ಕುಡಿಯಲು ಸಿಗುತ್ತೆ ಮಹದಾಯಿ ನೀರು
Team Udayavani, Dec 22, 2017, 6:00 AM IST
ಬೆಂಗಳೂರು/ಹುಬ್ಬಳ್ಳಿ/ಪಣಜಿ: ಬಹುನಿರೀಕ್ಷಿತ ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯುವ ಲಕ್ಷಣ ನಿಚ್ಚಳವಾಗಿದೆ. ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ಉದ್ದೇಶಕ್ಕಾಗಿ “ಸಮರ್ಥನೀಯ ಮತ್ತು ನ್ಯಾಯಸಮ್ಮತ’ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲು ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಾನವೀಯ ನೆಲೆಯಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕದ ಪ್ರದೇಶಗಳಿಗೆ ನೀರು ಬಿಡುಗಡೆ ಮಾಡುವ ಕುರಿತು ಮಾತುಕತೆಗೆ ಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಪರಿಕ್ಕರ್ ಹೇಳಿದ್ದಾರೆ.
ಯಡಿಯೂರಪ್ಪ ಅವರಿಗೆ ಪತ್ರ ಬರೆದ ಬಳಿಕ ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನದಿಯಿಂದ ಕರ್ನಾಟಕಕ್ಕೆ “ಸಮರ್ಥನೀಯ ಮತ್ತು ನ್ಯಾಯಸಮ್ಮತ’ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲು ಗೋವಾ ಸಿದ್ಧವಿದೆ. ಆದರೆ, ಕರ್ನಾಟಕ ಎಷ್ಟು ಪ್ರಮಾಣದಲ್ಲಿ ನೀರು ಪಡೆದುಕೊಳ್ಳುತ್ತದೆ ಎಂಬುದನ್ನು ಮಾತುಕತೆ ಮೂಲಕ ನಿರ್ಧರಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ನ್ಯಾಯಾಲಯದ ಹೊರಗೆ ವಿವಾದ ಬಗೆಹರಿಸಿಕೊಳ್ಳುವ ಬಗ್ಗೆ ನ್ಯಾಯಾಧಿಕರಣ ನೀಡಿದ ಸಲಹೆಯನ್ನೂ ಅವರು ಪುನರುಚ್ಚರಿಸಿದರು.
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬುಧವಾರ ದೆಹಲಿಯಲ್ಲಿ ಬಿಜೆಪಿಯ ಹಲವು ನಾಯಕರ ಸಮ್ಮುಖದಲ್ಲಿ ಮನೋಹರ್ ಪರಿಕ್ಕರ್ ಅವರೊಂದಿಗೆ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಅವರು ಚರ್ಚಿಸಿ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮನವೊಲಿಸಿದ್ದರು.
ಯಡಿಯೂರಪ್ಪಗೆ ಪತ್ರ:
ಅದರಂತೆ ಗುರುವಾರ ಯಡಿಯೂರಪ್ಪ ಅವರಿಗೆ ಪತ್ರ ಬರೆದ ಪರಿಕ್ಕರ್, ಉತ್ತರ ಕರ್ನಾಟಕ ಭಾಗದ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಮಹದಾಯಿ ನದಿಯಿಂದ 7.56 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಡಿ.20ರಂದು ನೀವು ಬರೆದಿರುವ ಪತ್ರದಲ್ಲಿ ಕೋರಿದ್ದೀರಿ. ಈ ವಿವಾದ ಮಹದಾಯಿ ನ್ಯಾಯಾಧಿಕರಣದ ಮುಂದೆ ವಿಚಾರಣೆ ಬಾಕಿ ಇದೆ. ಇದರಲ್ಲಿ ಕುಡಿಯುವ ನೀರಿನ ವಿಚಾರವೂ ಇರುವುದು ನಿಮಗೆ ಗೊತ್ತಿದೆ. ಆದರೆ, ಕುಡಿಯುವ ನೀರು ಬಳಸಿಕೊಳ್ಳಲು ಗೋವಾ ಯಾವತ್ತೂ ವಿರೋಧಿಸಿಲ್ಲ. ಈ ವಿಚಾರದಲ್ಲಿ ನ್ಯಾಯಾಧಿಕರಣದ ಸಲಹೆಯಂತೆ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಕುಡಿಯುವ ನೀರು ಮನುಷ್ಯನ ಮೂಲಭೂತ ಅವಶ್ಯಕತೆ ಎಂಬುದು ಗೋವಾ ಸರ್ಕಾರಕ್ಕೂ ಮನದಟ್ಟಾಗಿದೆ. ಆದ್ದರಿಂದ ಮಾನವೀಯತೆ ಆಧಾರದ ಮೇಲೆ ಬರ ಪೀಡಿತ ಪ್ರದೇಶಗಳಲ್ಲಿ ಕೇವಲ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಮಾತುಕತೆ ಮೂಲಕ ಸೌಹಾರ್ದಯುತ ಒಪ್ಪಂದಕ್ಕೆ ಬರಲು ಸರ್ಕಾರ ಸಿದ್ಧವಿದೆ. ಆದರೆ, ಮಾತುಕತೆ ಯಾವುದೇ ಪೂರ್ವಾಗ್ರಹವಿಲ್ಲದೆ ಮತ್ತು ನ್ಯಾಯಾಧಿಕರಣದ ವ್ಯಾಪ್ತಿಯಲ್ಲಿರಬೇಕು ಎಂಬುದನ್ನು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಸಿಎಂ ಮೇಲೆ ನಂಬಿಕೆ ಇಲ್ಲ:
ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಕರ್ನಾಟಕ ಮುಖ್ಯಮಂತ್ರಿಗಳು ಪತ್ರ ಬರೆದಿದ್ದರೂ ಅದಕ್ಕೆ ಒಪ್ಪದೆ ಇದೀಗ ಮಾತುಕತೆ ಕುರಿತಂತೆ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಿಕ್ಕರ್, ಕರ್ನಾಟಕದ ಕಾಂಗ್ರೆಸ್ ಮುಖ್ಯಮಂತ್ರಿಗಳ ಮೇಲೆ (ಸಿದ್ದರಾಮಯ್ಯ) ಗೋವಾಕ್ಕೆ ನಂಬಿಕೆ ಇಲ್ಲ. ಅದಕ್ಕಾಗಿ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ ಎಂದರು.
ನಾಲೆ ನಿರ್ಮಾಣಕ್ಕೆ ವಿರೋಧ:
ಈ ಮಧ್ಯೆ ಕಳಸಾ-ಬಂಡೂರಿ ನಾಲೆ ನಿರ್ಮಾಣಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ ಅವರು, ನಾಲೆ ನಿರ್ಮಿಸಿ ನೀರು ಕೊಂಡೊಯ್ದರೆ ಅದು ನದಿ ತಿರುಗಿಸಿದಂತೆ. ಆದ್ದರಿಂದ ಕುಡಿಯಲು ಅಗತ್ಯವಿರುವ ನೀರನ್ನು ಪೈಪ್ ಮೂಲಕ ಕೊಂಡೊಯ್ಯಬೇಕಾಗುತ್ತದೆ. ಈ ವಿಚಾರವನ್ನು ಕರ್ನಾಟಕದ ಜತೆಗಿನ ಮಾತುಕತೆ ವೇಳೆ ನಿರ್ಧರಿಸಲಾಗುವುದು. ಮಾತುಕತೆ ವೇಳೆ ಕೈಗೊಳ್ಳುವ ನಿರ್ಧಾರವನ್ನು ನ್ಯಾಯಾಧಿಕರಣಕ್ಕೆ ತಿಳಿಸಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.