ಸಿಂಹವನ್ನೇ ಓಡಿಸಿದ ಕುರಿ
Team Udayavani, Dec 28, 2017, 6:25 AM IST
ಕುರುಬನೊಬ್ಬನ ಬಳಿ ನೂರಾರು ಕುರಿಗಳಿದ್ದವು. ಅವನು ದಿನವೂ ಅವುಗಳನ್ನು ಊರಿನ ಸಮೀಪದಲ್ಲಿಯೇ ಇದ್ದ ಗುಡ್ಡದ ತಪ್ಪಲಿಗೆ ಕರೆದೊಯ್ದು ಸಂಜೆಯವರೆಗೂ ಮೇಯಿಸಿಕೊಂಡು ಪುನಃ ಗ್ರಾಮಕ್ಕೆ ಕರೆದೊಯ್ಯುತ್ತಿದ್ದ. ಎಲ್ಲಾ ಕುರಿಗಳೂ ಸರಸರನೆ ಗ್ರಾಮದ ಕಡೆಗೆ ಹೆಜ್ಜೆ ಹಾಕಿದರೆ, ಅದರಲ್ಲಿದ್ದ ಮುದಿ ಕುರಿಯೊಂದು ನಿಧಾನವಾಗಿ ಕುರಿ ಹಿಂಡಿನ ಹಿಂದೆ ಸಾಗುತ್ತಿತ್ತು.
ಹೀಗೇ ಸಾಗುತ್ತಿರುವಾಗ ಒಂದು ದಿನ ಇದ್ದಕ್ಕಿದ್ದಂತೆಯೇ ಮಳೆ- ಗಾಳಿ ಜೋರಾಗಿ ಕುರಿಗಳೆಲ್ಲವೂ ಬೇಗನೆ ಸಾಗಿ ಗ್ರಾಮವನ್ನು ಸೇರಿಕೊಂಡವು. ಎಂದಿನಂತೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ ಮುದಿ ಕುರಿ ಕತ್ತಲಲ್ಲಿ ದಾರಿತಪ್ಪಿ ಕಾಡಿನೊಳಗೆ ಹೆಜ್ಜೆ ಹಾಕಿತು. ಅಲ್ಲಿ ಪಾಳು ದೇವಾಲಯವೊಂದರ ಒಳಗೆ ಸೇರಿಕೊಂಡು ಆಶ್ರಯ ಪಡೆಯಿತು. ರಾತ್ರಿ ಸರಿಹೊತ್ತಿನಲ್ಲಿ ಅದೇ ದಾರಿಯಾಗಿ ಬಂದ ಸಿಂಹವೊಂದು ಕುರಿಯ ವಾಸನೆಯನ್ನು ಹಿಡಿದು ದೇವಸ್ಥಾನದ ಹೊರಗೆ ನಿಂತು “ಎಲೈ ಕುರಿಯೇ… ನೀನು ಒಳಗೆ ಅಡಗಿ ಕುಳಿತಿರುವುದು ನನಗೆ ಗೊತ್ತಿದೆ. ಕೂಡಲೇ ಹೊರಗೆ ಬಾ… ನನಗೆ ತುಂಬಾ ಹೊಟ್ಟೆ ಹಸಿಯುತ್ತಿದೆ. ನಿನ್ನನ್ನು ತಿಂದು ಮುಗಿಸುವವರೆಗೆ ಸುಮ್ಮನಿರುವುದಿಲ್ಲ’ ಎಂದಿತು. ಇದರಿಂದ ಹೆದರಿದ ಕುರಿಗೆ, ತಾನು ಹೊರಗೆ ಹೋದರೆ ಸಿಂಹದ ಬಾಯಿಗೆ ಆಹಾರವಾಗುವುದು ಖಚಿತವೆಂದು ಗೊತ್ತಾಗಿ ಹೋಯಿತು.
ಪಾರಾಗುವುದು ಹೇಗೆ ಎಂದು ಚಿಂತಿಸಿ ಚಿಂತಿಸಿ ಕೊನೆಗೊಂದು ಉಪಾಯ ಮಾಡಿತು. ಧೈರ್ಯ ಮಾಡಿ ಗಟ್ಟಿ ದನಿಯಲ್ಲಿ “ನಾನು ಸಾಧಾರಣ ಮೇಕೆಯಲ್ಲ. ಬ್ರಹ್ಮನ ತಾತ ನಾನು. ನನಗೀಗಾಗಲೇ ಸಾವಿರಕ್ಕೂ ಹೆಚ್ಚು ವರ್ಷ ವಯಸ್ಸಾಗಿದೆ’ ಎಂದಿತು. ಕುರಿಯ ಮಾತು ಕೇಳಿ ಸಿಂಹಕ್ಕೆ ಅಂಜಿಕೆಯಾಯಿತು. ಅದು ಹೆದರಿಕೊಂಡೇ “ನೀನು ಸಾವಿರ ವರ್ಷಗಳಾದರೂ ಇನ್ನೂ ಹೇಗೆ ಬದುಕಿರುವೆ?’ ಎಂದು ಮರುಪ್ರಶ್ನೆ ಹಾಕಿತು. ಇದನ್ನೇ ಕಾಯುತ್ತಿದ್ದ ಮೇಕೆ, “ನಾನು ಶಾಪಗ್ರಸ್ಥನಾಗಿದ್ದೇನೆ.
ಒಂದು ಸಾವಿರ ದನ, ನೂರು ಆನೆ, ಐವತ್ತು ಹುಲಿ ಹಾಗೂ ಹತ್ತು ಸಿಂಹಗಳನ್ನು ಕೊಂದು ತಿಂದ ದಿನವೇ ನನ್ನ ಶಾಪ ವಿಮೋಚನೆಯಾಗಿ ಸ್ವರ್ಗಕ್ಕೆ ಹೋಗುತ್ತೇನೆ. ಈಗಾಗಲೇ ಎಲ್ಲಾ ಪ್ರಾಣಿಗಳನ್ನೂ ತಿಂದು ಮುಗಿಸಿದ್ದಾಯಿತು. ಸಿಂಹಗಳಲ್ಲಿ 9 ಸಿಂಹಗಳನ್ನು ಈಗಾಗಲೇ ತಿಂದು ಮುಗಿಸಿದ್ದೇನೆ. ಇನ್ನೊಂದು ಸಿಂಹ ಮಾತ್ರ ಬಾಕಿಯಿದೆ. ಅದಕ್ಕೇ ಹೊಂಚು ಹಾಕುತ್ತಾ ಇಲ್ಲಿ ಕಾದು ಕುಳಿತಿದ್ದೆ. ನೀನು ಸಿಕ್ಕಿಹಾಕಿಕೊಂಡೆ. ನಿನ್ನನ್ನು ಕೊಂದು ತಿಂದರೆ ಶಾಪ ಪರಿಹಾರವಾಗುತ್ತದೆ.’ ಎಂದು ಗಹ ಗಹಿಸಿ ನಕ್ಕಿತು. ಕುರಿಯ ನಗು ಕೇಳಿ ಬೆಚ್ಚಿ ಬಿದ್ದ ಸಿಂಹ ಅಲ್ಲಿಂದ ಕಾಲ್ಕಿತ್ತಿತು. ಬೆಳಕು ಹರಿಯುವವರೆಗೂ ದೇವಸ್ಥಾನದ ಆವರಣದೊಳಗೆ ಅವಿತಿದ್ದ ಕುರಿ, ನಂತರ ಕುರಿಮಂದೆಯನ್ನು ಸೇರಿಕೊಂಡಿತು.
– ಹರೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.