“ನೀಲ’ ಲೋಕದ ವ್ಯಸನದಲ್ಲಿ ಮಕ್ಕಳು
Team Udayavani, Dec 21, 2017, 7:58 AM IST
ಸುರಕ್ಷಿತ ಹಾಗೂ ಆರೋಗ್ಯಪೂರ್ಣ ಲೈಂಗಿಕತೆಯ ಮಹತ್ವವೇನು ಎಂಬುದನ್ನು ಮಕ್ಕಳಿಗೆ ವಿವರಿಸಬೇಕು. ನಾವು ಮುಕ್ತವಾಗಿ ಸಂವಹನ ಆರಂಭಿಸಿದರೆ ಮಕ್ಕಳೂ ತಮ್ಮ ಅನು ಭವಗಳನ್ನು ಅಂಜಿಕೆಯಿಲ್ಲದೆ ಹೇಳಿ ಕೊಳ್ಳುತ್ತಾರೆ. ಮದ್ಯ ಅಥವಾ ಮಾದಕ ವಸ್ತುಗಳಿಗಿಂತ ಕಮ್ಮಿ ಇಲ್ಲದಂತೆ ನೀಲಿ ಚಿತ್ರಗಳ ವೀಕ್ಷಣೆ ಕೂಡ ಚಟವಾಗಿ ಮಾರ್ಪಟ್ಟು ಹೇಗೆ ವ್ಯಕ್ತಿತ್ವ, ಆರೋಗ್ಯ ಹಾಗೂ ಭವಿಷ್ಯವನ್ನು ಹಾಳುಗೆಡವುತ್ತದೆ ಎಂಬುದನ್ನು ವಿವರಿಸುವುದು ಅಗತ್ಯ.
ನಮ್ಮ ಮಕ್ಕಳಿಗೆ ಅಶ್ಲೀಲತೆ ಸೋಂಕಬಾರದು, ಅವರು ಸಂಸ್ಕಾರವಂತರಾಗಿರಬೇಕು, ಒಳ್ಳೆಯದನ್ನಷ್ಟೇ ಕೇಳಬೇಕು, ನೋಡಬೇಕು, ಓದಬೇಕು ಹಾಗೂ ಕಲಿಯಬೇಕು ಎಂಬ ಮನಸ್ಥಿತಿಯಲ್ಲಿರುವ ಪೋಷಕರಿಗೆ, ಅಶ್ಲೀಲ ದೃಶ್ಯ ಹಾಗೂ ಚಿತ್ರಗಳು ಮಕ್ಕಳಿಂದ ಕೇವಲ ಒಂದು ಕ್ಲಿಕ್‌ನಷ್ಟೇ ದೂರದಲ್ಲಿವೆ ಎಂಬ ಅರಿವೇ ಇರುವುದಿಲ್ಲ. ನೀಲಿ ಚಿತ್ರವೊಂದರ ಲಿಂಕ್ ಜಗತ್ತಿನಾದ್ಯಂತ ಅಸಂಖ್ಯ ಮಕ್ಕಳನ್ನು ಬ್ಲೂ ವೇಲ್‌ನಂತಹ ಅಪಾಯಕಾರಿ ಆಟಕ್ಕೆ ಸೆಳೆದೊಯ್ದು, ಆತ್ಮಹತ್ಯೆಗೆ ಪ್ರೇರೇಪಿಸಿ, ಅವರ ಜೀವಗಳೊಂದಿಗೆ ಚೆಲ್ಲಾಟವಾಡಿದ್ದನ್ನು ಯಾರೂ ಮರೆಯುವಂತಿಲ್ಲ.
ಅಂತರ್ಜಾಲದ ಹೊಸ ವಿಕೃತಿಯು ಎಲ್ಲೆಡೆಯೂ ಲೈಂಗಿಕತೆಯನ್ನು ಉದ್ದೀಪಿಸುತ್ತಿದೆ. ಮೊಬೈಲ್ ಅಥವಾ ಕಂಪ್ಯೂಟರ್ ಬಳಸುವ ಮಕ್ಕಳ ಪೈಕಿ ಶೇ.32ರಷ್ಟು ಜನ ಅಂತರ್ಜಾಲವನ್ನು ಜಾಲಾಡುವಾಗ ಅಶ್ಲೀಲತೆ ಹಾಗೂ ಲೈಂಗಿಕತೆಯನ್ನು ಪ್ರಚೋದಿಸುವ ಚಿತ್ರ, ವಿಡಿಯೋಗಳನ್ನು ಪ್ರಜ್ಞಾಪೂರ್ವಕವಾಗಿಯೇ ನೋಡುತ್ತಾರೆ. ಸಹಪಾಠಿಗಳು, ಸ್ನೇಹಿತರು, ಹಿರಿಯರು ಹಾಗೂ ನೆರೆಮನೆಯವರಿಂದಲೋ ಇಂತಹ ಚಿತ್ರ ಹಾಗೂ ದೃಶ್ಯಗಳನ್ನು ಹೇಗೆ ಹುಡುಕಬೇಕೆಂದು ಅರಿತಿರುತ್ತಾರೆ. ರಾತ್ರಿ ಓದಿಕೊಳ್ಳುವ ನೆಪದಲ್ಲಿ ಕುತೂಹಲದಿಂದ ಅಂತರ್ಜಾಲದಲ್ಲಿ ಜಾಲಾಡುತ್ತಾರೆ. ಮಕ್ಕಳ ಇಂತಹ ನಡವಳಿಕೆ ಬಗ್ಗೆ ಹಲವು ಪೋಷಕರಿಗೆ ಗೊತ್ತಿದ್ದರೂ ಅಸಹಾಯಕರಾಗುತ್ತಾರೆ. ಅಂತರ್ಜಾಲದಲ್ಲಿ ಲಭ್ಯವಿರುವ ಹಾಗೂ ಡೌನ್‌ಲೋಡ್ ಮಾಡುವ ಸರಕಿನ ಪೈಕಿ ಶೇ.30ರಷ್ಟು ಅಶ್ಲೀಲತೆಗೆ ಸಂಬಂಧಿಸಿದ್ದೇ ಆಗಿದೆ ಎಂದು ಅಧ್ಯಯನವೊಂದು ಹೇಳುತ್ತಿದೆ. ಈ ಅಂಕಿ ಅಂಶಗಳೆಲ್ಲ ಆಕಾಶಮುಖೀಯಾಗಿ ನೆಗೆಯುತ್ತಿವೆ.
ಮಾದಕ ಲೋಕ
ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಹೊರಳುವ ಹದಿಹರೆಯದಲ್ಲಿ ಹಾರ್ಮೋನ್ ಬೆಳವಣಿಗೆ ಹಂತದಲ್ಲಿರುವ ದೇಹ, ಕುತೂಹಲ ತಣಿಯದ ಮನಸ್ಸಿಗೆ ಇಂತಹ ದೃಶ್ಯಗಳು ಮುದ ನೀಡುತ್ತವೆ. ತಂತ್ರಜ್ಞಾನದ ಈ ಯುಗದಲ್ಲಿ ಮಾಹಿತಿ, ಚಿತ್ರ ಹಾಗೂ ವಿಡಿಯೋಗಳು ಹೇರಳವಾಗಿವೆ. ಆಕರ್ಷಕವಾಗಿ ಕಂಡದ್ದನ್ನೆಲ್ಲ ತಡಕಾಡುತ್ತಾರೆ. ಹಿರಿಯರ ನಿಗಾ ಅಥವಾ ಅಶ್ಲೀಲ ಜಾಲತಾಣಗಳ ಮೇಲಿನ ನಿಯಂತ್ರಣವಿಲ್ಲದೆ ಮಕ್ಕಳಿಗೆ ಅಂತರ್ಜಾಲದ ಸಂಪರ್ಕ ಸಿಕ್ಕರೆ ಅವರು ಜಾಲಾಡುವುದು ಇಂಥವನ್ನೇ. ಸಮೀಕ್ಷೆ ಪ್ರಕಾರ 18 ವರ್ಷದೊಳಗಿನ ಮಕ್ಕಳು ಹೆತ್ತವರ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ಅಶ್ಲೀಲತೆಯ ಜಾಲತಾಣಗಳಿಗೆ ಭೇಟಿ ಕೊಡುತ್ತಾರೆ, ಅದೂ ಒಮ್ಮೊಮ್ಮೆ ಹಿರಿಯರು ಉಳಿಸಿದ ಸರ್ಚ್ ಹಿಸ್ಟರಿ ಮೂಲಕ! ಮಲಗುವ ಹೊತ್ತಿಗೆ ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದರಂತೂ ಮುಸುಕಿನೊಳಗೆ ಮಾದಕ ಲೋಕವನ್ನು ಪ್ರವೇಶಿಸುವುದು ನಿಶ್ಚಿತ. ಫೋನ್ ಇಲ್ಲದವರೂ ತಮ್ಮ ಸ್ನೇಹಿತರ ಮೊಬೈಲ್ – ಕಂಪ್ಯೂಟರ್‌ಗಳಲ್ಲಿ ಇಂಥವನ್ನು ನೋಡಿರುತ್ತಾರೆ. ಅಪ್ಪ-ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದು, ಮಕ್ಕಳ ಬಗ್ಗೆ ಗಮನ ನೀಡಲೂ ಪುರುಸೊತ್ತಿಲ್ಲದಿದ್ದರೆ ಇಂಥ ಅಪಾಯ ಇನ್ನೂ ಹೆಚ್ಚು.
ಮಕ್ಕಳು ಮೊದಲ ಬಾರಿ ಇಂಥದ್ದರ ಸಂಪರ್ಕಕ್ಕೆ ಬರುವ ಸರಾಸರಿ ವಯಸ್ಸು 9ರಿಂದ 13. ಸ್ಮಾರ್ಟ್‌ಫೋನ್‌ಗಳ ಬಳಕೆಯಲ್ಲಿ ಮಕ್ಕಳು ಚುರುಕಾಗಿರುತ್ತಾರೆ. ಅಂತರ್ಜಾಲ ಸಂಪರ್ಕವಿದ್ದರೆ, ವಿಡಿಯೋ ಗೇಮ್ ಆಡುತ್ತಿದ್ದರೆ ಪೋರ್ನ್ ಸೈಟ್‌ಗಳ ಲಿಂಕ್ ಬೇಡಬೇಡವೆಂದರೂ ಸಿಗುತ್ತದೆ. ಅಂತರ್ಜಾಲದಲ್ಲಿ ಅಶ್ಲೀಲತೆಯೇ ದೊಡ್ಡ ವಹಿವಾಟು. ನಾವು ಮಾಹಿತಿ ಹುಡುಕುತ್ತಿರುವಾಗಲೇ ಅಪರಿಚಿತ ಪಾಪ್-ಅಪ್‌ಗ್ಳು ವಕ್ಕರಿಸುತ್ತವೆ. ಮುಚ್ಚಲೂ ಅವಕಾಶವಿಲ್ಲದಂತೆ ಸೆಳೆದುಕೊಳ್ಳುತ್ತವೆ. ಎಚ್ಚರಿಕೆಯ ಸಂದೇಶವೇ ಇಲ್ಲದೆ ಲೈಂಗಿಕ ದೃಶ್ಯಗಳು ಪರದೆಯ ಮೇಲೆ ಮೂಡುತ್ತವೆ!
ಗುರುತಿಸುವುದು ಹೇಗೆ?
ತಮ್ಮ ಮಕ್ಕಳಿಗೆ ನೀಲಿ ಚಿತ್ರಗಳ ಗೀಳು ಹತ್ತಿದೆಯೇ ಎಂಬುದನ್ನು ಪತ್ತೆಹಚ್ಚುವುದು ಹೆತ್ತವರಿಗೆ ಬಹುದೊಡ್ಡ ಸವಾಲು. ಲೈಂಗಿಕ ವಿಚಾರಗಳ ಕುರಿತಾದ ಕುತೂಹಲ, ಅನ್ವೇಷಣೆ ಹಾಗೂ ಅಂತಹ ದೃಶ್ಯಗಳ ವೀಕ್ಷಣೆ ತಾತ್ಕಾಲಿಕ ಖುಷಿಯನ್ನು ನೀಡಬಲ್ಲದು. ಆದರೆ, ಅದು ತಮ್ಮ ವ್ಯಕ್ತಿತ್ವವನ್ನೇ ನುಂಗುವ ದೊಡ್ಡ ಸುಳ್ಳಿನ ಮೂಟೆ ಎಂಬ ಅರಿವಿಲ್ಲದೆ ಅಶ್ಲೀಲತೆ ಅಥವಾ ವಿಡಿಯೋ ಗೇಮ್‌ಗಳ ದಾಸರಾಗುವ ಎಳೆಯರು ಕೆಲಸಗಳಲ್ಲಿ ಉದಾಸೀನ ತೋರುತ್ತಾರೆ. ಕಾಟಾಚಾರಕ್ಕೆ ಕೆಲಸ ಮುಗಿಸಿ ಮತ್ತೆ ಪರದೆಯಲ್ಲಿ ಹುದುಗಿಕೊಳ್ಳುತ್ತಾರೆ. ಬದುಕಿನ ಸಹಜ ಖುಷಿಗಳನ್ನು ಅನುಭವಿಸಲು ಖನ್ನತೆ ಅಡ್ಡಿಯಾಗುತ್ತದೆ. ಶಾಲೆ, ಗೆಳೆಯರು, ನಿದ್ದೆ ಸಂಬಂಧಗಳನ್ನೂ ಮೀರಿ ಅಶ್ಲೀಲತೆಯ ಹುಡುಕಾಟ ನಡೆಯುತ್ತಿದ್ದರೆ ಅದು ಸಮಸ್ಯಾತ್ಮಕ.
ಮಕ್ಕಳ ಕೈಗೆ ಮೊಬೈಲ್ ಅಥವಾ ಕಂಪ್ಯೂಟರ್ ಕೊಡುತ್ತಿದ್ದರೂ ಡೌನ್ ಲೋಡ್ ಹಾಗೂ ಸರ್ಚ್ ಹಿಸ್ಟರಿಗಳನ್ನು ಗಮನಿಸಿ. ಅವರು ಅಪರಿಚಿತರೊಂದಿಗೆ ಚಾಟ್ ಮಾಡುತ್ತಿದ್ದರೆ, ಅಸಭ್ಯ ಚಿತ್ರ, ದೃಶ್ಯಗಳನ್ನು ನೋಡುತ್ತಿದ್ದರೆ, ಫೈಲ್ ಮತ್ತು ಫೋಲ್ಡರ್‌ಗಳಿಗೆ ಪಾಸ್‌ವರ್ಡ್ ಅಳವಡಿಸಿದ್ದರೆ, ಇ-ಮೈಲ್ ಇತ್ಯಾದಿಗಳ ಪಾಸ್‌ವರ್ಡ್ ನಿಮಗೆ ಗೊತ್ತಿಲ್ಲದೆ ಬದಲಾಗಿದ್ದರೆ, ನಿಮ್ಮ ವ್ಯಾಲೆಟ್ ಹಾಗೂ ಕಾರ್ಡಿನಿಂದ ಹಣ ನಾಪತ್ತೆಯಾಗಿದ್ದರೆ ಏನೋ “ರಹಸ್ಯ’ ಇದೆ ಎಂದೇ ಅರ್ಥ. ಕೇಳಿದರೆ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಸುಳ್ಳು ಹೇಳುತ್ತಾರೆ. ಒತ್ತಾಯ ಮಾಡಿದರೆ ಅಂತರ್ಮುಖೀಗಳಾಗುತ್ತಾರೆ.
ಹೊಂಚು ಹಾಕುವ ವಂಚಕರು
ಅಂಗೈಯಲ್ಲಿರುವ ಪುಟ್ಟ ಜಗತ್ತಿನ ಮೂಲಕ ಕಲಿಕೆಗೆ ಸಂಬಂಧಿಸಿ ಅಂತರ್ಜಾಲವು ಅವಕಾಶಗಳ ಹೆಬ್ಟಾಗಿಲನ್ನೇ ತೆರೆಯುತ್ತದೆ. ಅದರ ಪ್ರಭಾವವೂ ಗಾಢವಾಗಿದೆ. ಮಕ್ಕಳನ್ನು ತಪ್ಪುದಾರಿಗೆ ಎಳೆಯುವ ಶಕ್ತಿಯನ್ನೂ ಹೊಂದಿದೆ. ಜಾಲತಾಣಗಳು ಮುಗ್ಧ ಮನಸ್ಸುಗಳಿಗಾಗಿ ಹೊಂಚು ಹಾಕುತ್ತಿರುತ್ತವೆ. ಮಕ್ಕಳಿಗೆ ಅಶ್ಲೀಲತೆಯ ಗೀಳು ಹಚ್ಚಿ, ಖಾಸಗಿ ಮಾಹಿತಿಯನ್ನು ಕದ್ದು, ಬಳಿಕ ಅವರನ್ನು ಬೆದರಿಸುವ, ಹಣ ಕೀಳುವ ಅಥವಾ ದುಷ್ಕೃತ್ಯಗಳಿಗೆ ಪ್ರಚೋದಿಸುವ ಆನ್‌ಲೈನ್ ವಂಚಕರ ಜಾಲ ತೆರೆಮರೆಯಲ್ಲಿ ಸಕ್ರಿಯವಾಗಿದೆ. ಪರಿಣಾಮಗಳ ಅರಿವಿಲ್ಲದೆ ಯುವಜನರು ಅಪರಾಧ ಕೃತ್ಯಗಳಲ್ಲಿ ತೊಡಗುವುದನ್ನು ತಡೆಯಲು ಪೋಷಕರು, ಶಿಕ್ಷಕರು, ಪೊಲೀಸರು ಹಾಗೂ ಕಾನೂನು ರೂಪಕರು ಪ್ರಯತ್ನಿಸಬೇಕಿದೆ. ಆದರೆ ಅಂತರ್ಜಾಲದ ಅಪರಾಧಗಳಿಂದ ಮಕ್ಕಳನ್ನು ಕಾಪಾಡಲು ಬಲಿಷ್ಠ ಕಾನೂನೇ ಇಲ್ಲ!
ಪಾರು ಮಾಡುವುದೆಂತು?
ವೈರಿಯ ಉದ್ದೇಶಗಳಿಷ್ಟೇ: ಕದಿಯುವುದು, ಕೊಲ್ಲುವುದು ಹಾಗೂ ನಾಶ ಮಾಡುವುದು! ಸೋಲು ಖಚಿತವೆಂದು ಗೊತ್ತಿದ್ದೂ ನಾವೊಂದು ದೊಡ್ಡ ಹೋರಾಟ ಮಾಡುತ್ತಿದ್ದೇವೆ. ಹುದುಗಿರುವ ಮಂಜಿನ ಶಿಖರದ ಮೊನೆ ಮಾತ್ರ ಕಾಣುವಂತೆ ಬೆರಳೆಣಿಕೆ ಪ್ರಕರಣಗಳು ಪೊಲೀಸರಿಗೆ ವರದಿಯಾಗುತ್ತವೆ. ಆರೋಪಿಗಳ ಪತ್ತೆ ಪ್ರಮಾಣ ಇನ್ನೂ ಕಡಿಮೆ. ಆರ್ಥಿಕ ವಂಚಕರು, ಹ್ಯಾಕರ್‌ಗಳು ಅಪರಿಚಿತರಾಗಿಯೇ ಉಳಿಯುವ ಹಾಗೂ ಬೇರೆ ಯಾರೋ ಎಂಬಂತೆ ತೋರಿಸಿಕೊಳ್ಳುವ ಅವಕಾಶ ಇರುವುದರಿಂದ ಅಪರಾಧಗಳ ಪ್ರಮಾಣ ಹೆಚ್ಚುತ್ತಿದೆ.
ಮಕ್ಕಳಲ್ಲಿ ಸಂಸ್ಕಾರ ಬೆಳೆಸಿ, ಅಶ್ಲೀಲತೆಗೆ ಬಲಿಯಾಗುವುದನ್ನು ತಪ್ಪಿಸುವುದು ಹೆತ್ತವರು ಹಾಗೂ ಶಿಕ್ಷಕರ ಪರಮಾದ್ಯ ಕರ್ತವ್ಯ. ಅಶ್ಲೀಲ ಜಾಲತಾಣಗಳನ್ನು ನಿಯಂತ್ರಿಸುವ ಅವಕಾಶಗಳನ್ನು ಬಳಸಿಕೊಂಡೇ (ಪೇರೆಂಟಲ್ ಕಂಟ್ರೋಲ್) ಮಕ್ಕಳಿಗೆ ಮೊಬೈಲ್ ಇತ್ಯಾದಿ ಸಾಧನಗಳನ್ನು ಕೊಡಬೇಕು. ಅಶ್ಲೀಲ ಚಿತ್ರವೊಂದು ಪಾಪ್ ಅಪ್ ಆದಾಗ ಅದನ್ನು ತಕ್ಷಣವೇ ಮುಚ್ಚುವಂತೆಯೂ ತಿಳಿಹೇಳಬೇಕು.
ಸಿಟ್ಟಾಗಬೇಡಿ, ತಿಳಿಹೇಳಿ
ಲೈಂಗಿಕ ದೃಶ್ಯಗಳನ್ನು ಮಕ್ಕಳು ನೋಡಿದ್ದಾರೆ ಎಂಬುದು ತಿಳಿದರೆ ಸಿಟ್ಟಿಗೇಳಬೇಡಿ. ಅದೇನೂ ಮಹಾಪರಾಧವಲ್ಲ. ಆದರೆ ಅಶ್ಲೀಲ ವಿಚಾರಗಳ ಬಗ್ಗೆ ಯಾರಿಂದ ತಿಳಿಯಿತು? ಅಂತಹ ದೃಶ್ಯಗಳನ್ನು ಆಕಸ್ಮಿಕವಾಗಿ ನೋಡಿದರೇ ಅಥವಾ ಯಾರಾದರೂ ತೋರಿಸಿದರೇ? ಎಂದು ಕೇಳಿ ತಿಳಿದು, ಅಶ್ಲೀಲತೆ ಏಕೆ ಕೆಟ್ಟದ್ದು? ಅದರಿಂದ ಏಕೆ ಹಾಗೂ ಹೇಗೆ ದೂರವಿರಬೇಕು? ಸುರಕ್ಷಿತ ಹಾಗೂ ಆರೋಗ್ಯಪೂರ್ಣ ಲೈಂಗಿಕತೆಯ ಮಹತ್ವವೇನು ಎಂಬುದನ್ನು ಮಕ್ಕಳಿಗೆ ವಿವರಿಸಬೇಕು. ನಾವು ಮುಕ್ತವಾಗಿ ಸಂವಹನ ಆರಂಭಿಸಿದರೆ ಮಕ್ಕಳೂ ತಮ್ಮ ಅನುಭವಗಳನ್ನು ಅಂಜಿಕೆಯಿಲ್ಲದೆ ಹೇಳಿಕೊಳ್ಳುತ್ತಾರೆ.
ಮದ್ಯ ಅಥವಾ ಮಾದಕ ವಸ್ತುಗಳಿಗಿಂತ ಕಮ್ಮಿ ಇಲ್ಲದಂತೆ ನೀಲಿ ಚಿತ್ರಗಳ ವೀಕ್ಷಣೆ ಕೂಡ ಚಟವಾಗಿ ಮಾರ್ಪಟ್ಟು ಹೇಗೆ ವ್ಯಕ್ತಿತ್ವ, ಆರೋಗ್ಯ ಹಾಗೂ ಭವಿಷ್ಯವನ್ನು ಹಾಳುಗೆಡವುತ್ತದೆ ಎಂಬುದನ್ನು ವಿವರಿಸುವುದು ಅಗತ್ಯ. ನೀಲಿ ಚಿತ್ರಗಳು ಸಹಜವಲ್ಲ. ಮಾದಕವಾಗಿ ಹಾಗೂ ಅತಿರಂಜಿತವಾಗಿ ಅವುಗಳನ್ನು ಚಿತ್ರಿಸಿರುತ್ತಾರೆ. ಅವು ಆರೋಗ್ಯಕರ ಸಂಬಂಧಗಳನ್ನು ಪ್ರತಿನಿಧಿಸುವುದಿಲ್ಲ. ಇದರಿಂದ ಪ್ರಚೋದನೆ ಹೊಂದಿ ಅನೈತಿಕ ಹಾಗೂ ವಿವಾಹಪೂರ್ವ ಲೈಂಗಿಕ ಸಂಬಂಧಗಳಿಗೆ ಮುಂದಾಗದಂತೆ ಎಚ್ಚರಿಕೆಯನ್ನು ನೀಡಿ.
ಕಂಪ್ಯೂಟರ್, ಮೊಬೈಲ್‌ಗಳನ್ನು ಮಕ್ಕಳ ಕೋಣೆಯ ಬದಲು ಎಲ್ಲರೂ ಓಡಾಡುವಂತಹ ಜಾಗದಲ್ಲಿ ಇರಿಸಿದರೆ ಸೂಕ್ತ. ಅಂತರ್ಜಾಲ ಬಳಕೆಯಲ್ಲಿ ನಮಗೆ ನಾವೇ ನಿಯಂತ್ರಣ ಹೇರಿಕೊಳ್ಳುವುದು ಮಕ್ಕಳನ್ನು ನಿಯಂತ್ರಿಸುವ ಅತ್ಯುತ್ತಮ ಉಪಾಯ. ಇಂಟರ್ನೆಟ್ ಫಿಲ್ಟರ್‌ಗಳು ಅನಪೇಕ್ಷಿತ ಜಾಲತಾಣಗಳಿಗೆ ಮಕ್ಕಳು ಭೇಟಿ ಕೊಡುವುದನ್ನು ಬಹುತೇಕ ತಡೆಯುತ್ತವೆ. ಕೆಟ್ಟ ವಿಚಾರಗಳಿಂದ ಮಕ್ಕಳನ್ನು ದೂರವಿರಿಸುವ ಪ್ರಯತ್ನದ ಹೊರತಾಗಿಯೂ ಅವರು ಅಶ್ಲೀಲತೆಗೆ ಈಡಾಗುವ ಸಂಭವ ಇದ್ದರೆ, ಸ್ವಯಂ ರಕ್ಷಣೆಯ ಪಾಠ ಹೇಳುವುದು ಸೂಕ್ತ.
ಮಕ್ಕಳನ್ನು “ನೀಲಿ’ಯ ಬಾನಿಂದ ತಾರೆಗಳ ತೋಟಕ್ಕೆ ಕರೆತಂದು ಹೊಳೆಯುವಂತೆ ಮಾಡೋಣ.
ಅನಂತ ಹುದೆಂಗಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.