2017ರ ಕನ್ನಡ ಚಿತ್ರರಂಗದ ವಾರ್ತೆಗಳು
Team Udayavani, Dec 15, 2017, 12:26 PM IST
ಈ ವರ್ಷದಲ್ಲಿ ಕನ್ನಡ ಚಿತ್ರರಂಗದಲ್ಲಿ ಏನೆಲ್ಲಾ ಆಯಿತು ಎಂದು ಅಷ್ಟು ಸುಲಭವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಚಿತ್ರರಂಗದ ಸಾಧನೆ, ವೇದನೆ, ಸಾವು, ನೋವು, ಗೆಲವು, ಹೆಗ್ಗಳಿಕೆಗಳು, ವಿವಾದಗಳು … ಇವೆಲ್ಲವನ್ನೂ ಹೇಳುವುದು ಅಷ್ಟು ಸುಲಭವಲ್ಲ. ಎಷ್ಟು ಹೇಳಿದರೂ ಅಷ್ಟು ಕಡಿಮೆಯೇ. ಏಕೆಂದರೆ, ಒಂದೊಂದು ವಿಷಯದ ಬಗ್ಗೆಯೂ ಒಂದೊಂದು ಲೇಖನವನ್ನೇ ಮಾಡಬಹುದು. ಈ ವರ್ಷದ ಆಗು-ಹೋಗುಗಳನ್ನು ಎಷ್ಟು ಕಡಿಮೆ ವಾಕ್ಯಗಳಲ್ಲಿ ಹೇಳುವುದಕ್ಕೆ ಸಾಧ್ಯವೋ, ಆ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಈ ಲೇಖನ ಯಾವುದೇ ಒಬ್ಬ ಕಲಾವಿದ ಅಥವಾ ತಂತ್ರಜ್ಞರ ಕುರಿತಾಗಲ್ಲ. ಒಟ್ಟಾರೆ ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಏನೆಲ್ಲಾ ಆಯಿತು ಎಂಬುದರ ಮುಖ್ಯಾಂಶಗಳು ಇಲ್ಲಿವೆ. ಮೊದಲೇ ಹೇಳಿದಂತೆ ಸಾಕಷ್ಟು ವಿಚಾರಗಳು ಇರುವುದರಿಂದ, ಸುಧೀರ್ಘ ವಾರ್ತೆಗಳನ್ನು ಪಕ್ಕಕ್ಕಿಟ್ಟು ಕೇವಲ ಮುಖ್ಯಾಂಶಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ. ಈ ಮೂಲಕ ಎಲ್ಲಾ ವಿಷಯಗಳ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ರಕ್ಷಿತ್ ಸಿನಿಮಾ “ಪಾರ್ಟಿ’
2017ರ ವರ್ಷ ಪ್ರಾರಂಭವಾಗಿದ್ದು “ಶ್ರೀಕಂಠ’ ಮತ್ತು “ಪುಷ್ಪಕ ವಿಮಾನ’ ಎಂಬ ಎರಡು ದೊಡ್ಡ ಚಿತ್ರಗಳ ಬಿಡುಗಡೆಯ ಮೂಲಕ. ಆದರೆ, ಎರಡೂ ನಿರೀಕ್ಷಿತ ಚಿತ್ರಗಳು ಅಷ್ಟೇನೂ ಸುದ್ದಿ ಮಾಡಲಿಲ್ಲ. ಅದಕ್ಕೆ ಸರಿಯಾಗಿ, ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ “ಕಿರಿಕ್ ಪಾರ್ಟಿ’ಯ ಯಶಸ್ಸು ಈ ವರ್ಷಕ್ಕೆ ಕ್ಯಾರಿ ಫಾರ್ವರ್ಡ್ ಆಯಿತು. ಈ ಚಿತ್ರ ಬರೀ ಯಶಸ್ವಿ ಪ್ರದರ್ಶನವನ್ನು ಕಂಡಿದ್ದಷ್ಟೇ ಅಲ್ಲ, 50 ಕೋಟಿಯಷ್ಟು ಗಳಿಸಿತು. ಈ ಚಿತ್ರದ ಯಶಸ್ಸಿನಿಂದ ಉತ್ತೇಜಿತರಾದ ರಕ್ಷಿತ್ ಶೆಟ್ಟಿ, ಈ ವರ್ಷ ಸಾಲು ಸಾಲು ಚಿತ್ರಗಳನ್ನು ಶುರು ಮಾಡಿದರು. ಪ್ರಮುಖವಾಗಿ ಪುಷ್ಕರ್ ಮಲ್ಲಿಕಾರ್ಜುನ ಜೊತೆಗೆ ಸೇರಿಕೊಂಡು “ಹಂಬಲ್ ಪೊಲಿಟೀಶಿಯನ್ ನೋಗರಾಜ್’, “ಭೀಮಸೇನ ನಳಮಹರಾಜ’ ಮತ್ತು “ಕಥೆಯೊಂದು ಶುರುವಾಗಿದೆ’ ಚಿತ್ರಗಳನ್ನು ಶುರು ಮಾಡಿದರು. ಇವೆಲ್ಲಾ ಪುಷ್ಕರ್ ಜೊತೆಗೆ ಸೇರಿ ನಿರ್ಮಿಸುತ್ತಿರುವ ಚಿತ್ರಗಳಾದರೆ, “777 ಚಾರ್ಲಿ’ ಎಂಬ ಚಿತ್ರವನ್ನು ಸ್ವತಂತ್ರವಾಗಿ ನಿರ್ಮಿಸುತ್ತಿದ್ದಾರೆ. ಇದಲ್ಲದೆ “ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಪ್ರಕಾಶ್ ಮತ್ತು ಪುಷ್ಕರ್ ಜೊತೆಗೆ ಸೇರಿ ನಿರ್ಮಿಸುತ್ತಿದ್ದಾರೆ.
ಸಂಭವಿಸಿದ ಸಾವು-ನೋವು
ಈ ವರ್ಷ ಸಹ ಚಿತ್ರರಂಗ ಸಾಕಷ್ಟು ಸಾವು-ನೋವುಗಳನ್ನು ನೋಡಿದೆ. ಪ್ರಮುಖವಾಗಿ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್, ಕಲಾವಿದರಾದ ಸುದರ್ಶನ್, ಬಿ.ವಿ. ರಾಧಾ, ಧ್ರುವ ಶರ್ಮ, ಕಾಶಿ, ನಿರ್ದೇಶಕರಾದ ಆನಂದ್, ಪೂರ್ಣಿಮಾ ಮೋಹನ್, ಗಾಯಕ-ಸಂಗೀತ ನಿರ್ದೇಶಕ ಎಲ್.ಎನ್ ಶಾಸ್ತ್ರಿ ಮುಂತಾದವರು ಈ ವರ್ಷ ಅಸುನೀಗಿದರೆ, ಅನಾರೋಗ್ಯದ ಕಾರಣ ಹಿರಿಯ ನಟ ಸತ್ಯಜಿತ್ ಅವರು ಕಾಲು ಕಳೆದುಕೊಳ್ಳಬೇಕಾಯಿತು. ಇನ್ನು “ಕೆಂಪೇಗೌಡ 2′ ಚಿತ್ರೀಕರಣ ವೇಳೆ ಅಪಘಾತ ಸಂಭವಿಸಿ ಕೋಮಲ್ ಮತ್ತು ಯೋಗಿ ಗಾಯಗೊಂಡಿದ್ದರು.
ನಿರ್ಮಾಣದ ಪರ್ವ
ನಟರು ಸ್ವಂತ ಬ್ಯಾನರ್ ಪ್ರಾರಂಭಿಸಿ, ಅದರಡಿ ಚಿತ್ರ ನಿರ್ಮಿಸುವುದು ಹೊಸದೇನಲ್ಲ. ಈ ವರ್ಷ ಆ ಪಟ್ಟಿಗೆ ಇನ್ನಷ್ಟು ಜನ ಸೇರಿದ್ದಾರೆ. ಪ್ರಮುಖವಾಗಿ ಪುನೀತ್ ರಾಜಕುಮಾರ್ ಅವರು ಪಿಆರ್‌ಕೆ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ “ಕವಲು ದಾರಿ’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದರ ಹಿಂದೆಯೇ ಪಿಆರ್‌ಕೆ ಆಡಿಯೋ ಎಂಬ ಆಡಿಯೋ ಸಂಸ್ಥೆಯನ್ನು ಪ್ರಾರಂಭಿಸಿರುವ ಅವರು ಅದರಡಿ “ಅಂಜನಿಪುತ್ರ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಅವರ ಹಿಂದೆಯೇ ಶಿವರಾಜಕುಮಾರ್ ಸಹ ಮುತ್ತು ಸಿನಿ ಸರ್ವೀಸಸ್ ಸಂಸ್ಥೆಯಡಿ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಉದಯ ಟಿವಿಗಾಗಿ “ಮಾನಸ ಸರೋವರ’ ಎಂಬ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ “ಮಾನಸ ಸರೋವರ’ದಲ್ಲಿ ನಟಿಸಿದ್ದ ಶ್ರೀನಾಥ್, ಪದ್ಮಾವಾಸಂತಿ ಮತ್ತು ರಾಮಕೃಷ್ಣ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿರುವುದು ವಿಶೇಷ. ನಿರ್ದೇಶಕ ಶಶಾಂಕ್ ಸಹ ಶಶಾಂಕ್ ಸಿನಿಮಾಸ್ ಎಂಬ ಸಂಸ್ಥೆಯನ್ನು ಶುರು ಮಾಡಿದ್ದು, ಅದರಲ್ಲಿ ಮೂರು ಚಿತ್ರಗಳನ್ನು ನಿರ್ಮಿ ಸುವುದಾಗಿ ಘೋಷಿಸಿದ್ದಾರೆ. ಮೊದಲ ಹಂತವಾಗಿ ಅಜೇಯ್ ರಾವ್ ಅಭಿನಯದ “ತಾಯಿಗೆ ತಕ್ಕ ಮಗ’ ಎಂಬ ಚಿತ್ರ ಇತ್ತೀಚೆಗಷ್ಟೇ ಪ್ರಾರಂಭವಾಗಿದೆ. ಪೂಜಾ ಗಾಂಧಿ, ಎಂಟರ್‌ಟೈನ್‌ಮೆಂಟ್ ಫ್ಯಾಕ್ಟರಿ ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ ಒಂದೇ ವೇದಿಕೆಯಲ್ಲಿ 3 ಚಿತ್ರಗಳ ಚಿತ್ರೀಕರಣ ಪ್ರಾರಂಭಿಸಿದರು. ಅನೀಶ್ ತೇಜೇಶ್ವರ್ ಅವರು ವಿಂಕ್‌ವಿಸಲ್ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಹುಟ್ಟುಹಾಕಿ ಅದರಡಿ “ವಾಸು – ಪಕ್ಕಾ ಲೋಕಲ್’ ಎಂಬ ಚಿತ್ರ ಪ್ರಾರಂಭಿಸಿದರೆ, ರಕ್ಷಿತ್ ಶೆಟ್ಟಿ ಸ್ಟುಡಿಯೋ ಮತ್ತು ಔಟ್ ಡೋರ್ ಯೂನಿಟ್ ಪ್ರಾರಂಭಿಸಿದ್ದು, ಇದರ ಜೊತೆಗೆ ವಿತರಣಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.
ಮದುವೆ-ನಿಶ್ಚಿತಾರ್ಥ
ಈ ವರ್ಷ ಕನ್ನಡದ ಹಲವು ನಟ, ನಟಿ, ತಂತ್ರಜ್ಞರಿಗೆ ಕಂಕಣಬಲ ಕೂಡಿ ಬಂದಿದೆ. ಬಹುಶಃ 2017ರಲ್ಲಿ ಕನ್ನಡ ಚಿತ್ರರಂಗದಲ್ಲಾದ ಮದುವೆ ಮತ್ತು ನಿಶ್ಚಿತಾರ್ಥಗಳು ಈ ಹಿಂದೆ ಯಾವ ವರ್ಷವೂ ನಡೆದಿಲ್ಲ ಎನ್ನುವುದು ಸತ್ಯ. ಅಮೂಲ್ಯ, ಯೋಗಿ, ರಮ್ಯಾ ಬಾರ್ನಾ, ಸಿಂಧು ಲೋಕನಾಥ್, ಪ್ರಿಯಾಮಣಿ, ದೀಪಿಕಾ ಕಾಮಯ್ಯ, ನಿಧಿ ಸುಬ್ಬಯ್ಯ, ರಿಷಭ್ ಶೆಟ್ಟಿ, ಸುನಿ, ಪಿ.ಸಿ.ಶೇಖರ್ ಇತರರು ಹಸಮಣೆ ಏರಿದರೆ, ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, ಚಿರಂಜೀವಿ ಸರ್ಜಾ ಮತ್ತು ಮೇಘನಾ, ಪವನ್ ಒಡೆಯರ್ ಮತ್ತು ಅಪೇಕ್ಷಾ, ಸಂತೋಷ್ ಆನಂದರಾಮ್ ಮತ್ತು ಸುರಭಿ, ತನುಷ್ ಮತ್ತು ಇಂಚರ ನಿಶ್ಚಿತಾರ್ಥ ಈ ವರ್ಷ ನಡೆದಿದೆ.
ವಿನಾಕಾರಣ ಗದ್ದಲ, ಗಲಾಟೆ
ಎಂದಿನಂತೆ ಈ ವರ್ಷ ಸಹ ಸಾಕಷ್ಟು ವಾದ-ವಿವಾದಗಳಾಗಿವೆ. ಪ್ರಮುಖವಾಗಿ ಈ ವರ್ಷ ಸಿಕ್ಕಾಪಟ್ಟೆ ಸುದ್ದಿ ಮಾಡಿದವರ ಪಟ್ಟಿಗೆ ವೆಂಕಟ್, ಪ್ರಥಮ್, ಸಂಯುಕ್ತಾ ಹೆಗ್ಡೆ, ಆವಂತಿಕಾ ಶೆಟ್ಟಿ, ಸಂಜನಾ ಮುಂತಾದವರನ್ನು ಹೆಸರಿಸಬಹುದು. ತಮ್ಮ “ಪೊರ್ಕಿ ಹುಚ್ಚ ವೆಂಕಟ್’ ಚಿತ್ರವನ್ನು ಮಾಧ್ಯಮದವರು ನೋಡಲಿಲ್ಲ ಮತ್ತು ಚೆನ್ನಾಗಿ ಬರೆಯಲಿಲ್ಲ ಎಂದು ದೊಡ್ಡ ಗಲಾಟೆ ಮಾಡಿದ್ದ ವೆಂಕಟ್, ಪ್ರೀತಿಯ ವಿಷಯವಾಗಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದರು. ಪ್ರಥಮ್ ಸಹ ಫೇಸ್‌ಬುಕ್‌ನಲ್ಲಿ ಆತ್ಮಹತ್ಯೆ ಪ್ರಹಸನ ಮಾಡುವುದರ ಜೊತೆಗೆ ಭುವನ್ ಕಾಲು ಕಚ್ಚಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದರು. ಪರಭಾಷಾ ಚಿತ್ರವೊಂದರಲ್ಲಿ ಅವಕಾಶ ಸಿಕ್ಕ ಕಾರಣಕ್ಕೆ ಕನ್ನಡ ಚಿತ್ರಗಳನ್ನು ಬಿಟ್ಟಿದ್ದಕ್ಕೆ ಟೀಕೆ ವ್ಯಕ್ತವಾಯಿತು. ಇನ್ನು ವರ್ಷದ ಕೊನೆಗೆ ಸಂಯುಕ್ತಾ ಅವರ ಬೇಜವಾಬ್ದಾರಿ ವರ್ತನೆಯಿಂದ ಬೇಸತ್ತು “ಕಾಲೇಜ್ ಕುಮಾರ್’ ನಿರ್ಮಾಪಕ ಪದ್ಮನಾಭ್ ತಮ್ಮ ಅಳಲು ತೋಡಿಕೊಂಡರು. ಇನ್ನು ಆವಂತಿಕಾ ಶೆಟ್ಟಿಯ ವರ್ತನೆ ಕುರಿತು “ರಾಜು ಕನ್ನಡ ಮೀಡಿಯಂ’ ನಿರ್ಮಾಪಕ ಸುರೇಶ್ ಬೇಸರಿಸಿಕೊಂಡಿದ್ದರು. ಸುರೇಶ್ ಮತ್ತು ಆವಂತಿಕಾ ಅವರ ಜಗಳ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರೆಗೂ ಹೋಗಿ, ಬಗೆಹರಿದಿತ್ತು. ವಾಣಿಜ್ಯ ಮಂಡಳಿಗೆ ಹೋಗಿ ಚರ್ಚೆಯಾದ ಇನ್ನಿತರ ಪ್ರಮುಖ ಪ್ರಕರಣಗಳಲ್ಲಿ “ಎರಡನೇ ಸಲ’ ನಿರ್ದೇಶಕ ಗುರುಪ್ರಸಾದ್ ಮತ್ತು ನಿರ್ಮಾಪಕ ಯೋಗೀಶ್ ನಾರಾಯಣ್ ಅವರ ನಡುವಿನ ಜಗಳ ಸಹ ಒಂದು. “ದನ ಕಾಯೋನು’ ಚಿತ್ರದ ಸಂಭಾವನೆ ಸಂದಾಯವಾಗಿಲ್ಲ ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಯೋಗರಾಜ್ ಭಟ್ ಅವರು ಮಂಡಳಿ ಮೆಟ್ಟಿಲೇರಿದ್ದರು. ಮಂಡಳಿಯ ಮಾತಿಗೆ ಬಗ್ಗದ ಕನಕಪುರ ಶ್ರೀನಿವಾಸ್ ವಿರುದ್ಧ ಭಟ್ ಕೊನೆಗೆ ನ್ಯಾಯಾಲಯದ ಮೊರೆ ಹೊಕ್ಕರು. “ದಂಡುಪಾಳ್ಯ 2′ ಚಿತ್ರದ ಪ್ರಚಾರದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಸಂಜನಾ ಬೇಸರಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಸಂಜನಾಗೆ ಅಭದ್ರತೆ ಕಾಡುತ್ತಿದೆ ಎಂದು ಪೂಜಾ ದೂರಿದ್ದರು. ಎಲ್ಲವೂ ಬಗೆಹರಿಯಿತು ಎನ್ನುವಷ್ಟರಲ್ಲಿ ಅದೇ ಚಿತ್ರದಲ್ಲಿ ಸಂಜನಾ ಅವರನ್ನು ಬೆತ್ತಲಾಗಿ ತೋರಿಸಲಾಗಿದೆ ಎಂದು ದೊಡ್ಡ ವಿವಾದವಾಗಿತ್ತು. ಆ ಸಂದರ್ಭದಲ್ಲಿ ಸಂಜನಾ, ತಾವು ಬೆತ್ತಲಾಗಿಲ್ಲ ಎಂದು ಸಾಬೀತುಪಡಿಸಲು ಪೂರಕವಾದ ಸಾಕ್ಷಿ ಕೊಡುವಲ್ಲಿಗೆ ಪ್ರಕರಣ ಮುಗಿಯಿತು.
ಮಲ್ಟಿಸ್ಟಾರ್ ಚಿತ್ರ
ಈ ವರ್ಷ ಹಲವು ಮಲ್ಟಿ ಸ್ಟಾರರ್ ಚಿತ್ರಗಳು ಬಿಡುಗಡೆಯಾದವು. “ಶ್ರೀಕಂಠ’, “ಚೌಕ’, “ಚಕ್ರವರ್ತಿ’, “ಮಾಸ್ ಲೀಡರ್’, “ಹ್ಯಾಪಿ ನ್ಯೂ ಇಯರ್’, “ಮಫ್ತಿ’ ಮುಂತಾದ ಚಿತ್ರಗಳು ಬಿಡುಗಡೆಯಾದರೆ, “ದಿ ವಿಲನ್’, “ಕುರುಕ್ಷೇತ್ರ’, “ಲೈಫ್ ಜೊತೆಗೊಂದ್ ಸೆಲ್ಫಿ’ ಮುಂತಾದ ಚಿತ್ರಗಳು ಶುರುವಾದವು.
ವಿವಾದಗಳ ಸುಳಿಯಲ್ಲಿ…
ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಕೇಳಿ ಬಂದ ಎರಡು ಪ್ರಮುಖ ವಿಷಯಗಳೆಂದರೆ ಅದು, ಸೆನ್ಸಾರ್ ಮತ್ತು ಬುಕ್ ಮೈ ಶೋ ಕುರಿತದ್ದಾಗಿತ್ತು. ಸೆನ್ಸಾರ್ ಮಂಡಳಿಯಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಯಾಗಿರುವುದರಿಂದ, ಸೆನ್ಸಾರ್ ಪ್ರಕ್ರಿಯೆಗೆ ಸಾಕಷ್ಟು ಸಮಯ ಹಿಡಿಯುತ್ತಿರುವುದು ನಿರ್ಮಾಪಕರ ಬೇಸರಕ್ಕೆ ಒಂದು ಕಾರಣವಾದರೆ, ಸೆನ್ಸಾರ್ ಮಂಡಳಿಯವರು ವಿಪರೀತ ಕಟ್‌ಗಳನ್ನು ಕೊಡುವುದು ಮತ್ತು “ಎ’ ಪ್ರಮಾಣ ಪತ್ರ ಕೊಡುವುದರ ಕುರಿತಾಗಿಯೂ ಸಾಕಷ್ಟು ಗದ್ದಲಗಳು ಎದ್ದವು. ಈ ಕುರಿತು ಹಲವು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ ಪರಿಣಾಮ, ಮಂಡಳಿಗೆ ಸೆನ್ಸಾರ್ ಅಧಿಕಾರಿಗಳನ್ನು ಕರೆಸಿ ಮಾತುಕಥೆ ನಡೆಸಲಾಯಿತು. ಈಗ ಸೆನ್ಸಾರ್‌ನ ಆನ್‌ಲೈನ್ ಪ್ರಕ್ರಿಯೆಗೆ ಕ್ರಮೇಣ ಕನ್ನಡ ಚಿತ್ರರಂಗ ಹೊಂದುಕೊಳ್ಳುತ್ತಿರುವ ಕಾರಣ, ಗದ್ದಲ ಕಡಿಮೆಯಾಗಿದೆ. ಇನ್ನು ಬುಕ್ ಮೈ ಶೋದವರು ಕನ್ನಡ ಚಿತ್ರಗಳಿಗೆ ಕಡಿಮೆ ರೇಟಿಂಗ್ ನೀಡುತ್ತಾರೆ, ಜಾಹೀರಾತು ನೀಡದಿದ್ದರೆ ಅಪಪ್ರಚಾರ ಮಾಡುತ್ತಾರೆ ಮತ್ತು ಇದರಿಂದ ನಿರ್ಮಾಪಕರಿಗೆ ಯಾವುದೇ ರೀತಿಯ ಲಾಭವಿಲ್ಲ ಎಂದು ಕೆಲವು ನಿರ್ಮಾಪಕರು ದೂರುವುದರ ಜೊತೆಗೆ, ಕನ್ನಡ ಚಿತ್ರಗಳ ಬುಕ್ಕಿಂಗ್‌ಗೆಂದೇ ಒಂದು ಆ್ಯಪ್‌ನ ಅವಶ್ಯಕತೆ ಇದೆ ಎಂದು ಹೇಳಿದ್ದರು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಹೊಸ ಆ್ಯಪ್ ಪ್ರಾರಂಭಿಸುವುದಾಗಿ ಹೇಳಿದ್ದರೂ, ಇದುವರೆಗೂ ಹೊಸ ಆ್ಯಪ್ ಬಿಡುಗಡೆಯಾಗಿಲ್ಲ.
ಗಡ್ಡಪ್ಪ, ಸೆಂಚುರಿ ಗೌಡ ಫುಲ್ ಬ್ಯಾಟಿಂಗ್
ಈ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಕಲಾವಿದರೆಂದರೆ ಅದು “ತಿಥಿ’ ಖ್ಯಾತಿಯ ಸೆಂಚ್ಯುರಿ ಗೌಡ ಮತ್ತು ಗಡ್ಡಪ್ಪ. 2016ರಲ್ಲಿ “ತಿಥಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಕಸ್ಮಾತ್ ಎಂಟ್ರಿ ಕೊಟ್ಟ ಅವರಿಬ್ಬರು, ನಂತರದ ದಿನಗಳಲ್ಲಿ ಅತೀ ಬೇಡಿಕೆಯ ಕಲಾವಿದರಾಗಿ ಹೊರಹೊಮ್ಮಿದ್ದು ವಿಶೇಷ. ಇಬ್ಬರೂ ಸಹ ಅಷ್ಟೊಂದು ಚಿತ್ರಗಳಲ್ಲಿ ನಟಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ಆ ಊಹೆಯನ್ನು ಸುಳ್ಳು ಮಾಡಿ ಅವರು ಈ ವರ್ಷ ಹಲವು ಚಿತ್ರಗಳಲ್ಲಿ ನಟಿಸಿದರು ಮತ್ತು ಅವರು ನಟಿಸಿದ ಹಲವು ಚಿತ್ರಗಳು ಬಿಡುಗಡೆಯಾದವು. ಜನವರಿಯಲ್ಲಿ ಬಿಡುಗಡೆಯಾದ “ಏನ್ ನಿನ್ ಪ್ರಾಬ್ಲಿಮ್ಮು’ ಚಿತ್ರದಿಂದ ಶುರುವಾದ ಅವರ ಈ ವರ್ಷದ ಜರ್ನಿ, ನಂತರ “ಪಂಟ’, “ಹಳ್ಳಿ ಪಂಚಾಯ್ತಿ’, “ತಾತನ್ ತಿಥಿ ಮೊಮ್ಮಗನ್ ಪ್ರಸ್ಥ’, “ಹಾಲು ತುಪ್ಪ’, “ನನ್ ಮಗಳೇ ಹೀರೋಯಿನ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ದೆವ್ವ ಗುಮ್ಮ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾರರ್ ಚಿತ್ರಗಳ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಈ ಹಿಂದಿನ ಎರಡೂರು ವರ್ಷಗಳನ್ನು ನೋಡಿದರೆ, ದೆವ್ವ ಮತ್ತು ಆತ್ಮಗಳ ಚಿತ್ರಗಳ ಟ್ರೆಂಡ್ ದೊಡ್ಡ ಮಟ್ಟಿಗೆ ಇತ್ತು. ಆದರೆ, ಈ ವರ್ಷ ಆ ಸಂಖ್ಯೆಯಲ್ಲಿ ಕಡಿಮಯಾಗಿರುವುದನ್ನು ಗಮನಿಸಬಹುದು. ಸಂಚಾರಿ ವಿಜಯ್ ಒಳ್ಳೆಯ ದೆವ್ವವಾಗಿ ಕಾಣಿಸಿಕೊಂಡ “ರಿಕ್ತ’ ಈ ವರ್ಷದ ಮೊದಲ ದೆವ್ವದ ಚಿತ್ರ ಎನ್ನಬಹುದು. ಆ ನಂತರ “ಕರಾಲಿ’, “ಆಕೆ’, “ಕಥಾ ವಿಚಿತ್ರ’, “ಶ್ವೇತಾ’, “ಗಾಯತ್ರಿ’, “ನಂ. 9 ಹಿಲ್ಟನ್ ಹೌಸ್’, “ವುಮೆನ್ಸ್ ಡೇ’ ಮುಂತಾದ ಚಿತ್ರಗಳನ್ನು ಹೆಸರಿಸಬಹುದು. “ಉಪೇಂದ್ರ ಮತ್ತೆ ಬಾ’ ಚಿತ್ರದಲ್ಲೂ ಆತ್ಮದ ಕಥೆ ಇದೆ. ಆದರೆ, ಅದು ಹಾರರ್ ಅಲ್ಲ ಅಥವಾ ಚಿತ್ರ ಭಯಪಡಿಸುವುದಿಲ್ಲ ಎನ್ನುವುದು ವಿಶೇಷ.
ಸ್ಟಾರ್ ಮಕ್ಕಳ ಆಗಮನ
ಪ್ರತಿ ವರ್ಷ ಒಬ್ಬರಲ್ಲ ಒಬ್ಬರು ನಟರು ಅಥವಾ ತಂತ್ರಜ್ಞರ ಮಕ್ಕಳು ಚಿತ್ರರಂಗಕ್ಕೆ ಬರುವುದು ವಾಡಿಕೆ. ಈ ವರ್ಷ ಆ ಪಟ್ಟಿಯಲ್ಲಿ ಪ್ರಮುಖರೆಂದರೆ ರವಿಚಂದ್ರನ್ ಅವರ ಪುತ್ರ ಮನೋರಂಜ್. ಕೆಲವು ವರ್ಷಗಳ ಹಿಂದೆಯೇ “ರಣಧೀರ – ಪ್ರೇಮಲೋಕದಲ್ಲಿ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮನು ಎಂಟ್ರಿ ಕೊಟ್ಟರೂ, ಕಾರಣಾಂತರಗಳಿಂದ ಆ ಚಿತ್ರ ಮುಂದುವರೆಯಲಿಲ್ಲ. ಈ ವರ್ಷ “ಸಾಹೇಬ’ ಚಿತ್ರದ ಮೂಲಕ ಕೊನೆಗೂ ಮನೋರಂಜನ್ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಅವರ ತಮ್ಮ ವಿಕ್ರಮ್ ಸಹ ನಾಯಕನಟನಾಗಿ ನಟಿಸುತ್ತಿದ್ದು, “ನವೆಂಬರ್‌ನಲ್ಲಿ ನಾನು ಅವಳು’ ಎಂಬ ಚಿತ್ರದ ಮೂಲಕ ಇಷ್ಟರಲ್ಲಾಗಲೇ ಹೀರೋ ಆಗಬೇಕಿತ್ತು. ಕಳೆದ ತಿಂಗಳೇ ಈ ಚಿತ್ರ ಶುರುವಾಗಬೇಕಿತ್ತಾದರೂ, ಇನ್ನೂ ಶುರುವಾಗಿಲ್ಲ. ಸದ್ಯಕ್ಕೆ ಚಿತ್ರದ ಟೀಸರ್ ಅಷ್ಟೇ ಬಿಡುಗಡೆಯಾಗಿದೆ. ಇನ್ನು “ಹ್ಯಾಪಿ ನ್ಯೂ ಇಯರ್’ ಚಿತ್ರದ ಮೂಲಕ ಬಿ.ಸಿ. ಪಾಟೀಲ್ ಅವರ ಮಗಳು ಸೃಷ್ಠಿ ಪಾಟೀಲ್ ನಟಿಯಾಗಿ ಗುರುತಿಸಿಕೊಂಡರು. ವಿನಯಾ ಪ್ರಸಾದ್ ಅವರ ಮಗಳು ಪ್ರಥಮ “ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ’ ಚಿತ್ರದ ಮೂಲಕ ಬಣ್ಣ ಹಚ್ಚಿದರು. ಸಾಧು ಕೋಕಿಲ ಮಗ ಸುರಾಗ್ “ಅತಿರಥ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡರೆ, “ಮಾನಸ ಸರೋವರ’ ಎಂಬ ಧಾರಾವಾಹಿಯ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ಶಿವರಾಜಕುಮಾರ್ ಅವರ ಮಗಳು ನಿವೇದಿತಾ ಎಂಟ್ರಿ ಕೊಟ್ಟಿದ್ದಾರೆ.
ಡಬ್ಬಿಂಗ್ ಸದ್ದು…
ಈ ವರ್ಷ ರೀಮೇಕ್ ಚಿತ್ರಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದರೆ ತಪ್ಪಿಲ್ಲ. ಮುಂಚೆಲ್ಲಾ ಬಿಡುಗಡೆಯ ಚಿತ್ರಗಳಲ್ಲಿ ದೊಡ್ಡ ಪಾಲನ್ನು ರೀಮೇಕ್ ಚಿತ್ರಗಳು ಪಡೆಯುತ್ತಿದ್ದ ಒಂದು ಕಾಲವಿತ್ತು. ಆದರೆ, ಈ ಬಾರಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆಯಲ್ಲಿ ಶೇ 10ರಷ್ಟು ರೀಮೇಕ್ ಚಿತ್ರಗಳಿಲ್ಲ ಎನ್ನುವುದು ವಿಶೇಷ. ಹಾಗೆ ಬಿಡುಗಡೆಯಾದ ರೀಮೇಕ್‌ಗಳ ಪೈಕಿ ಯಾವೊಂದು ಚಿತ್ರವೂ ಯಶಸ್ವಿಯಾಗಿಲ್ಲ. ಹೀಗಿರುವಾಗಲೇ, ಈ ವರ್ಷ ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆದ ಕೆಲವು ಚಿತ್ರಗಳು ಬಿಡುಗಡೆಯಾಗಿವೆ. ತಮಿಳಿನ ಅಜಿತ್ ಅಭಿನಯದ “ಎನ್ನೈ ಅರಿಂದನಾಲ್’ ಕನ್ನಡದಲ್ಲಿ “ಸತ್ಯದೇವ್ ಐಪಿಎಸ್’ ಆಗಿ ಬಿಡುಗಡೆಯಾಯಿತು. ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳಾದವು. ಚಿತ್ರ ಅಷ್ಟೇನೂ ಸುದ್ದಿ ಮಾಡದೆ ಮಾಯವಾಯಿತು. ಅದಾದ ಮೇಲೆ “ಸ್ಪೈಡರ್‌ಮ್ಯಾನ್’ ಕನ್ನಡಕ್ಕೆ ಡಬ್ ಆಗುತ್ತದೆ ಎಂಬ ಸುದ್ದಿಯಾಗಿತ್ತು. ಚಿತ್ರದ ಕನ್ನಡ ಟ್ರೇಲರ್ ಬಂದರೂ, ಡಬ್ ಆದ ಚಿತ್ರ ಬರಲಿಲ್ಲ. ಅದಾದ ನಂತರ ಅಜಿತ್ ಅಭಿನಯದ “ಆರಂಭಂ’ ಚಿತ್ರವು “ಧೀರ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಡಬ್ ಆಗಿ, ಕೆಲವು ತಿಂಗಳ ಹಿಂದೆ ಬೆಂಗಳೂರಿನ ಹೊಸಕೆರೆಹಳ್ಳಿಯ ಕೋಕಿಲ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಕಳೆದ ವಾರ ಹಾಲಿವುಡ್‌ನ “ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8′ ಚಿತ್ರವು “ವೇಗ ಮತ್ತು ಉದ್ವೇಗ’ ಹೆಸರಿನಲ್ಲಿ ಡಬ್ ಆಗಿ ಹುಬ್ಬಳ್ಳಿಯ ರೂಪಂ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿವೆ. “ಧೀರ’ ಮತ್ತು “ವೇಗ ಮತ್ತು ಉದ್ವೇಗ’ ಚಿತ್ರಗಳು ಬಿಡುಗಡೆಯೇನೋ ಆದವು. ಆದರೆ, ಆ ಚಿತ್ರಗಳನ್ನು ನೋಡವ ಪ್ರೇಕ್ಷಕರೇ ಇಲ್ಲದಂತಾಗಿದೆ.
ಲೇಟ್ ಸಿನಿಮಾ…
ಯಾವಾಗಲೋ ಪ್ರಾರಂಭವಾದ ಹಲವು ಚಿತ್ರಗಳು, ಈ ವರ್ಷ ಬಿಡುಗಡೆಯಾಗುವ ಮೂಲಕ ಮುಕ್ತಿ ಕಂಡಿವೆ. ಜಗನ್ ಅಭಿನಯದ “ಆಡೂ ಆಟ ಆಡೂ’, ಪ್ರಿಯಾ ಹಾಸನ್ ನಿರ್ದೇಶನದ “ಸ್ಮಗ್ಲರ್’, “ಸೌಂದರ್ಯ ನಿಲಯ’, ದಯಾಳ್ ನಿರ್ದೇಶದ “ಟಾಸ್, ಶುಭಾ ಪೂಂಜ ಮತ್ತು ರಘು ಮುಖರ್ಜಿ ಅಭಿನಯದ “ಮೀನಾಕ್ಷಿ’, “ಪಾರು ಐ ಲವ್ ಯು’, ಅಜೇಯ್ ರಾವ್ ಅಭಿನಯದ “ಕೃಷ್ಣ ಸನ್ ಆಫ್ ಸಿಎಂ’, “ಸಿತಾರ’, “ಜಾಲಿ ಬಾರು ಪೋಲಿ ಗೆಳೆಯರು’, “ಅನ್ವೇಷಿ’ ಮುಂತಾದ ಚಿತ್ರಗಳು ಬಿಡುಗಡೆಯಾದವು.
ಹೊಸಬರ ದರ್ಬಾರ್
ಈ ವರ್ಷ ಬಿಡುಗಡೆಯಾದ 190 ಪ್ಲಸ್ ಚಿತ್ರಗಳಲ್ಲಿ ಅದೆಷ್ಟು ಹೊಸಬರ ತಂಡಗಳು ಮಾಡಿರುವ ಚಿತ್ರಗಳು ಬಿಡುಗಡೆಯಾದವೋ ನಿಖರವಾಗಿ ಲೆಕ್ಕ ಹೇಳುವುದು ಕಷ್ಟ. “ಹಾಯ್’, “ಜಲ್ಸ’, “ರಶ್’, “ಸ್ಟೈಲ್ ರಾಜ’, “ಬಣ್ಣದ ನೆರಳು’, “ಕಾಲು ಕೇಜಿ ಪ್ರೀತಿ’, “ಅಜರಾಮರ’, “ಇಂಜಿನಿಯರ್’, “ಆಯನ’, “ಪಾರ್ಟ್ 2′, “ಪೋಕಿರಿ ರಾಜ’, “ಈ ಕಲರವ’, “ಲೈಫ್ 360′, “ಚಿತ್ತ ಚಂಚಲ’, “ಸ್ಟೂಡೆಂಟ್ಸ್’, “ಒಂದು ಮೊಟ್ಟೆಯ ಕಥೆ’, “ಹೊಂಬಣ್ಣ’, “ಆ ಎರಡು ವರ್ಷಗಳು’, “ಪರಚಂಡಿ’, “ಢಮ್ಕಿ ಢಮಾರ್’, “ಮೋಜೋ’, “ಬಿಕೋ’, “ಜಯಸೂರ್ಯ’, “ಅಸೂಚಭೂ’, “ಕಾವೇರಿ ತೀರದ ಚರಿತ್ರೆ’, “ಮಹಾನುಭಾವರು’, “ಅರ್ಧ ತಿಕ್ಲು ಪುಕ್ಲು’, “ಮಂತ್ರಂ’, “ನಮ್ಮೂರಲ್ಲಿ’ ಮುಂತಾದ ಚಿತ್ರಗಳಲ್ಲಿ ಕಲಾವಿದರು ಮತ್ತು ತಂತ್ರಜ್ಞರೂ ಸೇರಿದಂತೆ ಬಹುತೇಕ ಹೊಸಬರೇ ತುಂಬಿ ದ್ದಾರೆ.
ಫಾರಿನ್ ಶೂಟಿಂಗ್ ಕಮ್ಮಿ
ಫಾರಿನ್‌ನಲ್ಲಿ ಚಿತ್ರೀಕರಣ ಮಾಡುವುದು ಇತ್ತೀಚೆಗೆ ಫ್ಯಾಶನ್ ಆಗಿಬಿಟ್ಟಿತ್ತು. ಆದರೆ, ಈ ವರ್ಷ ಫಾರಿನ್‌ನಲ್ಲಿ ಚಿತ್ರೀಕರಣ ಮಾಡಿದವರ ಸಂಖ್ಯೆ ಬಹಳ ಕಡಿಮೆಯಾಗಿದೆ ಎಂದರೆ ತಪ್ಪಿಲ್ಲ. ವರ್ಷದ ಆರಂಭದಲ್ಲಿ ಬಂದ “ಶ್ರೀಕಂಠ’, “ಹೆಬ್ಬುಲಿ’, “ರಾಜಕುಮಾರ’, “ರೋಗ್’, “ಚಕ್ರವರ್ತಿ’, “ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’, “ಪಟಾಕಿ’, “ಮಾಸ್ ಲೀಡರ್’, “ಸಾಹೇಬ’, “ಭರ್ಜರಿ’, “ತಾರಕ್’, “ಅತಿರಥ’, “ಗೌಡ್ರು ಹೋಟೆಲ್’ ಮುಂತಾದ ಚಿತ್ರಗಳು ಫಾರಿನ್‌ನಲ್ಲಿ ಚಿತ್ರೀಕರಣಗೊಂಡಿವೆ.
ಹೊಸ ಪಕ್ಷ ಕಟ್ಟಿ ಆಟೋ ಹತ್ತಿದ ಉಪೇಂದ್ರ
ಉಪೇಂದ್ರ ಬಹಳ ವರ್ಷಗಳ ಹಿಂದೆಯೇ ರಾಜಕೀಯಕ್ಕೆ ಬರುವುದಾಗಿ ಹಿಂಟ್ ಕೊಟ್ಟಿದ್ದರು. ಈಗ ಅವರು ರಾಜಕೀಯಕ್ಕೆ ಪ್ರಜಾಕೀಯ ಹೆಸರಿನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಸ್ಥಾಪಿಸುವುದಷ್ಟೇ ಅಲ್ಲ, ಆ ಪಕ್ಷದ ಮೂಲಕ ಅವರು ಮುಂಬರುವ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಲಿದ್ದಾರೆ. ಈಗಾಗಲೇ ಈ ನಿಟ್ಟಿನಲ್ಲಿ ಅವರು ಕೆಲಸ ಶುರು ಮಾಡಿದ್ದು, ಇತ್ತೀಚೆಗೆ ಅವರ ಪಕ್ಷಕ್ಕೆ ಆಟೋ ಚಿಹ್ನೆ ಸಹ ಸಿಕ್ಕಿದೆ. ಇಷ್ಟೆಲ್ಲಾ ಆದರೂ, ಉಪೇಂದ್ರ ಅವರು ಯಾವ ಕ್ಷೇತ್ರದಿಂದ ಚುನಾವಣೆಯನ್ನು ಎದುರಿಸಲಿದ್ದಾರೆ ಎಂಬ ವಿಷಯವನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಏನೇ ಆದರೂ, ಕನ್ನಡದ ಯಾವೊಬ್ಬ ನಟ ಸಹ ಇದುವರೆಗೂ ಈ ತರಹ ಪಕ್ಷ ಸ್ಥಾಪನೆ ಮಾಡಿ, ರಾಜಕೀಯ ಮಾಡಿದ ಉದಾಹರಣೆಯಿರಲಿಲ್ಲ. ಈಗ ಉಪೇಂದ್ರ ತಾವೇ ಉದಾಹರಣೆಯಾಗಿದ್ದಾರೆ.
ಹೊಸ ಪ್ರತಿಭೆಗಳ ಎಂಟ್ರಿ….
2017ರಲ್ಲಿ ಹಲವು ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿವೆ. ಪ್ರಮುಖವಾಗಿ “ಆಪರೇಷನ್ ಅಲಮೇಲಮ್ಮ’ ಮೂಲಕ ರಿಷಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರು. ಈ ಹಿಂದೆ ಒಂದೆರೆಡು ಚಿತ್ರಗಳಲ್ಲಿ ನಟಿಸಿದ್ದ ಅವರು, “ಆಪರೇಷನ್ ಅಲಮೇಲಮ್ಮ’ದಲ್ಲಿ ಗಮನಸೆಳೆದಿದ್ದಷ್ಟೇ ಅಲ್ಲ, ಪುನೀತ್ ನಿರ್ಮಾಣದ “ಕವಲು ದಾರಿ’ಗೆ, ಶಶಾಂಕ್ ನಿರ್ಮಾಣದ ಹೊಸ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾದರು. “ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಹೀರೋ ಮತ್ತು ನಿರ್ದೇಶಕನಾಗಿ ಗಮನ ಸೆಳೆದ ರಾಜ್ ಶೆಟ್ಟಿ, ರಿಷಭ್ ಶೆಟ್ಟಿ ಚಿತ್ರದಲ್ಲಿ ಕೆಲಸ ಮಾಡಿರುವುದಷ್ಟೇ ಅಲ್ಲ, ಮಲಯಾಳಂನಲ್ಲೂ ನಟಿಸಿದ್ದಾರೆ. “ದಯವಿಟ್ಟು ಗಮನಿಸಿ’ಯ ಛಾಯಾಗ್ರಾಹಕ ಅರವಿಂದ್, “ಕೆಂಪಿರ್ವೆ’ಯ ಲಕ್ಷ್ಮಣ್ ಶಿವಶಂಕರ್ ಗುರುತಿಸಿಕೊಂಡರು.
ಅತಿಥಿಯಾಗಿ ಕಾಣಿಸಿಕೊಂಡವರು
ಜನಪ್ರಿಯ ಕಲಾವಿದರಿಂದ ಅತಿಥಿ ಪಾತ್ರ ಮಾಡಿಸುವುದು ಚಿತ್ರರಂಗದ ಹಳೆಯ ಟ್ರೆಂಡು. ಈ ವರ್ಷದ ಮೊದಲ ಶುಕ್ರವಾರ ಬಿಡುಗಡೆಯಾದ “ಪುಷ್ಪಕ ವಿಮಾನ’ ಚಿತ್ರದಲ್ಲಿ ಜೂಹಿ ಚಾವ್ಲಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ಈ ವರ್ಷ ಅತಿಥಿ ಪಾತ್ರ ಮಾಡಿದ ಇತರೆ ಕಲಾವಿದರೆಂದರೆ, ದರ್ಶನ್ (ಚೌಕ), ಕೋಮಲ್ (ಮೇಲುಕೋಟೆ ಮಂಜ), ಶ್ರೀಮುರಳಿ (ರಾಜ್-ವಿಷ್ಣು) ಮತ್ತು ಚಿರಂಜೀವಿ ಸರ್ಜಾ (ಭರ್ಜರಿ). ಇದಲ್ಲದೆ ಸುದೀಪ್, ಪುನೀತ್ ರಾಜಕುಮಾರ್, ಶಿವರಾಜಕುಮಾರ್, ಯೋಗರಾಜ್ ಭಟ್ ಮುಂತಾದವರು ಕೆಲವು ಚಿತ್ರಗಳಿಗೆ ಕಾಮೆಂಟರಿ ನೀಡಿದ್ದಾರೆ ಮತ್ತು ಹಾಡುಗಳನ್ನು ಹಾಡಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.