ನೀ ಬೆಚ್ಚಗಿರು…
Team Udayavani, Dec 16, 2017, 12:42 PM IST
ವಾತಾವರಣ ಫ್ರಿಡ್ಜಿನಂತಾಗಿ, ಚಳಿ ಮೈ ಕೊರೆಯುತ್ತಿದೆ. ಸ್ವೆಟರ್, ಟೊಪ್ಪಿ, ಶಾಲು, ಕಾಲ್ಚೀಲ, ಕೈ ಗ್ಲೌಸು, ಬ್ಲಾಂಕೆಟ್… ಎಲ್ಲ ಧರಿಸಿದರೂ ಚಳಿ ಚಳಿಯೇ. ಹಾಗಾದರೆ, ಇಂಥ ಚಳಿಯಲ್ಲಿ ಬೀದಿ ಬದಿ ಮಲಗುವ, ಚಿಂದಿ ಬಟ್ಟೆಯ ಜನರ ಪಾಡೇನು? ಅವರು ಚಳಿಯನ್ನು ಹೇಗೆ ತಡೆದುಕೊಳ್ಳುತ್ತಾರೆ?… ಹೀಗೆಲ್ಲ ಯೋಚಿಸುವ ಮನಸ್ಸು ನಮ್ಮಲ್ಲಿ ಎಷ್ಟು ಜನರಿಗಿದೆ ಹೇಳಿ? ಅವರವರ ಪಾಡು ಅವರಿಗೆ.
ನಾವು ಚೆನ್ನಾಗಿದ್ದರೆ, ಬೆಚ್ಚಗಿದ್ದರೆ ಸಾಕು ಅನ್ನುವವರ ಸಂಖ್ಯೆಯೇ ಜಾಸ್ತಿ. ಅಂಥವರಿಗೆ ಅಪವಾದ ಎನ್ನುವಂತೆ ಬೆಂಗಳೂರಿನಲ್ಲೊಂದು ತಂಡ ಕೆಲಸ ಮಾಡುತ್ತಿದೆ. ಚಳಿಗಾಲದ ರಾತ್ರಿ, ಬೀದಿ ಬೀದಿ ತಿರುಗಿ, ನಿರ್ಗತಿಕರಿಗೆ ಹೊದಿಕೆ ಹಂಚುತ್ತಿದೆ. ಆ ತಂಡದ ಹೆಸರು “ಮಾನವ ಸೇವಾ ಫ್ರೆಂಡ್ಸ್’! ಹೆಸರಿಗೆ ತಕ್ಕಂತೆ ಪರೋಪಕಾರವನ್ನೇ ಧ್ಯೇಯವಾಗಿರಿಸಿಕೊಂಡಿರುವ ಈ ತಂಡದಲ್ಲಿ 10 ಜನರಿದ್ದಾರೆ.
ಅವರ ಕಾರ್ಯ ವೈಖರಿಯ ಬಗ್ಗೆ ಕೇಳಿದರೆ, “ಇಂಥವರೂ ಇದ್ದಾರಾ?’ ಅಂತ ಅಚ್ಚರಿಯಾಗೋದು ನಿಜ. ಯಾಕಂದ್ರೆ, ಬೇಡಿ ಬಂದವರಿಗೆ ದಾನ ಕೊಡೋದು ಬೇರೆ, ತಾವೇ ಹುಡುಕಿಕೊಂಡು ಹೋಗಿ ದಾನ ಮಾಡೋದು ಬೇರೆ. ಇವರು ಎರಡನೇ ಗುಂಪಿಗೆ ಸೇರಿದವರು. ಪ್ರತಿ ಶನಿವಾರ ರಾತ್ರಿ 11-4ರವರೆಗೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಬೈಕ್‌ನಲ್ಲಿ ತಿರುಗಾಡಿ, ರಸ್ತೆಬದಿಯಲ್ಲಿ, ಫ್ಲೈ ಓವರ್ ಕೆಳಗೆ, ಫುಟ್‌ಪಾತ್ ಮೇಲೆ ಚಳಿಯಲ್ಲಿ ನಡುಗುತ್ತಾ ಮಲಗಿರುವವರಿಗೆ ಹೊದಿಕೆ ನೀಡಿ ಬರುತ್ತಾರೆ.
ಇನ್ನೊಬ್ಬರನ್ನು ಬೆಚ್ಚಗಿಡುವ ಸಲುವಾಗಿ ತಾವು ಚಳಿರಾತ್ರಿಯಲ್ಲಿ ನಿದ್ದೆಗೆಡುತ್ತಾರೆ. ಟಿನ್ ಫ್ಯಾಕ್ಟರಿಯಿಂದ ಶುರುವಾದ ಇವರ ಕೆಲಸ ಹಲಸೂರು, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ವಿಧಾನಸೌಧ, ಕೆ.ಆರ್. ಮಾರ್ಕೆಟ್, ಆರ್.ಆರ್. ನಗರ, ವೈಟ್‌ಫೀಲ್ಡ್, ಕುಂದನಹಳ್ಳಿ, ಬಾಣಸವಾಡಿ, ಮಡಿವಾಳ, ಯಶವಂತಪುರ, ಜಾಲಹಳ್ಳಿ ಹೀಗೆ ಬೆಂಗಳೂರಿವ ಶೇ.60 ಭಾಗವನ್ನು ಕವರ್ ಮಾಡಿದೆ.
ಹೇಗೆ ಶುರುವಾಯ್ತು?: ಈ ಯೋಚನೆ ಹೊಳೆದದ್ದು 2016ರ ಡಿಸೆಂಬರ್‌ನಲ್ಲಿ. ಆ ತಿಂಗಳಲ್ಲಿ ತಂಡದ ನಿಲೇಶ್ ಮೆಹ್ತಾ ಮತ್ತು ನವೀನ್ ಮೆಹ್ತಾ ಎಂಬಿಬ್ಬರ ಹುಟ್ಟಿದಹಬ್ಬ ಇತ್ತು. ಗೆಳೆಯರೆಲ್ಲರೂ ಪಾರ್ಟಿಗಾಗಿ ಬೇಡಿಕೆ ಇಟ್ಟಿದ್ದರು. ಸರಿ, ಎಲ್ಲರಿಗೂ ಹೋಟೆಲ್‌ನಲ್ಲಿ ಟ್ರೀಟ್ ಕೊಡಿಸುವುದು ಅಂತಾಯ್ತು. ಆಗ ತಂಡದ ರಾಕೇಶ್ ಚಂಡಾಲಿಯಾ ಅವರು ಈ ಹೊದಿಕೆ ಹಂಚುವ ಸಲಹೆ ನೀಡಿದರು.
ಸುಮ್ಮನೆ ಹೋಟೆಲ್‌ನಲ್ಲಿ 2-3 ಸಾವಿರ ಖರ್ಚು ಮಾಡಿ ಪಾರ್ಟಿ ಮಾಡುವುದಕ್ಕಿಂತ, ನಿರ್ಗತಿಕರಿಗೆ ಸಹಾಯ ಮಾಡೋಣ ಎಂಬ ಅವರ ಮಾತಿಗೆ ಎಲ್ಲರೂ ಓಕೆ ಅಂದರು. ನಿಲೇಶ್‌ರ 27ನೇ ಹುಟ್ಟುಹಬ್ಬದ ನಿಮಿತ್ತ 27 ಜನರಿಗೆ ಉಣ್ಣೆಯ ಹೊದಿಕೆ ಹಂಚಿದರು. ಹಾಗೆ ಶುರುವಾದ ಪರೋಪಕಾರದ ಕಾಯಕ ಈ ಚಳಿಗಾಲದಲ್ಲಿಯೂ ಮುಂದುವರಿಯಿತು. ಮೊದಲು ಗುಂಪಿನಲ್ಲಿ ಏಳು ಜನರಿದ್ದರು.
ಪ್ರತಿಯೊಬ್ಬರೂ 2 ಸಾವಿರ ಹಾಕಿ 140 ರೂ.ನ 100 ಹೊದಿಕೆಗಳನ್ನು ಖರೀದಿಸಿದರು. ಅಕ್ಟೋಬರ್ 22ರಂದು 50 ಜನರಿಗೆ ಹೊದಿಕೆ ನೀಡಿದರು. ಅದರ ಮುಂದಿನ ವಾರ ಅದು 120ಕ್ಕೇರಿತು. ಶನಿವಾರ ರಾತ್ರಿ 5 ಬೈಕ್‌ನಲ್ಲಿ ಹೊದಿಕೆಗಳನ್ನು ಹಾಕಿಕೊಂಡು 100-120 ಕಿ.ಮೀ. ತಿರುಗಾಡಿ ಬೆಳಗಿನವರೆಗೆ ಹೊದಿಕೆ ಹಂಚಿ ಬರುತ್ತಿದ್ದಾರೆ. 3 ಬೈಕ್ ಹೊದಿಕೆ ಹಂಚಿದರೆ, ಇನ್ನೆರಡು ಬೈಕ್‌ನಲ್ಲಿದ್ದವರು ಎಲ್ಲೆಲ್ಲಿ ನಿರ್ಗತಿಕರಿದ್ದಾರೆ ಎಂದು ಹುಡುಕುತ್ತಾರೆ.
ಅವರ ತಂಡಕ್ಕೆ ಮತ್ತೆ ಮೂವರು ಸೇರಿದ್ದಾರೆ. ಇಲ್ಲಿಯವರೆಗೆ 648 ಹೊದಿಕೆಗಳನ್ನು ಹಂಚಿದ್ದು, ಕನಿಷ್ಠ ಸಾವಿರ ಜನರಿಗೆ ಹೊದಿಕೆ ನೀಡಬೇಕು ಎಂಬ ಆಶಯ ಹೊಂದಿದ್ದಾರೆ. ಯಾರೂ ಇವರ ಸೇವೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂಬುದನ್ನೂ ಗಮನಿಸಿದ್ದಾರೆ. ಡಿಸೆಂಬರ್ ಕೊನೆ ಅಥವಾ ಜನವರಿಯ ಮೊದಲೆರಡು ವಾರ, ಅಂದರೆ ಚಳಿಗಾಲ ಮುಗಿಯುವವರೆಗೆ ಈ ಸೇವೆ ಮುಂದುವರಿಯುತ್ತದೆ.
ಫಂಡ್ ಬೇಕಿಲ್ಲ…: “ಮಾನವ ಸೇವಾ ಫ್ರೆಂಡ್ಸ್’ ಯಾರಿಂದಲೂ ಹಣಸಹಾಯ ಪಡೆಯುವುದಿಲ್ಲ. ತಂಡದ ಸದಸ್ಯರ ಗೆಳೆಯರು ಮತ್ತು ಕುಟುಂಬದವರ ಸಹಾಯದಿಂದ ಈ ಕೆಲಸ ನಡೆಯುತ್ತಿದೆ. ಡಿಸೆಂಬರ್ ತನಕ ಹೊದಿಕೆ ಹಂಚಲು ಬೇಕಾಗುವಷ್ಟು ಹಣ ಸಂಗ್ರಹವಾಗಿದೆ. ನಮ್ಮ ಕೈಯಲ್ಲಿ ಎಷ್ಟಾಗುತ್ತದೋ ಅಷ್ಟು ಕೆಲಸವನ್ನು ಮಾಡುತ್ತೇವೆ ಅನ್ನುತ್ತಾರೆ ಅವರು.
ಹೊದಿಕೆ ಹಂಚುವ ವಿಡಿಯೊ ಫೇಸ್‌ಬುಕ್‌ನಲ್ಲಿ 21,000 ಸಾವಿರ ವ್ಯೂ ಗಳಿಸಿದೆ. ಅದೂ ಪ್ರಚಾರದ ಉದ್ದೇಶಕ್ಕೆ ಅಪ್ಲೋಡ್ ಮಾಡಿದ್ದಲ್ಲ, ತಮ್ಮ ಕೆಲಸ ಇನ್ನೊಬ್ಬರಿಗೆ ಪ್ರೇರಣೆಯಾಗಲಿ ಎಂಬುದಷ್ಟೇ ತಂಡದ ಉದ್ದೇಶ. ನಿಲೇಶ್ ಮೆಹ್ತಾ, ಸಂದೀಪ್ ಚಾಜ್ಜೀದ್, ಮನೋಜ್ ಬೋಹ್ರಾ, ರಕ್ಷಿತ ಬೋಹ್ರಾ, ಕಮಲ್ ಕಟಾರಿಯಾ, ಸಿದ್ಧಾರ್ಥ ಭವಿಶಿ, ಯಶ್ ಭಂಡಾರಿ, ಭರತ್ ಶರ್ಮಾ ಮತ್ತು ವಿಶಾಲ್ ಗಡ್ವಾನಿ ಎನ್ನುವವರು ಈ ತಂಡದಲ್ಲಿದ್ದಾರೆ.
ಇವರೆಲ್ಲ ಯಾವುದೋ ದೊಡ್ಡ ಎಂಎನ್‌ಸಿಯಲ್ಲಿ ಕುಳಿತು ಲಕ್ಷಾಂತರ ಹಣ ಗಳಿಸುತ್ತಿಲ್ಲ. ಮಾಲ್‌ನಲ್ಲಿ ಬಟ್ಟೆ ಅಂಗಡಿ, ಮೆಡಿಕಲ್ ಶಾಪ್, ಇನುರೆನ್ಸ್ ಕಂಪನಿ, ಜ್ಯುವೆಲರಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೆ, ತಾವು ಗಳಿಸಿದ್ದರಲ್ಲಿಯೇ ಸ್ವಲ್ಪ ಉಳಿಸಿ ಇತರರಿಗೆ ನೆರವಾಗುತ್ತಿದ್ದಾರೆ.
ಕಾಲಿಗೆ ಬೀಳ್ತಾರೆ…: ಯಶವಂತಪುರ ರೈಲ್ವೆ ಸ್ಟೇಶನ್ ಬಳಿ ಒಂದು ಕುಟುಂಬ ಚಳಿಯಲ್ಲಿ ನಡುಗುತ್ತಾ ಮಲಗಿತ್ತು. 3 ವರ್ಷದ ಮಗುವನ್ನು ಲುಂಗಿಯಲ್ಲಿ ಸುತ್ತಿ ಮಲಗಿಸಲಾಗಿತ್ತು. ಇವರು ಹೊದಿಕೆ ನೀಡಿದಾಗ, ಮಗುವಿನ ತಂದೆ ಕಣ್ಣೀರಿಡುತ್ತಾ, “ನೀವೆಲ್ಲಾ ದೇವರು ಕಣಪ್ಪಾ…’ ಎಂದು ಕಾಲಿಗೇ ಬಿದ್ದುಬಿಟ್ಟರು.
ಇನ್ನೊಮ್ಮೆ ಕೈಲಿದ್ದ ಎಲ್ಲ ಹೊದಿಕೆಗಳೂ ಮುಗಿದು, ಕೊನೆಯಲ್ಲಿ 1 ಹೊದಿಕೆ ಉಳಿದಿತ್ತು. ರೈಲ್ವೆ ಸ್ಟೇಶನ್ ಬಳಿ ಇಬ್ಬರು ನಡುಗುತ್ತಾ ಮಲಗಿದ್ದರು. ಒಬ್ಬ ಜ್ವರದಿಂದ ನರಳುತ್ತಿದ್ದ, ಇನ್ನೊಬ್ಬನಿಗೆ ಮೈ ತುಂಬಾ ಗಾಯಗಳಾಗಿದ್ದವು. ಆಗ ಒಬ್ಬನಿಗೆ ಹೊದಿಕೆ, ಇನ್ನೊಬ್ಬನಿಗೆ ತಾವು ಧರಿಸಿದ್ದ ಜಾಕೆಟ್ ಅನ್ನೇ ಬಿಚ್ಚಿಕೊಟ್ಟಿದ್ದರು.
* ನಮ್ಮ ಕೆಲಸ ಇನ್ನಷ್ಟು ಜನರಿಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ ವಿಡಿಯೊ, ಫೋಟೊ ಅಪ್ಲೋಡ್ ಮಾಡುತ್ತಿದ್ದೇವೆ. ನಮಗೆ ಇಡೀ ಕರ್ನಾಟಕಕ್ಕೆ ಹೊದಿಕೆ ಹೊಂದಿಸೋಕೆ ಆಗಲ್ಲ. ನಮ್ಮದು ಸೀಮಿತ ವ್ಯಾಪ್ತಿ. ಆದರೆ, ವಿಡಿಯೋ ದೇಶಾದ್ಯಂತ ತಲುಪಿದರೆ, ನಮ್ಮಂತೆ ಬೇರೆಯವರೂ ಯೋಚಿಸಿದರೆ ಅಷ್ಟೇ ಸಾಕು. ನೀವು ಎಲ್ಲೇ ಇರಿ, ಏನೇ ಮಾಡುತ್ತಿರಿ. ನಿಮ್ಮಿಂದ ಸಮಾಜಕ್ಕೆ ಕಿಂಚಿತ್ತಾದರೂ ಒಳ್ಳೆಯದಾಗಲಿ. ಸದ್ಯಕ್ಕೆ 1000 ಕಂಬಳಿ ಕೊಡುವ ಯೋಚನೆ ಇದೆ ಎನ್ನುತ್ತಾರೆ ರಾಕೇಶ್ ಚಂಡಾಲಿಯಾ ಜೈನ್.
* ಪ್ರಿಯಾಂಕಾ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.