ನಾಲ್ಕನೇ ಹಂತದ ರಾಮಕೃಷ್ಣ ಮಿಷನ್ ‘ಸ್ವಚ್ಛ ಮಂಗಳೂರು’ ಅಭಿಯಾನ
Team Udayavani, Dec 18, 2017, 10:30 AM IST
ಮಹಾನಗರ: ನಾಲ್ಕನೇ ಹಂತದ ರಾಮಕೃಷ್ಣ ಮಿಷನ್ ‘ಸ್ವಚ್ಛ ಮಂಗಳೂರು’ ಅಭಿಯಾನದ 7ನೇ ವಾರದ ಸ್ವಚ್ಛತಾ ಕಾರ್ಯಕ್ಕೆ ರವಿವಾರ ಬೆಳಗ್ಗೆ ಮಾರ್ನಮಿಕಟ್ಟೆ ಕಾಸ್ಸಿಯಾ ಶಾಲೆಯ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಡಾ| ರಾಜೇಂದ್ರ ಪ್ರಸಾದ್ ಹಾಗೂ ಅನಿವಾಸಿ ಭಾರತೀಯರಾದ ಉಲ್ಲಾಸ್ ಹಿರೇಮಠ ಅಭಿಯಾನವನ್ನು ಶುಭಾರಂಭಗೊಳಿಸಿದರು.
ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್, ಸತ್ಯನಾರಾಯಣ ಕೆ. ವಿ. ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೊದಲಿಗೆ ಸುಮಾರು ನೂರಕ್ಕೂ ಅಧಿಕ ಕಾರ್ಯಕರ್ತರನ್ನು ನಾಲ್ಕು ಗುಂಪುಗಳನ್ನಾಗಿ, ಕಾರ್ಯವನ್ನು ಹಂಚಿಕೆ ಮಾಡಲಾಯಿತು. ಲೆಕ್ಕ ಪರಿಶೋಧಕ ಶಿವಕುಮಾರ್ ಮಾರ್ಗದರ್ಶನದಲ್ಲಿ ಕಾಸ್ಸಿಯಾ ಶಾಲೆಯ ಮುಂಭಾಗ ಹಾಗೂ ಮಂಗಳಾದೇವಿ ರಥಬೀದಿಯನ್ನು ಕಸಗುಡಿಸಿ ಶುಚಿಗೊಳಿಸಲಾಯಿತು.
ರಸ್ತೆಯ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಪೇಪರ್ಗಳನ್ನು ಹೆಕ್ಕಿ ತೆಗೆಯಲಾಯಿತು. ರತ್ನಾ ಆಳ್ವ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಮನೆ ಮನೆಗಳಿಗೆ ತೆರಳಿ ಕರಪತ್ರ ವಿತರಿಸಿ, ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಪ್ರಯತ್ನಿಸಿದರು.
ಪೋಸ್ಟರ್ ತೆರವು ಕಾರ್ಯಾಚರಣೆ
ಬೆಳಗ್ಗೆ 7.30ರಿಂದ 2 ಗಂಟೆಯ ಕಾಲ ಸುಮಾರು 40 ಯುವಕರು ನಗರದ ತುಂಬೆಲ್ಲ ಹರಡಿದ್ದ ಸಾವಿರಕ್ಕೂ ಅಧಿಕ ಅನಧಿಕೃತ ಹಾಗೂ ಹಳೆಯ ಪೋಸ್ಟರ್, ಬ್ಯಾನರ್, ಬಂಟಿಂಗ್ಸ್ ಮುಂತಾದ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಿದರು. ಮೂರು ತಂಡವಾಗಿ ಕಾರ್ಯಕರ್ತರು ಕಾರ್ಯಾಚರಣೆ ಮಾಡಿದರು.
ಶಿಶಿರ ಅಮೀನ್, ಸೌರಜ್, ಸತೀಶ್ ಮೂಡಿಗೆರೆ ತಲಾ ಒಂದೊಂದು ತಂಡದ ನೇತೃತ್ವ ವಹಿಸಿದ್ದರು. ವೆಲೆನ್ಸಿಯಾ, ಕಂಕನಾಡಿ, ಬಲ್ಮಠ, ಬೆಂದೂರವೆಲ್, ಆಗ್ನೇಸ್, ಕದ್ರಿ ಪಾರ್ಕ್, ನಂತೂರು, ಹಂಪನಕಟ್ಟೆ, ಕೊಡಿಯಾಲ್ಬೈಲ್, ಎಂ ಜಿ ರಸ್ತೆ, ಲೇಡಿಹಿಲ್ ರಸ್ತೆ ಮತ್ತಿತರ ಮುಖ್ಯ ರಸ್ತೆಗಳಲ್ಲಿರುವ ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ ಬ್ಯಾನರ್ ಪೋಸ್ಟರ್ಗಳನ್ನು ತೆಗೆಯಲಾಯಿತು.
ಸ್ವಚ್ಛ ಎಕ್ಕೂರು
ಎಕ್ಕೂರಿನಲ್ಲಿಯೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಯ್ಯಪ್ಪ ಸ್ವಾಮಿ ಭಜನ ಮಂದಿರದ ಮುಂಭಾಗದಲ್ಲಿ ಕಾರ್ಯಕ್ರಮ ಆರಂಭಿಸಲಾಯಿತು. ಶ್ರೀ ಲತಾ ಅಭಿಯಾನಕ್ಕೆ ಚಾಲನೆ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಶ್ರಮದಾನದಲ್ಲಿ ನಂದಾದೀಪ ಮಹಿಳಾ ಮಂಡಳಿ, ಹಿಂದೂ ಯುವಸೇನೆ, ಅಯ್ಯುಪ್ಪ ಭಜನಾ ಮಂಡಳಿಯ ಸದಸ್ಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಪ್ರಶಾಂತ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.
ಸ್ವಚ್ಛ ಗ್ರಾಮ
ಕೋಟೆಕಾರ್, ಕೊಣಾಜೆ, ಉಳ್ಳಾಲ, ಪೆರ್ಮನ್ನೂರು, ಸೋಮೇಶ್ವರ, ಮುನ್ನೂರು, ಮಂಜನಾಡಿ, ಮತ್ತಿತರ ಕಡೆಗಳಲ್ಲಿ ಸ್ವಚ್ಛತಾ ಶ್ರಮದಾನ ಜರಗಿತು. ಬೆಳಗ್ಗೆ 7.30 ರಿಂದ 10 ಗಂಟೆಯವರೆಗೆ ಅಭಿಯಾನ ನಡೆಯಿತು. ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದ್ದು ಭಾಗವಹಿಸಿದ್ದ ಎಲ್ಲ ಕಾರ್ಯಕರ್ತರಿಗೆ ಸ್ವತ್ಛತಾ ಸಲಕರಣೆಗಳು, ಕರಪತ್ರಗಳು, ಟೀಶರ್ಟ್ ಒದಗಿಸಲಾಗಿತ್ತು. ಶ್ರಮದಾನದ ಬಳಿಕ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಮಹೇಶ್ ಕೊಲ್ಯ ಅಭಿಯಾನವನ್ನು ಸಂಯೋಜಿಸಿದರು. ಸತೀಶ್ ಕುಂಪಲ ಸಂಘಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಕಾರದಲ್ಲಿ ಸ್ವಚ್ಛ ಗ್ರಾಮ ಅಭಿಯಾನ ನಡೆಯುತ್ತಿದೆ.
ಜನೋಪಯೋಗಿ ಕಾರ್ಯ
ಕಾಸ್ಸಿಯಾ ಶಾಲೆಯ ಮುಂಭಾಗದಲ್ಲಿರುವ ಕಾಲುದಾರಿಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಬಿಸಾಡಲಾಗುತ್ತಿತ್ತು. ಶಾಲಾ ಮಕ್ಕಳು ಕಾಲುದಾರಿಯನ್ನು ಉಪಯೋಗಿಸದೇ ಮೂಗು ಮುಚ್ಚಿಕೊಂಡು ಶಾಲೆಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು. ಅಭಿಯಾನದ ಮುಖ್ಯ ಸಂಯೋಜಕ ದಿಲ್ರಾಜ್ ಆಳ್ವ, ಉಮಾನಾಥ್ ಕೋಟೆಕಾರ್ ಹಾಗೂ ದಿನೇಶ್ ಕರ್ಕೇರ ನೇತೃತ್ವದಲ್ಲಿ ಕಳೆದೆರಡು ವಾರಗಳಿಂದ ಸ್ವಚ್ಛ ಮಂಗಳೂರು ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ತ್ಯಾಜ್ಯವನ್ನು ಮಾರ್ಗದಲ್ಲಿ ಬಿಸಾಡದಂತೆ ಮನವೊಲಿಸಲು ಯಶಸ್ವಿಯಾದರು. ಬಳಿಕ ಅನೇಕ ದಿನಗಳಿಂದ ಅಚ್ಚುಕಟ್ಟಾಗಿ ಹೊಸತಾಗಿ ಕಾಲುದಾರಿ ರಚಿಸಿ ಇಂಟರ್ಲಾಕ್ ಬಳಸಿ ವ್ಯವಸ್ಥಿತವಾಗಿ ಫುಟ್ಪಾತ್ ಮಾಡಲಾಗಿದೆ. ಅದೇ ಕಾಲುದಾರಿಯ ಮಧ್ಯದಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಅನೇಕ ದಾರಿಹೋಕರಿಗೆ ಕಾಣಿಸದೇ ಅನೇಕರ ಮುಖ ಕೈಗಳಿಗೆ ತಾಗಿ ಅಪಘಾತವಾಗುತ್ತಿತ್ತು. ಅದನ್ನು ತಡೆಯಬೇಕೆನ್ನುವ ಉದ್ದೇಶದಿಂದ ಅಲ್ಲಿ ನೂತನವಾಗಿ ರೇಲಿಂಗ್ ಅಳವಡಿಸಲಾಗಿದೆ.
ಸ್ವಚ್ಛ ಮನಸ್ಸು
ಡಿಸೆಂಬರ್ ತಿಂಗಳಲ್ಲಿ ಮಂಗಳೂರು ಸುತ್ತಮುತ್ತಲಿನ 87 ಪ್ರೌಢಶಾಲೆಗಳಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳು ಜರಗಿದವು. ಸ್ವಚ್ಛತಾ ಸ್ಪರ್ಧಾ ಎನ್ನುವ ಶೀರ್ಶಿಕೆಯಡಿಯಲ್ಲಿ 8,825 ವಿದ್ಯಾರ್ಥಿಗಳು ಭಾಗವಹಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ 3,177, ಚಿತ್ರಕಲಾ ಸ್ಪರ್ಧೆಯಲ್ಲಿ 4,148 ಹಾಗೂ ಭಾಷಣ ಸ್ಪರ್ಧೆಯಲ್ಲಿ 1,500 ವಿದ್ಯಾರ್ಥಿಗಳು ಭಾಗವಹಿಸಿದರು. ಎಂ.ಆರ್. ವಾಸುದೇವ್, ಸದಾನಂದ ಉಪಾಧ್ಯಾಯ, ಭಾರತೀ ಭಟ್, ರಾಜಮಣಿ ರಾಮಕುಂಜ, ಸುಭದ್ರಾ ಭಟ್, ಸಂತೋಷ ಡಿ’ಸೋಜಾ ಸೇರಿದಂತೆ 50 ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಸ್ವಚ್ಛ ಮನಸ್ಸು ಅಭಿಯಾನದ ನೇತೃತ್ವ ವಹಿಸಿದ್ದರು. ರಂಜನ್ ಬೆಳ್ಳರಪಾಡಿ ಸ್ವಚ್ಛ ಮನಸ್ಸು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.