ಚಿನ್ನ ಕಾಸರಗೋಡಿನ ಚಿನ್ನ
Team Udayavani, Dec 22, 2017, 2:04 PM IST
ಕಾಸರಗೋಡಿನ ಮಾತು ಬಂದಾಗಲೆಲ್ಲ ನನಗೆ ನೆನಪಾಗುವುದು ಹಲವಾರು ಸಂಗತಿಗಳು.ಈ ಪೈಕಿ ಗಿರಿಧರ್ ಸ್ಟೋರ್ ಕೂಡ ಒಂದು ನೆನಪು. ಈಗ ಅದು ಗಿರಿಧರ ಮೆಟಲ್ ವರ್ಕ್ಸ್ ಆಗಿದೆ. ಆ ಅಂಗಡಿಯಲ್ಲಿ ನೀವು ಚಿನ್ನಾರನ್ನು ಗಲ್ಲಾದಲ್ಲಿ ಕಾಣಬಹುದು.
ಚಿನ್ನ ಆಗ ಬಹುಶಃ ಹೈಸ್ಕೂಲು ವಿದ್ಯಾರ್ಥಿ. ನಾನು ಕಾಲೇಜ್ ಲೆಕ್ಚರರ್. ಈ ಚಿನ್ನ ಗಿರಾಕಿಗಳ ಜತೆ ಮಾತಾಡುತ್ತ ಸ್ಟೀಲ್ ಪಾತ್ರೆಗಳ ಮೇಲೆ ಸ್ಟೈಲೋದಿಂದ ಕರ್ರ ಎಂದು ಹೆಸರು ಕೊರೆಯುವ ಚಿತ್ರ ನನ್ನ ಕಣ್ಣ ಮುಂದೆ ಈಗಲೂ ಇದೆ. ವೇಣುಗೋಪಾಲ ಕಾಸರಗೋಡು ಅವರ ಶಿಷ್ಯ ಚಿನ್ನ . ಚಿನ್ನರ ಸೃಜನಾತ್ಮಕ ಉತ್ಸುಕತೆಗೆ ಇನ್ನೂ ಬಿಡುಗಡೆ ಸಿಗದೆ ಅದೊಂದು ಪುಂಡಾಟವೆಂದು ಕಾಣಿಸುತ್ತಿದ್ದ ಸಮಯದಲ್ಲಿ ಅದಕ್ಕೊಂದು ದಿಗªರ್ಶನ ನೀಡಿದ್ದು ವೇಣುಗೋಪಾಲ ಎಂದು ಅನಿಸುತ್ತದೆ. ಅವರೆಲ್ಲ ಸೇರಿಕೊಂಡು “ಯವನಿಕಾ ಕಲಾವಿದರು’ ಎಂಬ ನಾಟಕ ತಂಡ ಕಟ್ಟಿಕೊಂಡು ನಾಟಕ ಆಡಲು ತೊಡಗಿದರು. ಈ ನಡುವೆಯೇ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದರು. ಕಾಸರಗೋಡನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡು ಅದನ್ನು ಮಂಗಳೂರು, ಉಡುಪಿ ಕಡೆಗೂ ವಿಸ್ತರಿಸಿದ್ದಲ್ಲದೆ, ಗಲ್ಫ್ ದೇಶಗಳಿಗೂ ಕಾಲಿರಿಸಿದ್ದಾರೆ.
ಚಿನ್ನರ ಆಸಕ್ತಿ ಕನ್ನಡದ ಜತೆಗೆ ತುಳು, ಕೊಂಕಣಿಗೂ ಹರಡಿದೆ. ಕರ್ನಾಟಕದ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಘರ್ ಘರ್ ಕೊಂಕಣಿ ಎಂಬ ಜನ ಸಂಪರ್ಕ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ. ಚಿನ್ನ ಏನಾದರೂ ಮಾಡಿಕೊಂಡೇ ಇರುತ್ತಾರೆ. ನಾಟಕ, ಮಕ್ಕಳ ತರಬೇತಿ, ಗಾಯನ, ಸಾಹಿತ್ಯ ಕಾರ್ಯಕ್ರಮ, ಅನುವಾದ, ಮನೆ ಮನೆ ಭೇಟಿ ಇತ್ಯಾದಿ ಇತ್ಯಾದಿ. ಏನು ಮಾಡಲಿ ಸರ್? ಹುಚ್ಚು! ಎನ್ನುತ್ತಾರೆ. ಅದರ ಬೆನ್ನಲ್ಲೆ ಇಂಥ ಹುಚ್ಚು ಎಲ್ಲರಿಗೂ ಇರುತ್ತಿದ್ದರೆ ಎಂದು ಆಶಿಸುತ್ತಾರೆ. ಅದು ನನ್ನ ಆಶಯವೂ ಹೌದು.
ಒಮ್ಮೆ ನಾನು ಊರಿಗೆ ಹೋಗಿದ್ದಾಗ ಅಲ್ಲಿ ಚಿನ್ನ ಆಯೋಜಿಸಿದ್ದ ಅಭಿಯಾನವೊಂದು ನಡೆಯುತ್ತಿತ್ತು. ಗೀತ ಸಂಗೀತ ರಥ ಎಂಬ ಅಭಿಧಾಮದ ಆ ಕಾರ್ಯಕ್ರಮ ಕನ್ನಡದ ಭಾವಗೀತೆಗಳನ್ನು ಪ್ರಚುರಪಡಿಸುವ ಉದ್ದೇಶವನ್ನು ಹೊಂದಿತ್ತು. ಅದಕ್ಕಾಗಿ ಕರ್ನಾಟಕದ ಪ್ರಸಿದ್ಧ ಗಾಯಕರನ್ನು ಕರೆಸಲಾಗಿತ್ತು. ಈ ಅಭಿಯಾನದ ಒಂದಷ್ಟು ದೂರ ನಾನೂ ಭಾಗವಹಿಸಿದೆ. ಅಭಿಯಾನ ಸುಮಾರು ಒಂದೂವರೆ ಲಕ್ಷ ಜನರ ವೀಕ್ಷಣೆಗೆ ಒಳಗಾಯಿತು ಎಂದು ಹೇಳಲಾಗುತ್ತದೆ. ಯಕ್ಷ ತೇರು, ಲಾರಿ ನಾಟಕ ಮುಂತಾದ ಪ್ರಯೋಗಗಳು ಕೂಡ ಇದೇ ಬಗೆಯ ಯಶಸ್ಸಿಗೆ ಭಾಜನವಾದುವು.
ಗಡಿನಾಡ 5000 ಕನ್ನಡ ಮಕ್ಕಳಿಗೆ ಕುವೆಂಪುರವರ ನಾಡಗೀತೆಯನ್ನು ಮತ್ತು ಪೈಯವರ “ತಾಯೆ ಬಾರ ಮೊಗವ ತೋರ…” ಹಾಡನ್ನು ಕಲಿಸುವ ಕಾರ್ಯಕ್ರಮವನ್ನು ಜರುಗಿಸಿದ್ದಾರೆ. 3000 ಮಕ್ಕಳಿಗೆ ಅವರದೇ ಸಂಸ್ಥೆಯಾದ ರಂಗ ಚಿನ್ನಾರಿಯ ಮೂಲಕ ರಂಗ ತರಬೇತಿ ನಡೆಸಿಕೊಟ್ಟಿದ್ದಾರೆ. ಇನ್ನು ಮಣಿಪಾಲದಲ್ಲಿ ಎಂ. ವಿ. ಕಾಮತರ ಅಧ್ಯಕ್ಷತೆಯಲ್ಲಿ ಜರಗಿದ ಕೊಂಕಣಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನ, ಉಡುಪಿಯಲ್ಲಿ ಜರಗಿದ ಕೊಂಕಣಿ ಮಾತಾ ಸಮ್ಮೇಳನ, ಕಾಸರಗೋಡಿನಲ್ಲಿ ನಡೆದ ಮಾತೃ ದೇವೋಭವ ಎಂಬ ವಿವಿಧ ಜಾತಿ ವರ್ಗಗಳ ಕೊಂಕಣಿ ಮಹಿಳಾ ಸಂಘಗಳ ಕೂಟ ಇವೆಲ್ಲವೂ ಚಿನ್ನ ಹಮ್ಮಿಕೊಂಡು ಕಾರ್ಯಗತಗೊಳಿಸಿದ ಕಾರ್ಯಕ್ರಮಗಳೇ. ಇನ್ನು ಸಾಹಿತ್ಯ ಕ್ಷೇತ್ರದ ಕುರಿತು ಹೇಳುವುದಾದರೆ ಚಿನ್ನ ಕನ್ನಡ, ಕೊಂಕಣಿ, ತುಳು ಮಲಯಾಳ ಕೈಯಾಡಿಸಿದ್ದಾರೆ. ಮಲಯಾಳದ ಪ್ರಸಿದ್ಧ ನಾಟಕಕಾರ ಎನ್. ಎನ್. ಪಿಳ್ಳೆಯವರ “”ಗುಡ್ ನೈಟ್” ಎಂಬ ಕಿರುನಾಟಕವನ್ನು “”ಎಕ್ಲೊ ಅನ್ನೆಕ್ಲೊ” (ಒಬ್ಬ ಇನ್ನೊಬ್ಬ) ಎಂಬ ಶೀರ್ಷಿಕೆಯಲ್ಲಿ ಕೊಂಕಣಿಗೆ, ಕೆ. ಟಿ. ಮಹಮ್ಮದ್ ಅವರ “”ಸಂಹಾರಂ” ಎನ್ನುವ ನಾಟಕವನ್ನು “”ಸಂಹಾರ” ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಂಗಾಳಿಯ ಶಂಭು ಮಿತ್ರ ಅಮಿತ್ ಚೈತ್ರರ “”ಕಾಂಚನ್‌ಗಂಗಾ” ನಾಟಕವನ್ನು ಪ್ರೇಮ ಕಾರಂತರ “”ಕುರುಡು ಕಾಂಚಾಣ” ಎಂಬ ಕನ್ನಡಾನುವಾದ ಆಧರಿಸಿ “”ಕಾಸು ಪಾತೆರೊಂಡು” ಎಂದು ತುಳುವಿಗೂ, “”ಗಾಂಟಿ” (ಗಂಟು) ಎಂದು ಕೊಂಕಣಿಗೂ ಅನುವಾದಿಸಿದ್ದಾರೆ. ವೇಣುಗೋಪಾಲರ “”ದೃಷ್ಟಿ” ನಾಟಕವನ್ನು “”ಧರ್ಮಯುದ್ಧ” ಎಂಬುದಾಗಿ ಕೊಂಕಣಿಗೆ ಅನುವಾದಿಸಿ, ದೇಶವಿದೇಶಗಳಲ್ಲಿ ಆಡಿಸಿದ್ದಾರೆ. ಇವೆಲ್ಲದಕ್ಕೂ ಕಲಶವಿಡುವಂತೆ ಚಿನ್ನ ಮಾಡಿದ ಇನ್ನೊಂದು ಕೆಲಸವೆಂದರೆ ಕನ್ನಡದ ಮೂವತ್ತು ಆಧುನಿಕ ಸಣ್ಣಕತೆಗಳನ್ನು “”ತೀಸ್ ಕಾಣಿಯೋ” (ಮೂವತ್ತು ಕತೆಗಳು) ಎಂಬ ಶೀರ್ಷಿಕೆಯಲ್ಲಿ ಕೊಂಕಣಿಗೆ ಅನುವಾದಿಸಿ ಪ್ರಕಟಿಸಿದ್ದು. ಈ ಕೃತಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿಯ 2015ರ ಸಾಲಿನ ಉತ್ತಮ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಕಾಸರಗೋಡಿನಂಥ ಒಂದು ಪ್ರದೇಶದಲ್ಲಿ ಇದ್ದುಕೊಂಡು ಇದನ್ನೆಲ್ಲ ಮಾಡುವುದೆಂದರೆ ಅದು ದೊಡ್ಡ ಕೆಲಸ. ಈಗ ಚಿನ್ನ ತನ್ನ ಮನೆಯ ಟೆರೇಸಿಗೇ ಒಂದು ಮಾಡು ಕಟ್ಟಿಸಿ ಅದನ್ನೊಂದು ಸಭಾಂಗಣವನ್ನಾಗಿ ಮಾಡಿಕೊಂಡಿದ್ದಾರೆ. ಪದ್ಮಗಿರಿ ಕಲಾಕುಟೀರ ಎನ್ನುವುದು ಇದರ ಹೆಸರು ಅಲ್ಲಿ ಆಗಿಂದಾಗ್ಗೆ ನಾಟಕ, ಸಿನೆಮಾ, ಗಾಯನ, ಕವನವಾಚನ, ಸಾಹಿತ್ಯ ಸಂವಾದ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಈವತ್ತು ಕಾಸರಗೋಡು ಎಂದರೆ ಚಿನ್ನ, ಚಿನ್ನ ಎಂದರೆ ಕಾಸರಗೋಡು ಎನ್ನುವಂತಾಗಿದೆ. ಅರುವತ್ತರ ಅರಳು ಮರಳು ಎನ್ನುತ್ತೇವೆ. ಆದರೆ ಹಾಗೆ ಆಗಬೇಕಿಲ್ಲ, ಅರುವತ್ತರಲ್ಲೂ ಮನುಷ್ಯ ಕ್ರಿಯಾಶೀಲತೆಯ ಹುಚ್ಚನ್ನು ಬಿಟ್ಟುಕೊಡದೆ ಇರಬಹುದು ಎನ್ನುವುದಕ್ಕೆ ಚಿನ್ನ ಬಹು ದೊಡ್ಡ ನಿದರ್ಶನ. ಹೌದು, ಇಂಥ ಹುಚ್ಚು ಎಲ್ಲರಿಗೂ ಇರುತ್ತಿದ್ದರೆ!
ಕೆ. ವಿ. ತಿರುಮಲೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.