ಕೃಷಿ ಪ್ರವಾಸವು ಜ್ಞಾನ ವಿಸ್ತಾರದ ಉಪಾಧಿ
Team Udayavani, Jan 11, 2018, 10:11 AM IST
ಇಸ್ರೇಲಿನಲ್ಲಿ ಯಥೇತ್ಛ ಬಿಸಿಲು, ತೀರಾ ಕಡಿಮೆ ಮಳೆ. ವಿದ್ಯಾರ್ಥಿಗಳನ್ನು ಜಲಯೋಧರನ್ನಾಗಿ ರೂಪಿಸುವಲ್ಲಿ ದೊಡ್ಡ ಹೆಜ್ಜೆ ಇಡಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಮಳೆನೀರಿನ ಮಹತ್ವ ತಿಳಿಸಲಾಗುತ್ತಿದೆ. ವಿದ್ಯಾರ್ಥಿಗಳು ಮಳೆಯ ನೀರಿನ ಲೆಕ್ಕಾಚಾರ, ಮರುಬಳಕೆ ಜವಾಬ್ದಾರಿ ಹೊರುತ್ತಾರೆ.
ಏಳು ದಶಕದ ಹಿಂದೆ ಇಸ್ರೇಲ್ ದೇಶವು ನೂರಕ್ಕೆ ನೂರು ಮರುಭೂಮಿ. ಈಗ ವಿಶ್ವವೇ ಕತ್ತೆತ್ತಿ ನೋಡುವಷ್ಟು ಸದೃಢ. ಹನಿಹನಿ ನೀರಲ್ಲೂ ಬೆಳೆಯನ್ನು ತೆಗೆಯುವ ಜಾಗೃತ ಸ್ಥಿತಿಯು ಇಸ್ರೇಲಿನ ಯಶದ ಗುಟ್ಟು. ಹನಿ ನೀರು ದೇಶದ ಜೀವ, ಭಾವ. ಹಾಗಾಗಿ ನೋಡಿ, ನೀರಿನ ಪಾಠಕ್ಕಾಗಿ ಇಸ್ರೇಲಿನತ್ತ ಎಲ್ಲರ ಚಿತ್ತ. “2020ರ ಹೊತ್ತಿಗೆ ನಾವು ಇಸ್ರೇಲನ್ನು ಕಾಡು ಮಾಡುತ್ತೇವೆ’ ಎನ್ನುವುದು ಅಲ್ಲಿನ ವರಿಷ್ಠರ ದೂರದೃಷ್ಟಿ.
ನಮ್ಮಲ್ಲೂ ವೈಯಕ್ತಿಕವಾಗಿ ಕಾಡು ಎಬ್ಬಿಸುವ ಆಸಕ್ತಿ, ಹವ್ಯಾಸಗಳಿವೆ. ರಾಷ್ಟ್ರವೊಂದರ ಜೀವಪರವಾದ ಮತ್ತು ಉಸಿರುಳಿಸಿಕೊ ಳ್ಳುವ ಚಿಂತನೆ, ನಿರ್ಧಾರಗಳನ್ನು ಯೋಚಿಸಿದಾಗ ಕನ್ನಾಡಿನ ಜೀವ ತೆಗೆಯುವ ಯೋಜನೆಗಳು ಕಣ್ಣೆದುರಿಗೆ ಹಾದು ಹೋದುವು ಎಂದು ಸುಳ್ಯದ ಕೃಷಿಕ ಎಂ.ಜಿ.ಸತ್ಯನಾರಾಯಣ ನೆನಪಿಸಿ ಕೊಂಡರು. ಈಚೆಗೆ ಕನ್ನಾಡಿನಿಂದ ಇಪ್ಪತ್ತಮೂರು ಮಂದಿಯ ತಂಡ ಇಸ್ರೇಲಿಗೆ ಕೃಷಿ ಪ್ರವಾಸ ಮಾಡಿತ್ತು. ಒಬ್ಬೊಬ್ಬ ಕೃಷಿಕ ಒಂದೊಂದು ಕೃಷಿ ಜ್ಞಾನವನ್ನು ಹೊತ್ತು ತಂದಿದ್ದರು.
ಇಸ್ರೇಲಿನಲ್ಲಿ ಯಥೇತ್ಛ ಬಿಸಿಲು, ತೀರಾ ಕಡಿಮೆ ಮಳೆ. ವಿದ್ಯಾರ್ಥಿಗಳನ್ನು ಜಲಯೋಧರನ್ನಾಗಿ ರೂಪಿಸುವಲ್ಲಿ ದೊಡ್ಡ ಹೆಜ್ಜೆ. ಶಾಲಾ-ಕಾಲೇಜುಗಳಲ್ಲಿ ಮಳೆನೀರಿನ ಮಹತ್ವವನ್ನು ತಿಳಿಸಲಾಗುತ್ತಿದೆ. ವಿದ್ಯಾರ್ಥಿ ತಂಡಗಳು ಸರದಿ ಮೇರೆಗೆ ಛಾವಣಿ, ಟ್ಯಾಂಕ್ ಸ್ವತ್ಛಗೊಳಿಸುವುದು, ಮಳೆಯ ನೀರಿನ ಲೆಕ್ಕಾಚಾರ, ಬಳಕೆ ಪ್ರಮಾಣ, ಮರುಬಳಕೆ ಪ್ರಮಾಣ ಹಾಗೂ ಮಿತವ್ಯಯದ ಉಸ್ತುವಾರಿ ವಹಿಸಿಕೊಳ್ಳುತ್ತದೆ. ಸಂಪೂರ್ಣ ಉಚಿತವಾದ ಬಿಸಿಲನ್ನು ನಾವು ಅಸೂಯೆ ಪಡುವಷ್ಟರ ಮಟ್ಟಿಗೆ ಬಳಸಿಕೊಂಡಿ ದ್ದಾರೆ. ಪ್ರಾಯಶ ಶೇ.90ರಷ್ಟು ಮನೆಗಳಿಗೆ ಸೌರಶಕ್ತಿಯ ಬಳಕೆ ಯಿದೆ. ಕೃಷಿಗಂತೂ ಸೌರಶಕ್ತಿಯೇ ಮೂಲಾಧಾರ. ಹಸಿರು ಮನೆಗಳ ನಿರ್ವಹಣೆಗೆ ಸೌರಶಕ್ತಿಯಿಂದಲೇ ವಿದ್ಯುತ್ ಉತ್ಪಾದಿ ಸಿಕೊಳ್ಳುತ್ತಾರೆ. ಕೊಪ್ಪಳದ ಕೃಷಿಕ ಆನಂದತೀರ್ಥ ಪ್ಯಾಟಿಯವರು ಎರಡು ವರುಷದ ಹಿಂದೆ ಇಸ್ರೇಲ್ ಪ್ರವಾಸ ಮಾಡಿ ಪುಸ್ತಿಕೆಯನ್ನು ಪ್ರಕಟಿಸಿದ್ದರು. ತಾನು ನೋಡಿದ, ಅನುಭವಿಸಿದ ಜ್ಞಾನವನ್ನು ದಾಖಲಿಸಿದ್ದರು.
ಪ್ಯಾಟಿ ಒಂದೆಡೆ ಉಲ್ಲೇಖೀಸುತ್ತಾರೆ, ಇಸ್ರೇಲಿನಲ್ಲಿ ಸಂಶೋಧ ನೆಗೆ ಎಲ್ಲೆ ಎಂಬುದಿಲ್ಲ. ಒಂದು ಹಂತದಲ್ಲಿ ಗುರಿ ತಲುಪಿದೆವು ಎನ್ನುವಷ್ಟರಲ್ಲಿ ಇನ್ನೊಂದು ಹೆಜ್ಜೆ ಮುಂದೆ ಸಾಗಲು ಯತ್ನ. ಅಂತಹ ಹಲವು ನಿದರ್ಶನಗಳಿವೆ. ಗೋಬರ್ ಗ್ಯಾಸ್ ತೊಟ್ಟಿಯಿಂದ ಜೈವಿಕ ಅನಿಲ ಉತ್ಪಾದನೆಯಾಗುತ್ತದೆ. ಹೊರ ಬರುವ ಸ್ಲರಿಯನ್ನು ವ್ಯವಸಾಯಕ್ಕೆ ಬಳಸುವುದು ಸಾಮಾನ್ಯ. ಆದರೆ ಸ್ಲರಿಯ ನೇರ ಬಳಕೆಯಿಂದ ಹಾನಿಕಾರಕ ಅನಿಲ ಹೊರಸೂಸುತ್ತದೆ. ಹಾಗಾಗಿ ಸ್ಲರಿಯಿಂದ ಅದೇ ಅನಿಲಗಳನ್ನು ಹೀರಿ ಬೆಳೆಯುವ ಜಲಸಸ್ಯಗಳನ್ನು ಬೆಳೆಸುತ್ತಾರೆ. ಅದರಿಂದ ಜೈವಿಕ ಇಂಧನ ಉತ್ಪಾದಿಸಿ, ಅದನ್ನು ಜನರೇಟರಿಗೆ ಹಾಕಿ, ವಿದ್ಯುತ್ ಉತ್ಪಾದಿಸುತ್ತಾರೆ.
ಕ್ಯಾಂಪ್ಕೊದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭರು ಇಸ್ರೇಲಿಗೆ ಹೋಗಿದ್ದಾಗ ಅಲ್ಲಿ ನೋಡಿದ ಹೈನುಗಾರಿಕೆಯ ವೈಜ್ಞಾನಿಕ ವ್ಯವಸ್ಥೆಯನ್ನು ವಿವರಿಸಿದ್ದರು. “ಕ್ಯಾಂಪ್ಕೊದ ಎಂ.ಡಿ. ಸುರೇಶ್ ಭಂಡಾರಿಯವರ ಜತೆಯಲ್ಲಿ ಎರಡು ಪಶು ಸಂಸಾರವನ್ನು ವೀಕ್ಷಿಸಿದೆವು. ಐದು ಮಂದಿಯಿಂದ ಸುಮಾರು ಏಳು ನೂರು ಮಿಶ್ರತಳಿ ಹಸುಗಳ ಪಾಲನೆ! ಶೇ.90ರಷ್ಟು ಯಾಂತ್ರೀಕೃತ ಆಧುನಿಕ ಹಟ್ಟಿ. ಅಲ್ಲಲ್ಲಿ ನೀರು ಚಿಮುಕಿಸುವ ಫ್ಯಾನ್‌ಗಳು. ನೀರು ಇಬ್ಬನಿಯಾಗಿ ಹೊರಬಂದು ದನಗಳನ್ನು ತೋಯಿಸುವ, ಸೆಕೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ.’
“ಎಲ್ಲಾ ದನಗಳಿಗೂ ಒಂದೊಂದು ಕೋಡ್ ನಂಬರ್. ಕಂಪ್ಯೂಟರ್‌ನಲ್ಲಿ ಈ ಸಂಖ್ಯೆಯನ್ನು ದಾಖಲಿಸಿದರೆ ಆಯಿತು, ದನಗಳ ಎಲ್ಲಾ ಜಾತಕ ಗೊತ್ತಾಗಿ ಬಿಡುತ್ತದೆ. ದನದ ಕಾಲಿಗೆ ಎಲೆಕ್ಟ್ರಾನಿಕ್ ಕಾರ್ಡ್ ಅಳವಡಿಸುತ್ತಾರೆ. ದನದ ಆಯಸ್ಸು, ಆರೋಗ್ಯ, ಆಹಾರ ಮತ್ತು ನೀರಿನ ಪ್ರಮಾಣ, ಎಷ್ಟು ಆಹಾರ ತಿಂದಿದೆ, ಅದು ಯಾವ ತಿಂಗಳಲ್ಲಿ ಬೆದೆಗೆ ಬರುತ್ತದೆ, ಎಷ್ಟು ಹಾಲು ನೀಡುತ್ತದೆ, ಅದರ ಅನಾರೋಗ್ಯ.. ಹೀಗೆ ಸಮಗ್ರ ವಿವರಗಳ ದಾಖಲೀಕರಣ. ಒಂದು ದಿವಸ ದನವೊಂದು ಎಷ್ಟು ಹೆಜ್ಜೆ ಯೂರುತ್ತದೆ ಎನ್ನುವುದನ್ನೂ ಕಂಪ್ಯೂಟರ್ ದಾಖಲಿಸುತ್ತದೆ. ಹೆಜ್ಜೆಯೂರುವುದು ಸಾಮಾನ್ಯ ಮಟ್ಟ ಮೀರಿದ್ದರೆ ಆ ದನವು ಬೆದೆಗೆ ಬಂದಿದೆ ಎಂದರ್ಥ!’ ಪ್ರವಾಸಗಳು ಕಟ್ಟಿಕೊಡುವಂತಹ ಇಂತಹ ಮಾಹಿತಿಗಳು ಜ್ಞಾನವಾಗಿ ನಮ್ಮೊಳಗೆ ಇಳಿಯಬೇಕು.
ಎಂ.ಜಿ.ಸತ್ಯನಾರಾಯಣರು ಇಸ್ರೇಲಿಗೆ ಪ್ರವಾಸ ಮಾಡುವ ಮುನ್ನ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿದ್ದರು. ವೀಕ್ಷಣೆ ಮತ್ತು ದಾಖಲಾತಿಯತ್ತ ಹೆಚ್ಚು ನಿಗಾ. ಆರು ದಿವಸದ ಪ್ರವಾಸದ ಒಂದೊಂದು ಕ್ಷಣವನ್ನು ಚಿತ್ರ ಸಹಿತ ವಾಟ್ಸಾಪ್ ಮೂಲಕ ಸಂಕ್ಷಿಪ್ತವಾಗಿ ರವಾನಿಸುತ್ತಿದ್ದರು. ಅವರ ಮತ್ತು ತಂಡದ ದೃಷ್ಟಿಯಲ್ಲಿ ಪ್ರವಾಸವಲ್ಲ. ಅದು ಕೃಷಿ ಕಲಿಕೆ. ವೀಕ್ಷಣೆ, ವಿವರಣೆ, ದಾಖಲಾತಿ ಇವೆಲ್ಲವೂ ಏಕಕಾಲಕ್ಕೆ ಆಗಬೇಕಾದ ಸವಾಲುಗಳನ್ನು ತಂಡವು ನಿಭಾಯಿಸಿತ್ತು. ಎಲ್ಲರ ಮನಃಸ್ಥಿತಿಗಳು ಹಸಿರಾಗಿದ್ದರಿಂದ ಒಬ್ಬನಲ್ಲಿ ಬಿಟ್ಟು ಹೋದ ಅಂಶಗಳು ಇನ್ನೊಬ್ಬರಿಂದ ಪಡೆದು ಒಟ್ಟೂ ಪ್ರವಾಸದ ಸಾರದ ಒಂದೊಂದು ಹನಿಯನ್ನೂ ಅನುಭವಿಸಲು ಸಾಧ್ಯವಾಗಿತ್ತು.
“ಇಸ್ರೇಲ್ ಸಮುದ್ರದಿಂದ ಶೇ.60, ಸರೋವರದಿಂದ ಶೇ.20 ಮತ್ತು ನೀರಿನ ಮರು ಬಳಕೆಯಿಂದ ಶೇ. 20 ನೀರನ್ನು ಪಡೆಯುತ್ತಿದೆ. ಶೇ.40ರಷ್ಟು ಬಾಳೆಹಣ್ಣು ಮತ್ತು ಬೆಣ್ಣೆ ಹಣ್ಣುಗಳನ್ನು ವಿಶ್ವಕ್ಕೆ ಒದಗಿಸುತ್ತದೆ. ದುಡಿಯುಲು ಹಾತೊರೆಯುವವರ ಸಂಖ್ಯೆ ಜಾಸ್ತಿಯಿದೆ. ಮೂಲ ಸೌಕರ್ಯಗಳನ್ನು ಸರಕಾರ ನೀಡಿದೆ. ಮಿಕ್ಕುಳಿದವುಗಳನ್ನು ದುಡಿದು ಅವರವರೇ ಮಾಡಿ ಕೊಳ್ಳಬೇಕು. ಏಳು ಸಂಶೋಧನಾ ಕೇಂದ್ರಗಳಿವೆ. ದೊಡ್ಡ ಬೀಜ ಸಂರಕ್ಷಣಾ ತಿಜೋರಿಯಿದೆ. ಕೃಷಿಕರು ಮತ್ತು ವಿಜ್ಞಾನಿಗಳ ಸಂಬಂಧ ನಿಕಟವಾಗಿದೆ. “ಲ್ಯಾಬ್ ಟು ಲ್ಯಾಂಡ್’ ಎನ್ನುವುದಕ್ಕಿಂತ “ಲ್ಯಾಂಡ್ ಟು ಲ್ಯಾಬ್’ ಎನ್ನುವುದು ಹೆಚ್ಚು ಸೂಕ್ತ ಮತ್ತು ಅದರ ಅನುಷ್ಠಾನವಾಗುತ್ತಿದೆ. ಕೃಷಿಯಲ್ಲಿ ಏನು ವ್ಯತ್ಯಾಸ ಬಂದರೂ ವಿಜ್ಞಾನಿಗಳು ತಕ್ಷಣ ಪ್ರವೃತ್ತರಾಗುತ್ತಾರೆ.’
ಸತ್ಯನಾರಾಯಣರು ಒಂದು ಕುತೂಹಲಕರ ವಿಚಾರ ಹೇಳಿದರು “ಗೂಬೆಗಳು ಖರ್ಜೂರ ಕೃಷಿಯನ್ನು ಸಂರಕ್ಷಿಸುತ್ತವೆ!’ ಹೇಗೆಂದರೆ, ಖರ್ಜೂರ ದೊಡ್ಡ ಆರ್ಥಿಕ ಬೆಳೆ. ಅದಕ್ಕೆ ಇಲಿ,ಹೆಗ್ಗಣಗಳ ಬಾಧೆ ಅಧಿಕ. ಬುಡದಲ್ಲಿ ಕಳೆ ಬೆಳೆದರೆ ಉಪದ್ರ ಜಾಸ್ತಿ. ಅದಕ್ಕಾಗಿ ಕತ್ತೆಗಳನ್ನು ಸಾಕುತ್ತಾರೆ. ಅದು ಮೇಯುವುದರಿಂದ ಕಳೆ ನಾಶ. ಗೂಬೆಗಳಿಗೆ ಇಲಿ ಹೆಗ್ಗಣಗಳನ್ನು ಬೇಟೆ ಯಾಡುವುದು ಪ್ರಿಯ. ಹುಡುಕಿ ತಿನ್ನುತ್ತವೆ. ಗೂಬೆಗಳಿಗೆ ಮನೆ ಮಾಡಿಕೊಟ್ಟು ಸಾಕುತ್ತಾರೆ. ಹತ್ತು ಎಕ್ರೆಗೆ ಐದು ಗೂಬೆ ಮನೆಗಳು ಸಾಕಂತೆ. ನೈಸರ್ಗಿಕವಾಗಿ ಇಲಿ,ಹೆಗ್ಗಣಗಳನ್ನು ನಿಯಂತ್ರಣ ಮಾಡುವ ವಿಧಾನವಿದು. ಅಂತೆಯೇ ಪರಾಗ ಕ್ರಿಯೆಗೆ ಮತ್ತು ಕ್ರಿಮಿಗಳ ಹತೋಟಿಗೆ ಎಂಟು ವಿಧದ ಜೇನ್ನೊಣಗಳನ್ನು ಅಭಿವೃದ್ಧಿ ಪಡಿಸುತ್ತಾರೆ. ಒಂದು ಎಕರೆಗೆ ಎರಡು ಜೇನು ಪೆಟ್ಟಿಗೆಯಂತೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.
“ಬೆಳೆದ ಬಹುಪಾಲು ಉತ್ಪನ್ನ ರಫ್ತಾಗುವುದರಿಂದ ಪೀಡೆ ನಾಶಕಗಳ ಉಳಿಕೆಯ ಬಗೆಗೆ ಇಸ್ರೇಲಿ ಕೃಷಿಕರಿಗೆ, ಕೃಷಿ ಸಂಶೋಧಕರಿಗೆ ಹಾಗೂ ವಿಸ್ತರಣೆಯಲ್ಲಿ ತೊಡಗಿರುವವರಿಗೆ ಅದರ ಅರಿವು ಇದೆ. ಇಸ್ರೇಲಿನಿಂದ ರಫ್ತಾದ ಕೃಷಿ ಉತ್ಪನ್ನಗಳು ತಿರಸ್ಕೃತವಾಗುವುದು ತೀರಾ ವಿರಳ. ಸಹಕಾರ ಹಾಗೂ ಸಮುದಾಯ ಆಧಾರಿತ ಕೃಷಿಯು ಅವರ ಸಾಧನೆಗೆ ಪ್ರಮುಖ ಕಾರಣ’ ಎಂದು ಮೈಸೂರಿನ ಹರೀಶ್ ಬಿ.ಎಸ್. ವಿಶ್ಲೇಷಿಸಿದರೆ, ಕೃಷಿಕ ಗಜಾನನ ವಝೆಯವರು ಇಸ್ರೇಲಿನ ಕೃಷಿ-ವಿಜ್ಞಾನಿ ಸಂಬಂಧವನ್ನು ವಿವರಿಸುತ್ತಾರೆ “ನೀರಿನ ಅಲಭ್ಯತೆ ಮತ್ತು ಹೆಚ್ಚು ಫಲವತ್ತಲ್ಲದ ಭೂಮಿಯಲ್ಲಿ ಕೃಷಿ ಮಾಡಿ ಯುರೋಪು ದೇಶಗಳಿಗೆ ಗರಿಷ್ಠವಾಗಿ ಹಣ್ಣು, ತರಕಾರಿಗಳನ್ನು ಒದಗಿಸುವಷ್ಟು ಸಶಕ್ತರಾಗಿದ್ದಾರೆ. ನಮ್ಮಲ್ಲಿ ಉತ್ತಮವಾದ ಮಣ್ಣಿದೆ. ಸಮೃದ್ಧ ನೀರಿದೆ. ಫಲವತ್ತಾದ ಮಣ್ಣಿದೆ. ಉತ್ತಮ ವಾತಾವರಣವಿದೆ. ಅವರಂತೆ ನಮ್ಮಲ್ಲಿ ವ್ಯವಸ್ಥಿತ ಕೃಷಿ ಮ್ಯಾನೇಜ್‌ಮೆಂಟ್ ಇಲ್ಲ. ನಮ್ಮಲ್ಲಿ ವೈಜ್ಞಾನಿಕ ಸಂಶೋಧನೆ ಎನ್ನುವುದು ಕೃಷಿಕನಿಗೆ ತಿಳಿದೇ ಇಲ್ಲ! ಕೃಷಿ, ಕೃಷಿಕ ಮತ್ತು ಸಂಶೋಧನಾ ಕೇಂದ್ರಗಳ ಸಂಬಂಧ ಅಲ್ಲಿ ಚೆನ್ನಾಗಿದೆ.’
ನಮ್ಮಲ್ಲಿ ಸರಕಾರಿ ಪ್ರಾಯೋಜಿತ ಕೃಷಿ ಪ್ರವಾಸಗಳಲ್ಲಿ ಮೋಜಿನ ಅಂಶಕ್ಕೆ ಮಹತ್ವ. ಪ್ರವಾಸದ ಉದ್ದೇಶವೇ ಮಸುಕಾಗುತ್ತವೆ. ತಂಡವನ್ನು ಯಾರು ಮುನ್ನಡೆಸುತ್ತಾರೋ ಅವರ ಮನಃಸ್ಥಿತಿಯಂತೆ ಪ್ರವಾಸ ಯಶವಾಗುತ್ತದೆ. ತಂಡ ದಲ್ಲಿದ್ದವರಿಗೆ ನೋಡಬೇ ಕೆಂಬ, ಕಲಿಯಬೇಕೆಂಬ ದಾಹದ ಶಮನವು ಮಾರ್ಗದರ್ಶಕರ ಮತಿಯ ಮಸೆತ ಹೇಗಿದೆ ಎನ್ನುವುದರ ಮೇಲೆ ಅವಲಂಬಿಸಿದೆ.
ಆದರೆ ಖಾಸಗಿಯಾಗಿ ಸರಕಾರದ ಅನುದಾನವಿಲ್ಲದೆ, ಸರಕಾರದ ಹಂಗಿಲ್ಲದೆ ಕೃಷಿಕರೇ ಇಸ್ರೇಲ್ ದೇಶಕ್ಕೆ ಕೃಷಿ ಪ್ರವಾಸ ಮಾಡಿರುವುದು ಶ್ಲಾಘ. ಒಂದೊಂದು ಅಂಶಗಳೂ ಕೂಡಾ ಕೃಷಿ ಮತ್ತು ಕೃಷಿಕನ ಕಣ್ಣಿನಿಂದ ನೋಡಿರುವುದರಿಂದ ಕೃಷಿಯ ಸೂಕ್ಷ್ಮಗಳ ಕಲಿಕೆ ಸಾಧ್ಯವಾಗಿದೆ. ಪ್ರವಾಸ ಮುಗಿಸಿ ಊರಿಗೆ ಮರಳಿದ ತಂಡವು ಅಲ್ಲಿನ ಕೃಷಿ ಜ್ಞಾನ ವಿಸ್ತಾರದ ಉಪಾಧಿಯಾಗಿ ಬದಲಾಗಿದೆ. ಕೃಷಿ ಕ್ರಮಗಳಲ್ಲಿ ಹೊಸ ವಿನ್ಯಾಸದ ಅಳವಡಿಕೆಗಳಿಗೆ ಯೋಚನೆಗಳು ಶುರುವಾಗಿವೆ.
ನಾ. ಕಾರಂತ ಪೆರಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ದೆಹಲಿಯ ನೇಲ್ ಆರ್ಟಿಸ್ಟ್ ನೇಣಿಗೆ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.