ಬಂಟ್ವಾಳ ಪುರಸಭೆ: ಫುಟ್‌ಪಾತ್ ಅತಿಕ್ರಮಣ ತೆರವು ನಿರ್ಣಯ
Team Udayavani, Jan 6, 2018, 3:43 PM IST
ಬಂಟ್ವಾಳ: ಫುಟ್‌ಪಾತ್ ಅತಿಕ್ರಮಣವನ್ನು ತೆರವು ಮಾಡುವಂತೆ ನೀಡಿದ ಸೂಚನೆಗೆ ಸ್ಪಂದಿಸದ ನಗರದ ಅಂಗಡಿ ಎದುರಿನ ಅಳವಡಿಸಿರುವ ಶೀಟು, ಕಾಂಕ್ರೀಟ್ ಹಾಸು, ಇಂಟರ್‌ಲಾಕ್ ಪಾದಚಾರಿ ಅಡಚಣೆಗಳನ್ನು ತೆರವುಗೊಳಿಸುವ ಬಗ್ಗೆ ಬಂಟ್ವಾಳ ಪುರಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಜ.4ರಂದು ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಬುಡಾ ಅಧ್ಯಕ್ಷ ಪುರಸಭಾ ಸದಸ್ಯ ಸದಾಶಿವ ಬಂಗೇರ ಈ ವಿಷಯ ಪ್ರಸ್ತಾಪಿಸಿ ನಾವು ಪುರಸಭೆಯ ಸದಸ್ಯರಾಗಿ ಆಯ್ಕೆಗೊಂಡಿರುವುದು ಜನಸಾಮಾನ್ಯರ ಹಿತಕಾಯುವುದಕ್ಕಾಗಿಯೇ ಹೊರತು ಅಂಗಡಿ ಮಾಲಕರ ಹಿತರಕ್ಷಣೆಗೆ ಅಲ್ಲ. ಇಲ್ಲಿನ ಬಹುತೇಕ ಅಂಗಡಿಗಳಲ್ಲಿ ರಸ್ತೆಯ ಕಾಲುದಾರಿ ಅತಿಕ್ರಮಿಸಿಕೊಂಡಿದ್ದಾರೆ. ಶೀಟು ಅಳವಡಿಸಿ ಅದರಲ್ಲಿ ವಿವಿಧ ಮಾರಾಟ ಸಾಮಗ್ರಿಗಳನ್ನು ಜೋತು ಹಾಕಿದ್ದಾರೆ. ಕೆಲವೆಡೆ ಹಣ್ಣು ಹಂಪಲು ಮಾರಾಟ, ಹೂ, ಇನ್ನು ಕೆಲವೆಡೆ ಹಣ್ಣು ಹಂಪಲು, ಗುಜರಿ ಸಾಮಗ್ರಿಗಳನ್ನು ಸಂಗ್ರಹವು ನಡೆಯುತ್ತದೆ. ಇದರಿಂದ ಸಾರ್ವಜನಿಕರಿಗೆ ಕಳೆದ ಹಲವಾರು ವರ್ಷಗಳಿಂದ ತೊಂದರೆ ಎದುರಾಗಿದೆ. ಈ ಬಗ್ಗೆ ಹಲವುಬಾರಿ ಪುರಸಭೆಯಲ್ಲಿ ಚರ್ಚೆ ನಡೆಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ .ಈ ಬಾರಿ ನಿರ್ಣಯ ಕೈಗೊಂಡು ತ್ವರಿತವಾಗಿ ಅಂತವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು.
ನಾಮ ನಿರ್ದೇಶಿತ ಸದಸ್ಯ ಲೋಕೇಶ್ ಸುವರ್ಣ ಮಾತನಾಡಿ, ಬಿ.ಸಿ.ರೋಡಿನಲ್ಲಿ ವಾಹನ ನಿಲುಗಡೆಗೆ ಸ್ಥಳವಕಾಶವೇ ಇಲ್ಲ. ಇಲ್ಲಿನಫ್ಲೈ ಓವರ್ ಅಡಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ರಿಕ್ಷಾ ಪಾರ್ಕಿಂಗ್ ಮತ್ತು ಟೆಂಪೋ ಮತ್ತಿತರ ವಾಹನಗಳ ಅನಧಿಕೃತ ಪಾರ್ಕಿಂಗ್ ನಿರ್ಮಾಣಗೊಂಡಿದೆ. ಈ ಬಗ್ಗೆ ಪುರಸಭೆಯು ಗಂಭೀರವಾಗಿ ಪರಿಗಣಿಸಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸದಸ್ಯ ಬಿ.ಮೋಹನ್ ಪ್ರತಿಕ್ರಿಯಿಸಿ ಅಧಿಕೃತ ಪಾರ್ಕಿಂಗ್ ತೆರವುಗೊಳಿಸುವುದಕ್ಕಿಂತ ಮೊದಲು ಪುರಸಭೆಯು ಬಿ.ಸಿ.ರೋಡಿನಲ್ಲಿ ಪಾರ್ಕಿಂಗ್ ಗೆ ಸೂಕ್ತ ಸ್ಥಳವಕಾಶ ಗುರುತಿಸಬೇಕು. ಬಳಿಕ ಅಕ್ರಮ ಅನಧಿಕೃತ ಪಾರ್ಕಿಂಗ್ ತೆರವುಗೊಳಿಸಲು ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದರು. ಇದಕ್ಕೆ ಪುರಸಭಾ ಸದಸ್ಯ ಪ್ರವೀಣ್ ಬಿ., ಗಂಗಾಧರ ಪೂಜಾರಿ, ಮುನೀಶ್ ಆಲಿ, ಜಗದೀಶ್ ಕುಂದರ್ ಮತ್ತಿತರರು ಧ್ವನಿಗೂಡಿಸಿದರು. ಪುರಸಭಾ ವ್ಯಾಪ್ತಿಯ ನಗರಪ್ರದೇಶಗಳಲ್ಲಿ ಬಹುತೇಕ ಗ್ರಾಮಾಂತರ ಪರವಾನಿಗೆ ಹೊಂದಿರುವ ಅಟೋರಿಕ್ಷಾಗಳು ನಗರಪ್ರದೇಶಗಳಲ್ಲಿ ನಿಲುಗಡೆಯಾಗುತ್ತಿವೆ. ಈ ಬಗ್ಗೆ ಸಂಚಾರ ಪೊಲೀಸ್ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಿಂದ ಆಗ್ರಹ ಕೇಳಿ ಬಂತು.
ಇದೇ ವೇಳೆ ಪುರಸಭಾ ವಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸುವುದು ಮತ್ತು ಈಗಾಗಲೇ ನಿರ್ಮಾಣಗೊಂಡಿರುವ ಹೊಸ ಜಲಶುದ್ಧೀಕರಣ ಘಟಕ ನಿರ್ವಹಣೆ, ತಡೆಗೋಡೆ ನಿರ್ಮಾಣವನ್ನು ತ್ವರಿತವಾಗಿ ಮುಗಿಸಿ ಪುರಸಭೆಗೆ ಹಸ್ತಾಂತರಿಸುವ ಬಗ್ಗೆ ಕರ್ನಾಟಕ ಜಲಮಂಡಳಿ ಮತ್ತು ಒಳಚರಂಡಿಗಳ ಇಂಜಿನಿಯರ್ ಶೋಭಲಕ್ಷ್ಮೀ ಮಾಹಿತಿ ನೀಡಿದರು. ರಾಷ್ಟ್ರೀಯ ಹೆದ್ದಾರಿ ಮೆಲ್ಕಾರ್ ಮುಖ್ಯವೃತ್ತಕ್ಕೆ ಸ್ವಾತಂತ್ರ್ಯ ಯೋಧ ಡಾ| ಅಮ್ಮೆಂಬಳ ಬಾಳಪ್ಪ ವೃತ್ತವೆಂದು ನಾಮಕರಣಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಕುರಿತು ಶೀಘ್ರ ನಿರ್ಣಯವನ್ನು ಮಾಡಬೇಕು ಎಂದು ಪ್ರಸ್ತಾಪ ಕೇಳಿ ಬಂತು.
ಸದಸ್ಯರಾದ ವಿರೋಧ ಪಕ್ಷದ ನಾಯಕ ಎ.ಗೋವಿಂದ ಪ್ರಭು, ಬಿ.ದೇವದಾಸ್ ಶೆಟ್ಟಿ, ಸುಗುಣ ಕಿಣಿ, ವಸಂತಿ ಚಂದಪ್ಪ, ಭಾಸ್ಕರ ಟೈಲರ್, ಯಾಸ್ಮಿನ್, ಮಹಮ್ಮದ್ ಇಕ್ಬಾಲ್, ಚಂಚಲಾಕ್ಷಿ, ಸಂಜೀವಿ, ಪ್ರಭಾ ಆರ್. ಸಾಲ್ಯಾನ್, ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಸ್ಥಾಯಿ ಸಮಿತಿ ಅಧ್ಯಕ್ಷ ವಾಸುಪೂಜಾರಿ, ಅಧಿಕಾರಿಗಳಾದ ಮತ್ತಾಡಿ,
ರಝಾಕ್, ಲೀಲಾವತಿ, ಉಮಾವತಿ ಮತ್ತಿತರರು ಉಪಸ್ಥಿತರಿದ್ದರು. ಇಂಜಿನಿಯರ್ ಡೊಮಿನಿಕ್ ಡಿ’ಮೆಲ್ಲೊ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸ್ವಾಗತಿಸಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.