ಗುಜರಾತ್ ಚುನಾವಣೆಯಲ್ಲಿ ನಿಜವಾಗಿ ಗೆದ್ದಿರುವುದು ಮತಯಂತ್ರಗಳು!
Team Udayavani, Dec 20, 2017, 2:41 PM IST
ಮತಯಂತ್ರಗಳ ದುರುಪಯೋಗ ಕುರಿತ ಆರೋಪಗಳನ್ನು ಮೊಳಗಿಸಿರುವ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳೂ ಈಗ ಇಂಥ ಎಲ್ಲ ಆರೋಪಗಳನ್ನು ಹಾಗೂ ಸಬೂಬುಗಳನ್ನು ತಮ್ಮ ಮೇಲೇ ಹೇರಿಕೊಳ್ಳಬೇಕಾಗಿದೆ. ಚುನಾವಣೆಯಲ್ಲಿ ಪ್ರತಿಬಾರಿ ಸೋತಾಗಲೂ ಈ ಪಕ್ಷಗಳು ಹೀಗೆ ಮತಯಂತ್ರಗಳನ್ನೇ ದೂರುತ್ತ ಸಾಗುವುದು ಸಾಧ್ಯವಿಲ್ಲದ ಮಾತು.
ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಅಂಕಿ ಅಂಶ ಘೋಷಣೆ ಆಗುತ್ತಿದ್ದಂತೆಯೇ ಇತ್ತ ಚುನಾವಣಾ ಆಯೋಗದ ಭೂತಪೂರ್ವ ಆಯುಕ್ತರು ಒಂದು ಮಾತು ಹೇಳಿದರು. ಅವರೆಂದದ್ದು ಹೀಗೆ -ಈ ಚುನಾವಣೆಯಲ್ಲಿ ನಿಜವಾಗಿ ಗೆಲುವು ಸಾಧಿಸಿರುವುದು ಎಲೆಕ್ಟ್ರಾನಿಕ್ ಮತ ಯಂತ್ರಗಳು! ಇದೇ ವೇಳೆ ಆಯೋಗದ ಇನ್ನೋರ್ವ ಭೂತ ಪೂರ್ವ ಆಯುಕ್ತ ಟಿ.ಎಸ್. ಕೃಷ್ಣಮೂರ್ತಿ ಹೇಳಿದ್ದು- “ಯಂತ್ರಗಳು ತಪ್ಪು ಮಾಡುವುದಿಲ್ಲ. ಹಾಗೆ ಮಾಡುವುದೇನಿದ್ದರೂ ಮನುಷ್ಯರೇ’!
ಈ ಬಾರಿಯ (ಎರಡೂ ರಾಜ್ಯಗಳ) ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಮತಯಂತ್ರಗಳ ವಿರುದ್ಧವೂ ಅಪಪ್ರಚಾರದಲ್ಲಿ ನಿರತವಾಗಿದ್ದವು. ಮೇಲಿನ ಇಬ್ಬರು ಮಾಜಿ ಆಯುಕ್ತರುಗಳು ಹೇಳಿಕೆ ನೀಡಿರುವುದು ಈ ಹಿನ್ನೆಲೆಯಲ್ಲಿ. ಕಾಂಗ್ರೆಸ್ ಇದೀಗ ಗುಜರಾತಿನಲ್ಲಿ ಉತ್ತಮ ನಿರ್ವಹಣೆ ದಾಖಲಿಸಿ ಅಧಿಕಾರಾರೂಢ ಬಿಜೆಪಿಯನ್ನು ಹೆಚ್ಚು ಕಮ್ಮಿ ಕುರ್ಚಿಯಿಂದ ಉರುಳಿಸುವ ಹಂತದವರೆಗೆ ಬಂದಿತ್ತೆನ್ನುವುದು ಜಗಜ್ಜಾಹೀರಾಗಿದ್ದು, ಈ ಹಿನ್ನೆಲೆಯಲ್ಲಿ ಆ ರಾಜ್ಯದಲ್ಲಿ ಕಾಂಗ್ರೆಸ್ “ಸೋತು ಗೆದ್ದಿದೆ’ ಎಂಬ ಮಾತು ಕೇಳಿಬರುತ್ತಿರುವುದರಿಂದ ಆ ಪಕ್ಷ ಇನ್ನು ಮುಂದಾದರೂ ಮತಯಂತ್ರದ ಮೇಲೆ ಗೂಬೆ ಕೂರಿಸುವುದಕ್ಕೆ ಮುಂದಾಗಲಾರದು ಎಂದೇ ಆಶಿಸ ಬಹುದಾಗಿದೆ. ಈ ನಡುವೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೊಂದು ಪ್ರಶ್ನೆಯನ್ನು ಕೇಳಬೇಕಾಗಿದೆ. ಮತಯಂತ್ರಗಳನ್ನು ಕುರಿತ ಅವರ ನಿಲುವೇನಿದೆ, ಅದಕ್ಕೆ ಅವರು ಇನ್ನೂ ಅಂಟಿಕೊಂಡಿದ್ದಾರೆಯೆ?
ಒಂದು ಮಾತನ್ನು ಅವರು ಮರೆಯ ಕೂಡದು. 2013ರಲ್ಲಿ ಕಾಂಗ್ರೆಸನ್ನು ಗದ್ದುಗೆಗೇರಿಸಿದ್ದು ಮತಯಂತ್ರಗಳೇ. ಹೀಗಿರುತ್ತಾ ಕರ್ನಾಟಕದಲ್ಲಿ ನಾಡಿದ್ದು ನಡೆಯುವ ಚುನಾವಣೆಯಲ್ಲಿ ಮತ ಪತ್ರಗಳನ್ನೇ ಬಳಸಲು ಅವಕಾಶ ಮಾಡಿಕೊಡಬೇಕೆಂದು ಅವರು ಆಗ್ರಹಿಸಲಿದ್ದಾರೆಯೆ? ಈ ದಿನಗಳಲ್ಲಿ ಯಾವುದಾದರೂ ರಾಜಕೀಯ ಪಕ್ಷ ಚುನಾವಣೆಯಲ್ಲಿ ಸೋಲು ಕಂಡಿತೆಂದರೆ, ಮತಯಂತ್ರಗಳೇ ಸರಿಯಿಲ್ಲ ಎಂದು ಆಕ್ಷೇಪಿಸುವುದು ಒಂದು ಚಾಳಿಯೇ ಆಗಿಬಿಟ್ಟಿದೆ. ಹೀಗೆ ಸೋತು ಯಾವುದರ ಮೇಲೋ ಗೂಬೆ ಕೂರಿಸುತ್ತಿರುವ ರಾಜಕಾರಣಿಗಳ ಬಗ್ಗೆ “ಕುಣಿಯಲು ಬಾರದವಳಿಗೆ ಅಂಗಳ ಡೊಂಕು’ ಎಂಬ ಜನಪ್ರಿಯ ಗಾದೆಯನ್ನು ತಳುಕು ಹಾಕಲು ನಾವು ಹೋಗಬೇಕಿಲ್ಲ. ಹೀಗೆ ಸೋತವರ ದುಃಖ ನಮಗೂ ಅರ್ಥವಾಗುತ್ತದೆ; ಮುಂದಿನ ಬಾರಿ ಅವರು ಗೆಲ್ಲಲಿ ಎಂದೇ ಹಾರೈಸೋಣ. ಮತಯಂತ್ರಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಅಥವಾ ಅಧಿಕಾರಾರೂಢ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಅದನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದೇ ಸರ್ವತ್ರ ಕೇಳಿಬರುತ್ತಿರುವ ಆಕ್ಷೇಪ. ಇಂಥ ಆರೋಪ ಜೋರಾಗಿ ಕೇಳಿ ಬಂದದ್ದು ಈ ವರ್ಷದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಿದ ಬಳಿಕ.
ಸೋಮವಾರ ಗುಜರಾತ್ ಚುನಾವಣೆಯ ಫಲಿತಾಂಶ ಹೊರಬೀಳಲು ಆರಂಭಿಸುತ್ತಿದ್ದಂತೆಯೇ ಮತಯಂತ್ರಗಳ ಕುರಿತಾದ ಅಪಸ್ವರವೂ ಮೊಳಗಲಾರಂಭಿಸಿತು. ಎಲ್ಲರಿಗಿಂತ ಮೊದಲು ಹೀಗೆ ದೂರಲಾರಂಭಿಸಿದ ವ್ಯಕ್ತಿಗಳಲ್ಲಿ ಒಬ್ಬರು, ಪಾಟೀದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್, ರಾಜ್ಯದ ಕಾಂಗ್ರೆಸ್ ನಾಯಕರಲ್ಲೊಬ್ಬರಾದ ಅರ್ಜುನ್ ಮೋದ್‌ವಾಡಾ ಅವರು ಈ ಚುನಾವಣೆಯಲ್ಲಿ ಸೋತವರಲ್ಲೊಬ್ಬರು; ಇವರು ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಕೂಡ ಮತಯಂತ್ರಗಳನ್ನು ದೂರುತ್ತಿದ್ದವರು.
ಮತಯಂತ್ರಗಳ ದುರುಪಯೋಗ ಕುರಿತ ಆರೋಪಗಳನ್ನು ಮೊಳಗಿಸಿರುವ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳೂ ಈಗ ಇಂಥ ಎಲ್ಲ ಆರೋಪಗಳನ್ನು ಹಾಗೂ ಸಬೂಬುಗಳನ್ನು ತಮ್ಮ ಮೇಲೇ ಹೇರಿಕೊಳ್ಳಬೇಕಾಗಿದೆ. ಚುನಾವಣೆಯಲ್ಲಿ ಪ್ರತಿಬಾರಿ ಸೋತಾಗಲೂ ಈ ಪಕ್ಷಗಳು ಹೀಗೆ ಮತಯಂತ್ರಗಳನ್ನೇ ದೂರುತ್ತ ಸಾಗುವುದು ಸಾಧ್ಯವಿಲ್ಲದ ಮಾತು. ಚುನಾವಣಾ ಆಯೋಗ ಈ ಹಿಂದೆ ಮತಯಂತ್ರಗಳ ಕರಾರುವಾಕುತನದ ಸಾಬೀತಿಗೆಂದು ಕರೆದಿದ್ದ ಸಭೆಗೆ ಈ ಪಕ್ಷಗಳ ನಾಯಕರು ಹಾಜರಾಗಿರಲಿಲ್ಲ. ಮತ ಯಂತ್ರಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ ಯಾರಾದರೂ “ತಜ್ಞರು’ ಸಿಕ್ಕಿದ್ದರೆ, ಅಂಥ ವರನ್ನು ಈ ಸಭೆಗೆ ಕರೆದೊಯ್ದು ತಮ್ಮ ಆರೋಪವನ್ನು ರುಜು ಪಡಿಸಬಹುದಿತ್ತು. ಇಂಥ ಅವಕಾಶವನ್ನು ಈ ವಿರೋಧಪಕ್ಷಗಳ ನಾಯಕರು ಕೈಯಾರೆ ಕಳೆದುಕೊಂಡರು. ಈಗ ಈ ಯಂತ್ರಗಳ ಹಾಗೂ ಚುನಾವಣಾ ಆಯೋಗದ ವಿರುದ್ಧ ಬೊಬ್ಬೆ ಹಾಕುತ್ತಿದ್ದಾರೆ. ಚುನಾವಣೆಗಳಲ್ಲಿ ಪದೇ ಪದೇ ಸೋಲುವುದು ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸವೇ ಆಗಿಬಿಟ್ಟಿರುವುದರಿಂದ ಅದು ಮತಯಂತ್ರಗಳನ್ನೇ ದೂರುತ್ತಿದೆ; ತನಗೆ ಮತ ಹಾಕಿದವರನ್ನಲ್ಲ.
ಹಾಗೆ ನೋಡಿದರೆ ಮತಯಂತ್ರಗಳ ಮೇಲೆ ದೋಷಾರೋಪ ಹೊರೆಸುತ್ತಿರುವುದಕ್ಕಾಗಿ ಕಾಂಗ್ರೆಸ್ ಪಕ್ಷವನ್ನಷ್ಟೇ ಆಕ್ಷೇಪಿಸುವಂತಿಲ್ಲ. ಎಲ್ಲರಿಗಿಂತ ತೀವ್ರವಾಗಿ ಈ ವಿಷಯದಲ್ಲಿ ಆಕ್ಷೇಪವೆತ್ತಿದ್ದವರು ಬಿಜೆಪಿಯ ನಾಯಕ, ರಾಜ್ಯಸಭೆಯ ನಾಮಾಂಕಿತ ಸದಸ್ಯ ಡಾ| ಸುಬ್ರಹ್ಮಣ್ಯಂ ಸ್ವಾಮಿ, ಕೇವಲ ಆಕ್ಷೇಪವೆತ್ತಿ ಸುಮ್ಮನಾಗುವ ಪೈಕಿಯಲ್ಲ ಅವರು. ಈ ವಿಷಯವನ್ನು 2010ರಲ್ಲಿ ದಿಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಿನವರೆಗೂ ಒಯ್ದರು. ಹೀಗೆ ಮಾಡುವ ಮುನ್ನ ಅವರು “ಮತಯಂತ್ರಗಳ ದುರುಪಯೋಗ’ ಕುರಿತ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶವೊಂದನ್ನು ಏರ್ಪಡಿಸಿದ್ದರು. ಮತ ಯಂತ್ರಗಳ ಜತೆಯಲ್ಲೆ “ಮತದಾರರ ತಪಶೀಲು ಪತ್ರಗಳ ಪರಿಶೀಲನೆ’ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶವೀಯಲು ಕಾರಣ ಡಾ| ಸ್ವಾಮಿಯವರು ಹೂಡಿದ ದಾವೆ. 2014ರ ಚುನಾವಣೆಯಲ್ಲಿ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಇದಕ್ಕೆ ಮುನ್ನ ಖುದ್ದು ಚುನಾವಣಾ ಆಯೋಗವೇ ಮತಯಂತ್ರಗಳ ಬಗೆಗಿನ ದೂರುಗಳ ಪರಿಶೀಲನೆ ನಡೆಸುವುದಕ್ಕಾಗಿ ಮದ್ರಾಸ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಿಂದಿನ ನಿರ್ದೇಶಕ ಪ್ರೊ| ಪಿ.ವಿ. ಇಂದಿರೇಶನ್ ಅವರ ನೇತೃತ್ವದ ಸಮಿತಿಯೊಂದನ್ನು ರೂಪಿಸಿತ್ತು. ಡಾ|ಸುಬ್ರಹ್ಮಣ್ಯಂ ಸ್ವಾಮಿ ಅವರು ಮತಯಂತ್ರಗಳ ಬಗೆಗಿನ ತಮ್ಮ ಅಂದಿನ ನಿಲುವಿಗೆ ಈಗಲೂ ಅಂಟಿಕೊಂಡಿದ್ದಾರೆಯೆ?
ಚುನಾವಣಾ ಆಯೋಗ 1999ರಿಂದಲೂ ಮತಯಂತ್ರಗಳನ್ನು ಬಳಸುತ್ತ ಬಂದಿದೆ. ಮೊದಲಿಗೆ ಇವುಗಳನ್ನು ಬಳಸಿಕೊಂಡಿದ್ದು 1982ರಲ್ಲಿ, ಕೇರಳದ ಪರವೂರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ. ಕರ್ನಾಟಕದಲ್ಲಿ ಇವುಗಳನ್ನು ಮೊದಲಿಗೆ ಬಳಸಿದ್ದು 1983ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಬೆಂಗಳೂರಿನ ಶಾಂತಿನಗರ ಮೀಸಲು ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ. ಈ ಚುನಾವಣೆಯಲ್ಲಿ ಗೆದ್ದುಬಂದ ಜನತಾಪಕ್ಷದ ಅಭ್ಯರ್ಥಿ ಪಿ.ಡಿ. ಗೋವಿಂದ ರಾಜ್ ಅವರಿಗೆ “ಎಲೆಕ್ಟ್ರಾನಿಕ್ ಗೋವಿಂದರಾಜ್’ ಎಂಬ ಉಪನಾಮವೊಂದು ಅಂಟಿಕೊಂಡಿತು! ಈ ಚುನಾವಣೆಯ ಪ್ರಕ್ರಿಯೆಯನ್ನು ನಾನೇ ವರದಿ ಮಾಡಿದ್ದೆ. ಅವರು ಗೆದ್ದ ಸುದ್ದಿ ಮಧ್ಯಾಹ್ನದೊಳಗೇ ಪ್ರಕಟವಾಗಿತ್ತು. ಅದುವರೆಗೂ ಚುನಾವಣಾ ಫಲಿತಾಂಶದ ಕುರಿತು ವರದಿ ಮಾಡುವುದೆಂದರೆ ಪತ್ರಿಕಾ ವರದಿಗಾರರ ಪಾಲಿಗೊಂದು ದೊಡ್ಡ ಸಾಹಸವೇ ಆಗಿತ್ತು. ಇತ್ತ ಅಭ್ಯರ್ಥಿಗಳ ಪಾಲಿಗೆ ಫಲಿತಾಂಶಕ್ಕಾಗಿ ಕಾದು ನಿಲ್ಲುವುದು ಯಾತನೆಯ ಕೆಲಸವೇ ಆಗಿತ್ತು. ಕೊನೆಗೂ ಫಲಿತಾಂಶ ಪ್ರಕಟವಾದಾಗ ಈ ಯಾತನೆ ಆನಂದವಾಗಿ ಮಾರ್ಪಡುತ್ತಿತ್ತು. ಫಲಿತಾಂಶ ಹೊರ ಬೀಳುತ್ತಿದ್ದುದು ಎಷ್ಟೋ ಹೊತ್ತಿನ ಬಳಿಕ. ಒಂದು ವೇಳೆ ಮರು ಎಣಿಕೆ ನಡೆದರೆ ಫಲಿತಾಂಶ ಗೊತ್ತಾಗಬೇಕಿದ್ದರೆ ಮರುದಿನದ ವರೆಗೂ ಕಾಯಬೇಕಾಗುತ್ತಿತ್ತು. ಉದಾಹರಣೆಗೆ 1991ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿಯ ಅಭ್ಯರ್ಥಿ ಎಸ್. ಎ. ರವೀಂದ್ರನಾಥ್ ಅವರು ದಾವಣಗೆರೆ ಕ್ಷೇತ್ರದಿಂದ ಗೆದ್ದಿರುವುದಾಗಿ ಮೊದಲಿಗೆ ಘೋಷಿಸಲಾಗಿತ್ತು. ಮರು ಎಣಿಕೆ ಪ್ರಕ್ರಿಯೆಯ ಬಳಿಕ ಕಾಂಗ್ರೆಸ್‌ನ ಚೆನ್ನಯ್ಯ ಒಡೆಯರ್ ವಿಜೇತರಾಗಿರುವುದಾಗಿ ಘೋಷಿಸಲಾಯಿತು.
ಮತಯಂತ್ರಗಳ ಬಳಕೆಯನ್ನು ಯಾಕೆ ಆರಂಭಿಸಲಾಯಿ ತು ಎಂಬುದು ಎಲ್ಲರಿಗೂ ಗೊತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮದು ಜನಸಾಂದ್ರವಿರುವ ದೇಶ; ಲಕ್ಷಗಟ್ಟಲೆ ಮತದಾರರಿರುವ ದೇಶ. ಮತಗಳ ಎಣಿಕೆಯನ್ನು ಮನುಷ್ಯರ ಮೂಲಕ ಮಾಡಿಸುವುದೆಂದರೆ, ಇದೊಂದು ಅತ್ಯಂತ ಸಂಕೀರ್ಣ, ಕ್ಲಿಷ್ಟ ಕಾರ್ಯ. ಇಲ್ಲಿ ತಪ್ಪುಗಳಾಗಬಹುದು, ಭ್ರಷ್ಟಾಚಾರ ತಲೆ ಹಾಕಬಹುದು. ನಿರ್ವಚನಾಧಿಕಾರಿ ಅಥವಾ ಪೋಲಿಂಗ್ ಆಫೀಸರ್ ಆಗಿ ಅಥವಾ ಮತ ಎಣಿಕೆದಾರರಾಗಿ ನಮ್ಮ ಅಧಿಕಾರಿಗಳನ್ನು ಬಳಸಿಕೊಳ್ಳುವುದು ಅನಿವಾರ್ಯ. ಇಂಥ ಅಧಿಕಾರಿಗಳ ಪ್ರಾಮಾಣಿಕತೆಯ ಬಗ್ಗೆ ಪ್ರತ್ಯೇಕವಾಗಿ ಬರೆಯುವ ಅಗತ್ಯವೇ ಇಲ್ಲ. ಎಷ್ಟೋ ಮತಪತ್ರಗಳನ್ನು ಸರಿಯಾದ ಕಾರಣ ನೀಡದೆ ಅಸಿಂಧುವೆಂದು ತಿರಸ್ಕರಿಸಲಾಗಿರುವುದೂ ಉಂಟು. ಚಲಾಯಿಸಲ್ಪಟ್ಟ ಮತಗಳ ಸಂಖ್ಯೆಯನ್ನು ಹೆಚ್ಚಿಸಿದ ಇಲ್ಲವೇ “ಕಡಿಮೆ’ ಎಂದು ಘೋಷಿಸಿದ ಪ್ರಕರಣಗಳೂ ನಡೆದಿರುವುದುಂಟು. ಮಾಜಿ ರೈಲ್ವೇ ಸಚಿವ ಸಿ.ಕೆ. ಜಾಫರ್ ಶರೀಫ್ ಅವರ ಆಯ್ಕೆಯ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಅವರಿಗೆ ಬಂದಿದ್ದ ಮತಗಳ ಸಂಖ್ಯೆಗಿಂತ ಒಂದು ಲಕ್ಷ ಮತಗಳು ಹೆಚ್ಚಾಗಿ ಬಿದ್ದಿವೆ ಎಂದು ತೋರಿಸಲಾಯಿತೆಂಬುದಾಗಿ ಆರೋಪಿಸಲಾಗಿತ್ತು. ಹೀಗೆ ಅವರ ಆಯ್ಕೆಯ ವಿರುದ್ಧ ದೂರ ಸಲ್ಲಿಸಿದ್ದವರು, ಜನತಾದಳದ ಸಿ. ನಾರಾಯಣ ಸ್ವಾಮಿ ಎಂದು ಇದೇ ವೇಳೆ ನೆನಪಿಡಬೇಕು. ಮತಯಂತ್ರಗಳ ಬಳಕೆಯಾಗುತ್ತಿದೆಯೆಂದರೆ, ಚುನಾವಣಾ ವಂಚನೆ, ಮತಗಟ್ಟೆ ವಶೀಕರಣ, ಢೋಂಗಿ ಮತದಾನ, ಮತದಾರರನ್ನು ಬೆದರಿಸುವಿಕೆ ಇತ್ಯಾದಿ ಪಿಡುಗುಗಳಿಗೆ ಮೋಕ್ಷ ಸಿಕ್ಕಿದೆಯೆಂದು ಅರ್ಥವಲ್ಲ. ಮತಯಂತ್ರಗಳ ಬಳಕೆಯ ಬಳಿಕವೂ ಮರು ಎಣಿಕೆಯ ಬಳಿಕ ಕನಿಷ್ಠ ಒಬ್ಬ ಕಾಂಗ್ರೆಸ್ ನಾಯಕನಾದರೂ ಗೆದ್ದು ಬಂದ ಉದಾಹರಣೆಯಿದೆ. 2009ರಲ್ಲಿ ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಸ್ಪರ್ಧಿಸಿದ ಪಿ. ಚಿದಂಬರಂ ಅವರನ್ನು ಮೊದಲ ಸುತ್ತಿನ ಎಣಿಕೆಯ ಬಳಿಕ ಸೋತಿರುವುದಾಗಿ ಘೋಷಿಸಲಾಗಿತ್ತು. ಎರಡನೆಯ ಸುತ್ತಿನ ಎಣಿಕೆಯ ಬಳಿಕ ವಿಜೇತರಾಗಿರುವುದಾಗಿ ಪ್ರಕಟಿಸಲಾಯಿತು.
ಮತಪತ್ರಗಳ ದುರುಪಯೋಗ ಕುರಿತ ದೂರು ದುಮ್ಮಾನಗಳು 1952ರಿಂದಲೇ ಕೇಳಿಬರುತ್ತಿದ್ದವು. ಹೀಗೆ ಆಕ್ಷೇಪಿಸಿದವರಲ್ಲಿ ಕರ್ನಾಟಕ ಮೂಲದ ಸುಪ್ರಸಿದ್ಧ ಸಂಸದೀಯ ಪಟು ಹಂಡೆ ವಿಷ್ಣು ಕಾಮತ್ ಅವರು ಮೊದಲಿಗರು. 1971ರ ಲೋಕಸಭಾ ಚುನಾವಣೆಯಲ್ಲಿ ಆಗಿನ ಜನಸಂಘದ ಅಧ್ಯಕ್ಷ ಪ್ರೊ| ಬಲರಾಜ್ ಮಧೋಕ್ ಅವರು ಮತಪತ್ರಗಳ ಮೇಲಿನ ಗುರುತುಗಳನ್ನು ಅಧಿಕಾರರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಕಾಣಿಸುವ ರೀತಿಯಲ್ಲಿ ಮತಪತ್ರಗಳನ್ನು ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಲಾಗಿದೆ ಎಂದು ಆರೋಪಿಸಿದ್ದರು. ಚುನಾವಣೆಯಲ್ಲಿನ ಪಾವಿತ್ರ್ಯ, ಪ್ರಾಮಾಣಿಕತೆಯ ಪಾತ್ರವೆಷ್ಟು ಎಂಬುದನ್ನು ಪ್ರಶ್ನಿಸುವಂಥ ಅಸಂಖ್ಯಾತ ದೂರುಗಳು ನ್ಯಾಯಾಲಯಗಳಲ್ಲಿ ದಾಖಲಿಸಲ್ಪಟ್ಟಿವೆ ಎಂಬುದನ್ನು ಗಮನಿಸಬೇಕು. ಹಾಗೆ ನೋಡಿದರೆ ಮತದಾನ ಕುರಿತ ರಹಸ್ಯವನ್ನು ರಕ್ಷಿಸಿಡುವುದು ಮತಯಂತ್ರಗಳೇ ಹೊರತು ಮತಪತ್ರಗಳಲ್ಲ. ಕೆಲವು ಪಾಶ್ಚಾತ್ಯ ರಾಷ್ಟ್ರಗಳು ಮತಯಂತ್ರಗಳನ್ನು ಬಳಸುತ್ತಿಲ್ಲ ಎನ್ನುವುದು ನಿಜವೇ. ಜರ್ಮನಿಯಲ್ಲಿ ಮತಯಂತ್ರಗಳ ಬಳಕೆಗೆ ಅಲ್ಲಿನ ಕಾನೂನಿನಡಿ ಅವಕಾಶವಿಲ್ಲ. ಅಮೆರಿಕದಲ್ಲಿ ಮತಯಂತ್ರಗಳ ಬಳಕೆಯಿಲ್ಲವಾದರೂ, “ನೇರ ದಾಖಲಾತಿಯ ಎಲೆಕ್ಟ್ರಾನಿಕ್ ವ್ಯವಸ್ಥೆ (ಎಲೆಕ್ಟ್ರಾನಿಕ್ ಡೈರೆಕ್ಟ್ ರೆಕಾರ್ಡಿಂಗ್ ಸಿಸ್ಟಮ್) ಚಾಲ್ತಿಯಲ್ಲಿದೆ.’ ಅಲ್ಲಿ ಕೂಡ 2000ದಲ್ಲಿ ನಡೆದ ರಾಷ್ಟ್ರಾಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಅಲ್‌ಗೋರ್ ಅವರು ಫ್ಲಾರಿಡಾ ರಾಜ್ಯದಲ್ಲಿ ತನ್ನೆದುರು ಸ್ಪರ್ಧಿಸಿದ್ದ ರಿಪಬ್ಲಿಕನ್ ಅಭ್ಯರ್ಥಿ ಜಾರ್ಜ್ ಬುಷ್(ಜ್ಯೂನಿಯರ್) ಅವರು ಚುನಾವಣಾ ವಂಚನೆಯೆಸಗಿರು ವುದಾಗಿ ಆರೋಪಿಸಿದ್ದುಂಟು. ಈ ಹಿನ್ನೆಲೆಯಲ್ಲಿ ಅಲ್ಲಿನ ಸುಪ್ರೀಂ ಕೋರ್ಟ್ ಮತಗಳ ಮರು ಎಣಿಕೆಯಾಗಲೆಂದು ಆದೇಶ ಹೊರಡಿಸಿತ್ತು. ಇತ್ತೀಚೆಗೆ ನಡೆದಿರುವ ರಾಷ್ಟ್ರಾಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಕೂಡ ತನ್ನ ವಿರೋಧಿ ಅಭ್ಯರ್ಥಿಯಾಗಿದ್ದ ಡೆಮಾಕ್ರಟ್ ಪಕ್ಷದ ಹಿಲರಿ ಕ್ಲಿಂಟನ್ ಅವರ ಪರವಾಗಿ ರಷÂನರು “ಮಧ್ಯ ಪ್ರವೇಶ’ ಮಾಡಿದ್ದಾರೆಂದು ಅಧ್ಯಕ್ಷ ಟ್ರಂಪ್ ಆರೋಪಿಸಿದ್ದರು. ಇಲ್ಲಿ ಕೂಡ ಗುಜರಾತ್ ಚುನಾವಣೆಯಲ್ಲಿ, ನೆರೆಯ ಪಾಕಿಸ್ಥಾನ ಕೆಲ ಕಾಂಗ್ರೆಸ್ ನಾಯಕರ ಮೂಲಕ ಇಂಥ ಕೃತ್ಯವೆಸಗಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ, ಇದರಲ್ಲೇನೂ ಅಚ್ಚರಿಯಿಲ್ಲ.
ಅರಕೆರೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.