ಮಾನವೀಯ ಮೌಲ್ಯಗಳ ಮದರ್
Team Udayavani, Jan 5, 2018, 10:21 AM IST
ಈ ಹಿಂದೆ “ಪ್ರೀತಿಯಿಂದ’ ಎಂಬ ಚಿತ್ರ ನಿರ್ದೇಶಿಸಿದ್ದ ರಾಜು ಹಲಗೂರು, ಸದ್ದಿಲ್ಲದೇ “ಮದರ್ ಸವಿತಾ’ ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಈ ಚಿತ್ರಕ್ಕೆ “ಸೇವ್ ದಿ ನ್ಯೂ ಬಾರ್ನ್’ ಎಂಬ ಅಡಿಬರಹ ಇದೆ. ಹೆಸರು ಕೇಳಿದರೆ ವಿಚಿತ್ರ ಎನಿಸಬಹುದು. ಅದಕ್ಕೆ ಕಾರಣವೂ ಇದೆ. ಚಿತ್ರದ ಕಥೆಯೇ ಹಾಗಿದೆ. ಈ ಚಿತ್ರದಲ್ಲಿ, ಎಚ್.ಐ.ವಿ. ಪೀಡಿತರನ್ನು ಮಾನವೀಯವಾಗಿ ನೋಡಿ ಎಂಬ ಸಂದೇಶವಿದೆಯಂತೆ. ಈಗಾಗಲೇ “ಮದರ್ ಸವಿತಾ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇದೀಗ ಸೆನ್ಸಾರ್ ಆಗಬೇಕಿದೆ.
ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ರಾಜು ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ಸುಮಾರು 10 ತಿಂಗಳ ಕಾಲ ರಿಸರ್ಚ್ ಮಾಡಿ ಅವರು ಕಥೆ ಮಾಡಿಕೊಂಡಿದ್ದಾರಂತೆ. “ಇಲ್ಲಿ ಎಚ್.ಐ.ವಿ ಪೀಡಿತ ಗರ್ಭವತಿ ತಾಯಿ, ತನ್ನ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನವಿದೆ. ಇಲ್ಲಿ ನಾಯಕಿ ಪಾತ್ರವು ಎಚ್.ಐ.ವಿ ಪೀಡಿತ ಪಾತ್ರವಾಗಿದ್ದು, ನಾಯಕಿ ಪಾತ್ರಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಬೇಕಾಯಿತು. ಬಾಲಿವುಡ್‌ನಲ್ಲಿ ಹಲವು ನಟಿಯರು ಎಚ್.ಐ.ವಿ ಪೀಡಿತರ ಪಾತ್ರ ಮಾಡಿದ್ದಾರೆ. ಆದರೆ, ಕನ್ನಡದಲ್ಲಿ ಮಾತ್ರ ಯಾಕೆ ನಟಿಯರು ಅಂತಹ ಪಾತ್ರಗಳನ್ನು ಮಾಡುವುದಕ್ಕೆ ಹಿಂದೇಟು ಹಾಕುತ್ತಾರೋ ಗೊತ್ತಿಲ್ಲ. ಇದೇ ವಿಷಯದ ಕುರಿತಾಗಿ ಕನ್ನಡ ಚಿತ್ರರಂಗದ ಜನಪ್ರಿಯ ನಟಿಯೊಬ್ಬರ ಬಳಿ ಚಿತ್ರದಲ್ಲಿ ನಟಿಸುವುದಕ್ಕೆ ಕೇಳುವುದಕ್ಕೆಂದು ಹೋಗಿದ್ದೆ. ಎಚ್.ಐ.ವಿ ಪೀಡಿತ ಮಹಿಳೆಯ ಪಾತ್ರ ಎಂದು ಕೇಳುತ್ತಿದ್ದಂತೆಯೇ ಅವರು ನಿರಾಕರಿಸಿದರು. ಪ್ರಜ್ಞಾವಂತರಲ್ಲೇ ಈ ತರಹದ ತಾರತಮ್ಯ ಯಾಕೆ ಎಂದು ಗೊತ್ತಿಲ್ಲ’ ಎಂದರು ರಾಜು ಹಲಗೂರು.
ರಾಜು ಹಲಗೂರು ಬಂದು “ಮದರ್ ಸವಿತಾ’ ಕಥೆಯನ್ನು ಹೇಳಿದಾಗ, ಮಾನಸ ಅವರಿಗೆ ಆರಂಭದಲ್ಲಿ ನೆಗೆಟಿವ್ ಯೋಚನೆಗಳು ಬಂದವಂತೆ. “ಎಷ್ಟೇ ಪ್ರಜ್ಞಾವಂತರಾದರೂ, ಈ ತರಹದ ಪಾತ್ರಗಳು ಬಂದಾಗ, ಒಂದು ಕ್ಷಣ ಹಿಂದೇಟು ಹಾಕುವುದು ಸಹಜ. ನಾನು ಸಹ ಹಿಂದೇಟು ಹಾಕಿದೆ. ಕೊನೆಗೆ ಕಥೆ ಕೇಳಿದಾಗ, ನನ್ನ ಪಾತ್ರದಲ್ಲೊಂದು ಒಳ್ಳೆಯ ಸಂದೇಶ ಇದೆ ಎಂದು ಗೊತ್ತಾದಾಗ, ಪಾತ್ರ ಮಾಡುವುದಕ್ಕೆ ಮುಂದೆ ಬಂದೆ’ ಎಂದು ಮಾನಸ ಹೇಳಿಕೊಂಡರು.
ಶ್ರೀ ಗುರು ಅನುಗ್ರಹ ಪ್ರೊಡಕ್ಷನ್ಸ್ ನಡಿ ನಿರ್ಮಾಣವಾಗಿರುವ ಚಿತ್ರದಲ್ಲಿ ಮಾನಸ ಜೊತೆಗೆ ದೀಪಕ್, ಶ್ರೀಧರ್, ಸಂಜೀವ್ ಉಡುಪಿ, ಮಂಗಳಮುಖೀ ಪಲ್ಲವಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸುರೇಶ್ ಚಾಂದ್ ಅವರ ಸಂಗೀತವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.