ಬುಲ್ ಟ್ರಾಲ್ ವಿರುದ್ಧ ಭಾರೀ ಪ್ರತಿಭಟನೆ
Team Udayavani, Jan 9, 2018, 3:11 PM IST
ಕಾರವಾರ: ಸಮುದ್ರದಲ್ಲಿ ರಾತ್ರಿ ವೇಳೆ ಫ್ಲಡ್‌ಲೈಟ್ ಫಿಶ್ಶಿಂಗ್ ಮಾಡುತ್ತಿರುವುದರಿಂದ ಮೀನಿನ ಸಂತತಿಯೇ ನಾಶವಾಗಲಿದೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೊನಲಗದ್ದೆ ಕುಮಟಾ, ಅಂಕೋಲಾ, ಭಟ್ಕಳ, ಕಾರವಾರ, ಗಂಗಾವಳಿ, ದೇವಭಾಗ, ಗೋಕರ್ಣ ಮತ್ತು ಜಿಲ್ಲೆಯ ವಿವಿಧ ಕರಾವಳಿ ತಾಲೂಕುಗಳಿಂದ ಬಂದಿದ್ದ ಸಾವಿರಾರು ಮೀನುಗಾರರು ಕಾರವಾರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ
ಮನವಿ ಸಲ್ಲಿಸಿದರು.
ಉತ್ತರ ಕನ್ನಡ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರು ಒಕ್ಕೂಟದ ಸದಾನಂದ ಹರಿಕಂತ್ರ, ಸುಧಾಕರ ತಾರಿ, ಸೋಮಯ್ಯ ಹರಿಕಂತ್ರ ನೇತೃತ್ವ ವಹಿಸಿದ್ದರು. ಕೇಂದ್ರ ಸರ್ಕಾರ ರಾತ್ರಿ ವೇಳೆ ಫಡ್‌ಲೈಟ್ ಫಿಶ್ಶಿಂಗ್ ನಿಷೇಧ ಹೇರಿದೆ. ಮೀನುಗಾರಿಕೆಯಲ್ಲಿ ಏಕ ರೀತಿ ನಿಯಮ ರೂಪಿಸಿ ಕಳೆದ ನ.10 ರಂದು ಆದೇಶ ಹೊರಡಿಸಿದೆ. ಈ ಆದೇಶ ಎಲ್ಲಾ ರಾಜ್ಯಗಳ ಕೈ ಸೇರಿದೆ. ಆದರೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಫಡ್‌ಲೈಟ್ ಫಿಶ್ಶಿಂಗ್ ನಡೆಯುತ್ತಿದ್ದು ಸಮುದ್ರವನ್ನೇ ಬರಿದು ಮಾಡಿದೆ ಎಂದು ನಾಡದೋಣಿ ಮೀನುಗಾರ ಸಂಘಟನೆಯ ಮುಖಂಡ ಸದಾನಂದ ಹರಿಕಂತ್ರ
ಹೇಳಿದರು.
ಅಸಮಾನತೆ ಸೃಷ್ಟಿ: ಫಡ್‌ಲೈಟ್ ಮೀನುಗಾರಿಕೆಯಿಂದ ಸಮುದ್ರ ಬರಿದಾಗುತ್ತಿದೆ. ಸಮುದ್ರದಲ್ಲಿ ಮೀನುಗಾರಿಕಾ ವೃತ್ತಿ ಮೌಲ್ಯಗಳನ್ನು, ಸಿದ್ಧಾಂತಗಳನ್ನು ಗಾಳಿಗೆ ತೂರಿ ಹಣ ಮಾಡುವ ದಂಧೆ ಮಾಡಲಾಗುತ್ತಿದೆ. ಇದು ಅಸಮಾನತೆಯನ್ನು ಸೃಷ್ಟಿಸುತ್ತಿದೆ. ಸಮುದ್ರದ ಜೀವವೈವಿಧ್ಯಕ್ಕೂ ಧಕ್ಕೆ ತಂದಿದೆ. ಬುಲ್ ಟ್ರಾಲ್ ಸಹ ಸಮುದ್ರದಲ್ಲಿ ಮೀನಿನ ಸಂತತಿಯನ್ನೇ ಬಾಚುತ್ತಿದೆ. ಹಾಗಾಗಿ ಸಂಪ್ರದಾಯಿಕ ಮತ್ತು ನಾಡದೋಣಿ ಮೀನುಗಾರರು, ದಡದ ಮೀನುಗಾರಿಕೆ ಮಾಡುವವರಿಗೆ ಉದ್ಯೋಗವೇ ಇಲ್ಲದಂತಾಗಿದೆ ಎಂದು ಸದಾನಂದ ಹರಿಕಂತ್ರ ಕಳವಳ ವ್ಯಕ್ತಪಡಿಸಿದರು.
ಆಹಾರ ಉತ್ಪನ್ನಗಳಲ್ಲಿ ಸಮುದ್ರ ಮೀನು ಸಹ ಒಂದು. ಆದರೆ ಅವೈಜ್ಞಾನಿಕ ಮತ್ತು ದುರಾಸೆಯ ಮೀನುಗಾರಿಕೆಯಿಂದ ಸಮುದ್ರ ಬರಿದಾಗಿದೆ. ಮೀನು ಸಿಗದೆ ಸಮುದ್ರ ಆಧಾರಿತ ಉತ್ಪನ್ನದಲ್ಲಿ ರಾಜ್ಯಕ್ಕೆ ಗಂಡಾಂತರ ಎದುರಾಗಬಹುದು ಎಂದು ಹರಿಕಂತ್ರ ಎಚ್ಚರಿಸಿದರು.
ಬೇಡಿಕೆಗಳು: ಮೀನು ಸಂತತಿ ಉಳಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಉತ್ತರ ಕನ್ನಡದಲ್ಲಿ ರಾತ್ರಿ ವೇಳೆ ಬುಲ್ ಟ್ರಾಲ್ ಬಳಸಿ ಮೀನುಗಾರಿಕೆ ನಡೆದಿದೆ. ಬೆಳಕು ಬಿಟ್ಟು ಸಮುದ್ರದಲ್ಲಿ ಮೀನು ಬೇಟೆ ಮಾಡುವುದರಿಂದ ಬೆಳಕಿಗೆ ಸಣ್ಣ ಸಣ್ಣ ಮೀನು ಮರಿ ಸಹಿತ ಎಲ್ಲಾ ಮೀನುಗಳು ಬಲೆಗೆ ಬೀಳುತ್ತವೆ. ಹಾಗಾಗಿ ಫಡ್‌ಲೈಟ್ ಫಿಶ್ಶಿಂಗ್ ತಡೆಯಬೇಕು. ಪ್ಲಡ್‌ಲೈಟ್ ಫಿಶ್ಶಿಂಗ್ ಮಾಡುವವರ ಲೈಸೆನ್ಸ ರದ್ದು ಮಾಡಬೇಕು ಎಂದು ಡಿಸಿಗೆ ವಿನಂತಿಸಿದರು.
ಕಾಣೆಯಾಗುತ್ತಿದೆ ಮೀನು ಸಂತತಿ:
ನಾಡದೋಣಿ ಮೀನುಗಾರರಿಗೆ ಈ ಹಿಂದೆ ಸಿಗುತ್ತಿದ್ದ ಸಣ್ಣ ಮೀನುಗಳು ಸಿಗುತ್ತಿಲ್ಲ. ತಿಪ್ಪೆ, ಬಣಗು, ಸಮುದಾಳೆ, ಜಾಲಿ ಮೀನುಗಳು ಬಲೆಗೆ ಬೀಳುತ್ತಿಲ್ಲ.
ಈ ಸಂತತಿ ವಿನಾಶದ ಅಂಚಿನಲ್ಲಿವೆ. ಹಾಗಾಗಿ ಜಿಲ್ಲಾಡಳಿತ ಬೆಳಕಿನ ಮತ್ಸ ಬೇಟೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ: ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಾತನಾಡಿ ಮೀನುಗಾರಿಕಾ ಅಧಿಕಾರಿಗಳಿಂದ ಮಾತ್ರ ಫಡ್‌ಲೈಟ್ ಫಿಶ್ಶಿಂಗ್, ಬುಲ್‌ಟ್ರಾಲ್ ಮೀನುಗಾರಿಕೆ ತಡೆಯಲು ಆಗದು. ಅಕ್ರಮ ಮೀನುಗಾರಿಕೆ ಮಾಡುವವರ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿ, ಅಂಥವರ ವಿರುದ್ಧ ಕ್ರಮಕ್ಕೆ ಮೀನುಗಾರರು ಸಹಕರಿಸಬೇಕು ಹೇಳಿದರು.
ಮುಖಂಡರಾದ ಸೋಮಯ್ಯ ಹರಿಕಂತ್ರ, ಕೃಷ್ಣ, ಮಹಾದೇವ, ಪಾಂಡುರಂಗ ಕಿರ್ಲೋಸ್ಕರ್, ದೇವರಾಯ ಸೈಲ್, ರಮೇಶ್ ಮೇಥಾ, ಮಂಕಾಳಿ
ಅಂಬಿಗ, ಜ್ಞಾನೇಶ್ವರ ದತ್ತಾ ಮೋರ್ಜೆ, ಗಣಪತಿ ಅಘನಾಶಿನಿ, ಇಬ್ರಾಹಿಂ ಅಬ್ದುಲ್ ಇಂಗ್ರೇಜಿ ವನ್ನಳ್ಳಿ, ಅಬ್ದುಲ್ ಅದಮ್ ಕಬಿಲ್‌ದಾರ, ಥಾಕೂ
ದುಗೇìಕರ್, ವೆಂಕಟೇಶ್ ಭಟ್ಕಳ, ಸೋಮಯ್ಯ ಭಟ್ಕಳ, ಎನ್.ಎಸ್.ಅಂಬಿಗ ಸೇರಿದಂತೆ ಸಾವಿರಾರು ಜನ ನಾಡದೋಣಿ ಮತ್ತು ಸಂಪ್ರದಾಯಿಕ
ಮೀನುಗಾರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.