ಕಬ್ಬಿನ ದರ ನಿಗದಿಗೆ ಗುಜರಾತ್ ಮಾದರಿ ಬೇಕು
Team Udayavani, Jan 9, 2018, 6:00 AM IST
ಬೆಂಗಳೂರು: ಕಬ್ಬುದರ ನಿಗದಿ ವಿಚಾರದಲ್ಲಿ “ಗುಜರಾತ್ ಮಾದರಿ’ಯನ್ನು ಪಾಲಿಸಬೇಕಾದ ಅನಿವಾರ್ಯತೆಗೆ ರಾಜ್ಯ ಸರ್ಕಾರ ಸಿಲುಕಿದೆ.
ಗುಜರಾತ್‌ನಲ್ಲಿ ಪ್ರತಿ ಟನ್ ಕಬ್ಬಿಗೆ 4000 ರಿಂದ 4700 ರೂ. ಪಾವತಿಯಾಗುತ್ತಿರುವ ಬಗ್ಗೆ ಅಧ್ಯಯನ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹೀಗಾಗಿ ಇಲ್ಲೂ ಅದೇ ದರ ನಿಗದಿಪಡಿಸುವ ಅನಿವಾರ್ಯತೆ ಎದುರಾಗಿದೆ.
ರಾಜ್ಯ ಸರ್ಕಾರವೇ ಗುಜರಾತ್‌ನ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿ ಕುರಿತು ಅಧ್ಯಯನಕ್ಕಾಗಿ ರಚಿಸಲಾಗಿದ್ದ ಅಧಿಕಾರಿಗಳು, ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯು 2017-18 ನೇ ಸಾಲಿನ ಹಂಗಾಮಿನಲ್ಲೂ ಗುಜರಾತ್‌ನಲ್ಲಿ ಪ್ರತಿ ಟನ್‌ಗೆ ನಾಲ್ಕೂವರೆ ಸಾವಿರ ರೂ. ಮೇಲ್ಪಟ್ಟು ಪಾವತಿ ಮಾಡಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಿದೆ.
ಹೀಗಾಗಿ, ಸಕ್ಕರೆ ಇಳುವರಿ ಹಾಗೂ ಉಪ ಉತ್ಪನ್ನ ಲಾಭಾಂಶ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂಬ ರಾಜ್ಯದ ಕಬ್ಬು ಬೆಳೆಗಾರರ ಆಗ್ರಹಕ್ಕೆ ಬಲ ಬಂದಂತಾಗಿದೆ. ಗುಜರಾತ್ ಅಧ್ಯಯನ ವರದಿ ಆಧಾರದಲ್ಲೇ ರಾಜ್ಯದಲ್ಲಿ ಕನಿಷ್ಠ ಪ್ರತಿ ಟನ್‌ಗೆ 3500 ರೂ. ಪಾವತಿಸಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಡಲು ರೈತ ಸಂಘಟನೆಗಳೂ ಮುಂದಾಗಿವೆ.
ಪ್ರಸ್ತುತ ರಾಜ್ಯದಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವಂತೆ 2017-18 ನೇ ಸಕ್ಕರೆ ಹಂಗಾಮಿಗೆ ಶೇ.9.5 ರಷ್ಟು ಇಳುವರಿಗೆ ಪ್ರತಿ ಟನ್‌ಗೆ 2550 ರೂ. (ಎಫ್ಆರ್‌ಪಿ- ನ್ಯಾಯ ಮತ್ತು ಲಾಭದಾಯಕ ಬೆಲೆ) ಹಾಗೂ ಆ ನಂತರದ ಶೇ.1 ರಷ್ಟು ಇಳುವರಿಗೆ ಪ್ರತಿ ಟನ್‌ಗೆ 268 ರೂ. ಹೆಚ್ಚುವರಿ ಬೆಲೆ ನೀಡಲಾಗುತ್ತಿದೆ.
ಆದರೆ, ಗುಜರಾತ್‌ನಲ್ಲಿಯೂ ಇದೇ ಎಫ್ಆರ್‌ಪಿ ಅನ್ವಯವಾದರೂ ಅಲ್ಲಿನ ಕಾರ್ಖಾನೆಗಳು ಶೇ. 11.5 ಇಳುವರಿಗೆ 4000 ರೂ.ನಿಂದ 4700 ರೂ. ಅಂದರೆ ಪ್ರತಿಟನ್‌ಗೆ ಎಫ್ಆರ್‌ಪಿ ದರಕ್ಕಿಂತ 2000 ರೂ. ಹೆಚ್ಚಾಗಿ ನೀಡುತ್ತಿವೆ. ಹೀಗಾಗಿ, ರಾಜ್ಯದಲ್ಲಿ ಕನಿಷ್ಠ 3500 ರೂ. ನಿಗದಿ ಮಾಡಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಡಲು ರೈತ ಸಂಘಟನೆಗಳು ಸಜ್ಜಾಗಿವೆ.
ಈಗಾಗಲೇ ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ 1.50 ಕೋಟಿ ಟನ್‌ವರೆಗೆ ಕಬ್ಬು ನುರಿಯಲಾಗಿದೆ. ಆದರೆ, ರೈತರಿಗೆ ಪ್ರತಿ ಟನ್‌ಗೆ ಶೇ.9.5 ರಷ್ಟು ಇಳುವರಿಗೆ 2550 ರೂ. ಆ ನಂತರದ ಶೇ.1 ರಷ್ಟು ಇಳುವರಿಗೆ 268 ರೂ. ನಂತೆ 2600 ರಿಂದ 2800 ರೂ.ವರೆಗೆ ಮಾತ್ರ ಪಾವತಿಸಲಾಗಿದೆ.
ಬೆಳಗಾವಿ ಮತ್ತು ಬಾಗಲಕೋಟೆ ಭಾಗದಲ್ಲಿ ಶೇ.12.5 ರಷ್ಟು ಇಳುವರಿ ಇದ್ದರೂ ದರ ಮಾತ್ರ ಹೆಚ್ಚಿಸಿಲ್ಲ. ಕೇಂದ್ರ ಸರ್ಕಾರದ ಎಫ್ಆರ್‌ಪಿ ದರದ ಪ್ರಕಾರ ಕೊಟ್ಟರೂ ಉಪ ಉತ್ಪನ್ನಗಳ ಲಾಭಾಂಶ ಹೊರತುಪಡಿಸಿ 3354 ರೂ. ಕೊಡಬೇಕಿತ್ತು. ಆದರೆ, ಕೊಟ್ಟಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಮಾರ್ಚ್‌ವರೆಗೂ ಕಬ್ಬು ನುರಿಯುವ ಕಾರ್ಯ ನಡೆಯಲಿದ್ದು ನಂತರ ಅಂತಿಮ ಲೆಕ್ಕಾಚಾರ ಸಂದರ್ಭದಲ್ಲಿ ಹೆಚ್ಚುವರಿ ಮೊತ್ತ ಪಾವತಿಸುವಂತೆ ಕಾರ್ಖಾನೆಗಳಿಗೆ ಸೂಚನೆ ನೀಡಬೇಕು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಅಂತಿಮ ನಿರ್ಧಾರ:
ಗುಜರಾತ್ ಅಧ್ಯಯನ ವರದಿ ಸಲ್ಲಿಕೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸಕ್ಕರೆ ಸಚಿವರು ಹಾಗೂ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಆಯುಕ್ತರು, ರೈತ ಪ್ರತಿನಿಧಿಗಳ ಸಭೆ ನಡೆಯಲಿದ್ದು, ಎಫ್ಆರ್‌ಪಿ ದರ ನಿಗದಿ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ನಿರ್ದೇಶನಾಲಯದ ಅಧಿಕಾರಿ ಹೇಳಿದ್ದಾರೆ.
ವರದಿಯಲ್ಲೇನಿದೆ?
ಗುಜರಾತ್ ಅಧ್ಯಯನ ವರದಿಯಲ್ಲಿ ಕೆಲವೊಂದು ಪ್ರಮುಖ ಅಂಶಗಳಿವೆ. ಒಟ್ಟು 18 ಸಕ್ಕರೆ ಕಾರ್ಖಾನೆಗಳಿದ್ದು, ಅವೆಲ್ಲವೂ ಸಹಕಾರ ಸಂಘಗಳು ನಡೆಸುತ್ತಿರುವ ಕಾರ್ಖಾನೆಗಳಾಗಿವೆ. ಉಪ ಉತ್ಪನ್ನಗಳಿಗೆ ಹೆಚ್ಚು ಒತ್ತು ಕೊಡದೇ ಸಕ್ಕರೆ ಇಳುವರಿಯನ್ನೇ ಆಧಾರವಾಗಿಟ್ಟುಕೊಂಡು ಬೆಲೆ ನಿಗದಿ ಮಾಡುತ್ತಿವೆ.
ಎಕರೆವಾರು ಹೆಚ್ಚಿನ ಉತ್ಪಾದನೆ ನೀಡುವ ಸಕ್ಕರೆ ಇಳುವರಿ ಹೆಚ್ಚಾಗುವ ತಳಿಗಳನ್ನು ಅಲ್ಲಿ ಪರಿಚಯಿಸಲಾಗಿದ್ದು, ಕಾರ್ಖಾನೆ ವತಿಯಿಂದಲೇ ಈ ತಳಿಗಳ ಬೀಜವನ್ನು ರೈತರಿಗೆ ಒದಗಿಸಲಾಗುತ್ತಿದೆ. ಕಬ್ಬು ಕಟಾವು ಆದ ನಂತರ 10 ರಿಂದ 18 ಗಂಟೆಯೊಳಗೆ ಕಾರ್ಖಾನೆಯು ಪಡೆದು ಅರೆಯುತ್ತದೆ. ಇದರಿಂದ ಸಕ್ಕರೆ ಇಳುವರಿಯೂ ಹೆಚ್ಚಾಗುತ್ತಿದೆ. ಕಬ್ಬು ಬೆಳೆಗಾರರಿಗೆ ಮೂರು ಕಂತುಗಳಲ್ಲಿ ಆಯಾ ವರ್ಷದ ಬಾಕಿ ಆಯಾ ವರ್ಷವೇ ಚುಕ್ತಾ ಮಾಡಲಾಗುತ್ತಿದೆ. ಜತೆಗೆ ಅಲ್ಲಿನ ಡಿಸಿಸಿ ಬ್ಯಾಂಕುಗಳು ಉತ್ತಮ ಸ್ಥಿತಿಯಲ್ಲಿದ್ದು, ರೈತರಿಗಷ್ಟೇ ಅಲ್ಲದೆ ಕಾರ್ಖಾನೆಗಳ ಬೇಡಿಕೆಗನುಗುಣವಾಗಿ ಶೇ.10 ರ ಬಡ್ಡಿ ದರದಲ್ಲಿ ಸಾಲ ನೀಡುವಷ್ಟು ಶಕ್ತವಾಗಿವೆ.
ಗುಜರಾತ್ ಸರ್ಕಾರವು ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಸರ್ಕಾರ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುತ್ತಿದೆ ಎಂದು ತಿಳಿಸಲಾಗಿದೆ.
ಉತ್ಪಾದನೆ ಹೆಚ್ಚಳ ನಿರೀಕ್ಷೆ
ರಾಜ್ಯದಲ್ಲಿ 2016-17 ನೇ ಸಾಲಿನಲ್ಲಿ 4.20 ಲಕ್ಷ ಹೆಕ್ಟೇರ್‌ನಲ್ಲಿ 2.86 ಕೋಟಿ ಟನ್ ಕಬ್ಬು ಉತ್ಪಾದನೆಯಾಗಿತ್ತು. 63 ಸಕ್ಕರೆ ಕಾರ್ಖಾನೆಗಳು 2.81 ಕೋಟಿ ಟನ್ ಕಬ್ಬು ನುರಿದಿದ್ದವು. 2017-18 ನೇ ಸಾಲಿನಲ್ಲಿ 4 ಲಕ್ಷ ಹೆಕ್ಟೇರ್‌ನಲ್ಲಿ 3 ಕೋಟಿ ಟನ್ ಉತ್ಪಾದನೆ ನಿರೀಕ್ಷೆ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಉತ್ಪಾದನೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿದೆ.
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.