ಮೋಸ್ಟ್ ವಾಂಟೆಡ್ ಸುಪಾರಿ ಕಿಲ್ಲರ್ ಸೆರೆ
Team Udayavani, Dec 28, 2017, 10:43 AM IST
ಬೆಂಗಳೂರು: ಈ ತಂಡಕ್ಕೆ ಸೇರಬೇಕಾದರೆ ಒಂದಾದರೂ ಅಪರಾಧ ಮಾಡಿರಲೇಬೇಕು…! ಕನಿಷ್ಠ ದರೋಡೆಯನ್ನಾದರೂ ಮಾಡಿರ ಬೇಕು…! ಹೌದು, ಪಂಜಾಬ್‌ನ ಖತರ್ನಾಕ್ ದರೋಡೆ ಗ್ಯಾಂಗ್‌ವೊಂದರ ನಾಲ್ವರು ಸದಸ್ಯರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದಾಗ ಈ ಮಾಹಿತಿ ಬಯಲಾಗಿದೆ. ಸದ್ಯ ಈ ಗ್ಯಾಂಗ್‌ನ ಮುಖ್ಯಸ್ಥ ಹರ್ಯಾಣ ಜೈಲಿನಲ್ಲಿದ್ದು, ಈತನ ಸಹಚರನನ್ನು ಬಂಧಿಸಲಾಗಿದೆ. ಈತ ನಾಲ್ಕು ರಾಜ್ಯಗಳ ಮೋಸ್ಟ್ ವಾಂಟೆಡ್, ಸುಪಾರಿ ಕಿಲ್ಲರ್ ಹಾಗೂ ಕಾನೂನು ಬಾಹಿರ ಚಟುವಟಿಕೆಯ ದೊಡ್ಡ ಗ್ಯಾಂಗ್‌ವೊಂದರ ಉಸ್ತುವಾರಿಯಾಗಿದ್ದ. ಇದಷ್ಟೇ ಅಲ್ಲ ತಾನು ಮಾಡಿದ ಎಲ್ಲ ಅಪರಾಧ ಕೃತ್ಯವನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ ವಿಕೃತಿ ಮೆರೆಯುತ್ತಿದ್ದ.
ಸ್ಟುಡೆಂಟ್ ಆಫ್ ಪಂಜಾಬ್ ಯೂನಿವರ್ಸಿಟಿ ಸಂಘಟನೆ ಪ್ರಮುಖ ಉಸ್ತುವಾರಿ ದೀಪಕ್ ಟೀನು ಬಂಧಿತ. ಈತ ಹರಿಯಾಣ ಮೂಲದವನಾಗಿದ್ದು ಪಂಜಾಬ್, ರಾಜಸ್ಥಾನ ಮತ್ತು ದೆಹಲಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಸುಮಾರು 28ಕ್ಕೂ ಅಧಿಕ ದರೋಡೆ, ಸುಪಾರಿ ಕೊಲೆ ಪ್ರಕರಣಗಳು ದಾಖಲಾಗಿವೆ. ಸ್ಟುಡೆಂಟ್ ಆಫ್ ಪಂಜಾಬ್ ಯೂನಿವರ್ಸಿಟಿ ಸಂಘಟನೆ ಸಂಸ್ಥಾಪಕ, ಸದ್ಯ ಪಂಜಾಬ್ ಜೈಲಿನಲ್ಲಿರುವ ಲಾರೆನ್ಸ್ ಬಿಸ್ನಾಯಿ ಸಹಚರನಾಗಿರುವ ದೀಪಕ್ ಟೀನು ತನ್ನ ಕಾಲಿನ ಚಿಕಿತ್ಸೆಗಾಗಿ ಡಿಸೆಂಬರ್ ಮೊದಲ ವಾರದಲ್ಲಿ ಹುಬ್ಬಳಿಗೆ ಬಂದಿದ್ದ. ನಂತರ ಬೆಂಗಳೂರಿನ ಮೂಲಕ ಮೈಸೂರಿಗೆ ಹೋಗಲು ಸಿದ್ಧತೆ ನಡೆಸಿದ್ದ. ಈ ಮಾಹಿತಿ ಪಡೆದ ಹರಿಯಾಣ ಪೊಲೀಸರು, ಸಿಸಿಬಿ ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ತನಿಖಾಧಿಕಾರಿ ರವೀಂದ್ರಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
ಅಪರಾಧ ಮಾಡಿರಲೇಬೇಕು: ಸ್ಟುಡೆಂಟ್ ಆಫ್ ಪಂಜಾಬ್ ಯೂನಿವರ್ಸಿಟಿ ಸಂಘಟನೆ ಸ್ಥಾಪನೆ ಮಾಡಿದ ಲಾರೆನ್ಸ್ ಬಿಸ್ನಾಯಿ, ಸುಮಾರು 100ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಪಂಜಾಬ್ ಮತ್ತು ಹರಿಯಾಣದಲ್ಲಿ ಸುಪಾರಿ ಹಂತಕ ತಂಡವೆಂದು ಕುಖ್ಯಾತಿಗಳಿಸಿದೆ. ಇವರಲ್ಲಿ ಹೆಚ್ಚು ಮಂದಿ ಬಂದೂಕು ಹೊಂದಿದ್ದು, ಘೋರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ತನ್ನ ಸಂಘಟನೆಗೆ ಸೇರಿಕೊಳ್ಳುವ ಪ್ರತಿಯೊಬ್ಬರು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರಬೇಕು. ಕನಿಷ್ಠ ದರೋಡೆಯನ್ನಾದರು ಮಾಡಿರಬೇಕು. ಹೀಗಾಗಿ ಈ ತಂಡದ ಕೌರ್ಯಕ್ಕೆ ಇಡೀ ಪಂಜಾಬ್ ಮತ್ತು ಹರಿಯಾಣವೇ ಬೆಚ್ಚಿ ಬಿದ್ದಿತ್ತು. ಪೊಲೀಸರು ಸಹ ಮುಟ್ಟಲು ಹೆದರುತ್ತಿದ್ದರು. ಅಷ್ಟೊಂದು ಅಮಾನುಷವಾಗಿದ್ದ ಲಾರೆನ್ಸ್ ಮತ್ತು ದೀಪಕ್‌ನನ್ನು ಪ್ರಕರಣವೊಂದರಲ್ಲಿ ಹರಿಯಾಣ ಪೊಲೀಸರು ಬಂಧಿಸಿದ್ದರು. ಪಂಜಾಬ್‌ನ ಸಿನಿಮಾ ನಿರ್ಮಾಪಕ/ನಿರ್ದೇಶಕನೊಬ್ಬನ ಸುಪಾರಿ ಪಡೆದಿದ್ದ ತಂಡ ಈತನ ಮೂಲಕವೇ ಕೃತ್ಯವೆಸಗಲು ಸಂಚು ರೂಪಿಸಿತ್ತು. ಹೀಗಾಗಿ ಜೂನ್‌ನಲ್ಲಿ ಹರಿಯಾಣದ ಅಂಬಾಲ ಜೈಲಿನಿಂದ ಚಿಕಿತ್ಸೆಗೆಂದು ಕರೆದೊಯ್ಯುವ ಮಾರ್ಗ ಮಧ್ಯೆ ಸಂಘಟನೆ ಇತರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ದೀಪಕ್‌ನನ್ನು ಕರೆದೊಯ್ದಿದ್ದರು. ನಂತರ ಹತ್ತಾರು ದರೋಡೆ, ಐದು ಕೊಲೆ ಹಾಗೂ 50 ಲಕ್ಷ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮೆಡಿಕಲ್ ಸ್ಟೋರ್ ಮಾಲೀಕನನ್ನು ಹತ್ಯೆಗೈದು ಪರಾರಿಯಾಗಿದ್ದ. ಅಷ್ಟೇ ಅಲ್ಲದೇ, ಕಂಟ್ರಿಮೆಡ್ ಪಿಸ್ತೂಲ್ ಮಾರಾಟದಲ್ಲಿ ಪ್ರಮುಖನಾಗಿದ್ದ. ಕಳೆದ ಜೂನ್‌ನಲ್ಲಿ ಗ್ಯಾಂಗ್‌ನ ಲೀಡರ್ ಲಾರೆನ್ಸ್ ಮತ್ತು ಮೊರಾರನ್ನು ಜೈಲಿನಿಂದ ಹೊರಕ್ಕೆ ತರಲು ಭಾರಿ ಸಂಚು ರೂಪಿಸಿ ಇದಕ್ಕಾಗಿ ಶಸ್ತ್ರಾಸ್ತ್ರಗಳು, ಜನರನ್ನೂ ಸಜ್ಜುಗೊಳಿಸಿದ್ದರು. ಈ ಮಾಹಿತಿ ಪಡೆದ ಹರ್ಯಾಣ ಪೊಲೀಸರು ದೆಹಲಿ ಪೊಲೀಸರ ಜತೆ ಜಂಟಿ ಕಾರ್ಯಾಚರಣೆ ನಡೆಸಿದ್ದರು. ನವೆಂಬರ್ 21ರಂದು ದೆಹಲಿಯ ದ್ವಾರಕಾ ಮೆಟ್ರೋದಲ್ಲಿ ಹೋಗುವಾಗ ಪೊಲೀಸರು ದಾಳಿ ನಡೆಸಿದ್ದರು. ಆಗ ಮೆಟ್ರೋ ರೈಲು ನಿಲ್ದಾಣದ 2ನೇ ಮಹಡಿಯಿಂದ ನೆಗೆದು ದೀಪಕ್ ಪರಾರಿಯಾಗಿದ್ದ. ಈ ವೇಳೆ ಆತನ ಕಾಲಿಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು. ಇದರ ಚಿಕಿತ್ಸೆಗಾಗಿ ಕರ್ನಾಟಕಕ್ಕೆ ಬಂದಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಬಂದ ದೀಪಕ್‌ಗೆ ಪಂಜಾಬ್‌ನಲ್ಲಿ ಸಹಪಾಠಿಯಾಗಿದ್ದ ದರ್ಶನ್ ಎಂಬಾತನ ಆಶ್ರಯ ನೀಡಿದ್ದ. ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದು ಡಿಸೆಂಬರ್ ಎರಡನೇ ವಾರದಲ್ಲಿ ಬೆಂಗಳೂರಿಗೆ ಬಂದು ಹೋಟೆಲ್ ವೊಂದರಲ್ಲಿ ನೆಲೆಸಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಕಾರ್ಪೊರೇಟರ್ ಪತಿಯನ್ನೇ ಕೊಂದಿದ್ದರು!
ತಾವು ಮಾಡಿದ ಕೃತ್ಯಗಳನ್ನು ಸಾಮಾಜಿಕ ಜಾಲತಾಣ, ಯುಟ್ಯೂಬ್‌ನಲ್ಲಿ ಅಪ್ ಲೋಡ್ ಮಾಡಿ ತಮ್ಮ ಕೃತ್ಯದ ಹೊಣೆಗಾರಿಕೆಯನ್ನು ಹೊರುತ್ತಿದ್ದ ಭಾರತ ಭೂಗತ ಮೊದಲ ಗ್ಯಾಂಗ್ ಸ್ಟುಡೆಂಟ್ ಆಫ್ ಪಂಜಾಬ್ ಯೂನಿವರ್ಸಿಟಿ ಸಂಘಟನೆ. ಈ ತಂಡದ ಎಲ್ಲ ಸದಸ್ಯರು ಸ್ನಾತಕೋತ್ತರ ಪದವಿಧರರು. ಸಂಘಟನೆ ಮುಖಂಡ ಲಾರೆನ್ಸ್ ಪಂಜಾಬ್-ಹರಿಯಾಣ ಯುನಿವರ್ಸಿಟಿಯ ಯುನಿಯನ್ ಲೀಡರ್‌ಯಾಗಿದ್ದ. ದೀಪಕ್ ಕೂಡ. ಅಲ್ಲದೇ ಉತ್ತರ ಭಾರತದ ಡ್ರಗ್ಸ್ ಮಾಫಿಯಾ ಮತ್ತು ಪಿಸ್ತೂಲ್ ಮಾರಾಟ ಮಾಫಿಯಾವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದರು. ಸೆ.16ರಂದು ಹರಿಯಾಣದ ಕಾಂಗ್ರೆಸ್‌ನ ಮಹಿಳಾ ಕಾರ್ಪೋರೇಟರ್ ಅನ್ನು ಅಕಾಲಿದಳಕ್ಕೆ ಸೇರ್ಪಡೆಗೊಳ್ಳುವಂತೆ ದೀಪಕ್ ಮತ್ತು ತಂಡ ಒತ್ತಾಯಿಸಿತ್ತು. ಇದಕ್ಕೆ ಒಪ್ಪದ ಕಾರಣಕ್ಕೆ ಸೆ.16ರಂದು ಕಾರ್ಪೋರೇಟರ್
ಪತಿಯನ್ನು ಕೊಂದಿದ್ದರು.
ಯೂಟ್ಯೂಬ್‌ನಲ್ಲಿ ಅಪ್‌ಲೋಡ್
ಸ್ಟುಡೆಂಟ್ ಆಫ್ ಪಂಜಾಬ್ ಯೂನಿವರ್ಸಿಟಿ ಸಂಘಟನೆ ಎಲ್ಲ ಸದಸ್ಯರು ತಾವು ಮಾಡುವ ದುಷ್ಕೃತ್ಯವನ್ನು ಕ್ಯಾಮೆರಾ ಮೂಲಕ ಸೆರೆಹಿಡಿದು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಟಿನು ಹರಿಯಾಣ ಹಾಗೂ ತಮ್ಮ ಸಂಘಟನೆ ಹೆಸರಿನಲ್ಲಿ ಯುಟ್ಯೂಬ್ ಖಾತೆ ತೆರೆದು ಅಪ್‌ಲೋಡ್ ಮಾಡಿ ನಾಲ್ಕು ರಾಜ್ಯಗಳಲ್ಲಿ ಕುಖ್ಯಾತಿಗಳಿಸಿದ್ದರು. ಸಾರ್ವಜನಿಕರು ಹಾಗೂ ಪೊಲೀಸರನ್ನು ಅಮಾನುಷವಾಗಿ ಕೊಲ್ಲುತ್ತಿದ್ದ ವಿಡಿಯೋವನ್ನು ಹಾಕಿ ವಿಕೃತಿ ಮೆರೆಯುತ್ತಿದ್ದರು ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
ನಗರ ಪೊಲೀಸರಿಗೆ ಪ್ರಶಂಸೆ
ನಾಲ್ಕು ರಾಜ್ಯಗಳ ಪೊಲೀಸರು ಹಿಡಿಯಲು ಸಾಧ್ಯವಾಗದ ಮೋಸ್ಟ್ ವಾಡೆಂಟ್ ಕ್ರಿಮಿನಲ್ ಅನ್ನು ಯಶಸ್ವಿಯಾಗಿ ಸೆರೆ ಹಿಡಿದ ನಗರ ಪೊಲೀಸರು ಹಾಗೂ ಸಿಸಿಬಿ ಪೊಲೀಸರ ಕಾರ್ಯಕ್ಕೆ ಪಂಜಾಬ್ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದೊಡ್ಡ ಆರೋಪಿಯಾದ್ದರಿಂದ ವಿಮಾನ ನಿಲ್ದಾಣದವರೆಗೆ ಭದ್ರತೆಯಲ್ಲಿ ಕರೆದೊಯ್ದು ಸಿಸಿಬಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಜತೆಗೆ ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್‌ಗೆ ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿಗಳು ಕರೆ ಮಾಡಿ ಪ್ರಶಂಸಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.