ಭಾರತದ ಅಂಗಳದಲ್ಲಿ “ಸರಣಿ ಚೆಂಡು’
Team Udayavani, Dec 17, 2017, 5:55 AM IST
ವಿಶಾಖಪಟ್ಟಣ: ಕೊಹ್ಲಿ ಇಲ್ಲದೆಯೂ ಗೆಲ್ಲಬಲ್ಲೆವು ಎಂದು ಒಂದೇ ಸೋಲಿನ ಬಳಿಕ ಸಾಧಿಸಿ ತೋರಿಸಿದ ಟೀಮ್ ಇಂಡಿಯಾ ಈಗ ಶ್ರೀಲಂಕಾ ವಿರುದ್ಧ ಸರಣಿ ಗೆದ್ದು ತನ್ನ ಪಾರಮ್ಯವನ್ನು ಸಾಬೀತುಪಡಿಸಬೇಕಿದೆ. ಇದಕ್ಕಾಗಿ ರವಿವಾರ ವಿಶಾಖಪಟ್ಟಣ “ಶಾಖ’ ಏರಿಸಿಕೊಳ್ಳಲಿದ್ದು, 3ನೇ ಹಾಗೂ ಅಂತಿಮ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಧರ್ಮಶಾಲಾದಲ್ಲಿ ಶೋಚನೀಯ ಬ್ಯಾಟಿಂಗ್ ವೈಫಲ್ಯ ಕಂಡು ಹೀನಾಯವಾಗಿ ಸೋತಾಗ ಭಾರತಕ್ಕೆ ಮೊಹಾಲಿಯಲ್ಲೇನು ಕಾದಿದೆಯೋ ಎಂಬ ಆತಂಕ ಮೂಡಿದ್ದು ಸಹಜ. ಆದರೆ ಆತಿಥೇಯ ಪಡೆ ಇದನ್ನೊಂದು ಸವಾಲಾಗಿ ಸ್ವೀಕರಿಸಿತು. ಉಸ್ತುವಾರಿ ನಾಯಕ ರೋಹಿತ್ ದಾಖಲೆಯ ದ್ವಿಶತಕ ಸಿಡಿಸಿ ಮೆರೆದದ್ದು, ಸರಣಿ ಗೆಲುವಿನ ಸ್ಕೆಚ್ ಹಾಕಿಕೊಂಡಿದ್ದ ಲಂಕೆಯನ್ನು 141 ರನ್ನುಗಳಿಂದ ಉರುಳಿಸಿದ್ದೆಲ್ಲ ಈಗ ಇತಿಹಾಸ. ಧರ್ಮಶಾಲಾದಲ್ಲಿ 112ಕ್ಕೆ ಗಂಟುಮೂಟೆ ಕಟ್ಟಿದ ಟೀಮ್ ಇಂಡಿಯಾ ಮೊಹಾಲಿಯಲ್ಲಿ 4ಕ್ಕೆ 392 ರನ್ ಪೇರಿಸಿದ್ದು ಸಾಮಾನ್ಯ ಸಾಧನೆಯೇನಲ್ಲ. ಹೀಗಾಗಿ ಚೆಂಡು ಮತ್ತೆ ರೋಹಿತ್ ಬಳಗದ ಅಂಗಳದಲ್ಲಿ ಕಾಣಿಸಿಕೊಂಡಿದೆ. ವಿಶಾಖಪಟ್ಟದಲ್ಲಿ ಉತ್ತಮ ಏಕದಿನ ದಾಖಲೆಯನ್ನು ಕಾಯ್ದುಕೊಂಡು ಬಂದಿರುವ ಭಾರತವೇ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ.
2015ರ ಬಳಿಕ ಸರಣಿ ಸೋತಿಲ್ಲ
2015ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸೋತ ಬಳಿಕ ಭಾರತ ತವರಿನಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡದ್ದಿಲ್ಲ. ಹಾಗೆಯೇ ಶ್ರೀಲಂಕಾ ಈವರೆಗೆ ಭಾರತದಲ್ಲಿ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿಲ್ಲ. ಇಲ್ಲಿ ಆಡಲಾದ 9 ಸರಣಿಗಳಲ್ಲಿ ಅದು ಎಂಟನ್ನು ಸೋತಿದೆ. ಒಂದು ಸರಣಿ ಡ್ರಾ ಆಗಿದೆ. ವಿಶಾಖಪಟ್ಟಣ ಪಂದ್ಯವನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸುವುದು ಲಂಕೆಯ ಗುರಿ.
ವಿಶಾಖಪಟ್ಟಣ ಕಳೆದ ವರ್ಷವೂ ಏಕದಿನ ಸರಣಿಯ ನಿರ್ಣಾಯಕ ಪಂದ್ಯವೊಂದಕ್ಕೆ ಸಾಕ್ಷಿಯಾದುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಭಾರತ-ನ್ಯೂಜಿಲ್ಯಾಂಡ್ 2-2 ಸಮಬಲದ ಬಳಿಕ 5ನೇ ಹಾಗೂ ಅಂತಿಮ ಪಂದ್ಯವನ್ನಾಡಲು ವಿಶಾಖಪಟ್ಟಣಕ್ಕೆ ಆಗಮಿಸಿದ್ದವು. ಧೋನಿ ಪಡೆ ಇದನ್ನು 190 ರನ್ನುಗಳ ಭಾರೀ ಅಂತರದಿಂದ ಗೆದ್ದು ಸರಣಿ ವಶಪಡಿಸಿಕೊಂಡಿತು. ಭಾರತ 6ಕ್ಕೆ 269 ರನ್ ಪೇರಿಸಿದರೆ, ನ್ಯೂಜಿಲ್ಯಾಂಡ್ ಅಮಿತ್ ಮಿಶ್ರಾ ದಾಳಿಗೆ ಸಿಲುಕಿ 79 ರನ್ನಿಗೆ ಉದುರಿತ್ತು. ಮಿಶ್ರಾ 18ಕ್ಕೆ 5 ವಿಕೆಟ್ ಉರುಳಿಸಿದ್ದರು.
ಒತ್ತಡ ರಹಿತ ರೋಹಿತ್
ಮೊಹಾಲಿಯಲ್ಲಿ ಅಮೋಘ ದ್ವಿಶತಕದೊಂದಿಗೆ ಲಂಕನ್ನರ ಮೇಲೇರಿ ಹೋಗುವ ಮೂಲಕ ನಾಯಕತ್ವದ ಒತ್ತಡ ತನ್ನ ಮೇಲಿಲ್ಲ ಎಂಬುದನ್ನು ರೋಹಿತ್ ಶರ್ಮ ಸಾಬೀತುಪಡಿಸಿದ್ದಾರೆ. ಎಡಗೈ ಆರಂಭಕಾರ ಶಿಖರ್ ಧವನ್, ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಕೂಡ ಅರ್ಧ ಶತಕದ ಕೊಡುಗೆ ಸಲ್ಲಿಸಿದ್ದಾರೆ. ಇಲ್ಲಿಂದ ಮುಂದೆ ಭಾರತದ ಬ್ಯಾಟಿಂಗ್ ಹೇಗಿದೆ ಎಂಬುದನ್ನು ಪರೀಕ್ಷಿಸಬೇಕಿದೆ. ಮುಖ್ಯವಾಗಿ ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಫಾರ್ಮ್ ಭಾರತಕ್ಕೆ ಬಹಳ ಮುಖ್ಯ. ಧೋನಿ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಭಾರತ ಮೇಲುಗೈ ಸಾಧಿಸಬೇಕಾದರೆ ರೋಹಿತ್-ಧವನ್ ಸಹಿತ ಮಧ್ಯಮ ಕ್ರಮಾಂಕದ ಆಟಗಾರರೂ ಕ್ರೀಸ್ ಆಕ್ರಮಿಸಿಕೊಳ್ಳುವುದು ಮುಖ್ಯ.
ವಿಶಾಖಪಟ್ಟಣದ್ದು “ಬ್ಯಾಟಿಂಗ್ ಫ್ರೆಂಡ್ಲಿ ಟ್ರ್ಯಾಕ್’ ಆಗಿ ಗೋಚರಿಸುತ್ತಿದ್ದು, ಇದು ಮತ್ತೂಂದು ಹೈ ಸ್ಕೋರಿಂಗ್ ಮ್ಯಾಚ್ ಆಗುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ಬೌಲರ್‌ಗಳು ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸುತ್ತಾರೋ ಹೇಳಲಾಗದು. ಭಾರತಕ್ಕೆ ಭುವನೇಶ್ವರ್, ಬುಮ್ರಾ, ಚಾಹಲ್; ಲಂಕೆಗೆ ಲಕ್ಮಲ್ ದಾಳಿ ನಿರ್ಣಾಯಕವಾಗಲಿದೆ.
ಹೋರಾಟ ನಡೆಸೀತೇ ಲಂಕೆ?
ಮೊಹಾಲಿಯ ಬ್ಯಾಟಿಂಗ್ ಟ್ರ್ಯಾಕ್‌ನಲ್ಲೂ ಶ್ರೀಲಂಕಾದ ಅಗ್ರ ಕ್ರಮಾಂಕದ ಬ್ಯಾಟಿಂಗ್ ತೀವ್ರ ಕುಸಿತ ಕಂಡಿತ್ತು. ಏಂಜೆಲೊ ಮ್ಯಾಥ್ಯೂಸ್ ಅವರ ಅಜೇಯ ಶತಕವೊಂದೇ ಪ್ರವಾಸಿ ಸರದಿಯ ಪ್ರಮುಖ ಅಂಶವಾಗಿತ್ತು. ಹೀಗಾಗಿ ಸ್ಕೋರ್ 250ರ ಗಡಿ ದಾಟಿತು.
ಮ್ಯಾಥ್ಯೂಸ್ ಅಂತಿಮ ಪಂದ್ಯಕ್ಕೆ ಫಿಟ್ ಆಗಿರುವುದು ಲಂಕೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆದರೆ ತರಂಗ, ತಿರಿಮನ್ನೆ, ಗುಣತಿಲಕ, ಡಿಕ್ವೆಲ್ಲ ಅವರೆಲ್ಲ ದೊಡ್ಡ ಮೊತ್ತ ಪೇರಿಸಿದರಷ್ಟೇ ಲಂಕೆಯಿಂದ ಹೋರಾಟವನ್ನು ನಿರೀಕ್ಷಿಸಬಹುದು.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್.
ಶ್ರೀಲಂಕಾ: ದನುಷ್ಕ ಗುಣತಿಲಕ, ಉಪುಲ್ ತರಂಗ, ಲಹಿರು ತಿರಿಮನ್ನೆ, ಏಂಜೆಲೊ ಮ್ಯಾಥ್ಯೂಸ್, ನಿರೋಷನ್ ಡಿಕ್ವೆಲ್ಲ, ಅಸೇಲ ಗುಣರತ್ನೆ, ತಿಸರ ಪೆರೆರ (ನಾಯಕ), ಸಚಿತ ಪತಿರಣ, ಅಖೀಲ ಧನಂಜಯ, ಸುರಂಗ ಲಕ್ಮಲ್.
ಆರಂಭ: ಮಧ್ಯಾಹ್ನ 1.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.