ಪಟಾಕಿಗೆ ನೀ ಕಿಡಿ ತಾಕಿಸಿದೆ, ಹೃದಯ ದೀಪ ಝಗ್ಗೆಂದಿತು!
Team Udayavani, Dec 19, 2017, 11:16 AM IST
ಕ್ರಿಸ್ತಶಕ ಎರಡು ಸಾವಿರದ ಹದಿನೇಳಕ್ಕೆ ಸರಿಯಾಗಿ ನನ್ನೆದೆಯಲ್ಲಿ ಪ್ರೇಮಶಕೆ ಶುರುವಾಗಿದೆ. ಸಂಕೋಚವಿಲ್ಲದೆ ಹೇಳಿಬಿಡುತ್ತೇನೆ: ನನ್ನ ದೇಹದಲ್ಲಿ ನೆಪಮಾತ್ರಕ್ಕಷ್ಟೇ ಉಸಿರಾಟ ನಡೆಯುತ್ತಿದೆ. ನಿನ್ನ ನೆನಪಿನಿಂದಲೇ ಎದೆಬಡಿತ ಸಾಗುತ್ತಿರೋದು…
ಪಾರಿಜಾತದಂಥಾ ಪ್ರಿಯತಮೆ,
ಇತ್ತೀಚೆಗೆ ನನ್ನೆದೆಯ ಆವರಣದಲ್ಲಿ ನಿನ್ನದೇ ಅಮಲು ತುಂಬಿಕೊಂಡು ಹೃದಯ ಸಂಪೂರ್ಣ ಅವಘಡಕ್ಕೀಡಾಗಿದೆ. ನಿನ್ನಿಂದಾದ ಸರಣಿ ಎಡವಟ್ಟುಗಳನ್ನು ಹಾಗೂ ನೀನು ಮಾಡಿದ ಮಧುರ ಅಪರಾಧಗಳನ್ನು ಒಂದೊಂದಾಗಿ ಈ ಕಾಗದಕ್ಕಿಳಿಸುತ್ತಿದ್ದೇನೆ.
ದೀಪಾವಳಿ ಹಬ್ಬಕ್ಕೆಂದು ಗೆಳೆಯನ ಜೊತೆ ನಿಮ್ಮೂರಿಗೆ ಬಂದಾಗ ಹಸಿರುಲಂಗದ ತರುಣಿಯ ವಯ್ನಾರಕ್ಕೆ, ಜೋಡಿ ಜಡೆಯ ಜೊಂಪಿಗೆ ಮರುಳಾಗುತ್ತೇನೆಂದು ಗೊತ್ತಿರಲಿಲ್ಲ. ಆ ಸಿಹಿನಿಮಿಷದಲ್ಲಿ ನನ್ನ ಹೃದಯವನ್ನು ಹದ್ದುಬಸ್ತಿನಲ್ಲಿಡಲು ಎಷ್ಟೆಲ್ಲಾ ಹೆಣಗಾಡಿದ್ದೇನೆ ಗೊತ್ತಾ.? ಉಹುಂ, ಕೊನೆಗೂ ಒಲವ ಕಲರವದ ಕನಸುಗಳು ನನ್ನ ಮೇಲೆ ಸವಾರಿ ಮಾಡಿಯೇಬಿಟ್ಟವು. ಸುರ್ ಸುರ್ ಬತ್ತಿಗೆ ಅಲ್ಲಿ ನೀನು ತಾಕಿಸಿದ ಕಿಡಿ ಬೆಳಗಿಸಿದ್ದು ಮಾತ್ರ ನನ್ನ ಹೃದಯವನ್ನು!
ಅಂದಹಾಗೆ ನಿನ್ನದೇ ಕನಸುಗಳು ನನ್ನ ಕಣ್ಣೊಳಗೆ ಬಿಡಾರ ಹೂಡಿ ಚಕಮಕಿ ನಡೆಸುತ್ತಿವೆ. ಇವಕ್ಕೆಲ್ಲಾ ಯಾರು ಪರವಾನಗಿ ಕೊಟ್ಟರೋ ಗೊತ್ತಾಗ್ತಿಲ್ಲ. ಚಲಾವಣೆಯಾಗದೇ ಪದೇಪದೆ ಕೈಸೇರುವ ಹರಿದ ನೋಟಿನಂತೆ ನಿನ್ನ ನೆನಪುಗಳು ಸುತ್ತಿ ಬಳಸಿ ಸುಳಿದಾಡುತ್ತಿವೆ. ನನ್ನೆದೆಯಲ್ಲಿ ನಿನ್ನ ನೆನಪುಗಳು ತೋಟದ ತೊಗರಿಯ ಹೂವಿನಂತೆ ಘಮಗುಡುತ್ತಿದೆ.
ನಿಜಾ ಹೇಳ್ತೀನಿ ಕೇಳು, ಫಳಫಳ ಹೊಳೆಯುವ ನಿನ್ನ ಬೆಳಕಿನ ಕಣ್ಣುಗಳ ಕರಾಮತ್ತು ಚಂದ್ರಮನಿಗೇನಾದರೂ ಗೊತ್ತಾಗಿಬಿಟ್ಟಿದ್ದರೆ ಬಹುಶಃ ಆ ಕ್ಷಣದಲ್ಲೇ ಚಕಚಕಾ ಅಂತ ರಾಜೀನಾಮೆ ಅರ್ಜಿಯನ್ನು ಗೀಚಿ ತಲೆಮರೆಸಿಕೊಂಡುಬಿಡುತ್ತಿದ್ದನೇನೋ? ಒಲವ ವಾರ್ತೆಯನ್ನು ತಿಳಿಸುವ ನಿನ್ನ ಅವಳಿ ಕಣ್ಣುಗಳಿಗೆ ನನ್ನೆದೆ ಮರುಳಾಗಿದೆ. ನನ್ನ ಹೃದಯವನ್ನು ಪುಳಕಗೊಳಿಸಿ ಒಲವ ಪಿತೂರಿಯಿಂದ ಕಬಳಿಸಿದ ನಿನ್ನ ಮುಂಗುರುಳ ಮಾಂತ್ರಿಕತೆಯನ್ನು ಮೆಚ್ಚಲೇಬೇಕು.
ಕ್ರಿಸ್ತಶಕ ಎರಡುಸಾವಿರದ ಹದಿನೇಳಕ್ಕೆ ಸರಿಯಾಗಿ ನನ್ನೆದೆಯಲ್ಲಿ ಪ್ರೇಮಶಕೆ ಶುರುವಾಗಿದೆ. ನನ್ನೊಳಗಿನ ಈ ಒಲವ ವಿದ್ಯಮಾನಗಳಿಗೆಲ್ಲಾ ವಿಧ್ಯುಕ್ತವಾದ ಚಾಲನೆ ದೊರಕಿದ್ದು ನಿನ್ನನ್ನು ಕಣ್ಣಿನೋಪಾದಿಯಲ್ಲಿ ನನ್ನ ಎದೆಕಡಲಿಗೆ ಬಿಟ್ಟುಕೊಂಡ ತರುವಾಯವೇ. ಸಂಕೋಚವಿಲ್ಲದೆ ಹೇಳಿಬಿಡುತ್ತೇನೆ: ನನ್ನ ದೇಹದಲ್ಲಿ ನೆಪಮಾತ್ರಕ್ಕಷ್ಟೇ ಉಸಿರಾಟ ನಡೆಯುತ್ತಿದೆ. ನಿನ್ನ ನೆನಪಿನಿಂದಲೇ ಎದೆಬಡಿತ ಸಾಗುತ್ತಿರೋದು… ಗುರುತುಮಾಡಿಟ್ಟುಕೊಂಡ ಅದೆಷ್ಟೋ ಗುರುತರ ಕನಸುಗಳೆಲ್ಲಾ ಗಾಳಿಗೋಪುರದಂತೆ ಎಲ್ಲಿ ಕುಸಿದುಬಿಡುತ್ತವೋ ಎಂಬ ಅಂಜಿಕೆಯಲ್ಲಿಯೇ ದಿನಗಳನ್ನು ಅಟ್ಟುತ್ತಿದ್ದೇನೆ.
ಈ ಪೆದ್ದುಮುದ್ದು ಹುದುಗನ ಪ್ರೀತಿಯನ್ನು ಒಪ್ಪಿಕೊಳ್ಳುತ್ತೀ ಎಂಬ ಅಪರಿಮಿತ ನಂಬುಗೆಯಲ್ಲಿ…..
ಇಂತಿ ನಿನ್ನ..
ಅನುರಾಗ ಬಯಸುವ ಆಸಾಮಿ
ಹೃದಯರವಿ
ರವಿಕುಮಾರ್ ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.