ವಿಂಡೋ ಸೀಟಿನಲ್ಲಿ ತ್ರಿಶಂಕು ಸ್ವರ್ಗ!
Team Udayavani, Dec 24, 2017, 6:00 AM IST
ನಾವು ಕಾಲೇಜು ಓದುತ್ತಿದ್ದಾಗಿನ ಮಾತು. ಆಗಿನ್ನೂ ಬೈಕ್‌ಗಳು ಬಂದಿರಲಿಲ್ಲ. ನಮ್ಮೂರಿನಿಂದ ಸುಮಾರು 26 ಕಿ.ಮೀ. ದೂರದ ತಿಪಟೂರಿಗೆ ಕರಾರಸಾಸಂನ ಸೆಟಲ್ ಗುಜರಿ ಬಸ್‌ಗಳಲ್ಲೇ ನಾವು ಪ್ರಯಾಸದ ಪ್ರಯಾಣ ಮಾಡಬೇಕಿತ್ತು. ಬಹುತೇಕ ಸಮಯದಲ್ಲಿ ನಿಲ್ಲುವುದಿರಲಿ, ನೇತಾಡುತ್ತಲೇ ಪ್ರಯಾಣಿಸುತ್ತಿದ್ಧೆವು. ಆದರೂ ಕಿಟಕಿ ಪಕ್ಕದ ಸೀಟು ಗಿಟ್ಟಿಸುವ ಹಂಬಲವಂತೂ ಎಂದಿಗೂ ಇದ್ದೇ ಇರುತ್ತಿತ್ತು. ಹಾಗೆ ಅಕಸ್ಮಾತ್ ಕಿಟಕಿ ಪಕ್ಕ ಸೀಟು ಸಿಕ್ಕರೆ ಪ್ರಕೃತಿ ಸೌಂದರ್ಯ ಸವಿಯುವುದಕ್ಕಿಂತ ಇನ್ನೊಂದು ಬಸ್ಸಿನ ಕಿಟಕಿಯಲ್ಲಿರುವ ಸುಂದರ ವದನಾರವಿಂದಗಳ ಸೌಂದರ್ಯಾಸ್ವಾದನೆಯೇ ನಮ್ಮ ಪರಮಧ್ಯೇಯವಾಗಿತ್ತು. ನಮ್ಮ, “ಹಲೋ’, “ಹಾಯ್’, “ಬಾಯ್’ಗಳಿಗೆ ಈ ಕಿಟಕಿಗಳು ಯಾವತ್ತೂ ಮೋಸ ಮಾಡುತ್ತಿರಲಿಲ್ಲ.
ಮುಖ ಈಚೆ ಅರಳದಿದ್ದರೂ ಆ ಸುಂದರಿಯರ ಕೈಯಾದರೂ ಕಿಟಕಿಯಾಚೆ ಅಲ್ಲಾಡಿ ನವಚೇತನ ತುಂಬುತ್ತಿತ್ತು. ಆಮೇಲಾಮೇಲೆ ವನ್ ವೇ ಥ್ರೂ ಶೇಡೆಡ್ ಗ್ಲಾಸ್‌ಗಳ ಬಸ್‌ಗಳು ಹೆಚ್ಚಾದಾಗ ಲೋಕಲ್ ಬಸ್ಸಿನ ಕಿಟಕಿಗಳ ಬದಿ ಹುಡುಗಿಯರು ನಿದ್ಧೆ ಮಾಡುವುದನ್ನು ಕಲಿತಾಗ ಅಥವಾ ಹಾಗೆ ಸೋಗು ಹಾಕಿದಾಗ ಕಿಟಕಿಗಳು ಬರೀ ದೆವ್ವಗಳಂತಹ ನೆರಳುಗಳ ದರ್ಶನ ಮಾಡಿಸಲಾರಂಭಿಸಿದವು. ಆ ವೇಳೆಗೆ ರಾಬರ್ಟ್ ಲಿಂಡ್‌ನ ವಿಂಡೋ ವ್ಯೂ ಎಂಬ ಪ್ರಬಂಧದ ತುಣುಕುಗಳು ಕಾಲೇಜಿನಲ್ಲಿ ತೂಕಡಿಕೆಯ ಮಧ್ಯೆ ಕಿವಿಗೆ ಬಿದ್ದ ಮೇಲೆ ನನ್ನ ಅರ್ಥವ್ಯಾಪ್ತಿಯ ಮಿತಿಯನ್ನು ಅನಿವಾರ್ಯವಾಗಿ ವಿಸ್ತರಿಸಿಕೊಳ್ಳಬೇಕಾಯಿತು, ಆದರೆ, ಕಿಟಕಿ ಪಕ್ಕದ ಸೀಟು ಗಿಟ್ಟಿಸುವುದೇ ಒಂದು ಪ್ರಯಾಸದ ಕೆಲಸ, ಒಳ್ಳೇ ಮಂತ್ರಿಯ ಸೀಟಿನಂತೆ ಅಲ್ಲೊಂದು ಕಚೀìಪೋ, ಚೀಲವೋ ಬಿದ್ದಿರುತ್ತದೆ, ಕೆಲವರು ಅಂಗಿ, ಟೋಪಿ ಕೊನೆಗೆ ಲುಂಗಿಯನ್ನೂ ಬಿಚ್ಚಿ ಎಸೆದು ಸೀಟ್ ರಿಸರ್ವ್ ಮಾಡಿರುತ್ತಾರೆ, ಹಾಗೆಂದು ಎಲ್ಲರಿಗೂ ಕಿಟಕಿಯಾಚೆಯ ದೃಶ್ಯ ಸೌಂದರ್ಯವನ್ನು ಸವಿಯಲೇಬೇಕೆಂಬ ಮನಸ್ಸಿರುತ್ತದೆಂದಲ್ಲ, ಹಾಯಾಗಿ ನಿದ್ಧೆ ಮಾಡಲೋ ಅಥವಾ ಬಸ್ಸಿನಲ್ಲಿ ಉತ್ಪತ್ತಿಯಾಗುವ ಬೀಡಿ, ಸಿಗರೇಟು ಹೊಗೆ, ಇತರ ಅಪಾನವಾಯುಗಳಿಂದ ಮುಕ್ತಿ ಪಡೆಯಲೋ ಕಿಟಕಿಯ ಪಕ್ಕ ಕುಕ್ಕರಿಸುತ್ತಾರೆ, ಮತ್ತೆ ಕೆಲವರು ಯಾವುದೋ ಕ್ರಾಸ್ ನಲ್ಲಿ ಯಾವುದೋ ಪಟ್ಟಿಗೆ ಅಂಗಡಿಯ ಪ್ರಾಣಿಗೆ ಊದುಬತ್ತಿ, ಶುಂಠಿ ಪೆಪ್ಪರಮೆಂಟು, ಲಾಲಿಪಪ್ಪು, ಬೋಟಿ ಎÇÉಾ ಬಂದಿದೆ ಕಣಾÉ, ಎಂತಲೋ “ನಾಗಿ ಸಿಕ್ಕಿದು’, “ಇನ್‌ಸ್ಪೆಕುó ಬತ್ತಾವೆ°’ ಎಂಬಿತ್ಯಾದಿ ತುರ್ತು ಸಂದೇಶ ರವಾನಿಸಿ ಪರೋಪಕಾರ ಮಾಡಲು ಕೂತಿರುತ್ತಾರೆ.
ಕೆಲವರು ತಮಗಾಗದ್ದನ್ನು ಹೊಟ್ಟೆ ಬಿರಿಯ ತಿಂದು ಬಂದು “ವಯಕ್’ ಎಂದು ವಾಂತಿ ಮಾಡಲೇ ಕಿಟಕಿಯ ಗಾಜು, ಬಾಯಿ ತೆರೆದು ಬಸ್ ಹೊರಡುವುದನ್ನೇ ಕಾಯುತ್ತಿರುತ್ತಾರೆ. ಬಹಳಷ್ಟು ಜನರು, ಕಿಟಕಿ ಪಕ್ಕ ಕೂರುವ ಉದ್ದೇಶವೇ ಬೇರೆ, ರಾಬರ್ಟ್ ಲಿಂಡ್ ಹೇಳುವಂತೆ, ಬಹಳಷ್ಟು ಮಂದಿ ಮನಸ್ಸಿನ ಕಿಟಕಿಯಾಚೆ ನೋಡಿ ಹಳೆಯ ಅಹಿತಕರ ಘಟನೆಗಳನ್ನು ಮೆಲುಕು ಹಾಕುತ್ತ ಅದನ್ನು ಈಗ ಆಸ್ವಾದಿಸುತ್ತಿರುತ್ತಾರೆ. ಕಿಟಕಿಯಾಚೆಯ ಬಿರುಕು ಬಿಟ್ಟ ಬಂಜರು ಭೂಮಿಯನ್ನು ನೋಡಿದೊಡನೆ ಅವರಿಗೆ 1925-26ರ ಬರಗಾಲದ ನೆನಪಾಗಿ ಅದನ್ನು ವಸಂತೋತ್ಸವದ ಸಂಭ್ರಮದಂತೆ ಆನಂದದಿಂದ ವರ್ಣಿಸುತ್ತಾರೆ. ಹಲವು ಅಂಕಿ-ಅಂಶಗಳನ್ನು ನೀಡುತ್ತಾರೆ, ಯಾವುದಾದರೂ ಮುರಿದು ಬಿದ್ದ ಸೇತುವೆ ನೋಡಿದಾಗ ಯಾವುದೋ ಪ್ರವಾಹದ ವಿಷಯ ಅವರ ಮುಖದಲ್ಲಿ ಉಕ್ಕಿ ಬರುತ್ತದೆ.
ಯಾವುದೋ ಲಾರಿ ರಸ್ತೆ ಬದಿಯ ಮರಕ್ಕೆ ಮುತ್ತಿಕ್ಕಿ ನಿಂತಿರುವುದನ್ನು ಕಂಡಾಗಲಂತೂ ಅವರು ಸೀಟಿನಿಂದ ನಿಗರಿ ತಲೆಹಾಕಿ ನೋಡಿ ತಮ್ಮ ಹಿಂದಿನ ರೈಲ್ವೆ ಅಪಘಾತದ ಭೀಕರತೆಯ ಬಗ್ಗೆ, ಅದು ಸಂಭವಿಸಿದ ಬಗ್ಗೆ, ಆಗ ಅವರಿಗಾದ ಗಾಯ, ಪರಿಹಾರ ಇವೆಲ್ಲದರ ಬಗ್ಗೆ ನೀಡುವ ವಿವರ ಬೇಡ ಬೇಡವೆಂದರೂ ತಲೆ ಕಾಯಿಸುತ್ತದೆ, ಮಕ್ಕಳು ಪ್ರಾಕೃತಿಕ ಅಥವಾ ಸಹಜವಿನಾಶಿಗಳು, ಕೆಡುವುದು, ಉರುಳಿಸುವುದು, ಕೀಳುವುದು, ಹರಿಯುವುದೆಂದರೆ ಮಕ್ಕಳಿಗೆ ಆಪ್ಯಾಯಮಾನ. ಅವರಲ್ಲಿರುವ ಕ್ರಿಯಾಶೀಲತೆಯ ಪ್ರಮಾಣದಷ್ಟೇ ಈ ವಿನಾಶೀಯ ಪ್ರಮಾಣವೂ ಮೈಗೂಡಿರುತ್ತದೆ, ಇದು ಕೆಲವರು ದೊಡ್ಡವರಲ್ಲೂ ಜಿಡ್ಡಿನಂತೆ ಹಾಗೇ ಉಳಿದುಕೊಂಡಿರುತ್ತದೆ.
ಹಿಂದಿನ ದುಷ್ಪರಿಣಾಮದ ತೀವ್ರತೆ ಉಳಿಸಿಕೊಳ್ಳದೆ ಅದರ ಬಗ್ಗೆ ಆಸಕ್ತಿಯಿಂದ ಮಾತನಾಡುವುದು ಮಾನವ ಸಹಜ ಗುಣ. (ಆ ತೀವ್ರತೆಯ ಅನುಭವ ಎಂದಿಗೂ ಕಡಿಮೆಯಾಗದಿದ್ದಲ್ಲಿ ಅದು ನರದೌರ್ಬಲ್ಯ!) ಹೀಗಾಗಿ, ಇವರುಗಳು ಕಿಟಕಿಯಾಚೆ ವಿಧಾನ ಸೌಧ, ಹೈಕೋರ್ಟ್, ಯುಟಿಲಿಟಿ ಬಿಲ್ಡಿಂಗ್ ಕುಸಿದು ಬಿದ್ದಿದ್ದರೂ ಮಳೆಗಾಲದಲ್ಲಿ ಕುಸಿದ ತಮ್ಮ ಮನೆಯ ಕೊಟ್ಟಿಗೆಯ ವರ್ಣನೆ ಮಾಡುತ್ತಾರೆ. ಬಾಲ್ಯದ ಸುಪ್ತ ವಿನಾಶೀಯ ಪ್ರವೃತ್ತಿಯ ಸಂಕೇತವಾಗಿ ಕಿಟಕಿಯ ಗಾಜನ್ನೂ ಪುಡಿ ಮಾಡುತ್ತಾರೆ. ಹೀಗೆ ವಿವಿಧೋದ್ದೇಶವಾಗಿ ಕಿಟಕಿಗೆ ಆತುಕೊಳ್ಳುವವರ ನಡುವೆ ನಾನು ಸ್ಪರ್ಧಿಸಿ ಸೀಟು ಗಿಟ್ಟಿಸುವುದಂತೂ ಕನಸಿನ ಮಾತು.
ಮಕ್ಕಳಾಗಿದ್ದಾಗ ಅಪ್ಪ, ಅಮ್ಮ, ಮಾವ, ಅಜ್ಜ ಹೀಗೆ ಯಾರದೋ ತೊಡೆಯ ಮೇಲೆ ಹತ್ತಿ ಕಿಟಕಿಯಾಚೆ ಭರ್ರನೆ ಹಿಂದೆ ಸರಿಯುವ ಮರಗಳನ್ನು, ಮೆಲ್ಲ ಮೆಲ್ಲನೆ ಸಾಗುವ ಬಂಡಿಗಳನ್ನು, ಸುರಿವ ಮಳೆಯನ್ನು, ನೆನೆಯುತ್ತ¤ ಹಸು-ಕರುಗಳ ಹಿಂದೆ ಹೋಗುವ ಗೌಳಿಗರನ್ನು, ಸವಾಲಾಗಿ ನಿಂತ ಬೆಟ್ಟಗುಡ್ಡಗಳನ್ನು, ನಿರ್ಮಲವಾಗಿ ಹರಿಯುವ ನೀರನ್ನು, ಪ್ರಾಣಿ-ಪಕ್ಷಿ ಸಂಕುಲಗಳನ್ನು ಕಣ್ಣೆವೆ ಮುಚ್ಚುವುದರೊಳಗೆ ನೋಡಿ ವಿಸ್ಮಯಪಟ್ಟದ್ದಿದೆ. ಚಪ್ಪಾಳೆ ತಟ್ಟಿ ಕುಣಿದದ್ದಿದೆ. ಆದರೆ, ಇತ್ತಿತ್ತಲಾಗಿ ಈ ಕಿಟಕಿಯಾಚೆಯ ವಿಸ್ತƒತ ಸೌಂದರ್ಯವನ್ನು ಸವಿಯಲು ಅವಕಾಶವೇ ಸಿಕ್ಕಿರಲಿಲ್ಲ.
ಪ್ರಯತ್ನ ಪಟ್ಟರೆ ಯಾವುದು ಸಾಧ್ಯವಿಲ್ಲ? ಬಸ್ಸಿಳಿಯುವ ಹುಡುಗಿಯರಿಗೆ ಹಲ್ಲು ಕಿಸಿದೋ, ಹತ್ತಿದ ಮೇಲೆ ನಾನು ರಿಸರ್ವ್ ಮಾಡಿದ ಸೀಟಿನಲ್ಲಿ ಕುಳಿತಿದ್ದ ಮತ್ತೂಬ್ಬ ದುರ್ಬಲ ಕಿಟಕಿ ಪ್ರೇಮಿಯ ಜೊತೆ ಜಗಳವಾಡಿಯೋ, ಕೈ ಮುಗಿದೋ, “ತೀರಾ ಹುಶಾರಿಲ್ಲರೀ! ವಾಂತಿ ಮಾಡುವಂತಿದೆ’ ಎಂದು ಹೆದರಿಸಿ ಕಿಟಕಿಯ ಪಕ್ಕ ಸೀಟು ಗಿಟ್ಟಿಸಿದ್ದಿದೆ.
ಆದರೆ, ಪ್ರಯೋಜನ? ನನ್ನ, ನಿಮ್ಮ ಅನುಭವ ಒಂದೇ! ಕಿಟಕಿಯ ಪಕ್ಕ ಕೂತು ಬಸ್ ತನ್ನ ವೇಗ ಹೆಚ್ಚಿಸಿಕೊಂಡೊಡನೆ ಆ ಕಂಪನ ಮತ್ತು ವೇಗದ ಉತ್ಕರ್ಷ ಸ್ಥಿತಿಯಲ್ಲಿ ನಿಮ್ಮ ಮನಸ್ಸನ್ನು ಯಾವುದೋ “ಆಲ್ಫಾ”ನೋ , “ಬೀಟಾ’ ನೋ ಅಥವಾ ಯೋಗಸ್ಥಿತಿಗೆ ಕೊಂಡೊಯ್ಯುತ್ತೀರಿ. ಮುಖಕ್ಕೆ ರೊಯೆÂಂದು ತೀಡುವ ತಂಗಾಳಿ ನಿಮಗೆ ಕಚಗುಳಿಯಿಡುತ್ತಿರುತ್ತದೆ. ನೀವು ಯಾವುದೋ ಸವಿ ಕಲ್ಪನೆಯಲ್ಲಿ ತೇಲಾಡುತ್ತೀರುತ್ತೀರಿ, ಅಷ್ಟರಲ್ಲಿ ಪಕ್ಕದವ ಎದ್ದು ನಿಮ್ಮ ಮುಖವನ್ನು ಉಜ್ಜಿಕೊಂಡೇ ಕಿಟಕಿಯಾಚೆ ತಲೆ ಹಾಕಿ ಗುಟ್ಕಾ ಉಗಿದು ಸ್ವಸ್ಥಾನನಾಗುತ್ತಾನೆ, ಹಿಂದೆ ಕುಳಿತ ಬಾಣಂತಿ ಕಿಟಕಿ ಬಾಗಿಲು ಮುಚ್ಚಲು ನಿಮಗೆ ಅಪ್ಪಣಿಸುತ್ತಾಳೆ, ನೀವು ಕಿಟಕಿ ಮುಚ್ಚಿ ಕೂರುತ್ತೀರಿ, ಈ ವೇಳೆಗೆ ನಿಮ್ಮ ಕಲ್ಲನಾಲೋಕದಿಂದ ನೀವು ಈಚೆ ಬಂದಿರುತ್ತೀರಿ, ಕಿಟಕಿಯಾಚೆ ಕಣ್ಣಾಡಿಸಿದರೆ ಏನು ಕಾಣುತ್ತದೆ ? ಮಣ್ಣು! ಗಾಜೆಲ್ಲಾ ಧೂಳುಮಯ, ಎಲ್ಲ ಮಬ್ಬು ಮಬ್ಬು, ಬಾಣಂತಿ ಇಳಿದು ಹೋದ ಅನಂತರ ಮುಂದಿನ ಕಿಟಕಿಯಲ್ಲಿ ವಾಂತಿ ಮಾಡುವವನು ಕಿಟಕಿ ಮುಚ್ಚಿಸುತ್ತಾನೆ. ಅವನು ಇಳಿದ ನಂತರ ಬೇಕಾದರೆ ನೀವು ಆರಾಮಾಗಿ ಕಿಟಕಿ ತೆಗೆದು ಕೂರಬಹುದು. ಎಲ್ಲೆಲ್ಲಿ ನೋಡಿದರೂ ಬರಡು ಭೂಮಿ, ಒಣಗಿದ ತೊರೆ, ನದಿಗಳು, ಅûಾಂಶ, ರೇಖಾಂಶಗಳಿಗಿಂತ ಹೆಚ್ಚಾಗಿರುವ ಇಲೆಕ್ಟ್ರಿಕ್ ವೈರುಗಳು, ಮುರಿದು ಬಿದ್ದ, ಸೂರು ಹಾರಿ ಹೋದ “ಆಶ್ರಯ’ ಮನೆಗಳು!
ಮಧ್ಯದಲ್ಲಿ ಬಸ್ ನಿಂತಾಗ ಕಡ್ಲೆಕಾಯಿ, ಸೌತೆಕಾಯಿ, ಕಲ್ಲಂಗಡಿ, ಬಾಳೆಹಣ್ಣುಗಳನ್ನು ಪಕ್ಕದವನಿಗೆ ತಲುಪಿಸುವ ಏಜೆಂಟ್ ನೀವಾಗಬೇಕು, ಅವನು ಆಚೆ ತೂರುವ ಸಿಪ್ಪೆ, ನಾರು, ಬೀಜಗಳ ಅರ್ಧಾಂಶ ಸ್ವೀಕರಿಸಿ ಸಹನೆ ಕಾಪಾಡಿಕೊಳ್ಳಬೇಕು, ಮತ್ತೆ ಬಸ್ ಹೊರಟಾಗ ಮಳೆ ಬಂದರಂತೂ ಮುಗಿಯಿತು, ಕಿಟಕಿಯ ಗಾಜಿನ ಮೇಲೆ ಅಸ್ತವ್ಯಸ್ಥವಾಗಿ ಕೆಳಗಿಳಿಯುವ ನೀರಿನ ಗೆರೆಗಳು ಶೇರ್ ಮಾರುಕಟ್ಟೆ ಸೂಚ್ಯಂಕದಂತೆ ಭಾಸವಾಗಿ ಗಾಬರಿಯಾಗುತ್ತದೆ, ಅಷ್ಟರಲ್ಲೇ ಹೊರಮುಖವಾಗಿ ಹರಿಯುತ್ತಿದ್ದ ನೀರು ಒಳಕ್ಕೆ ನುಗ್ಗಿ ನಿಮ್ಮನ್ನು ತೋಯಿಸಿ ತಂಪೆರೆಯುತ್ತದೆ, ಸಿಟಿ ಹತ್ತಿರವಾದಂತೆಲ್ಲ ಮಳೆ ಮರೆಯಾಗುತ್ತದೆ, ವಾಹನಗಳ ಹೊಗೆ, ಧೂಳು, ಪಕ್ಕದಲ್ಲೇ ಭಯಾನಕವಾಗಿ ಉಜ್ಜಿಕೊಂಡು ಹೋಗುವ ವಾಹನಗಳು, ಕಿವಿಗಡಚಿಕ್ಕುವ ಹಾರನ್ ಸದ್ದು- ಈ ಎಲ್ಲದರ ಮಧ್ಯೆ “ವಿಂಡೋವ್ಯೂ’ ತನ್ನ ನಿಜವಾದ ಸ್ವಾರಸ್ಯವನ್ನು ಕಳೆದುಕೊಂಡು ತಲೆನೋವು ತರಿಸುತ್ತದೆ, ಸಾಕಪ್ಪಾ ಸಾಕು ಎನಿಸುತ್ತದೆ.
ವಿನಾಶ, ತೊಂದರೆಗಳಿಗಿಂತ ಕುತೂಹಲದ ಕೈಯೇ ಮೇಲು, ಹೀಗಾಗಿ, ಏನೆಲ್ಲ ಉಪದ್ರವಗಳ ನಡುವೆ ಸಿಗಬಹುದಾದ ಸಂಭವನೀಯ ಘಟನೆಗಳು, ಆಕರ್ಷಣೆಗಳು- ಮದುವೆ ದಿಬ್ಬಣ, ಕಾಲೇಜು ಕನ್ನಿಕೆಯರ ಉ(ಮು)ಗುಳು ನಗು, “ಎ ಸರ್ಟಿಫಿಕೇಟ್’ ಮಲೆಯಾಳಿ ಚಿತ್ರದ ವಾಲ್ ಪೋಸ್ಟರ್ ಇತ್ಯಾದಿ- ಕಿಟಕಿಯ ಪಕ್ಕ ಕೂರುವ ಚಪಲ ಕಾಯ್ದಿಡುತ್ತವೆ.
ಆದರೆ, ಅದು ನೀವು ಮದುವೆಯಾಗುವವರೆಗೆ ಮಾತ್ರ, ಅನಂತರ ಕಿಟಕಿಯ ಪಕ್ಕದ ಸುಖ, “ವಿಂಡೋ ವ್ಯೂ’ ಸವಿಯುವ ಸಂಪೂರ್ಣ ಸೌಲಭ್ಯ ನಿಮ್ಮ ಶ್ರೀಮತಿಯದಾಗುತ್ತದೆ. ಅದೊಂದು ಅಲಿಖೀತ, ಅನೌಪಚಾರಿಕ ಕಾನೂನು, ಈ ಬದಿ ಕೂತರೆ ಎಲ್ಲಿ ಹೋಗುವವರು, ಬರುವವರು ಉಜ್ಜಿ ಹೆಂಡತಿಯ ಸವಕಳಿ ಉಂಟಾಗುತ್ತದೋ ಎಂದು ಕೆಲವು ಸ್ವಾರ್ಥಿ ಗಂಡಸರು ಈ ವ್ಯವಸ್ಥೆ ರೂಢಿಸಿರಬಹುದು ಅಥವಾ ಗಂಡಸರ ಚಪಲ (ಇಣುಕು) ಪ್ರವೃತ್ತಿಗೆ ಕಡಿವಾಣ ಹಾಕಲು ಹೆಂಗಸರೇ ಈ “ವಿಂಡೋ ವ್ಯೂ’ ತಾಪತ್ರಯ ಅನುಭವಿಸಲು ಸಿದ್ಧರಿರಬಹುದು. ಈ “ವಿಂಡೋ ವ್ಯೂ’ ನಮ್ಮ ನಿಮ್ಮ ಪಾಲಿಗೆ ತಪ್ಪಿದರೂ ಮನೆಯ ವಿಂಡೋನಲ್ಲಿ ಪಕ್ಕದ ಮನೆಯ ನಯನ, ವಿನುತಾ… ಮುಂತಾದವರ ಬ್ಲೋ ಅಪ್ ಇದ್ದೇ ಇರುತ್ತದೆ, ಅದೇ ಸಮಾಧಾನ.
ಯಾರು ಏನೇ ಹೇಳಲಿ, ನಾವೇ ಅಷ್ಟಿಷ್ಟು ಭಾಗ್ಯವಂತರು, ವಿಂಡೋ ವ್ಯೂ ಎಂದರೇನು ಎಂಬುದಾದರೂ ನಮಗೆ ಗೊತ್ತಿದೆ, ಬಿಟಿಎಸ್ ಪೀಕ್ ಅವರ್ನಲ್ಲಿ ಸದಾ ನಿಂತೇ ಪ್ರಯಾಣಿಸುವವರನ್ನು ಈ ಬಗ್ಗೆ ಕೇಳಿದರೆ ಮುಖ ಮುಖ ನೋಡಿಯಾರು, ಯಾರೋ ಹುಚ್ಚ ಎಂಬಂತೆ ನಕ್ಕಾರು. ಹಾಗೆಯೇ ಟಾಪ್ ಮೇಲೆ ಗರುಡೋತ್ಸವ ನಡೆಸುವ ಗ್ರಾಮೀಣ ಜನರ ಪ್ರತಿಕ್ರಿಯೆಯೂ ಇಷ್ಟೇ ಇದ್ದೀತು. ಸಂಪೂರ್ಣ ಪಾರದರ್ಶಕ (ಟ್ರಾನ್ಸ್ ಫರೆಂಟ್ ಫೈಬರ್) ಗ್ಲಾಸ್‌ಗಳಿಂದ ತಯಾರಾದ ಬಸ್‌ಗಳ ಆವಿಷ್ಕಾರವಾಗಿರುವ ಈ ಯುಗದಲ್ಲಿ ಬಸ್ಸಿನ ವಿಷಯದಲ್ಲಂತೂ ವಿಂಡೋವ್ಯೂ ಎಂಬ ಪದ ಅರ್ಥಹೀನವಲ್ಲವೆ?
– ತುರುವೇಕೆರೆ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.