ಮತ್ತೆ ಡೋಕ್ಲಾಂ ಕಿರಿಕ್; ನಂಬಿಕೆಗೆ ಅರ್ಹವಲ್ಲ ಚೀನ
Team Udayavani, Dec 14, 2017, 12:58 PM IST
ಚೀನದ ಇಂತಹ ಆಟಗಳನ್ನು ನಿಲ್ಲಿಸಬೇಕಾದರೆ ಭಾರತ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಅಗತ್ಯವಿದೆ.ಬ್ರಿಕ್ಸ್ ಶೃಂಗದಲ್ಲಿ ಭಾರತ ಭಾಗವಹಿಸುವ ಸಾಧ್ಯತೆಯಿಲ್ಲದ ಕಾರಣ ಚೀನ ಯಾವ ಶರತ್ತೂ ವಿಧಿಸದೆ ಡೋಕ್ಲಾಂ ಬಿಕ್ಕಟ್ಟು ಬಗೆಹರಿಸಲು ಮುಂದಾಗಿತ್ತು.
ಡೋಕ್ಲಾಂ ಗಡಿ ಮತ್ತೆ ಭಾರತ ಮತ್ತು ಚೀನ ನಡುವೆ ವಿರಸಕ್ಕೆ ಕಾರಣವಾಗುವ ಸಾಧ್ಯತೆ ಗೋಚರಿಸಿದೆ. ಕಳೆದ ಜೂನ್‌ನಲ್ಲಿ ಮೂರು ರಾಷ್ಟ್ರಗಳು ಸಂಧಿಸುವ ತ್ರಿಸಂಧಿಯ ಬಳಿ ರಸ್ತೆ ನಿರ್ಮಿಸಲು ಮುಂದಾಗಿದ್ದ ಚೀನವನ್ನು ಭಾರತದ ಸೈನಿಕರು ತಡೆದ ಬಳಿಕ ಸುಮಾರು ಮೂರು ತಿಂಗಳು ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ನೆಲೆಯಾಗಿ ಬಳಿಕ ಅಷ್ಟೇ ತಣ್ಣಗೆ ಬಗೆಹರಿದ ಪ್ರಕರಣವಿನ್ನೂ ಮನಸಿನಿಂದ ಮರೆಯಾಗುವ ಮೊದಲೇ ಚೀನ ಇನ್ನೊಂದು ದುಸ್ಸಾಹಕ್ಕಿಳಿದಿರುವುದನ್ನು ಉಪಗ್ರಹ ಚಿತ್ರಗಳು ಬಯಲುಗೊಳಿಸಿವೆ. ವಿವಾದಗ್ರಸ್ತ ಡೋಕ್ಲಾಂನಿಂದ ಸುಮಾರು 7 ಕಿ. ಮೀ. ಅಂತರದಲ್ಲಿ ಚೀನ ಎರಡು ಹೊಸ ರಸ್ತೆಗಳನ್ನು ನಿರ್ಮಿಸಿರುವುದು ಉಪಗ್ರಹ ಸೆರೆಹಿಡಿದ ಚಿತ್ರಗಳಲ್ಲಿ ಕಂಡು ಬಂದಿದೆ.
ಕಳೆದ ಫೆಬ್ರವರಿ ಯಿಂದಲೇ ಚೀನದ ಸೈನಿಕರು ಈ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿ ದ್ದರು ಎಂಬ ಅನುಮಾನವೂ ಇದೆ. ಅಲ್ಲದೆ ಸೆಪ್ಟೆಂಬರ್‌ನಲ್ಲಿ ಉಭಯ ದೇಶಗಳು ಡೋಕ್ಲಾಂನಿಂದ ಸೇನೆಯನ್ನು ಹಿಂದೆಗೆದಿದ್ದರೂ ಸುಮಾರು 1500 ಸೈನಿಕರನ್ನು ಅಲ್ಲೇ ತುಸು ದೂರದಲ್ಲಿ ಇರಿಸಿತ್ತು ಎಂಬ ಅಂಶವೂ ಬಯಲಾಗಿದೆ. ಈ ಎಲ್ಲ ಬೆಳವಣಿ ಗೆಗಳಿಂದ ಒಂದು ವಿಷ ಯ ವಂತೂ ಸ್ಪಷ್ಟವಾಗಿದೆ, ಚೀನ ಯಾವ ಕಾರ ಣಕ್ಕೂ ಡೋಕ್ಲಾಂ ಮೇಲಿನ ಪಟ್ಟನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲು ತಯಾರಿಲ್ಲ ಹಾಗೂ ಈ ವಿಚಾರದಲ್ಲಿ ಅದು ಪಾಕಿಸ್ಥಾನದಷ್ಟೆ ಧೂರ್ತ ದೇಶ.
ಕಳೆದ ಜೂನ್‌ನಲ್ಲಿ ಭಾರತ, ಚೀನ ಮತ್ತು ಭೂತಾನ್ ಸಂಧಿಸುವ ಡೋಕ್ಲಾಂ ತ್ರಿಸಂಧಿ ತನಕ ಸುಸಜ್ಜಿತ ರಸ್ತೆ ನಿರ್ಮಿಸಲು ತೊಡಗಿದ್ದ ಚೀನವನ್ನು ಭಾರತದ ಸೈನಿಕರು ದಿಟ್ಟವಾಗಿ ತಡೆದಿದ್ದರು. ಕೇಂದ್ರ ಸರಕಾರವೂ ಈ ಸಂದರ್ಭದಲ್ಲಿ ಕೆಚ್ಚೆದೆಯನ್ನು ತೋರಿಸಿದ ಪರಿಣಾ ಮವಾಗಿ ಅನಿವಾರ್ಯ ವಾಗಿ ಚೀನ ಹಿಂದೆ ಸರಿಯಬೇಕಾಯಿತು. ಜೂ.16ರಂದು ಪ್ರಾರಂಭವಾದ ಬಿಕ್ಕಟ್ಟು ಬೀಜಿಂಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಕ್ಕಿಂತ ಕೆಲ ದಿನ ಮೊದಲು ಆ.28ರಂದು ಶಾಂತಿಯುತವಾಗಿ ಬಗೆಹರಿಯಿತು. ಉಭಯ ದೇಶಗಳು ಡೋಕ್ಲಾಂನಿಂದ ಸೇನೆಯನ್ನು ಹಿಂದೆಗೆದುಕೊಂಡವು. ಆದರೆ ಈಗ ನೋಡು ವಾಗ ಇದೆಲ್ಲ ಚೀನ ಹೂಡಿದ ನಾಟಕವೇ ಎನ್ನುವ ಅನುಮಾನ ಬರುತ್ತದೆ. ಭಾರತದ ಸೈನಕರ ಗಮನವನ್ನೆಲ್ಲ ಡೋಕ್ಲಾಂನತ್ತ ಹರಿಯುವಂತೆ ಮಾಡಿ ಅಲ್ಲೇ ಕೆಲ ಕಿ. ಮೀ. ದೂರದಲ್ಲಿ ಚೀನ ರಸ್ತೆ ನಿರ್ಮಿಸುವ ಯೋಜನೆ ಹಾಕಿಕೊಂಡಿತ್ತೇ.
ಎರಡು ರಸ್ತೆಗಳನ್ನು ನಿರ್ಮಿಸಿರುವುದನ್ನು ನೋಡುವಾಗ ಈ ಅನುಮಾನ ಇನ್ನಷ್ಟು ದಟ್ಟವಾಗುತ್ತದೆ. ಹೀಗಾಗಿದ್ದರೆ ಯಾವ ಕಾರಣಕ್ಕೂ ಚೀನ ನಂಬಿಕಸ್ಥ ದೇಶ ಅಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನೆರೆ ರಾಷ್ಟ್ರಗಳೊಂದಿಗೆ “ವಿಶೇಷ ಬಾಂಧವ್ಯ’ ಇರಿಸಿಕೊಳ್ಳುವ ಭಾರತದ ಸದಾಶಯವನ್ನು ಚೀನ ಗೌರವಿಸುವುದಿಲ್ಲ ಎನ್ನುವುದು ಸ್ಪಷ್ಟ.
ಚೀನದ ಇಂತಹ ಆಟಗಳನ್ನು ನಿಲ್ಲಿಸಬೇಕಾದರೆ ಭಾರತ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಅಗತ್ಯವಿದೆ.ಬ್ರಿಕ್ಸ್ ಶೃಂಗದಲ್ಲಿ ಭಾರತ ಭಾಗವಹಿಸುವ ಸಾಧ್ಯತೆಯಿಲ್ಲದ ಕಾರಣ ಚೀನ ಯಾವ ಶರತ್ತೂ ವಿಧಿಸದೆ ಡೋಕ್ಲಾಂ ಬಿಕ್ಕಟ್ಟು ಬಗೆಹರಿಸಲು ಮುಂದಾಗಿತ್ತು. ಆದರೆ ಈ ಸಂದರ್ಭದಲ್ಲಿ ಉಭಯ ದೇಶಗಳ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ. ಹೀಗಾಗಿ ಚೀನ ಮತ್ತೆ ಅಲ್ಲಿ ಕ್ಯಾತೆ ತೆಗೆಯುವ ಧೈರ್ಯ ತೋರಿಸಿದೆ. ಯುದ್ಧ ಸದೃಶ ಪರಿಸ್ಥಿತಿ ನಿರ್ಮಾಣವಾದ ಬಳಿಕ ಒಪ್ಪಂದವಿಲ್ಲದೆ ವಿವಾದ ಬಗೆಹರಿಸಲು ಒಪ್ಪಿಕೊಂಡದ್ದು ಭಾರತದ ತಪ್ಪು. ಚೀನ ತನ್ನ ನೆಲದಲ್ಲಿ ರಸ್ತೆ ನಿರ್ಮಿಸುವುದನ್ನು ಆಕ್ಷೇಪಿಸುವ ಅಧಿಕಾರ ನಮಗಿಲ್ಲ ಎನ್ನುವುದು ನಿಜವಾಗಿದ್ದರೂ, ಇದರ ಹಿಂದಿನ ಉದ್ದೇಶವೇನೆಂದು ಸ್ಪಷ್ಟ. ಡೋಕ್ಲಾಂನಂತಹ ಬೆಟ್ಟ ಪ್ರದೇಶದಲ್ಲಿ ನಾಗರಿಕ ಉದ್ದೇಶಕ್ಕಾಗಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ ಎಂಬ ಚೀನದ ಹೇಳಿಕೆ ಹಾಸ್ಯಾಸ್ಪದ.
ವ್ಯೂಹಾತ್ಮಕವಾಗಿ ಆಯಕಟ್ಟಿನ ಪ್ರದೇಶದಲ್ಲಿರುವ ಡೋಕ್ಲಾಂನ್ನು ಹಿಡಿತಕ್ಕೆ ತೆಗೆದುಕೊಂಡು ಅತ್ತ ಭೂತಾನ್ ಮತ್ತು ಇತ್ತ ಭಾರತ ಹೀಗೆ ನೆರೆಯ ಎರಡೂ ದೇಶದ ಮೇಲೆ ಕಣ್ಗಾವಲು ಇಡುವುದು ಅದರ ಮುಖ್ಯ ಗುರಿ. ಯುದ್ಧವೇನಾದರೂ ಶುರುವಾದರೆ ಸಾಗಾಟಕ್ಕೆ ಅನುಕೂಲವಾಗುವಂತಹ ಆಯಕಟ್ಟಿನ ಜಾಗದಲ್ಲೇ ರಸ್ತೆಗಳ ನಿರ್ಮಾಣವಾಗಿದೆ ಎನ್ನುವುದು ಗಮನಾರ್ಹ ಅಂಶ. ಈ ಹಿನ್ನೆಲೆಯಲ್ಲಿ ಭಾರತ ಈ ವಿವಾದವನ್ನು ನಾಜೂಕಾಗಿ ಬಗೆಹರಿಸಿಕೊಳ್ಳುವ ಅಗತ್ಯವಿದೆ. ಚೀನ ಜತೆಗಿನ ವಿಶೇಷ ಪ್ರತಿನಿಧಿಗಳ ಮೂಲಕ ಮಾತುಕತೆ ನಡೆಸುವ ಪ್ರಯತ್ನಗಳಿಗೆ ನಿರೀಕ್ಷಿತ ಫಲ ಸಿಕ್ಕಿಲ್ಲ. ಕಳೆದ ವರ್ಷದ ತನಕ ಈ ಮಾದರಿಯ 19 ಸುತ್ತಿನ ಮಾತುಕತೆಗಳು ನಡೆದಿದ್ದರೂ ಗಡಿ ವಿಚಾರದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ. ಚೀನದಂತಹ ಎದುರಾಳಿಯ ಜತೆಗೆ ವ್ಯವಹರಿಸುವಾಗ ವಿಶೇಷ ರಾಜತಾಂತ್ರಿಕ ನೈಪುಣ್ಯವನ್ನು ತೋರಿಸುವ ಅಗತ್ಯವಿದೆ. ಇಂತಹ ನೈಪುಣ್ಯವನ್ನು ಮೋದಿ ಸರಕಾರ ಹೊಂದಿದೆಯೇ?
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.