ಮೈಸೂರಿಗೂ ಕಾಲಿಟ್ಟ ಪ್ರತ್ಯೇಕ ಲಿಂಗಾಯತ ಕೂಗು
Team Udayavani, Dec 28, 2017, 5:12 PM IST
ಮೈಸೂರು: ಉತ್ತರ ಮತ್ತು ಮಧ್ಯ ಕರ್ನಾಟಕಕ್ಕೆ ಸೀಮಿತವಾಗಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಆಂದೋಲನ, ಸದ್ದಿಲ್ಲದೆ ಹಳೇ ಮೈಸೂರಿಗೂ ಕಾಲಿಟ್ಟಿದ್ದು, ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ಜಿಲ್ಲೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಆಂದೋಲನಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ, ನಾನು ಮೊದಲಿನಿಂದಲೂ ಲಿಂಗಾಯತ, ಈಗಲೂ ಲಿಂಗಾಯತ, ಮುಂದೆಯೂ ಲಿಂಗಾಯತನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರ, ಸಮಾಜದಿಂದ ಎಲ್ಲವನ್ನೂ ಪಡೆದು ಆರ್ಥಿಕವಾಗಿ ಬಲಿಷ್ಠವಾಗಿರುವ ಕೆಲ ಮಠಗಳು ಇದಕ್ಕೆ ವಿರೋಧ ಇರಬಹುದು, ಆದರೆ, ನಮ್ಮದು ಬಿಲೋ ಮಿಡ್ಲ್ ಕ್ಲಾಸ್ ಮಠ, ಈವರೆಗೆ ಸರ್ಕಾರದಿಂದ ಯಾವುದೇ ಹಣ ಪಡೆದಿಲ್ಲ. ಶಾಸಕ, ಸಂಸದರ ನಿಧಿ ಇರಲಿ, ಒಂದು ಸಿಎ ನಿವೇಶನವನ್ನೂ ಪಡೆದಿಲ್ಲ. ನಮ್ಮಂತೆಯೇ ಈ ಭಾಗದಲ್ಲಿರುವ ಅನೇಕ ಸಣ್ಣಪುಟ್ಟ ಮಠಗಳು ಲಿಂಗಾಯತ ಧರ್ಮದ ಪರವಾಗಿದ್ದರೂ ಮಾತನಾಡಲು ಹಿಂಜರಿಯುತ್ತಿವೆ. ಈ ಬಿಲೋ ಮಿಡ್ಲ್ ಕ್ಲಾಸ್ ಮಠಗಳನ್ನು ಬಲಿಷ್ಠ ಮಠಗಳು ಬೆಳೆಯಲು ಬಿಡುತ್ತಿಲ್ಲ ಎಂದು ದೂರಿದರು.
ಈ ಭಾಗದಲ್ಲಿ ಲಿಂಗಾಯತ ಸಮಾವೇಶ ನಡೆಸುವ ಸಂಬಂಧ ಸಚಿವರಾದ ಎಂ.ಬಿ.ಪಾಟೀಲ, ವಿನಯಕುಲಕರ್ಣಿ ಹಾಗೂ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಜತೆಗೆ ಮಾತನಾಡಿದ್ದೇನೆ. ಆದರೆ, ಮುಖಂಡತ್ವ ವಹಿಸುವ ಭ್ರಮೆ ಇಲ್ಲ. ಹಳೆ ಮೈಸೂರು ಭಾಗದಲ್ಲಿ ಪ್ರಬಲ ಮಠವಾಗಿರುವ ಸುತ್ತೂರು ಮಠದವರ ಅಭಿಪ್ರಾಯ ಏನೇ ಇರಬಹುದು, ಈ ವಿಚಾರದಲ್ಲಿ ನಾನು ಸ್ವತಂತ್ರ. ಬೇಡ ಎನ್ನಲು ಅವರ್ಯಾರು ಎಂದು ಪ್ರಶ್ನಿಸಿದರು.
ಈ ಭಾಗದಲ್ಲಿ ಲಿಂಗಾಯತ ಧರ್ಮಕ್ಕೆ ಬೆಂಬಲ ಕಡಿಮೆ ಇರಬಹುದು. ಆದರೆ, ಆಂದೋಲನದ ನೇತೃತ್ವವನ್ನು ಲಿಂಗಾಯತ ಸಮಾಜವಹಿಸಬೇಕು. ನಾನಂತು ಹೋಗಲು ಸಿದ್ಧ. ರಾಜ್ಯದಲ್ಲಿ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಎದ್ದಿರುವ ಗೊಂದಲ ದುರಾದೃಷ್ಟಕರ, ರಾಜಕಾರಣಿಗಳಿಗೆ ಇದು ಬೇಕಾಗಿತ್ತು. ಆದರೆ, ಇದರಿಂದ ಸಮಾಜಕ್ಕೆ ನಷ್ಟ ಎಂದರು.
ಹಿರಿಯ ಮಠಾಧೀಶರುಗಳಲ್ಲೂ ಎರಡು ಭಾಗವಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಆಂದೋಲನ ಪ್ರಬಲವಾಗಲು ಇದೂ ಒಂದು ಕಾರಣ. ಲಿಂಗಾಯತ, ವೀರಶೈವ ಎರಡೂ ಪ್ರತ್ಯೇಕ ಧರ್ಮ ಆಗಲ್ಲ. ಎರಡೂ ಒಟ್ಟಿಗೆ ಸೇರಿದರೂ ಪ್ರತ್ಯೇಕ ಧರ್ಮ ಆಗುವುದಿಲ್ಲ. ಒಟ್ಟಿಗೆ ಇದ್ದೇವೆ ಅನ್ನುತ್ತಾರೆ. ಆದರೆ ಆಚರಣೆ ಮಾತ್ರ ಬೇರೆ ಬೇರೆಯೇ ನಡೆಯುತ್ತೆ ಎಂದು ದೂರಿದರು. ಹಳೇ ಮೈಸೂರು ಭಾಗದಲ್ಲಿ ಲಿಂಗಾಯತ ಧರ್ಮ ಪ್ರಚಲಿತದಲ್ಲಿದೆ. ಮಧ್ಯ ಕರ್ನಾಟಕದಲ್ಲಿ ವೀರಶೈವ ಧರ್ಮ ಪ್ರಚಲಿತದಲ್ಲಿದೆ. ನಮ್ಮದು ಲಿಂಗಾಯತ ಆಚರಣೆ, ಹೀಗಾಗಿ ಲಿಂಗಾಯಿತ ಧರ್ಮದ ಪರವಾಗಿದ್ದೇನೆ. ಅಖೀಲ ಭಾರತ ವೀರಶೈವ ಮಹಾಸಭಾ ನಿರ್ಣಯ ಕೈಗೊಂಡರೂ ಒಪ್ಪಲಾರೆ ಎಂದು ಹೇಳಿದರು.
ಲಿಂಗಾಯತ ಸಾಂಸ್ಕೃತಿಕವೇದಿಕೆಗೂ ನನಗೂಸಂಬಂಧವಿಲ್ಲ: ಸ್ವಾಮೀಜಿ ಡಿ.25ರಂದು ಶ್ರೀನಟರಾಜ ಸಭಾಂಗಣದಲ್ಲಿ ನಡೆದ ಲಿಂಗಾಯತ ಸಾಂಸ್ಕೃತಿಕ ವೇದಿಕೆ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು ಬಿಟ್ಟರೆ, ಕಾರ್ಯಕ್ರಮಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಹೊಸಮಠದ ನಟರಾಜ ಸಭಾಂಗಣವನ್ನು ಈಗ ಛತ್ರ ನಡೆಸುತ್ತಿಲ್ಲ.
ಯಾರಾದರೂ ಸಭಾಂಗಣ ಕೇಳಿದರೆ ಸ್ವತ್ಛತೆ, ವಿದ್ಯುತ್ ಬಿಲ್ ಪಾವತಿಸಿಕೊಂಡು ಸಭಾಂಗಣ ನೀಡುತ್ತಿದ್ದೇವೆ. ಹೀಗಾಗಿ ಹಣ ಪಡೆಯುವ, ರಸೀದಿ ಪಡೆಯುವ ಪದ್ಧತಿ ಇಲ್ಲ. ಮೊನ್ನೆ ನಡೆದ ಕಾರ್ಯಕ್ರಮದ ಮಧ್ಯೆ 5 ಕೋಟಿ ಹಣ ಪಡೆದು ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಪೂರ್ವಾಗ್ರಹ ಪೀಡಿತರಾಗಿ ಮಾಡಿರುವುದು ಖಂಡನೀಯ. ಈ ಆರೋಪ ಮಾಡಿದ ವ್ಯಕ್ತಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಶ್ರೀ ಹೊಸಮಠದ ಚಿದಾನಂದ ಸ್ವಾಮೀಜಿ ಸ್ಪಷ್ಟಪಡಿಸಿದರು.
“ಮತ ಗಳಿಕೆಗೋಸ್ಕರ ಪ್ರತ್ಯೇಕ ಕೂಗು’
ಮೈಸೂರು: ಪ್ರತ್ಯೇಕ ಲಿಂಗಾಯತ ಧರ್ಮ ಎಂಬುದು ಮತಗಳಿಕೆ ಉದ್ದೇಶ ದಿಂದ ಸಮಾಜವನ್ನು ಒಡೆದು ಹಾಳುಮಾಡುವ ಭಾಗವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಆಯೋಗಕ್ಕೆ ನೀಡಿರುವ ಆದೇಶ ಹಿಂಪಡೆದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರದ್ದುಪಡಿಸಬೇಕೆಂದು ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎಚ್.ವಿ.ಬಸವರಾಜ್ ಹಿನಕಲ್ ಒತ್ತಾಯಿಸಿದ್ದಾರೆ.
ರಾಜ್ಯ ಅಲ್ಪಸಂಖ್ಯಾತರ ಆಯೋಗ ರಚಿಸಿರುವ ಸಮಿತಿಗೆ ಸದಸ್ಯರ ಬಗ್ಗೆ ವಿಶ್ವಾಸರ್ಹತೆಯಿಲ್ಲ, ಸಮಿತಿ ಎಲ್ಲಾ ಸದಸ್ಯರು ಸರ್ಕಾರ ಬಯಸುತ್ತಿರುವ ವರದಿ ನೀಡಲು ರಚನೆಗೊಂಡಂತಿದೆ. ಸಮಿತಿ ಸದಸ್ಯರಾದ ಎಸ್.ಜಿ.ಸಿದ್ದರಾಮಯ್ಯ, ದ್ವಾರಕನಾಥ್, ಸರಜೂ ಕಾಟ್ಕರ್, ಪುರುಷೋತ್ತಮ ಬಿಳಿಮಲೆ ಅವರು ಈಗಾಗಲೇ ಪ್ರತ್ಯೇಕ ಧರ್ಮದ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಪ್ರತ್ಯೇಕ ಹಾಗೂ ಪರೋಕ್ಷವಾಗಿ ನೀಡಿದ್ದಾರೆ. ಆದರೂ ಸರ್ಕಾರ ರಾಜಕೀಯ ಉದ್ದೇಶದಿಂದ ಹೇಗೆ ಸಮುದಾಯವನ್ನು ಒಡೆಯಬೇಕೆಂದು ನಿರ್ಧರಿಸಿದೆಯೋ ಅದೇ ರೀತಿಯಲ್ಲಿ
ವರದಿ ನೀಡುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ನಾಗಮೋಹನ್ ದಾಸ್ ಅವರು ಲಿಂಗಾಯತರು, ವೀರಶೈವರನ್ನು ಸಮಾಧಾನ ಪಡಿಸಲು ಸಾಧ್ಯವಿಲ್ಲ. ಅಗತ್ಯ ಸಾಕ್ಷಿಗಳನ್ನು ಪರಿಗಣಿಸಿ ಸೂಕ್ತ ತಿರ್ಮಾನ ಮಾಡುತ್ತೇವೆ ಎಂದಿದ್ದು, ಇವರಿಗೆ ಸರ್ಕಾರದ ಅಗತ್ಯವೇ ಮುಖ್ಯವಾಗಿದೆ. ಇದು ಸಮಾಜ ವನ್ನು ಒಡೆದು ಆಳುವ ಸಂಗತಿಯಾಗಿದೆ ಎಂದು ತಿಳಿಸಿದರು. ಮೈಸೂರು ನಗರ ಘಟಕ ಅಧ್ಯಕ್ಷ ಸಿ.ಗುರುಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಮೈಸೂರು ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಟಿ.ಎಸ್.ಲೋಕೇಶ್, ಉಪನ್ಯಾಸಕ ನಂದೀಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.