ಅನಾರೋಗ್ಯಕ್ಕೆ ಕಲುಷಿತ ನೀರೇ ಕಾರಣ
Team Udayavani, Jan 1, 2018, 12:20 PM IST
ಮಹದೇವಪುರ: ವರ್ತೂರಿನ ಬಳಗೆರೆ ಬಳಿಯ ಶೋಭಾ ಡ್ರೀಮ್ ಎಕರ್ಸ್ ಅಪಾರ್ಟ್‌ಮೆಂಟ್ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮೃತಪಟ್ಟ ಕಾರ್ಮಿಕರ ಸಾವಿಗೆ ಕಲುಷಿತ ನೀರು ಸೇವನೆಯೇ ಕಾರಣ ಎಂದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಸಂಬಂಧ ಶೋಭಾ ಡೆವಲಪರ್ಸ್‌ಗೆ ನೋಟಿಸ್ ಜಾರಿ ಮಾಡಿರುವ ಅರೋಗ್ಯ ಇಲಾಖೆ, ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್ ಸುತ್ತಮುತ್ತ ಸ್ವತ್ಛತೆ ಕಾಪಾಡುವಂತೆ ಸೂಚನೆ ನೀಡಿದೆ.
ಅಲ್ಲದೇ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಒಡಿಶಾ, ಅಸ್ಸಾಂ ಸೇರಿದಂತೆ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಿಂದ ಬಂದಿರುವ ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದು, ಕೆಲವರು ಕಾಲರಾ ರೋಗಕ್ಕೆ ತುತ್ತಾಗಿದ್ದಾರೆ. ಮಹದೇವಪುರ ವಲಯದ ವೈದ್ಯಾಧಿಕಾರಿ ಡಾ. ಕಲ್ಪನಾ ಅವರು ಅಪಾರ್ಟ್‌ಮೆಂಟ್ ಆವರಣದಲ್ಲಿ ಶಿಬಿರ ಹಾಕಿ ಚಿಕಿತ್ಸೆ ಮುಂದುವರಿಸಿದ್ದಾರೆ.
ನೀರೇ ಕಾರಣ: ಈ ಮಧ್ಯೆ ಡಿ.2ರಂದು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಒಡಿಶಾ ಮೂಲದ ಕಾರ್ಮಿಕ ಜಿತೇಂದ್ರ (25) ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. 10 ದಿನಗಳ ಹಿಂದೆ ಸಾವನ್ನಪ್ಪಿದ್ದ ಬಂದು ನಾಯಕ್(57) ಉಸಿರಾಟ ಸಮಸೆಯಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖೀಸಲಾಗಿದೆ.
ಎರಡು ದಿನಗಳ ಹಿಂದೆ ತೀವ್ರ ಅಸ್ವಸ್ಥನಾಗಿದ್ದ ಕಾರ್ಮಿಕ ಶ್ರೀಕಾಂತ್ ಸಾಹು (20) ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಸದ್ಯ ಸಾಹು ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಎಲ್ಲ ಸಾವುಗಳ ಮೂಲ ಕಲುಷಿತ ನೀರು ಎನ್ನಲಾಗಿದೆ.
ಜತೆಗೆ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿರುವ 19 ಮಂದಿ ಕಾರ್ಮಿಕರ ಮಲ, ಮೂತ್ರ ಪರೀಕ್ಷಿಸಿದ ವೇಳೆ ಕಾಲರಾ ರೋಗಕ್ಕೆ ತುತ್ತಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಲುಷಿತ ನೀರು, ಆಹಾರ ಸೇವನೆಯು ಕಾಲರಾ ರೋಗಕ್ಕೆ ಕಾರಣವಾಗುತ್ತದೆ. ಕಟ್ಟಡ ಕಾರ್ಮಿಕರು ನೆಲೆಸಿರುವ ಶೆಡ್‌ಗಳ ನೈರ್ಮಲ್ಯ ಶೋಚನೀಯ ಸ್ಥಿತಿಯಲ್ಲಿದ್ದು, ವಾಟರ್ ಟ್ಯಾಂಕ್ ಅಶುದ್ಧವಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲದಿರುವುದು ಕಾರ್ಮಿಕರ ಆರೋಗ್ಯ ಹದಗೆಡಲು ಕಾರಣವಾಗಿದೆ. ಕಟ್ಟಡ ನಿರ್ಮಿಸುತ್ತಿರುವ ಮಾಲೀಕರಿಗೆ ಮತ್ತು ಕಾರ್ಮಿಕರಿಗೆ ಆರೋಗ್ಯ ಕಾಪಾಡಿಕೊಳ್ಳಲು, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿದ್ದೇವೆ. ಮಾಲೀಕರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಟಿಸ್ ಸಹ ಜಾರಿ ಮಾಡಿದ್ದು,
ಬಿಸಿ ನೀರು ನೀಡುವಂತೆ ಹಾಗೂ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚಿಸಿಲಾಗಿದೆ. ಅಲ್ಲದೆ ಶೆಡ್‌ಗಳ ಬಳಿ ತಪಾಸಣೆ ಶಿಬಿರ ನಡೆಸಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿ ನಾಗೇಶ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಕಾರ್ಮಿಕರು ನೆಲೆಸಿರುವ ಶೆಡ್‌ಗಳ ಬಳಿ ಸ್ವತ್ಛತೆ ಇಲ್ಲದಿರುವುದು ಕಂಡು ಬಂದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿಬಿಎಂಪಿಯ ಆರೋಗ್ಯ ವಿಭಾಗ ಜಂಟಿಯಾಗಿ ಡಿ.29ರಿಂದ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ, ಚಿಕಿತ್ಸೆ ಆರಂಭಿಸಿದ್ದೇವೆ. ಕಾರ್ಮಿಕರ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗುವುದು.
ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಬಿದ್ದರೆ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಕಾರ್ಮಿಕರಿಗೆ ಅಗತ್ಯ ಮೂಲ ಸೌಕರ್ಯಗಳಾದ ನೀರು, ಶೌಚಾಲಯ, ಶುಚಿಯಾದ ಆಹಾರ ನೀಡುವಂತೆ ಕಟ್ಟಡ ಮಾಲೀಕರಿಗೆ ಸೂಚಿಸಲಾಗಿದೆ. ಕಟ್ಟಡ ಮಾಲೀಕರ ನಿರ್ಲಕ್ಷ್ಯದಿಂದ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿರುವುದು ಕಂಡು ಬಂದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಿಬಿಎಂಪಿ ಮಹದೇವಪುರ ವಲಯ ಆರೋಗ್ಯಾಧಿಕಾರಿ ಕಲ್ಪನಾ ತಿಳಿಸಿದ್ದಾರೆ.
ಕೆರೆಯಿಂದ ನೀರು ಸರಬರಾಜು: ಆಸ್ಸಾಂ, ಒಡಿಶಾ ಸೇರಿದಂತೆ ನೆರೆ ರಾಜ್ಯಗಳಿಂದ ಒಟ್ಟು 3 ಸಾವಿರ ಕಾರ್ಮಿಕರು ಅಪಾರ್ಟ್‌ಮೆಂಟ್ ಕಾಮಗಾರಿಯಲ್ಲಿ ತೊಡಗಿದ್ದಾರೆ. ಆದರೆ, ಎಲ್ಲ ಕಾರ್ಮಿಕರಿಗೆ ಒದಗಿಸಬೇಕಾದ ಮೂಲ ಸೌಕರ್ಯಗಳನ್ನು ಮಾಲೀಕರು ನೀಡಿಲ್ಲ.
ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡುತ್ತಿದ್ದು, ಇದನ್ನು ಕಲುಷಿತಗೊಂಡಿರುವ ವರ್ತೂರು ಕೆರೆಯಿಂದ ಸರಬರಾಜು ಮಾಡಲಾಗಿದೆ. ಜತೆಗೆ ಉತ್ತಮ ಶೌಚಾಲಯ ಹಾಗೂ ಸ್ನಾನದ ಗೃಹ ಹಾಗೂ ಅಡುಗೆ ಮಾಡಿಕೊಳ್ಳಲು ಸ್ವತ್ಛವಾದ ಸ್ಥಳವಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.