ಧೂಳಾಗಿದೆ ಬೆಂದಕಾಳೂರು ಗಾಳಿ!


Team Udayavani, Dec 25, 2017, 12:35 PM IST

dhool.jpg

ನಗರದಲ್ಲಿ 8 ಗಂಟೆ ಸುತ್ತಾಡುವ ಬಿಎಂಟಿಸಿ ಬಸ್ಸೊಂದರಲ್ಲಿ ಕನಿಷ್ಠ 2.5 ಕೆ.ಜಿ ಮಣ್ಣು ಸಂಗ್ರಹವಾಗುತ್ತದೆ ಎಂಬ ಸಂಗತಿಯನ್ನು ಇತ್ತೀಚೆಗೆ ಸಾರಿಗೆ ಸಚಿವರೇ ಬಹಿರಂಗಪಡಿಸಿದ್ದಾರೆ. ಬಿಎಂಟಿಸಿ ಬಸ್ಸಿನಲ್ಲೇ ಇಷ್ಟು ಧೂಳು ಸಂಗ್ರಹವಾದರೆ ಇನ್ನು ನಗರದಲ್ಲಿ ನಿತ್ಯ ಸಂಚರಿಸುವ ಲಕ್ಷಾಂತರ ಮಂದಿಯ ಒಡಲು ಸೇರುವ ಧೂಳೆಷ್ಟು ಎಂಬ ಪ್ರಶ್ನೆ ಮೂಡದೆ ಇರದು.

ನಗರದಲ್ಲಿ ನಾವು ಉಸಿರಾಡುತ್ತಿರುವ ಗಾಳಿಯಲ್ಲಿ ಕೇವಲ ಮಣ್ಣಿನ ಕಣಗಳಿಲ್ಲ, ವಿಷಕಾರಿ ಲೋಹದ ಅಂಶಗಳು, ಸುಟ್ಟ ಪ್ಲಾಸ್ಟಿಕ್‌ ಕಣ, ವಾಹನಗಳ ಹೊಗೆಯಲ್ಲಿನ ಆಯಿಲ್‌, ಗ್ರೀಸ್‌ ಅಂಶಗಳೂ ಸೇರಿವೆ ಎಂಬುದು ಆತಂಕಕಾರಿ ಸಂಗತಿ. ಧೂಳಿನ ಸಮಸ್ಯೆ, ತೀವ್ರತೆ, ಕಾರಣ, ಪರಿಣಾಮ, ಪರಿಹಾರ ಕುರಿತ ಒಂದಿಷ್ಟು ವಿವರ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

ಬೆಂಗಳೂರು: ಬೆಂದಕಾಳೂರಿನ ಗಾಳಿ ಧೂಳಾಗಿದೆ! ನಗರದ ಗಾಳಿಯಲ್ಲಿ ತೇಲುವ ಧೂಳಿನ ಕಣಗಳು ಜನರ ಉಸಿರು ಕಟ್ಟಿಸುತ್ತಿವೆ. ಅತ್ಯಾಧುನಿಕ ಪೊಲ್ಯೂಷನ್‌ ಮಾಸ್ಕ್ ಧರಿಸಿದರೂ ಈ ಕೆಟ್ಟ ಕಣಗಳು ದೇಹವನ್ನು ಹೊಕ್ಕು ಶ್ವಾಸಕೋಶ ತಲುಪಿ, ಸೋಂಕು ಸೃಷ್ಟಿಸುವಷ್ಟು ಶಕ್ತವಾಗಿದೆ. ಈ ಮಾತು ಹೇಳುತ್ತಿರುವುದು ಯಾರೋ ದಾರಿಹೋಕರಲ್ಲ, ಸ್ವತಃ ತಜ್ಞರು.

ವಿಪರೀತ ಧೂಳು, ಹೊಗೆಯಿಂದ ತೀವ್ರ ಕಲುಷಿತಗೊಂಡಿರುವ ನಗರದ ಕೆಲ ಭಾಗಗಳಲ್ಲಿ ಕೇವಲ 30 ನಿಮಿಷ ಉಸಿರಾಡಿದರೂ ಸಾಕು, ಹದಗೆಡುವ ನಿಮ್ಮ ಶ್ವಾಸಕೋಶ ಸಹಜ ಸ್ಥಿತಿಗೆ ಮರಳಲು ಕನಿಷ್ಠ ಒಂದು ತಿಂಗಳು ಬೇಕಾಗಬಹುದು. ಈ ದೂಳಿನ ಹಾವಳಿ ಹೊರಗಷ್ಟೇ ಅಲ್ಲ, ಮನೆಯೊಳಗೂ ತೀವ್ರವಾಗಿದ್ದು, ಅಸ್ತಮಾಪೀಡಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂಬ ಅಂಶವೂ ಭೀತಿ ಹುಟ್ಟಿಸುವಂತಿದೆ.

ಈ ಧೂಳಿನಲ್ಲಿ ಮಣ್ಣಿನ ಕಣಗಳ ಜತೆ ವಿಷಕಾರಿ ಲೋಹದ ಅಂಶಗಳು, ಸುಟ್ಟ ಪ್ಲಾಸ್ಟಿಕ್‌ ಕಣ, ವಾಹನಗಳ ಹೊಗೆಯಲ್ಲಿನ ಆಯಿಲ್‌, ಗ್ರೀಸ್‌ ಅಂಶಗಳೂ ಇವೆ ಎಂದು ತಜ್ಞರು ಹೇಳುತ್ತಾರೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಅನಿವಾರ್ಯ.

ಹಾಗಾಗಿ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಸ್‌ಎನ್‌ಎಲ್‌ ಇತರೆ ಸಂಸ್ಥೆಗಳು ಸುಧಾರಿತ ಸೇವೆ ಒದಗಿಸುವ ಕಾರ್ಯದಲ್ಲಿ ತೊಡಗಿದ್ದು, ಏಕಕಾಲಕ್ಕೆ ಸಾವಿರಾರು ಕಾಮಗಾರಿ ನಡೆಯುತ್ತವೆ. ಇದೀಗ ಮೆಟ್ರೋ ಕಾಮಗಾರಿಗಳೂ ಸೇರ್ಪಡೆಯಾಗಿವೆ. ಈ ಪೈಕಿ ಬಹುತೇಕ ಕಾಮಗಾರಿಗಳು ನಡೆಯುವುದು ರಸ್ತೆಯಲ್ಲೇ ಆದ್ದರಿಂದ ಆ ಭಾಗದಲ್ಲಿ ಧೂಳು ಇದ್ದೇ ಇರುತ್ತದೆ.

ಉದ್ಯಾನನಗರಿಯ ವಾತಾವರಣ ಕಲುಷಿತಗೊಂಡು ಅಸ್ತಮಾ ಹರಡಿ ಎರಡು ದಶಕ ಕಳೆದಿವೆ ಎಂದರೆ ಅಚ್ಚರಿಯಾಗಬಹುದು. 1997ರಿಂದಲೇ ನಗರದಲ್ಲಿ ಅಸ್ತಮಾ ಪ್ರಮಾಣ ಹೆಚ್ಚಾಗಿದ್ದು, ಈಚಿನ ವರ್ಷಗಳಲ್ಲಿ ಶರವೇಗ ಪಡೆದಿದೆ. ಮರ ಕಡಿಯುವುದು, ಕಸ-ಪ್ಲಾಸ್ಟಿಕ್‌ಗೆ ಬೆಂಕಿ, ವಾಹನ, ಡೀಸೆಲ್‌ ಜನರೇಟರ್‌, ಕೈಗಾರಿಕೆಗಳು ಹೊರಬಿಡುವ ಅಪಾಯಕಾರಿ ಹೊಗೆ, ರಸ್ತೆ ಅಗೆತ, ಕಟ್ಟಡ ನೆಲಸಮ ಕಾಮಗಾರಿ, ಮಣ್ಣು, ಮರಳು ಸಾಗಣೆ ಹಾಗೂ ಇತರೆ ಕಾರಣಗಳಿಂದ ವಾತಾವರಣದಲ್ಲಿ ತುಂಬುವ ಧೂಳು ಮಾರಕವಾಗಿ ಪರಿಣಮಿಸಿದೆ.

ಧೂಳು ಹಿಡಿದಿರುವ ಧೂಳು ನಿಯಂತ್ರಣ ವರದಿ: “ರಸ್ತೆ ಬದಿ ಇಲ್ಲವೇ ರಸ್ತೆ ವಿಭಜಕದಲ್ಲಿನ ಮರಗಳು, ಅವುಗಳ ಎಲೆಗಳನ್ನು ಮುಟ್ಟಿದರೆ ಮಣ್ಣು ಕೈಗಂಟಿಕೊಳ್ಳುತ್ತದೆ. ಅಂದರೆ ಅಷ್ಟು ಧೂಳು, ಮಣ್ಣನ್ನು ಆ ಮರ ಹಿಡಿದಿಟ್ಟುಕೊಂಡಿರುತ್ತದೆ ಎಂದರ್ಥ. ಗಾಳಿಯಲ್ಲಿನ ಧೂಳಿನ ಕಣಗಳನ್ನು ಹಿಡಿದುಕೊಂಡು ಆಮ್ಲಜನಕವನ್ನು ಹೊರಸೂಸಿ ಗಾಳಿಯನ್ನು ಶುಚಿಗೊಳಿಸುವ ಮರಗಳಿಗೇ ನಗರದಲ್ಲಿ ಸದ್ಯ ಜಾಗವಿಲ್ಲ!’

ಹೀಗೆಂದು ಬೇಸರ, ಆತಂಕ ವ್ಯಪ್ತಪಡಿಸುವವರು ಹಿರಿಯ ಪರಿಸರತಜ್ಞ ಡಾ.ಎ.ಎನ್‌.ಯಲ್ಲಪ್ಪರೆಡ್ಡಿ. ನಗರದ ಧೂಳಿನ ಸಮಸ್ಯೆ ಪರಿಹರಿಸಿ ಶುದ್ಧ ವಾತಾವರಣ ಕಾಯ್ದುಕೊಳ್ಳಲು ಸಹಕಾರಿಯಾದ 150 ಪ್ರಭೇದದ ಸಸಿಗಳನ್ನು ನೆಟ್ಟು ಪೋಷಿಸುವ ಬಗ್ಗೆ ಬಿಬಿಎಂಪಿಗೆ ನೀಡಿದ ವರದಿಗೂ ಧೂಳು ಹಿಡಿದಿದೆ.
“ನಗರದ ವಾತಾವರಣದಲ್ಲಿ ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ, ಪ್ಲಾಸ್ಟಿಕ್‌ ಕಣಗಳು, ಕ್ರೋಮಿಯಂ ಸೇರಿ ಹಲವು ಅಪಾಯಕಾರಿ ಕಣಗಳಿವೆ.

ಕಸ, ಹಸಿ ಕಸ, ಎಲೆ, ಪ್ಲಾಸ್ಟಿಕ್‌, ಥರ್ಮೋಕೋಲ್‌ ಸುಡುವುದರಿಂದಲೂ ಗಾಳಿ ವಿಷಕಾರಿಯಾಗಿ, ಈ ವಿಷ ನಿರಂತರವಾಗಿ ಜನರ ದೇಹ ಸೇರುತ್ತಿದೆ. ವಾಹನದ ಹೊಗೆಯಲ್ಲಿ ಕಾರ್ಬನ್‌ ಮಾತ್ರವಲ್ಲದೆ, ಗ್ರೀಸ್‌, ಆಯಿಲ್‌ನ ಅಂಶಗಳೂ ಇರುತ್ತವೆ. ಒಳಚರಂಡಿ ಹೂಳು ತೆಗೆದು ನಂತರ ಸಾಗಿಸದಿದ್ದರೂ ಅದು ಧೂಳಾಗಿ ಗಾಳಿ ಸೇರುತ್ತದೆ. ಹೀಗೆ ನಾನಾ ವಿಧದಲ್ಲಿ ಅಪಾಯಕಾರಿ, ವಿಷಕಾರಕ ಕಣಗಳು ಜನರ ದೇಹ ಹೊಕ್ಕಿ ಬಾಧಿಸುತ್ತಿವೆ.’

“ನಾನಾ ಅಭಿವೃದ್ಧಿ ಯೋಜನೆಗೆ ಒತ್ತು ನೀಡುವ ಆಡಳಿತಕ್ಕೆ ಮರಗಳು ಬೇಡ. ಮೆಟ್ರೋ ಸೇರಿ ನಾನಾ ಯೋಜನೆಗೆ ಸಾವಿರಾರು ಮರ ಕಡಿದು ರಸ್ತೆಬದಿ ಗಿಡ ನೆಟ್ಟು ಪೋಷಿಸುವುದಾಗಿ ಹೇಳುತ್ತಾರೆ. ಆದರೆ ನೆಟ್ಟ ಗಿಡಗಳಲ್ಲಿ ಬದುಕುಳಿದಿದ್ದೆಷ್ಟು ಎಂದು ನೋಡುವವರಿಲ್ಲ. ಗಿಡ, ಮರ ಬೆಳೆಸುವುದೆಂದರೆ ಜಾಗ ವ್ಯರ್ಥ ಎಂಬ ಭಾವನೆ ಇದೆ.

ಇನ್ನೊಂದೆಡೆ ಸರ್ಕಾರಿ ಗೋಮಾಳ, ಗುಂಡುತೋಪು ಪ್ರದೇಶಗಳನ್ನೆಲ್ಲಾ ಸಂಘ, ಸಂಸ್ಥೆ, ಮಠಗಳಿಗೆ ನೀಡಲಾಗುತ್ತಿದೆ. ಇದರಿಂದ ಹಸಿರು ಕ್ಷೀಣಿಸುತ್ತಿದೆ. ಇಷ್ಟಾದರೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಭರವಸೆ ಕಾಣುತ್ತಿಲ್ಲ. ಮನೆ, ಕಚೇರಿ, ಕಾರಿನಲ್ಲಿ ಎಸಿ ವ್ಯವಸ್ಥೆಯಡಿ ಇರುವವರಿಂದ ಸಮುದಾಯದ ಆರೋಗ್ಯ, ಸುರಕ್ಷತೆ ನಿರೀಕ್ಷಿಸುವುದಾದರೂ ಹೇಗೆ,’ ಎಂಬುದು ಯಲ್ಲಪ್ಪರೆಡ್ಡಿ ಅವರ ಪ್ರಶ್ನೆ.

ಮಾಸ್ಕ್ ಧರಿಸಿದರೂ ಹಾನಿ ತಪ್ಪದು: ರಾಜಧಾನಿ ಬೆಂಗಳೂರಿನಲ್ಲಿ ಮಾಸ್ಕ್ ಧರಿಸಿದರೂ ಶ್ವಾಸಕೋಶಕ್ಕೆ ಸೋಂಕು ಉಂಟು ಮಾಡುವ ಧೂಳಿನ ಕಣಗಳ (ಪಿಎಂ 2.5) ಪ್ರಮಾಣ ಹೆಚ್ಚಾಗುತ್ತಿದೆ. ಮಿತಿ ಮೀರಿದ ವಾಹನ ಬಳಕೆ, ರಸ್ತೆಗಳ ಅವೈಜ್ಞಾನಿಕ ನಿರ್ವಹಣೆ, ಅಭಿವೃದ್ಧಿ ಕಾಮಗಾರಿಗಳು, ಕೈಗಾರಿಕೆಗಳು ಹೊರಸೂಸುವ ಮಲಿನಕಾರಕ ಅಂಶಗಳು ವಾಯು ಮಾಲಿನ್ಯ ಪ್ರಮಾಣ ಹೆಚ್ಚಿಸಿವೆ.

ಹಾಗೇ ವಾತಾವರಣದಲ್ಲಿ ಧೂಳಿನ ಕಣಗಳ ಪ್ರಮಾಣವೂ ಹೆಚ್ಚಾಗಿದ್ದು, ಮುಂಜಾಗ್ರತೆ ವಹಿಸಿದರೂ ನೇರವಾಗಿ ಶ್ವಾಸಕೋಶ ಪ್ರವೇಶಿಸಿ ಕಾಯಿಲೆ ತರುವ ಅತಿಸೂಕ್ಷ್ಮ ಧೂಳಿನ ಕಣಗಳು ರಾಷ್ಟ್ರೀಯ ನಿಗದಿಗಿಂತಲೂ ನಗರದಲ್ಲಿ ಹೆಚ್ಚಿರುವುದು ಆಘಾತಕಾರಿ ವಿಚಾರ. 

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರದ 16 ಕಡೆ ಅಳವಡಿಸಿರುವ ವಾಯು ಗುಣಮಟ್ಟ ಮಾಪನ ಕೇಂದ್ರಗಳ ಪೈಕಿ 10 ಕೇಂದ್ರಗಳಲ್ಲಿ ಅಪಾಯಕಾರಿ ಸೂಕ್ಷ್ಮ ಧೂಳಿನ ಕಣ ಪಿಎಂ2.5 ನಿಗದಿಗಿಂತ ಹೆಚ್ಚಿದ್ದರೆ, 15 ಕೇಂದ್ರಗಳಲ್ಲಿ ಧೂಳಿನ ಕಣಗಳು (ಪಿಎಂ 10) ರಾಷ್ಟ್ರೀಯ ನಿಗದಿಗಿಂತ ದುಪ್ಪಟ್ಟಾಗಿರುವುದು ಅಂಕಿ-ಅಂಶದಿಂದ ತಿಳಿದುಬಂದಿದೆ. 

ಉಸಿರಾಡುವ ಮುಂಚೆ ಯೋಚಿಸಿ!: ಬೆಂಗಳೂರಿನ ವೈಟ್‌ಫೀಲ್ಡ್‌, ಯಲಹಂಕ, ಮೈಸೂರು ರಸ್ತೆ, ಹೊಸೂರು ರಸ್ತೆ, ಪೀಣ್ಯ, ದೊಮ್ಮಲೂರು ಭಾಗಗಳ ನಿವಾಸಿಗಳು ಹಾಗೂ ಹೆಚ್ಚು ಸಂಚರಿಸುವವರು ಆ ಭಾಗಗಳಲ್ಲಿ ಉಸಿರಾಡಲು ಎರಡು ಬಾರಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಳವಡಿಸಿರುವ ವಾಯು ಗುಣಮಟ್ಟ ಮಾಪನ ಕೇಂದ್ರಗಳಲ್ಲಿ ನೇರವಾಗಿ ಶ್ವಾಸಕೋಶ ಸೇರುವ ಧೂಳಿನ ಕಣಗಳು ಅಗಾಧ ಪ್ರಮಾಣದಲ್ಲಿರುವ ಅಂಶ ದಾಖಲಾಗಿದೆ.

ಧೂಳಿನ ಕಣಗಳು ಎಷ್ಟು ಅಪಾಯಕಾರಿ?: ಗಾಳಿಯಲ್ಲಿ ತೇಲಾಡುವ ಧೂಳಿನ ಕಣಗಳ ಗಾತ್ರ ಆಧರಿಸಿ ಧೂಳಿನ ಕಣಗಳನ್ನು ಪಿಎಂ 10 ಹಾಗೂ ಪಿಎಂ 2.5 ಎಂದು ವಿಂಗಡಿಸಲಾಗಿದೆ. ಮಾಸ್ಕ್ ಅಥವಾ ಬಟ್ಟೆ ಧರಿಸುವುದರಿಂದ ಪಿಎಂ 10 ಕಣಗಳು ದೇಹ ಪ್ರವೇಶಿಸುವುದನ್ನು ತಡೆಯಬಹುದಾಗಿದೆ. ಆದರೆ, ಪಿಎಂ 2.5 ಕಣಗಳು ಅತ್ಯಂತ ಅಪಾಯಕಾರಿಯಾಗಿದ್ದು,

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಮಾಸ್ಕ್ ಧರಿಸಿದರೂ ಈ ಕಣಗಳು ದೇಹ ಪ್ರವೇಶಿಸುವುದನ್ನು ತಡೆಯಲು ಸಾಧ್ಯವಿಲ್ಲ. ಪಿಎಂ 2.5 ಕಣಗಳು ನೇರವಾಗಿ ವ್ಯಕ್ತಿಯ ಶ್ವಾಸಕೋಶ ಪ್ರವೇಶಿಸಿ ಗಂಭೀರ ಹಾನಿಯುಂಟು ಮಾಡುತ್ತವೆ ಎಂದು ಆಸ್ತಮಾ ಕಾಯಿಲೆಯ ಕುರಿತು ಸಂಶೋಧನೆ ನಡೆಸಿರುವ ಲೇಕ್‌ಸೈಡ್‌ ಮೆಡಿಕಲ್‌ ಸೆಂಟರ್‌ ನಿರ್ದೇಶಕ ಡಾ.ಪರಮೇಶ್‌ ತಿಳಿಸಿದ್ದಾರೆ. 

ರಸ್ತೆ ಬದಿ ಮಣ್ಣು ತೆಗೆಯದ ಪಾಲಿಕೆ: ನಗರದ ರಸ್ತೆಗಳಲ್ಲಿ ಮಣ್ಣು ಇರದಂತೆ ಸ್ವತ್ಛವಾಗಿಡುವುದು ಬಿಬಿಎಂಪಿಯ ಜವಾಬ್ದಾರಿಯಾಗಿದ್ದು, ಬಿಬಿಎಂಪಿಯಿಂದ ಸಮರ್ಪಕವಾಗಿ ರಸ್ತೆಗಳನ್ನು ಗುಡಿಸದಿರುವುದು ಸಹ ವಾತಾವರಣದಲ್ಲಿ ಧೂಳಿನ ಕಣಗಳು ಹೆಚ್ಚಾಗಲು ಕಾರಣವಾಗಿದೆ. ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸಿದಾಗ ರಸ್ತೆ ವಿಭಜಕದ ಬಳಿಯಿರುವ ಮೇಲೇರುತ್ತದೆ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು. 

ಮರಗಳ ತೊಗಟೆ, ಎಲೆ, ಕಾಯಿಗಳು ಧೂಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಹಾಗಾಗಿ ಗಿಡ, ಮರಗಳು, ಗಿಡಮೂಲಿಕೆಗಳು, ಬಳ್ಳಿಗಳ ಮೂಲಕ ನೈಸರ್ಗಿಕವಾಗೇ ಗಾಳಿ ಸ್ವತ್ಛಗೊಳಿಸಬಹುದು. ಆ ಹಿನ್ನೆಲೆಯಲ್ಲಿ ನಗರದ ವಾತಾವರಣಕ್ಕೆ ಪೂರಕವಾದ 150 ಪ್ರಭೇದದ ಮರಗಳನ್ನು ನೆಡುವಂತೆ ಶಿಫಾರಸು ಮಾಡಿ ಬಿಬಿಎಂಪಿಗೆ ಹಲವು ವರ್ಷಗಳ ಹಿಂದೆಯೇ ವರದಿ ನೀಡಲಾಗಿತ್ತು. ಆದರೆ ವರದಿಯೂ ಧೂಳು ಹಿಡಿಯುತ್ತಿದೆ.
-ಡಾ.ಎ.ಎನ್‌.ಯಲ್ಲಪ್ಪರೆಡ್ಡಿ, ಪರಿಸರ ತಜ್ಞ

ವಾಯುಮಾಲಿನ್ಯದ ಪರಿಣಾಮ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಗರದಲ್ಲಿ 1997ರಿಂದಲೂ ಅಸ್ತಮಾ ಪ್ರಮಾಣ ಹೆಚ್ಚುತ್ತಿದೆ. ವಾಹನಗಳ ಹೊಗೆ, ಕೈಗಾರಿಕೆ, ಕಟ್ಟಡಗಳ ಧೂಳಿನ ಕಣಗಳು ದೇಹ ಸೇರುವುದು ಒಂದೆಡೆಯಾದರೆ, ಮನೆಯನ್ನು ಸ್ವತ್ಛವಾಗಿಡದಿದ್ದರೆ ನುಸಿಯ ಕಣಗಳು ಸಹ ದೇಹ ಸೇರಿ ಅಲರ್ಜಿ, ಕೆಮ್ಮು, ಅಸ್ತಮಾ ತರುತ್ತವೆ.
-ಡಾ.ಪರಮೇಶ್‌, ಲೇಕ್‌ಸೈಡ್‌ ಮೆಡಿಕಲ್‌ ಸೆಂಟರ್‌ ನಿರ್ದೇಶಕ

ನಗರದಲ್ಲಿ ವರ್ಷದ ಎಲ್ಲ ದಿನಗಳೂ ಒಂದಿಲ್ಲ ಒಂದು ಅಭಿವೃದ್ಧಿ ಕಾರ್ಯ ನಡೆಯುವುದರಿಂದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಕಟ್ಟಡ ನಿರ್ಮಾಣ ಅಥವಾ ಕೆಡಹುವಿಕೆಯ ವೇಳೆ ಧೂಳು ಹರಡದಂತೆ ನೀರು ಸಿಂಪಡಿಸುವಂತೆ ಮತ್ತು ರಸ್ತೆ ಬದಿಯ ಧೂಳು ಸ್ವತ್ಛಗೊಳಿಸುವ ವೇಲೆ ಅತ್ಯಾಧುನಿಕ ತಂತ್ರಜ್ಞಾನದ ವ್ಯಾಕ್ಯೂಮ್‌ ಬಳಸುವಂತೆ ನಿರ್ದೇಶನ ನೀಡಲಾಗಿದೆ. 
-ಲಕ್ಷ್ಮಣ್‌, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ 

ವಾಯು ಮಾಲಿನ್ಯಕಾರಕ ಅಂಶಗಳು
-ವಾಹನ ಸಂಚಾರ    ಶೇ.42
-ರಸ್ತೆಯಲ್ಲಿನ ಧೂಳು    ಶೇ.20
-ಅಭಿವೃದ್ಧಿ ಕಾಮಗಾರಿಗಳು    ಶೇ.14
-ಕೈಗಾರಿಕೆಗಳು    ಶೇ.14
-ಡಿ.ಜಿ.ಸೆಟ್‌ (ಜನರೇಟರ್)    ಶೇ.07
-ಹಳ್ಳಿ ಭಾಗದಲ್ಲಿನ ಹೊಗೆ    ಶೇ.03

ಮಾಲಿನ್ಯದಿಂದ ಆಗುವ ಪರಿಣಾಮಗಳು: ಕೆಮ್ಮು, ಉಬ್ಬಸ, ಅಲರ್ಜಿ, ಉಸಿರಾಟದ ತೊಂದರೆ, ಕಣ್ಣು, ಮೂಗು ಹಾಗೂ ಗಂಟಲಿನ ಕಿರಿಕಿರಿ, ಆಸ್ತಮಾ, ಮಕ್ಕಳಲ್ಲಿ ತೀವ್ರ ಉಸಿರಾಟದ ತೊಂದರೆ, ತೀವ್ರ ಹೃದಯಾಘಾತ ಸಾಧ್ಯತೆ, ಈಗಾಗಲೇ ಹೃದಯ, ಶ್ವಾಸಕೋಶ ಕಾಯಿಲೆಯಿರುವವರ ಮರಣ ಹೊಂದುವ ಸಾಧ್ಯತೆ, 

ಮುನ್ನೆಚ್ಚರಿಕೆ ಕ್ರಮಗಳು
-ಮನೆ ಸ್ವತ್ಛವಾಗಿರಿಸಿಕೊಳ್ಳಬೇಕು
-ನಿತ್ಯ ಬಳಸುವ ಹೊದಿಕೆ, ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸುವುದು
-ತಾಜಾ ಹಣ್ಣು-ತರಕಾರಿ ಸೇವನೆ
-ಮನೆಯಲ್ಲಿ ಒಳಾಂಗಣ ಗಿಡಗಳನ್ನ ಬೆಳೆಸುವುದು
-ಹೊರಗಡೆ ಹೋದಾಗ ವಾಯು ಮಾಲಿನ್ಯ ನಿಯಂತ್ರಕ ಮಾಸ್ಕ್ ಬಳಕೆ
-ಸಮೂಹ ಸಾರಿಗೆ ಬಳಕೆ

-ಪರಿಣಾಮಕಾರಿ ಮಾಲಿನ್ಯಕಾರಕಗಳು 
-ಧೂಳಿನ ಕಣಗಳು (ಪಿಎಂ2.5 ಹಾಗೂ ಪಿಎಂ 10) 
-ಓಜೋನ್‌ (ಒ3)
-ತಂಬಾಕು ಹೊಗೆ 

2016-17ನೇ ಸಾಲಿನಲ್ಲಿ ದಾಖಲಾದ ಮಾಲಿನ್ಯ ಪ್ರಮಾಣ
ಮಾಪನ ಸ್ಥಳ    ಪಿಎಂ 10    ಪಿಎಂ 2.5    (ಮೈಕ್ರೋ ಗ್ರಾಂಗಳಲ್ಲಿ) 

-ಐಟಿಪಿಎಲ್‌    130.9    54.8
-ರೈಲ್ವೆ ಕಾರ್ಖಾನೆ ಯಲಹಂಕ    110.8    51.7
-ಪೀಣ್ಯ ಕೈಗಾರಿಕಾ ಪ್ರದೇಶ    108.9    51.7
-ಮೈಸೂರು ರಸ್ತೆ    106.8    51
-ಹೊಸೂರು ರಸ್ತೆ    131.9    58
-ವಿಕ್ಟೋರಿಯಾ ರಸ್ತೆ    127    –
-ದೊಮ್ಮಲೂರು    120.1    55.4
-ಯಶವಂತಪುರ ಪೊಲೀಸ್‌ ಠಾಣೆ    93.3    45.9
-ಬಾಣಸವಾಡಿ ಪೊಲೀಸ್‌ ಠಾಣೆ    80.3    41.2
-ನಗರ ರೈಲ್ವೆ ನಿಲ್ದಾಣ    101.9    –
-ಕೆ.ಆರ್‌.ವೃತ್ತ    86.2    38.2
-ನಿಮ್ಹಾನ್ಸ್‌    77.6    35.9

* ವೆಂ. ಸುನೀಲ್‌ಕುಮಾರ್‌ & ಎಂ. ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ

PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ

PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.