“ಜೈವಿಕ ಶಿಲೀಂಧ್ರ’ ಲ್ಯಾಬೊರೇಟರಿ ಕಾರ್ಯಾರಂಭ
Team Udayavani, Jan 10, 2018, 12:37 PM IST
ಉಳ್ಳಾಲ: ಅಣುವಿಕಿರಣದಿಂದ ಜನರ ಮೇಲಾಗುವ ಪರಿಣಾಮವನ್ನು ಪತ್ತೆಹಚ್ಚುವ ಮತ್ತು ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ರಕ್ಷಣಾ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯೋಗಾಲಯವಾಗಿರುವ ಅಣುವೈದ್ಯಕೀಯ ಮತ್ತು ಅನ್ವಯಿಕ ವಿಜ್ಞಾನ ಸಂಸ್ಥೆ (ಐಎನ್‌ಎಂಎಎಸ್) ಮತ್ತು ನಿಟ್ಟೆ (ಪರಿಗಣಿಸಲಾಗಿರುವ ವಿಶ್ವವಿದ್ಯಾನಿಲಯ) ಜಂಟಿಯಾಗಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ “ಜೈವಿಕ ಶಿಲೀಂಧ್ರ’ ಲ್ಯಾಬೋರೇಟರಿ ಪ್ರಾರಂಭಿಸುವ ಐತಿಹಾಸಿಕ ಒಪ್ಪಂದ ಮಾಡಿಕೊಂಡಿದೆ.
ಲ್ಯಾಬೋರೇಟರಿಯು ಈಗಾಗಲೇ ಕಾರ್ಯಾರಂಭಿಸಿದೆ. ಜೈವಿಕ ಶಿಲೀಂಧ್ರ ಲ್ಯಾಬೋರೇಟರಿ ಸ್ಥಾಪನೆಯ ಕುರಿತು ನಿಟ್ಟೆ ವಿ.ವಿ. ಕುಲಪತಿ ಡಾ| ಸತೀಶ್ ಭಂಡಾರಿ ಮಾತನಾಡಿ ಐಎನ್‌ಎಂಎಎಸ್ (ಇನ್‌ಮಾಸ್) ಮೂಲ ಹಾಗೂ ಅನ್ವಯಿಕ ವೈದ್ಯಕೀಯ ವಿಜ್ಞಾನಗಳ ಸಂಶೋಧನಾ ಸಂಸ್ಥೆಯಾಗಿದ್ದು, ಇದು ರೇಡಿಯೋಥೆರಪಿ ತುರ್ತು ಸ್ಥಿತಿಗೆ ಸಂಬಂಧಿಸಿದಂತೆ ರೇಡಿಯೋ ಪ್ರೊಟೆಕ್ಟರ್ ಮತ್ತು ಚಿಕಿತ್ಸಾ ವಿಧಿವಿಧಾನಗಳು, ಜೈವಿಕ ಶಿಲೀಂಧ್ರ (ಬಯೋಡೋಸಿಮೆಟ್ರಿ), ಔಷಧ ಅಭಿವೃದ್ಧಿ ಮತ್ತು ರಾಸಾಯನಿಕ, ಜೈವಿಕ, ರೇಡಿಯೋಲಜಿ ಮತ್ತು ಅಣುರಕ್ಷಣೆ, ಪ್ರತಿವಿಕಿರಣ ಕ್ರಮಗಳು, ತುರ್ತು ಸ್ಥಿತಿಯಲ್ಲಿ ಚಿಕಿತ್ಸೆ ನೀಡುವುದು ಮತ್ತಿತರ ಕ್ಷೇತ್ರದಲ್ಲೂ ಸಂಶೋಧನೆ ನಡೆಸುತ್ತದೆ ಎಂದರು.
ಈ ಸಂದರ್ಭದಲ್ಲಿ ನಿಟ್ಟೆ ವಿ.ವಿ.ಯ ಕುಲಾಧಿಪತಿ ಎನ್. ವಿನಯ ಹೆಗ್ಡೆ, ಸಹಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ, ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ, ಕ್ಷೇಮ ಡೀನ್ ಡಾ| ಪಿ.ಎಸ್.ಪ್ರಕಾಶ್, ವೈಸ್ ಡೀನ್ (ಆಡಳಿತ) ಡಾ| ಜಯಪ್ರಕಾಶ್ ಶೆಟ್ಟಿ, ಲ್ಯಾಬೋರೇಟರಿ ಮುಖ್ಯಸ್ಥೆ ಡಾ| ಸುಚೇತಾ, ಸಂಯೋಜಕ ಡಾ| ಪ್ರಶಾಂತ್ ಮತ್ತು “ಜೈವಿಕ ಶಿಲೀಂಧ್ರ’ ಡಿಆರ್‌ಡಿಒ ಮುಖ್ಯಸ್ಥರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಮೊದಲ ಪ್ರಯೋಗಾಲಯ
2012-14ರ ಅವಧಿಯಲ್ಲಿ ಒಟ್ಟು 14 ರಾಷ್ಟ್ರಗಳು ಇಂಥ ಪ್ರಯೋಗಾಲಯವನ್ನು ಸ್ಥಾಪಿಸಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಭಾರತದಲ್ಲಿ ಕೇವಲ 3 ಪ್ರಯೋಗಾಲಯಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, “ಕ್ಷೇಮ’ದಲ್ಲಿ ಕಾರ್ಯಾರಂಭಗೊಳ್ಳಲಿರುವ ಪ್ರಯೋಗಾಲಯ ದೇಶದಲ್ಲಿ ನಾಲ್ಕನೆಯದು ಮತ್ತು ರಾಜ್ಯದ ಮೊದಲ ಪ್ರಯೋಗಾಲಯವಾಗಿದೆ.
ಪ್ರಥಮ ಹಂತದಲ್ಲಿ 18 ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳ ಲಾಗಿದ್ದು, ಇದರಲ್ಲಿ 3 ತಿಂಗಳು ಸಿಬಂದಿ ತರಬೇತಿ, 12 ತಿಂಗಳ ಅನಂತರ ಪ್ರಯೋಗಾಲಯ ಹೋಲಿಕೆ, ನಿಟ್ಟೆ ಮತ್ತು ಐಎನ್‌ಎಂಎಎಸ್ (ಇನ್‌ಮಾಸ್) ನಡುವಿನ ಮೊದಲ ಡೋಸ್ ಸ್ಪಂದನೆಯ ಕ್ಯಾಲಿಬ್ರೇಷನ್ ಕರ್ವ್ ಅವಧಿ ಸೇರಿರುತ್ತದೆ. ಇನ್‌ಮಾಸ್ ತರಬೇತಿ ಉದ್ದೇಶಕ್ಕಾಗಿ 3.52 ಲಕ್ಷ ರೂ.ಗಳ ಆರಂಭಿಕ ಬೆಂಬಲದೊಂದಿಗೆ ಈ ಪ್ರಸ್ತಾವನೆಗೆ ಚಾಲನೆ ನೀಡಿದೆ. ಸೂಕ್ತ ದಾಖಲೆ ಸಲ್ಲಿಸಿದ ಅನಂತರ ತರಬೇತಿ ಕಾರ್ಯವನ್ನು ಪೂರ್ಣಗೊಳಿಸಿದ ಬಳಿಕ ಎಇಆರ್‌ಬಿ ಮಾನ್ಯತೆಗಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.