ಖುಷ್ ಖುಷಿಯಲ್ಲಿ ಕಣ್ಣೀರಧಾರೆ!
Team Udayavani, Dec 30, 2017, 1:01 PM IST
ವೃತ್ತಿಯಲ್ಲಿ ಡಾಕ್ಟರ್. ಆದರೆ, ಆತ ಪಕ್ಕಾ ಪಾರ್ಟಿ ಹುಡುಗ. ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಾ, ಬ್ಯಾಚುಲರ್ ಲೈಫ್ ಅನ್ನು ಎಂಜಾಯ್ ಮಾಡುವುದೆಂದರೆ ಆತನಿಗೆ ಸಿಕ್ಕಾಪಟ್ಟೆ ಇಷ್ಟ. ಹೀಗಿರುವಾಗಲೇ ಮನೆಯಲ್ಲಿ ಮದುವೆ ಮಾಡಿಕೋ ಎಂಬ ಒತ್ತಾಯ. ಮದುವೆ ಮಾಡಿಕೊಂಡರೆ ಬ್ಯಾಚುಲರ್ ಲೈಫ್ ಹಾಳಾಗೋಗುತ್ತೆ ಎಂಬ ಭಯ ಆತನದು. ಕೊನೆಗೂ ಒಂದು ನಿರ್ಧಾರಕ್ಕೆ ಬಂದು ಡೀಸೆಂಟ್ ಹುಡುಗನಂತೆ ಫೋಸ್ ಕೊಟ್ಟು ಮದುವೆಯಾಗುತ್ತಾನೆ.
ತಾನು ಮದುವೆಯಾದ ಹುಡುಗಿಗೆ ತನ್ನ ಡ್ರಾಮಾ ಏನೂ ಗೊತ್ತಾಗಲ್ಲ, ಮುಗ್ಧ ಅಮ್ಮಣಿ ಎಂದು ಖುಷಿಯಾಗಿರುವಾಗಲೇ ಆತನಿಗೊಂದು ಶಾಕಿಂಗ್ ನ್ಯೂಸ್ ಸಿಗುತ್ತದೆ. ಅಲ್ಲಿಂದ ಎಡವಟ್ಟಾಯ್ತು, ತಲೆಕೆಟ್ಟೋಯ್ತು… ಆ ಎಡವಟ್ಟು, ತಲೆಕೆಟ್ಟು ಏನೆಂಬ ಕುತೂಹಲವಿದ್ದರೆ ನೀವು “ಚಮಕ್’ ಚಿತ್ರ ನೋಡಬೇಕು. ನಿರ್ದೇಶಕ ಸುನಿ ಪಕ್ಕಾ ಯೂತ್ ಸಬೆjಕ್ಟ್ವೊಂದನ್ನಿಟ್ಟುಕೊಂಡು ಅದನ್ನು ಮಜವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಸುಳ್ಳು ಹೇಳಿ ಮದುವೆಯಾದರೆ, ಮುಂದೆ ಆಗುವ ತೊಂದರೆಗಳನ್ನು ಹಾಸ್ಯ ಹಾಗೂ ಭಾವನಾತ್ಮಕ ಸನ್ನಿವೇಶಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ ಸುನಿ. ಮೇಲ್ನೋಟಕ್ಕೆ “ಚಮಕ್’ ಹೇಗೆ ಒಂದು ಯೂತ್‌ಫುಲ್ ಕಥೆಯೋ, ಅಷ್ಟೇ ಇಲ್ಲಿ ಫ್ಯಾಮಿಲಿ ಅಂಶಗಳು ಕೂಡಾ ಇವೆ. ಆ ಮಟ್ಟಿಗೆ ಸುನಿ ಫ್ಯಾಮಿಲಿ ಆಡಿಯನ್ಸ್ ಕಡೆಗೂ ಗಮನ ಕೊಟ್ಟಿದ್ದಾರೆ. ಬ್ಯಾಚುಲರ್ ಲೈಫ್ ಅನ್ನು ಸಿಕ್ಕಾಪಟ್ಟೆ ಪ್ರೀತಿಸುವ,
ಮದುವೆಯಾದರೆ ಎಲ್ಲಿ ತನ್ನ ಎಲ್ಲಾ ಖುಷಿಗಳಿಗೆ ಬ್ರೇಕ್ ಬೀಳುತ್ತೋ ಎಂದು ಮದುವೆಯನ್ನು ಮುಂದೆ ಹಾಕುತ್ತಲೇ ಬರುವ ಯುವಕನ ಬಾಳಿನಲ್ಲಿ ಅಚಾನಕ್ ಆಗಿ ಪಡೆದುಕೊಳ್ಳುವ ತಿರುವುಗಳ ಮೂಲಕ ಕಥೆ ಹೇಳಿದ್ದಾರೆ ಸುನಿ. ಆರಂಭದಲ್ಲಿ ನಾಯಕನ ಪಾತ್ರವನ್ನು ಪರಿಚಯಿಸುವುದಕ್ಕಾಗಿ ಸಾಕಷ್ಟು ಬಾರ್, ಪಬ್, ಆತನ ತುಂಟಟಾದ ದೃಶ್ಯಗಳನ್ನಿಡಲಾಗಿದೆ. ಹಾಗಾಗಿ, ಇಲ್ಲಿ ಹೆಚ್ಚಿನದ್ದೇನೂ ನಿರೀಕ್ಷಿಸುವಂತಿಲ್ಲ. ಕಥೆ ಟ್ರ್ಯಾಕ್‌ಗೆ ಬರೋದೇ ನಾಯಕನ ಮದುವೆಯೊಂದಿಗೆ.
ಅಲ್ಲಿವರೆಗೆ ನಿಧಾನಗತಿಯಲ್ಲಿ ಸಾಗುತ್ತಿದ್ದ ಸಿನಿಮಾಕ್ಕೊಂದು ವೇಗ ಸಿಗುತ್ತದೆ. ಅಲ್ಲಿಂದ ಪತಿ-ಪತಿ ಮತ್ತು ಪ್ರೇಕ್ಷಕ ಎನ್ನಬಹುದು. ಕಥೆಯ ವಿಷಯಕ್ಕೆ ಬರೋದಾದರೆ ತೀರಾ ಹೊಸದೆನಿಸದ ಕಥೆಯಾದರೂ, ಅದಕ್ಕೊಂದಿಷ್ಟು ಟ್ವಿಸ್ಟ್‌ಗಳೊಂದಿಗೆ ಮಜವಾಗಿ ಹೇಳಿದ್ದಾರೆ ಸುನಿ. ಗಂಡ-ಹೆಂಡತಿ ನಡುವಿನ ವೈಮನಸ್ಸು ಮುಂದೆ ಹೇಗೆ ಕುಟುಂಬದ ನೆಮ್ಮದಿ ಕೆಡಿಸುತ್ತದೆ ಎಂಬ ಅಂಶಗಳೊಂದಿಗೆ ಸಿನಿಮಾ ಸೀರಿಯಸ್ ಆಗುತ್ತಾ ಹೋಗುತ್ತದೆ.
ಮೊದಲರ್ಧ ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ ನೋಡ ನೋಡುತ್ತಲೇ ಸೆಂಟಿಮೆಂಟ್ ಟಚ್ ಪಡೆದುಕೊಳ್ಳುತ್ತದೆ. ಒಂದು ಹಂತಕ್ಕೆ ಚಿತ್ರದ ಸೆಂಟಿಮೆಂಟ್ ದೃಶ್ಯಗಳು ಹೆಚ್ಚಾಯಿತೇನೋ ಅನಿಸಿದೇ ಇರದು. ಖುಷಿ ಖುಷಿಯಾಗಿ ಎಂಟ್ರಿಕೊಟ್ಟ ಪಾತ್ರಗಳೆಲ್ಲವೂ ಸೀರಿಯಸ್ ಆಗುತ್ತವೆ. ಅದು ಎಷ್ಟರಮಟ್ಟಿಗೆಂದರೆ ಸಾಧುಕೋಕಿಲ ಕೂಡಾ ಕಾಮಿಡಿ ಮಾಡೋದನ್ನು ಮರೆತು ಬಿಟ್ಟು ವಿಲನ್‌ನಂತೆ ವರ್ತಿಸುತ್ತಾರೆ!
ಸಾಮಾನ್ಯವಾಗಿ ಸುನಿ ಸಿನಿಮಾದಲ್ಲಿ ಕಥೆಗಿಂತ, ಸಂಭಾಷಣೆಗೆ ಹೆಚ್ಚು ಮಹತ್ವವಿರುತ್ತದೆ ಎಂಬ ಮಾತಿದೆ. ಆದರೆ, “ಚಮಕ್’ ಮಾತ್ರ ಅದರಿಂದ ಹೊರತಾಗಿದೆ. ಈ ಬಾರಿ ಸುನಿ ಕಥೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಇಲ್ಲಿ ಹೆಚ್ಚೇನು ಸಂಭಾಷಣೆಯಿಲ್ಲ. ಇರುವ ಸಂಭಾಷಣೆಗಳು ಕೂಡಾ ಕಥೆಗೆ ಪೂರಕವಾಗಿವೆಯಷ್ಟೇ. ಚಿತ್ರದ ಅವಧಿ ಸ್ವಲ್ಪ ಹೆಚ್ಚಾಯಿತೇನೋ ಅನಿಸಿದೇ ಇರದು. ಆರಂಭದಲ್ಲಿನ ಕೆಲವು ದೃಶ್ಯಗಳನ್ನು ಟ್ರೀಮ್ ಮಾಡಿದ್ದರೆ ಚಿತ್ರದ ವೇಗ ಕೂಡಾ ಹೆಚ್ಚುತ್ತಿತ್ತು.
ಅದು ಬಿಟ್ಟರೆ “ಚಮಕ್’ ನಿಮ್ಮನ್ನು ರಂಜಿಸುವಲ್ಲಿ ಮೋಸ ಮಾಡುವುದಿಲ್ಲ. ಚಿತ್ರದ ಹೈಲೈಟ್ ಎಂದರೆ ಗಣೇಶ್. ವೈದ್ಯನಾಗಿ, “ಪಾರ್ಟಿ ಹುಡುಗ’ನಾಗಿ, ಪ್ರೇಮಿಯಾಗಿ, ಮಗನಾಗಿ, “ಬಾಡಿಗೆದಾರ’ನಾಗಿ ,”ಭೋಗ್ಯದಾರ’ನಾಗಿ … ಎಲ್ಲಾ ಹಂತಗಳಲ್ಲೂ ಗಣೇಶ್ ಇಷ್ಟವಾಗುತ್ತಾರೆ. ಚಿತ್ರದಲ್ಲಿ ಅವರ ಗೆಟಪ್ ಕೂಡಾ ಹೊಸದಾಗಿದೆ. ಒಂದು ಹಂತದಲ್ಲಿ ಚಿತ್ರವನ್ನು ಮುಂದೆ ನಡೆಸುವ ಜವಾಬ್ದಾರಿ ನಾಯಕ-ನಾಯಕಿಯ ಮೇಲೆ ಬರುತ್ತದೆ.
ಅದನ್ನು ಇಬ್ಬರು ಚೆನ್ನಾಗಿ ನಿಭಾಹಿಸಿದ್ದಾರೆ ಕೂಡಾ. ನಾಯಕಿ ರಶ್ಮಿಕಾ ಇಲ್ಲಿ ಮಾಡರ್ನ್ ಹಾಗೂ ಸಂಪ್ರದಾಯಸ್ಥ ಹುಡುಗಿ. ಎರಡೂ ಶೇಡ್‌ಗೂ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಉಳಿದಂತೆ ಸಾಧುಕೋಕಿಲ, ರಘುರಾಂ ಸೇರಿದಂತೆ ಅನೇಕರು ನಟಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತದ ಎರಡು ಹಾಡು ಇಷ್ಟವಾಗುತ್ತದೆ. ಸಂತೋಷ್ ರೈ ಪಾತಾಜೆ ಚಿತ್ರದಲ್ಲಿ ಆಗಾಗ ಮಿಂಚಿದ್ದಾರೆ.
ಚಿತ್ರ: ಚಮಕ್
ನಿರ್ದೇಶನ: ಸುನಿ
ನಿರ್ಮಾಣ: ಟಿ.ಆರ್. ಚಂದ್ರಶೇಖರ್
ತಾರಾಗಣ: ಗಣೇಶ್, ರಶ್ಮಿಕಾ, ಸಾಧುಕೋಕಿಲ, ರಘುರಾಂ ಮತ್ತಿತರರು.
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.