ಸಾರ್ವಜನಿಕ ಬ್ಯಾಂಕುಗಳು ಎದುರಿಸುತ್ತಿರುವ ಸವಾಲುಗಳು
Team Udayavani, Jan 5, 2018, 2:20 AM IST
ಸಾರ್ವಜನಿಕ ಬ್ಯಾಂಕುಗಳು ಈಗ ಎದುರಿಸುತ್ತಿರುವ ಮುಖ್ಯ ಪಂಥಾಹ್ವಾನ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವುದಾಗಿದೆ. ಗ್ರಾಹಕ ಸ್ನೇಹಿ ತಂತ್ರಜ್ಞಾನ ಮತ್ತು ಮುಂಗಟ್ಟುಗಳ ಸೇವೆ, ಸರಳ ಮತ್ತು ಸುಲಭ ವ್ಯವಹಾರ ಒದಗಿಸುವ ಖಾಸಗಿ ಬ್ಯಾಂಕುಗಳು ಗ್ರಾಹಕರನ್ನು ಸುಲಭವಾಗಿ ಆಕರ್ಷಿಸಲು ಸಫಲವಾಗಿರುವುದರಿಂದ, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಪರಿಶ್ರಮಿಸಬೇಕಾಗಿದೆ.
ಬ್ಯಾಂಕಿಂಗ್ ವ್ಯವಸ್ಥೆ ಒಂದು ದೇಶದ ಪ್ರಗತಿಯಲ್ಲಿ ವಹಿಸುವ ಪಾತ್ರ ಅತಿ ಮಹತ್ತರವಾದುದು. ಭಾರತದ ಮಟ್ಟಿಗೆ ಹೇಳುವುದಾದರೆ ಸಾರ್ವಜನಿಕ ರಂಗದ ಬ್ಯಾಂಕುಗಳು ತಮ್ಮ ಶಾಖೆಗಳ ಸಂಖ್ಯೆಯಲ್ಲಿಯೂ ಗ್ರಾಮೀಣ ಮತ್ತು ದುರ್ಗಮ ಸ್ಥಳಗಳನ್ನು ತಲುಪಿ ಸೇವೆ ಸಲ್ಲಿಸುವುದರಲ್ಲಿಯೂ ಮುಂಚೂಣಿ ಯಲ್ಲಿವೆ. ಆದ್ದರಿಂದ ಸಾರ್ವಜನಿಕ ಬ್ಯಾಂಕುಗಳ ಸಮರ್ಥ ಕಾರ್ಯ ನಿರ್ವಹಣೆ ಮತ್ತು ಆರ್ಥಿಕ ಸ್ವಾಸ್ಥ್ಯ ದೇಶದ ಪುರೋಗತಿಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆಯುತ್ತದೆ.
ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಈಗ ಸಾರ್ವಜನಿಕ ಬ್ಯಾಂಕುಗಳು ಹಲವು ಸವಾಲು ಎದುರಿಸುತ್ತಿರುವುದು ಸರ್ವ ವಿದಿತ. ಸಮಷ್ಟಿಯ ಹಿತದೃಷ್ಟಿಯಿಂದ ಈ ಪಂಥಾಹ್ವಾನಗಳನ್ನು ಸಮರ್ಥವಾಗಿ ಎದುರಿಸಿ ಗೆದ್ದು ಬರಬೇಕು. ಈ ಕುರಿತು ಚರ್ಚೆಯೇ ಈ ಲೇಖನದ ಆಶಯ.
ಸಾರ್ವಜನಿಕ ಬ್ಯಾಂಕುಗಳಿಗೇನಾಗಿದೆ?
ಭಾರತೀಯ ರಿಸರ್ವ್ ಬ್ಯಾಂಕು, 2002ರಲ್ಲಿ ಬ್ಯಾಂಕುಗಳ ಸ್ವಾಸ್ಥ್ಯ ಮತ್ತು ಸುಧಾರಣೆಯನ್ನು ಗಮನದಲ್ಲಿಟ್ಟು ಪಿಸಿಎ (Prompt Corrective Action – PCA)ಮಾರ್ಗಸೂಚಿ ಆದೇಶಗಳನ್ನು ಹೊರಡಿಸಿದೆ. ಸ್ವಾಸ್ಥ್ಯದ ಸೂಚಕಗಳಾದ ಬಂಡವಾಳದ ಯಥೇಷ್ಟತೆ (CRAR), ಅನುತ್ಪಾದಕ ಆಸ್ತಿಗಳ ಪರಿಮಾಣ (NPA) ಮತ್ತು ಒಟ್ಟು ಆಸ್ತಿಗಳ ಮೇಲೆ ಸಿಗುವ ಪ್ರತಿಫಲ (RDA)ಇವುಗಳನ್ನೇ ಗಮನದಲ್ಲಿಟ್ಟು ನಿರ್ಧರಿಸುವ ಕಾರ್ಯತಂತ್ರ ಇದಾಗಿದೆ. ಪೂರ್ವ ನಿಗದಿತ ಮಟ್ಟವನ್ನು ಈ ಮೂರು ಸೂಚಕಗಳು ದಾಟಿದಾಗ ಅಂತಹ ಬ್ಯಾಂಕುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕು ಪಿಸಿಎ ನಿಯಮಗಳನ್ನು ಅನ್ವಯಿಸುತ್ತದೆ. ಒಟ್ಟು ಒಂಬತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಪಿಸಿಎ ನಿಯಮಗಳಿಗೆ ಒಳಪಟ್ಟಿವೆ. ಪಿಸಿಎ ಹೇರಲ್ಪಟ್ಟ ಬ್ಯಾಂಕುಗಳು ಈ ಕೆಳಗಿನ ನಿರ್ಬಂಧಗಳಿಗೆ ಒಳಪಡುತ್ತವೆ:
ಬಂಡವಾಳ ಯಥೇಷ್ಟತೆ ಸಾಧಿಸಲು ಯೋಜನೆ ರೂಪಿಸಿ, ಕಾರ್ಯತಂತ್ರವನ್ನು ರಿಸರ್ವ್ ಬ್ಯಾಂಕಿಗೆ ತಿಳಿಸಬೇಕು
ರಿಸ್ಕ್ ಹೊಂದಿದ ಸಾಲ ನೀಡುವುದನ್ನು ಸ್ಥಗಿತಗೊಳಿಸಬೇಕು
ಹೊಸ ಉದ್ದಿಮೆಗಳನ್ನು ಪ್ರಾರಂಭಿಸುವಂತಿಲ್ಲ
ಅಧಿಕ ಬಡ್ಡಿಯ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ
ಡಿವಿಡೆಂಟ್ ನೀಡುವಾಗ ಮರಳಿ ಯೋಚಿಸಬೇಕು
ಬ್ಯಾಂಕಿನ ನಿರ್ವಹಣೆಯ ಕ್ಷಮತೆಯನ್ನು ಬೆಳೆಸುವ ಮತ್ತು ಸ್ವಾಸ್ಥ್ಯವನ್ನು ಸುಧಾರಿಸುವ ಉದ್ದೇಶ ಹೊಂದಿದ ಈ ನಿಯಮಗಳು ಅನ್ವಯವಾದರೂ ಬ್ಯಾಂಕಿನ ವ್ಯಾವಹಾರಿಕ ಸ್ವಾತಂತ್ರ್ಯ ನಿರ್ಬಂಧಕ್ಕೆ ಒಳಪಡುವುದರಿಂದ ಪ್ರಗತಿಗೆ ಬಾಧಕವಾಗಿದೆ.
ಇತ್ತೀಚೆಗೆ ಸರಕಾರ ತನ್ನ ಒಡೆತನದಲ್ಲಿರುವ ಬ್ಯಾಂಕುಗಳ ಬಂಡವಾಳ ಪರಿಸ್ಥಿತಿಯನ್ನು ಸುಧಾರಿಸಲು, ಬಂಡವಾಳ ಪೂರಣ (Capitalisation) ಕಾರ್ಯಕ್ರಮ ಕೈಗೊಂಡಿರುವುದು, ಬ್ಯಾಂಕು ಗಳಿಗೆ ಒಂದು ತಾತ್ಕಾಲಿಕ ಪರಿಹಾರ. ಹೀಗೆ ಸರಕಾರವನ್ನೇ ಅವಲಂಬಿಸಿರುವುದು ಸಾರ್ವಕಾಲಿಕ ಪರಿಹಾರವಲ್ಲ. ಅದನ್ನು ಸಾಧಿಸಬೇಕಾದರೆ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಸಾರ್ವಜನಿಕ ಬ್ಯಾಂಕುಗಳು ಸಮರ್ಥವಾಗಿರ ಬೇಕು. ಈ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್‌ಗಳು ಆಕರ್ಷಕವಾಗಿ ಲ್ಲದ ಕಾರಣ ಬಂಡವಾಳ ಸಂಗ್ರಹಿಸುವ ಯೋಜನೆ ಅನುಮಾನಾ ಸ್ಪದ. ಇದು ಸಾರ್ವಜನಿಕ ಬ್ಯಾಂಕುಗಳ ಮೊದಲ ಸವಾಲು.
ಪಿಸಿಎ ಹೇರುವುದಕ್ಕೆ ಎರಡನೇ ಕಾರಣ ಅನುತ್ಪಾದಕ ಆಸ್ತಿಗಳ ಅಂಕಿ ಸಂಖ್ಯೆಗಳು. ಸಾರ್ವಜನಿಕ ಬ್ಯಾಂಕುಗಳ ಅನುತ್ಪಾದಕ ಸಾಲಗಳು 7.34 ಲಕ್ಷ ಕೋಟಿಗಳಷ್ಟಿದ್ದು, ಖಾಸಗಿ ಬ್ಯಾಂಕುಗಳ ಒಟ್ಟು 1.03 ಲಕ್ಷ ಕೋಟಿಗಳಿಗೆ ಹೋಲಿಸಿದರೆ ಹೆಚ್ಚೆಂದೇ ಹೇಳಬಹುದು. ಈ ಅನುತ್ಪಾದಕ ಆಸ್ತಿಗಳಲ್ಲಿ 77 ಶೇ. ದೊಡ್ಡ ಕಂಪೆನಿಗಳ ಸಾಲಗಳೆಂಬ ಅಂಕಿಅಂಶ ಕೂಡ ಇತ್ತೀಚೆಗೆ ಬಹಿರಂಗವಾಗಿದೆ.
ಅನುತ್ಪಾದಕ ಸಾಲಗಳೆಂದರೆ ಬ್ಯಾಂಕುಗಳು ನೀಡಿದ ಸಾಲಗಳು ಕಾಲಕಾಲಕ್ಕೆ ವಸೂಲಾಗದಿರುವುದರಿಂದ ಉಂಟಾಗುವ ಹಿನ್ನಡೆ. ಅಂಕಿ ಸಂಖ್ಯೆಗಳೇ ಹೇಳುವಂತೆ ಮುಕ್ಕಾಲು ಪಾಲು ಅನುತ್ಪಾದಕತೆ ಕಂಪೆನಿಗಳ ಸಾಲಗಳಿಂದ ಉಂಟಾಗಿರುವುದರಿಂದ, ಬ್ಯಾಂಕುಗಳ ಗಮನ ದೊಡ್ಡ ಸಾಲಗಳ ವಸೂಲಿಯತ್ತ¤ ಕೇಂದ್ರೀಕೃತಗೊಳ್ಳಬೇಕು. ಇಂತಹ ಮರುಪಾವತಿಯನ್ನು ಶೀಘ್ರ ಗೊಳಿಸಲು ಡಿಆರ್‌ಟಿ (Debt recovery Tribunals) ಎಂಬ ಪ್ರತ್ಯೇಕ ಕೋರ್ಟುಗಳು ಕಾರ್ಯವೆಸಗುತ್ತಿದ್ದರೂ ಹೆಚ್ಚುತ್ತಿರುವ ಕೇಸುಗಳ ಕಾರಣ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದೆ. ಈ ಕೋರ್ಟುಗಳನ್ನು ಪ್ರಾರಂಭಿಸುವಾಗ ಆರು ತಿಂಗಳೊಳಗೆ ಕೇಸುಗಳ ವಿಲೇವಾರಿಯ ಉದ್ದೇಶ ಹೊಂದಿದ್ದರೂ ಈಗ ಎರಡು ವರ್ಷಗಳಾದರೂ ಕೊನೆ ಮುಟ್ಟದ ಕೇಸುಗಳು ಸಾಕಷ್ಟಿವೆ. ಬರೀ 37 ಡಿಆರ್‌ಟಿಗಳು ಈಗ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ಕೆಲವಕ್ಕೆ ನ್ಯಾಯಾಧೀಶರ ಕೊರತೆ, ವಿಳಂಬದ ಕಾರಣದಿಂದ ಉದ್ದೇಶ ಸಾಧಿಸಲಾಗುತ್ತಿಲ್ಲ.
ಅನುತ್ಪಾದಕ ಸಾಲಗಳ ವರ್ಧನೆಗೆ ಇನ್ನೊಂದು ಮುಖ್ಯ ಕಾರಣ ದೇಶದಲ್ಲಿ ಸ್ಥಾಯಿಯಾಗುತ್ತಿರುವ ಮರು ಪಾವತಿ ಮಾಡದ ಸಂಸ್ಕೃತಿ. ಸಣ್ಣ ಸಾಲದಿಂದ ಹಿಡಿದು ದೊಡ್ಡ ಸಾಲಗಳವರೆಗೆ ಈ ಸಂಸ್ಕೃತಿ ವಿಸ್ತರಿಸುತ್ತಿರುವುದು ಆರೋಗ್ಯಪೂರ್ಣ ಬೆಳವಣಿಗೆಯಲ್ಲ . ಇದು ಸಾರ್ವಜನಿಕ ಬ್ಯಾಂಕುಗಳನ್ನು ಹೆಚ್ಚು ಬಾಧಿಸುತ್ತಿರುವುದೂ ಅಂಕೆ ಸಂಖ್ಯೆಗಳಿಂದ ಮನವರಿಕೆಯಾಗುತ್ತದೆ. ಇದಕ್ಕೆ ದೇಶದಲ್ಲಿ ನಡೆಯುತ್ತಿರುವ ರಾಜಕಾರಣವೂ ಕಾರಣವೆಂದು ಪ್ರತ್ಯೇಕಿಸಿ ಹೇಳಬೇಕಾಗಿಲ್ಲ .
ಸಾಲ ಮನ್ನಾ ಕೆಲ ರಾಜಕೀಯ ಪಕ್ಷಗಳ ಧೋರಣೆ ಆಗಿರುವುದರಿಂದ, ಸಾಲಗಾರರು ಅದನ್ನೇ ನಿರೀಕ್ಷಿಸಿ ಮರುಪಾವತಿಯಲ್ಲಿ ಉದಾಸೀನತೆ ತೋರುತ್ತಿದ್ದಾರೆ. ಸಾಲ ಮನ್ನಾದಿಂದ ಬ್ಯಾಂಕುಗಳಿಗೆ ದೊಡ್ಡ ನಷ್ಟವೇನೂ ಆಗದಿದ್ದರೂ ಮರು ಪಾವತಿ ಸಂಸ್ಕೃತಿಗೆ ತರುವ ಧಕ್ಕೆ ತಂದು ಬ್ಯಾಂಕುಗಳ ಸ್ವಾಸ್ಥ್ಯವನ್ನು ಬಾಧಿಸುತ್ತದೆ.
ಇನ್ನೊಂದು ಮುಖ್ಯ ಅಂಶವೆಂದರೆ ಸಾಲದ ಹಣವನ್ನು ದುರುಪಯೋಗಪಡಿಸಿ ಪಂಗನಾಮ ಹಾಕಿದ ಉದ್ಯಮಿಗಳನ್ನು ಹಿಡಿಯದೆ ಮೃದು ಧೋರಣೆ ತಳೆಯುತ್ತಿರುವುದು ಉಳಿದ ಸಾಲಗಾರರ ಮರುಪಾವತಿಯ ಮೇಲೆ ಪ್ರಭಾವ ಬೀರುತ್ತದೆ. ವಿಳಂಬಿತ ನಿರ್ಧಾರಗಳು, ಕಾನೂನಿನ ಆಮೆ ನಡಿಗೆ ಮತ್ತು ರಾಜಕೀಯ ಹಸ್ತಕ್ಷೇಪ ಸಾಲ ವಸೂಲಿಯನ್ನು ಬಾಧಿಸುತ್ತಿರುವ ಅಂಶಗಳು. ಸಾಲ ವಸೂಲಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಬ್ಯಾಂಕುಗಳ ಕ್ಷಮತೆಯನ್ನು ಹೆಚ್ಚಿಸಬಲ್ಲವು.
ಸಾರ್ವಜನಿಕ ಬ್ಯಾಂಕುಗಳು ಎದುರಿಸುತ್ತಿರುವ ಮೂರನೇ ಸವಾಲು ಸ್ಪರ್ಧಾತ್ಮಕ ಮಾರುಕಟ್ಟೆ. ಸಾರ್ವಜನಿಕ ರಂಗವೆಂದರೆ ಏನು ಮಾಡಿದರೂ ನೌಕರಿ ಭದ್ರ ಎಂಬ ಧೋರಣೆ ಈ ಕ್ಷೇತ್ರದ ಬ್ಯಾಂಕುಗಳ ಕುಂಠಿತ ನಿರ್ವಹಣೆಗೆ ಮುಖ್ಯ ಕಾರಣ. ಉತ್ತಮ ನಿರ್ವಹಣೆ ಮಾಡುವ ಸಿಬಂದಿಗೂ ಕಳಪೆ ನಿರ್ವಹಿಸುವ ಅಸಮರ್ಥರಿಗೂ ಒಂದೇ ಮಾನದಂಡ ಅನುಸರಿಸಿದರೆ ಉತ್ತೇಜನ ಎಲ್ಲಿಂದ ಬರಬೇಕು? ಆದ್ದರಿಂದ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಪುನರ್ಚಿಂತನೆ ಅಗತ್ಯ.
ಸಾರ್ವಜನಿಕ ಬ್ಯಾಂಕುಗಳ ವಿಲೀನದ ಬಗ್ಗೆ ಬಹಳಷ್ಟು ಚರ್ಚೆಗಳೂ ಊಹಾಪೋಹಗಳೂ ನಡೆಯುತ್ತಿದ್ದು , ಆಂತರಿಕವಾಗಿ ಕೆಲವು ಬ್ಯಾಂಕುಗಳು ಉದ್ದೇಶಿತ ವಿಲೀನಕ್ಕಾಗಿ ಕಾಯುತ್ತಿವೆ. ಯಾವುದೇ ಕಾರ್ಯ ಯೋಜನೆಗಳನ್ನು ಉತ್ಸಾಹದಿಂದ ನಡೆಸುತ್ತಿಲ್ಲವೆಂಬುದು ಸತ್ಯ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಮಾಹಿತಿ ತಂತ್ರಜ್ಞಾನದ ಉತ್ತಮಿಕೆಯ ಯೋಜನೆಗಳು ಒಂದೆರಡು ವರ್ಷದ ದೀರ್ಘಾವಧಿಯವು. ಈಗ ಬ್ಯಾಂಕುಗಳ ಮುಖ್ಯಸ್ಥರಾಗಿ ಬರುವವರ ಸೇವಾವಧಿ ಸಾಕಷ್ಟು ದೀರ್ಘವಿಲ್ಲದ ಕಾರಣ ವ್ಯೂಹಾತ್ಮಕವಾದ ದೀರ್ಘಕಾಲಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಉತ್ಸಾಹ ತೋರದಿರುವುದು ಬ್ಯಾಂಕುಗಳ ಸ್ಪರ್ಧಾತ್ಮಕತೆಗೆ ಹಿನ್ನಡೆಯಾಗುತ್ತದೆ.
ಸಾರ್ವಜನಿಕ ಬ್ಯಾಂಕುಗಳು ಈಗ ಎದುರಿಸುತ್ತಿರುವ ಮುಖ್ಯ ಪಂಥಾಹ್ವಾನ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವುದಾಗಿದೆ. ಗ್ರಾಹಕ ಸ್ನೇಹಿ ತಂತ್ರಜ್ಞಾನ ಮತ್ತು ಮುಂಗಟ್ಟುಗಳ ಸೇವೆ, ಸರಳ ಮತ್ತು ಸುಲಭ ವ್ಯವಹಾರ ಒದಗಿಸುವ ಖಾಸಗಿ ಬ್ಯಾಂಕುಗಳು ಗ್ರಾಹಕರನ್ನು ಸುಲಭವಾಗಿ ಆಕರ್ಷಿಸಲು ಸಫಲವಾಗಿರುವುದರಿಂದ, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಪರಿಶ್ರಮಿಸಬೇಕಾಗಿದೆ. ಖಾಸಗಿ ಬ್ಯಾಂಕುಗಳು ತಮ್ಮ ತಂತ್ರಜ್ಞಾನದಿಂದ ಗ್ರಾಹಕರನ್ನು ತಲುಪುವ ವಿಧಾನಗಳನ್ನು ಅರ್ಥೈಸಿಕೊಂಡರೆ ಸರಕಾರಿ ಬ್ಯಾಂಕುಗಳು ಬಹಳ ಹಿಂದೆ ಉಳಿದಿರುವುದು ವೇದ್ಯವಾಗುತ್ತದೆ. ಇನ್ನು ಮುಂಗಟ್ಟುಗಳ ಸೇವಾಪರತೆಯನ್ನು ಪರಿಶೀಲಿಸಿದರೆ ಸಾಕಷ್ಟು ವ್ಯತ್ಯಯ ಹೊರನೋಟಕ್ಕೇ ತಿಳಿಯುವಂತಹದಾಗಿದೆ. ಸಾರ್ವಜನಿಕ ಬ್ಯಾಂಕುಗಳು ತಮ್ಮ ಹಳೆಯ ಧೋರಣೆಗಳನ್ನು ಬದಿಗಿಟ್ಟು ಸಿಬಂದಿಯನ್ನು ವೃತ್ತಿಪರರಾಗಿ ಕೆಲಸವೆಸಗಲು ತಯಾರುಗೊಳಿಸುವುದು ಅನಿವಾರ್ಯ.
ಬ್ಯಾಂಕಿಂಗ್ ಕ್ಷೇತ್ರ ಬದಲಾಗುತ್ತಿದೆ. ತಂತ್ರಜ್ಞಾನ ಕಾರ್ಯ ವಿಧಾನಗಳನ್ನು ಬದಲಿಸುತ್ತದೆ. ಈ ದಿಶೆಯಲ್ಲಿ ಕಾರ್ಯಪ್ರವೃತ್ತವಾದ ಬ್ಯಾಂಕುಗಳು ಕಾರ್ಯಕ್ಷಮತೆಯನ್ನೂ ಸಾಧಿಸುತ್ತವೆ. ಇದಕ್ಕೆ ತಂತ್ರಜ್ಞಾನಕ್ಕೆ ಒತ್ತು ಮತ್ತು ಬದಲಾವಣೆಗೆ ಒಗ್ಗಿಕೊಳ್ಳುವ ಕ್ಷಮತೆ ಅತ್ಯಗತ್ಯ. ಸಾರ್ವಜನಿಕ ಬ್ಯಾಂಕುಗಳ ಆದ್ಯತೆಯಲ್ಲಿ ಇದೂ ಕೂಡ ಅಗತ್ಯ. ಕಳೆದ ಒಂದು ದಶಕದಲ್ಲಿ ಸಾರ್ವಜನಿಕ ಬ್ಯಾಂಕುಗಳಿಂದ ಹಳೆ ತಲೆಮಾರಿನ ಸಮರ್ಪಣಾಭಾವದ ಸಿಬಂದಿ ವರ್ಗ ವಿಶ್ರಾಂತವಾಗಿದೆ. ಬ್ಯಾಂಕಿಗೆ ಸೇರ್ಪಡೆಯಾದ ಹೊಸ ತಲೆಮಾರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ಮತ್ತು ಅವಕಾಶಗಳನ್ನು ಒದಗಿಸಿ ಬೆಳೆಸಬೇಕಾಗಿರುವುದು ಸಣ್ಣ ಜವಾಬ್ದಾರಿಯಲ್ಲ. ಸಾರ್ವಜನಿಕ ಬ್ಯಾಂಕುಗಳ ಭವಿಷ್ಯ ಈ ಹೊಸ ತಲೆಮಾರಿನ ಕೈಯಲ್ಲಿರುವುದರಿಂದ ಸಮರ್ಥ ಮಧ್ಯವಯಸ್ಕ ಮುಖ್ಯಸ್ಥರ ಕೈಯಲ್ಲಿ ಬ್ಯಾಂಕುಗಳನ್ನು ನೀಡುವುದು ಇಂದಿನ ತುರ್ತಾಗಿದೆ.
ಸಾರ್ವಜನಿಕ ಬ್ಯಾಂಕುಗಳ ನಿರ್ವಹಣೆಯನ್ನು ತುಂಡ ತುಂಡವಾಗಿ ನೋಡುವುದರ ಮೂಲಕ ಸುಧಾರಣೆ ಪೂರ್ಣವಾಗಲಾರದು. ಸಮಸ್ಯೆಗೆ ಪರಿಹಾರವನ್ನು ಅಖಂಡವಾಗಿ ಪರಿಶೀಲಿಸಿ ನಡೆಸಬೇಕು. ಬ್ಯಾಂಕಿಂಗ್ ಕ್ಷೇತ್ರ ಉಳಿದ ಸಾರ್ವಜನಿಕ ಉದ್ಯಮಗಳಂತೆ ಅಲ್ಲ ಎಂಬುದನ್ನು ಮೊದಲು ಗಮನಿಸಬೇಕು. ಸ್ಪರ್ಧಾತ್ಮಕವಾಗಿ ನಡೆಸಬೇಕಾದರೆ ಬ್ಯಾಂಕುಗಳನ್ನು ಸ್ವಾಯತ್ತ ಸಂಸ್ಥೆಗಳಂತೆ ಪರಿಗಣಿಸಿ ವೃತ್ತಿಪರವಾಗಿ ನಡೆಸುವ ಸ್ವಾತಂತ್ರ್ಯವನ್ನು ಕೊಡಬೇಕು. ಸಾರ್ವಜನಿಕ ಬ್ಯಾಂಕುಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೆ ಅದು ಭರಿಸಲಾರದ ನಷ್ಟವಾದೀತು. ವಾಯುಯಾನದ ಕಂಪೆನಿಯೂ ಬ್ಯಾಂಕಿಂಗ್ ಉದ್ಯಮವೂ ತುಲನಾತ್ಮಕವಲ್ಲ. ವಾಯುಯಾನ ಕಂಪೆನಿ ನಷ್ಟ ಹೊಂದಿದರೆ ಹಣದ ನಷ್ಟವಷ್ಟೇ ಆದೀತು. ಆದರೆ ಸಾರ್ವಜನಿಕ ಬ್ಯಾಂಕುಗಳು ಕುಸಿದರೆ ಆರ್ಥಿಕ ವ್ಯವಸ್ಥೆಯ ಸರ್ವ ಅಂಗಗಳೂ ಖಾಸಗಿ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಶೇರು ಮಾರುಕಟ್ಟೆ ಸಾರ್ವಜನಿಕ ವಿಶ್ವಾಸವನ್ನು ಕಳೆದುಕೊಂಡು ಆರ್ಥಿಕ ವ್ಯವಸ್ಥೆಯ ಮೇಲೆ ಘಾತಕ ಪರಿಣಾಮ ಬೀರೀತು. ಆದ್ದರಿಂದ ಸಾರ್ವಜನಿಕ ಬ್ಯಾಂಕುಗಳ ವಿಶ್ವಾಸಾರ್ಹತೆ ಅತೀ ಮುಖ್ಯ.
ಡಾ| ಕೊಳ್ಚಪ್ಪೆ ಗೋವಿಂದ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.