ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತ
Team Udayavani, Jan 3, 2018, 12:34 PM IST
ಪುತ್ತೂರು: ಭಾರತೀಯ ವೈದ್ಯಕೀಯ ಮಂಡಳಿಯನ್ನು ವಜಾ ಮಾಡಿ, ರಾಷ್ಟ್ರೀಯ ವೈದ್ಯಕೀಯ ಆಯೋಗ ಜಾರಿಗೆ ತರುವ ಕೇಂದ್ರ ಸರಕಾರದ ಪ್ರಸ್ತಾವ ವಿರೋಧಿಸಿ ದೇಶಾದ್ಯಂತ ಕರೆ ನೀಡಿದ ಒಪಿಡಿ ಬಂದ್‌ಗೆ ಪುತ್ತೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಬೆಂಬಲ ಸೂಚಿಸಿದ್ದವು. ಬಹುತೇಕ ಖಾಸಗಿ ಆಸ್ಪತ್ರೆಗಳು ಮಂಗಳವಾರ ಹೊರರೋಗಿಗಳ ವಿಭಾಗ (ಒಪಿಡಿ) ಸೇವೆ ನೀಡದೆ ಎನ್‌ಎಂಸಿ ಜಾರಿಗೆ ವಿರೋಧ ಸೂಚಿಸಿದವು. ಬೆಳಗ್ಗೆ 6ರಿಂದ ಸಂಜೆ 6ರ ತನಕ ಮುಷ್ಕರದಲ್ಲಿ ಪಾಲ್ಗೊಂಡವು. ಸಂಜೆ 6ರ ಬಳಿಕ ಸೇವೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸೇವೆ ಸ್ಥಗಿತ
ನಗರ ಸಿಟಿ ಆಸ್ಪತ್ರೆ, ಆದರ್ಶ ಆಸ್ಪತ್ರೆ, ಪ್ರಗತಿ ಆಸ್ಪತ್ರೆ ಸಹಿತ ಹಲವು ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಬೆಂಬಲ ವ್ಯಕ್ತಪಡಿಸಿದ್ದವು. ಕೆಲ ಆಸ್ಪತ್ರೆಗಳಲ್ಲಿ ಮುಷ್ಕರದ ಮಾಹಿತಿ ಇಲ್ಲದೆ ಬಂದವರಿಗೆ ಒಪಿಡಿ ಚಿಕಿತ್ಸೆ ನೀಡಲಾಗಿತ್ತು. ತುರ್ತು ಸಂದರ್ಭ ಹೊರತುಪಡಿಸಿ, ಒಳ ದಾಖಲಾತಿಗೆ ಅವಕಾಶ ಇರಲಿಲ್ಲ. ಚಿಕಿತ್ಸೆಗೆಂದು ಬಂದ ಕೆಲವರು ಆಸ್ಪತ್ರೆಗಳಲ್ಲಿ ವೈದ್ಯರು ಸಿಗದೆ ವಾಪಸಾದರು.
ಬಿಕೋ ಎನ್ನುತಿದ್ದ ಆಸ್ಪತ್ರೆಗಳು
ಈ ಹಿಂದಿನ ಎರಡು ಮುಷ್ಕರದ ಬಿಸಿಯಿಂದ ಹೈರಾಣಾಗಿದ್ದ ಜನರು, ಈ ಬಾರಿ ಆಸ್ಪತ್ರೆ ಕಡೆಗೆ ಸುಳಿಯಲೇ ಇಲ್ಲ. ಪ್ರಮುಖ ಆಸ್ಪತ್ರೆಗಳ ವರಾಂಡ ಬಿಕೋ ಎನ್ನುತ್ತಿದ್ದವು. ಕೆಲ ಆಸ್ಪತ್ರೆಗಳಿಗೆ ಬೀಗ ಜಡಿಯಲಾಗಿತ್ತು. ಒಳ ರೋಗಿಗಳ ತಪಾಸಣೆ ಹೊರತುಪಡಿಸಿ, ಬಹುತೇಕ ವೈದ್ಯರು ಒಪಿಡಿ ಸೇವೆಗೆ ಹಾಜರಾಗಿರಲಿಲ್ಲ. ಸರಕಾರಿ ಮತ್ತು ಗ್ರಾಮಾಂತರ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಸ್ಥಿತಿ ಎಂದಿನಂತಿತ್ತು.
ಬಂದ್ ಏತಕ್ಕೆ..?
‘ಭಾರತೀಯ ವೈದ್ಯಕೀಯ ಸಂಘದ ಕರೆಯಂತೆ ಒಪಿಡಿ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದೇವೆ. ನಗರ, ಉಪ್ಪಿನಂಗಡಿ, ಕಡಬ, ಕಾಣಿಯೂರು, ಸವಣೂರು, ಕೆಯ್ಯೂರು, ಕುಂಬ್ರದಲ್ಲೂ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂಗಳಲ್ಲಿ ಹೊರರೋಗಿ ಚಿಕಿತ್ಸೆಗಳನ್ನು ಮಾಡಿಲ್ಲ’ ಎಂದು ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಡಾ| ಗಣೇಶ್ ಪ್ರಸಾದ್ ಮುದ್ರಜೆ ಹೇಳಿದರು.
ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ -2017 ಸ್ವೀಕಾರಾರ್ಹವಾಗಿಲ್ಲ. ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರದಲ್ಲಿ, ಬಡ ವಿದ್ಯಾರ್ಥಿಗಳ ಸೀಟು ವಿಚಾರದಲ್ಲಿ ಮಸೂದೆ ತಾರತಮ್ಯ ಮಾಡುವ ಸಂಭವ ಹೆಚ್ಚಿದೆ.
ಈ ಮಸೂದೆಯಡಿ 5ರಿಂದ 100 ಕೋಟಿ ರೂ.ವರೆಗೆ ದಂಡ ವಿಧಿಸುವ ಅಧಿಕಾರವಿದೆ. ಇದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಿದೆ. ಆಯುರ್ವೇದ ವೈದ್ಯರು ಆರು ತಿಂಗಳ ತರಬೇತಿ ಪಡೆದು, ಅಲೋಪತಿ ಔಷಧ ನೀಡುವ ಅವೈಜ್ಞಾನಿಕ ಸಮ್ಮಿಳಿತ ನಡೆಯಲಿದೆ. ಇವೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಭಾರತೀಯ ವೈದ್ಯರ ಸಂಘ ಒಂದು ದಿನದ ಪ್ರತಿಭಟನೆಗೆ ಕರೆ ನೀಡಿದೆ ಎಂದರು.
ಮನವಿ ಸಲ್ಲಿಕೆ
ಭಾರತೀಯ ವೈದ್ಯಕೀಯ ಸಂಘದ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮಂಗಳವಾರ ಸಹಾಯಕ ಆಯುಕ್ತರ ಕಚೇರಿ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಒಪಿಡಿ ಇರಲಿಲ್ಲ
ಎನ್‌ಎಂಸಿ ಜಾರಿ ವಿರೋಧಿಸಿ ಕರೆ ನೀಡಿದ ಮುಷ್ಕರಕ್ಕೆ ಖಾಸಗಿ ಆಸ್ಪತ್ರೆಗಳು ಬೆಂಬಲ ಸೂಚಿಸಿವೆ. ಒಳ ರೋಗಿಗಳಿಗೆ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ, ಔಷಧೋಪಚಾರ ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ಹಾಜರಾದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ.
– ಡಾ| ಶ್ರೀಪತಿ ರಾವ್
ಅಧ್ಯಕ್ಷರು, ತಾ| ಆಸ್ಪತ್ರೆಗಳ ಒಕ್ಕೂಟ
ಸಂಖ್ಯೆ ಹೆಚ್ಚಳವಿಲ್ಲ
ಖಾಸಗಿ ಆಸ್ಪತ್ರೆಯಲ್ಲಿ ಮುಷ್ಕರದ ಪರಿಣಾಮ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಹೊರ ಮತ್ತು ಒಳ ರೋಗಿಗಳ ಸಂಖ್ಯೆ ಹೆಚ್ಚಳವಾಗಿರಲಿಲ್ಲ. ಎಂದಿನ ಹಾಗೆಯೇ ಇತ್ತು.
– ಡಾ| ವೀಣಾ
ಆಡಳಿತಾಧಿಕಾರಿ, ತಾ| ಆಸ್ಪತ್ರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.