ಸಂಪನ್ಮೂಲ ಸೃಷ್ಟಿಸುವ ಸಾಮರ್ಥ್ಯ ಪಾಲಿಕೆಗಿದೆ
Team Udayavani, Dec 15, 2017, 12:19 PM IST
ಬೆಂಗಳೂರು: ನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ನೆಚ್ಚಿಕೊಳ್ಳದೆ ತಮ್ಮಲ್ಲೇ ಸಂಪನ್ಮೂಲ ಸೃಷ್ಟಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ ಹದೀìಪ್ ಸಿಂಗ್ ಪುರಿ ಹೇಳಿದ್ದಾರೆ.
ಸ್ಮಾರ್ಟ್ ಸಿಟೀಸ್ ಇಂಡಿಯಾ ಸಂಸ್ಥೆಯು ಪಬ್ಲಿಕ್ ಅಫೇರ್ ಸೆಂಟರ್ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ “21ನೇ ಶತಮಾನಕ್ಕೆ ಸ್ಮಾರ್ಟ್ ನಗರ ಯೋಜನೆ: ಸವಾಲುಗಳು ಮತ್ತು ಆಯ್ಕೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಸರ್ಕಾರಗಳು ನಗರ ಪಾಲಿಕೆಗಳಿಗೆ ಅನುದಾನ ನೀಡುವ ವ್ಯವಸ್ಥೆಯಿಲ್ಲ.
ಹೀಗಾಗಿ ಆಂತರಿಕವಾಗಿ ಸಂಪನ್ಮೂಲ ಸೃಷ್ಟಿಸಿಕೊಳ್ಳುವತ್ತ ಗಮನ ಹರಿಸಬೇಕು. ಬೆಂಗಳೂರು ಶ್ರೀಮಂತ ನಗರವಾಗಿದ್ದು, ಉತ್ತಮ ಸಂಪನ್ಮೂಲ ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಪುಣೆ, ಹೈದರಾಬಾದ್‌ನಂತಹ ನಗರಗಳಲ್ಲಿ ಬಾಂಡ್ ಯೋಜನೆ ಜಾರಿಯಲ್ಲಿದ್ದು, ಬೆಂಗಳೂರು ಸಹ ಈ ನಿಟ್ಟಿನಲ್ಲಿ ಚಿಂತಿಸಬಹುದು ಎಂದು ಹೇಳಿದರು.
ನಗರಗಳನ್ನು ಯೋಜಿತ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸ್ಮಾರ್ಟ್ ಸಿಟಿಯಂತಹ ಯೋಜನೆಗಳನ್ನೇ ಕಾಯಬೇಕಾದ ಅಗತ್ಯವಿಲ್ಲ. ಪ್ರತಿಯೊಬ್ಬರೂ ತಾವು ನೆಲೆಸಿರುವ ಪ್ರದೇಶವನ್ನೇ ಪರಿಸರಸ್ನೇಹಿಯನ್ನಾಗಿ ಪರಿವರ್ತಿಸಿಕೊಳ್ಳುವತ್ತ ಗಮನ ಹರಿಸಬೇಕು. ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗುವುದು ವಾಸಯೋಗ್ಯ ನಗರದ ಸಂಕೇತವಲ್ಲ. ವಾಸಯೋಗ್ಯ ನಗರಗಳ ಮಾನದಂಡಗಳಲ್ಲಿ ಪಾದಚಾರಿ ಸ್ನೇಹಿ ಮಾರ್ಗಗಳು, ಸೈಕಲ್ ಪಥಗಳ ನಿರ್ಮಾಣಕ್ಕೆ ಆದ್ಯತೆ ಅಗತ್ಯ ಎಂದು ತಿಳಿಸಿದರು.
ಟೀಕೆ, ಸಲಹೆಗಳಿಗೆ ಸ್ವಾಗತ: ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬೆಂಗಳೂರಿನಲ್ಲಿ ಅಗತ್ಯ ಮೂಲ ಸೌಕರ್ಯ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ರಾಜ್ಯ ಸರ್ಕಾರ ವಾರ್ಷಿಕ 8000 ಕೋಟಿ ರೂ. ಅನುದಾನ ನೀಡುತ್ತಿದೆ. ಯೋಜಿತ ರೀತಿಯಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಪರಿಷ್ಕೃತ ಮಹಾನಕ್ಷೆ 2031ರ ಕರಡು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಆಹ್ವಾನಿಸಲಾಗಿದೆ.
ಆದರೆ ಕೆಲವರು ಇದೇ ಅಂತಿಮ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಎಲ್ಲ ಆಕ್ಷೇಪಣೆಗಳು, ಸಲಹೆ ಪರಿಶೀಲಿಸಿಯೇ ಪರಿಷ್ಕೃತ ಮಹಾನಕ್ಷೆ ಅಂತಿಮಗೊಳ್ಳಲಿದೆ. ಎಲ್ಲ ಟೀಕೆ, ಸಲಹೆಗಳಿಗೂ ಸ್ವಾಗತ ಎಂದು ಹೇಳಿದರು. ಸ್ಮಾರ್ಟ್ ಸಿಟೀಸ್ ಇಂಡಿಯಾ ಫೌಂಡೇಶನ್ ಅಧ್ಯಕ್ಷರೂ ಆದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಎ.ರವೀಂದ್ರ, ಐಐಎಚ್‌ಎಸ್‌ನ ನಿರ್ದೇಶಕ ಡಾ.ಅರೋಮರ್ ರೆವಿ ಇತರರು ಉಪಸ್ಥಿತರಿದ್ದರು.
ನಗರಗಳು ಅಡ್ಡಾದಿಡ್ಡಿ ಬೆಳೆದಿವೆ!: “ದೇಶದ 4041 ನಗರ, ಪಟ್ಟಣಗಳ ಪೈಕಿ ನಾಲ್ಕನೇ ಮೂರರಷ್ಟು ನಗರಗಳಲ್ಲಿ ನಗರ ಯೋಜನೆ ವ್ಯವಸ್ಥೆಯಿದ್ದರೂ ಅವು ಯೋಜಿತವಲ್ಲದ, ಅಡ್ಡಾದಿಡ್ಡಿಯಾಗಿ ಬೆಳೆದಿರುವುದನ್ನು ಕಾಣಬಹುದು.
ನಗರವನ್ನು ಯೋಜಿತ ರೀತಿಯಲ್ಲಿ ಬೆಳೆಸಲು ಪೂರಕವಾದ ಮಾರ್ಗಸೂಚಿ ರೂಪಿಸಿ ಅನುಷ್ಠಾನಗೊಳಿಸುವುದು ನಗರ ಯೋಜನೆಯ ಪ್ರಮುಖ ಉದ್ದೇಶ. ಆದರೆ ಬಹುತೇಕ ಕಡೆ ನಗರ ಯೋಜನೆ ಭೂಮಿ ಬಳಕೆ ಕುರಿತಂತೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ,’ ಎಂದು ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದರು.
ದೆಹಲಿಯೂ ಹೊರತಲ್ಲ: “ನಗರ ಯೋಜಕರ ಮನಸ್ಥಿತಿ ಇನ್ನೂ ಎತ್ತಿನಗಾಡಿ ಹಂತದಲ್ಲೇ ಇದೆ. ಇದಕ್ಕೆ ನನ್ನ ಮೂಲ ಊರಾದ ದೆಹಲಿ ಕೂಡ ಹೊರತಲ್ಲ. ನಗರ ಯೋಜಕರು ಬದಲಾದ ಸನ್ನಿವೇಶಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸುವ ಮೂಲಕ ಯೋಜಿತ ಅಭಿವೃದ್ಧಿಗೆ ಗಮನಹರಿಸಬೇಕು,’ ಎಂದು ತಿಳಿಸಿದರು.
ರಾಜ್ಯದಲ್ಲಿ 1.2 ಕೋಟಿ ಮನೆ ನಿರ್ಮಾಣ ಗುರಿ: “2030ರ ವೇಳೆಗೆ 600 ದಶಲಕ್ಷ ಮಂದಿ ಅಂದರೆ, ದೇಶದ ಶೇ.40ರಷ್ಟು ಜನಸಂಖ್ಯೆ ನಗರ ಪ್ರದೇಶಗಳಲ್ಲಿ ನೆಲೆಯೂರುವ ನೀರಿಕ್ಷೆ ಇದೆ. ಹಾಗಾಗಿ ಆ ಹೊತ್ತಿಗೆ 700ರಿಂದ 900 ದಶಲಕ್ಷ ಚದರ ಮೀ.ನಷ್ಟು ವಾಣಿಜ್ಯ, ವಸತಿ ಪ್ರದೇಶ ನಿರ್ಮಿಸಬೇಕಾಗಬಹುದು.
ಕೇಂದ್ರ ಸರ್ಕಾರವೂ “ಎಲ್ಲರಿಗೂ ವಸತಿ’ ಯೋಜನೆ ಜಾರಿಗೊಳಿಸಿದ್ದು, 7457 ಕೋಟಿ ರೂ. ಅನುದಾನ ನೀಡುತ್ತಿದೆ. ಒಟ್ಟು 30.73 ಲಕ್ಷ ಮನೆ ನಿರ್ಮಾಣ ಗುರಿಯಿದ್ದು, ಈಗಾಗಲೇ 13.88 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಶುರುವಾಗಿದೆ. 3.93 ಲಕ್ಷ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ 2022ರ ವೇಳೆಗೆ 1.2 ಕೋಟಿ ಮನೆಗಳನ್ನು ನಿರ್ಮಿಸಿ ಹಂಚುವ ಗುರಿ ಹೊಂದಲಾಗಿದೆ,’ ಎಂದು ಕೇಂದ್ರ ಸಚಿವರು ತಿಳಿಸಿದರು.
ನಗರಕ್ಕೆ ಶರಾವತಿ ನೀರು: “ಬೆಂಗಳೂರಿಗೆ ಶರಾವತಿ ನದಿ ನೀರನ್ನು ಹರಿಸುವ ಚಿಂತನೆ ಇದೆ’ ಎಂದು ಸಚಿವ ಜಾರ್ಜ್ ಹೇಳಿದರು. “ಇದರೊಂದಿಗೆ ಎತ್ತಿನಹೊಳೆ ಯೋಜನೆಯಡಿ ಹೆಸರಘಟ್ಟ, ತಿಪ್ಪಗೊಂಡನಹಳ್ಳಿಗೆ ನೀರು ಹರಿಸುವ ಪ್ರಸ್ತಾವವೂ ಇದೆ. ನಗರದಲ್ಲಿ ಬಳಕೆಯಾಗುವ ನೀರಿನಲ್ಲಿ ಶೇ.80ರಷ್ಟು ಕೊಳಚೆ ನೀರಾಗಿ ಹರಿಯುತ್ತಿದ್ದು, ಇದನ್ನು ಸಂಸ್ಕರಿಸಿ ಕೆರೆಗಳಿಗೆ ಹರಿಸಿ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು,’ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.