ಕಟ್ಟುವುದು, ಕ್ರಮೇಣ ಕಟ್ಟಡದ ಮುಂದೆ “ಉದ್ಯಾನ’ ನಿರ್ಮಿಸಲು ಫುಟಾ³ತ್‌ಗಳನ್ನು ಆಕ್ರಮಿಸುವುದು ಇಂದಿನ ಫ್ಯಾಶನ್ ಆಗಿಬಿಟ್ಟಿದೆ.
ಇಂದಿನ ಬೆಂಗಳೂರಿನಲ್ಲಿ ಸೇಬಿನ ಮರ ಮಾತ್ರವಲ್ಲ, ಒಂದು ಕಾಲದಲ್ಲಿ ಎಲ್ಲೆಂದರಲ್ಲಿ ಕಂಡು ಬರುತ್ತಿದ್ದ ಚಕ್ಕೋತ, ಹಲಸು, ಮಾವು, ಅಂಜೂರದ ಮರಗಳು, ಅಷ್ಟೇಕೆ, ಪುಟಾಣಿ ತುಂಬೆ ಗಿಡಗಳು ಕೂಡ ನಾಪತ್ತೆಯಾಗಿವೆ. ನಗರದಲ್ಲಿ ಎಲ್ಲೆಂದರಲ್ಲಿ ವಿಹರಿಸುತ್ತಿದ್ದ ಗುಬ್ಬಿಗಳು ಕೂಡ ಎಲ್ಲೋ ಹಾರಿ ಮರೆಯಾಗಿವೆ. ಒಂದು ರೀತಿಯಲ್ಲಿ ಇಂದಿನ ಬೆಂಗಳೂರಿನ ಸ್ಥಿತಿಗತಿ ಅಭಿವೃದ್ಧಿಯ ಹೆಸರಿನಲ್ಲಿ ಈ ನಗರವನ್ನು ಅನುಕರಿಸುತ್ತಿರುವ ರಾಜ್ಯದ ಇತರ ನಗರಗಳಿಗೆ ವಸ್ತುತಃ ಒಂದು ಎಚ್ಚರಿಕೆಯ ಗಂಟೆಯೂ ಹೌದು. ಮೈಸೂರು ನಗರ ಹಾಗೂ ಅಲ್ಲಿನ ಪರಿಸರದ ನಿವಾಸಿಗಳು ನಂಜನಗೂಡು ರಸಬಾಳೆ ಹಾಗೂ ಈರನಗೆರೆ ಬದನೇಕಾಯಿಗಳನ್ನು ಈಗಾಗಲೇ ಕಳೆದುಕೊಂಡಾಗಿದೆ.
ಅರಕೆರೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.