“ಮಿಮಿಕ್ರಿ ಬಿಡಿ; ಮುಖ್ಯಮಂತ್ರಿ ಸ್ಥಾನದ ಘನತೆ ಉಳಿಸಿ’
Team Udayavani, Jan 11, 2018, 4:49 PM IST
ಮೈಸೂರು: ನವ ಕರ್ನಾಟಕ ನಿರ್ಮಾಣದ ಹೆಸರಿನಲ್ಲಿ ಸರ್ಕಾರಿ ವೆಚ್ಚದಲ್ಲಿ ಚುನಾವಣಾ ಯಾತ್ರೆ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರದ ನಾಲ್ಕೂ ಮುಕ್ಕಾಲು ವರ್ಷದ ಸಾಧನೆ ಏನು ಎಂದು ಮಾಜಿ ಸಂಸದ ಎಚ್. ವಿಶ್ವನಾಥ್ ಪ್ರಶ್ನಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಮಾಧ್ಯಮ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂತು ಆ ಬಗ್ಗೆ ಸರ್ಕಾರದ ನಿಲುವೇನು? ಮಹದಾಯಿ ವಿಚಾರ ಏನಾಯಿತು? ರೈತರ ಆತ್ಮಹತ್ಯೆ ವಿಚಾರ ಏನಾಯಿತು? ದಿನಕ್ಕೊಬ್ಬ ವಿದ್ಯಾರ್ಥಿ ಖನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇವುಗಳಿಗೆಲ್ಲಾ ನಿಮ್ಮ ಉತ್ತರ ಏನು, ದಲಿತ ಮುಖ್ಯಮಂತ್ರಿ ವಿಚಾರ ಏನಾಯಿತು? ಮುಖ್ಯವಾಗಿ ನಿಮ್ಮ ರಾಜ್ಯಪ್ರವಾಸದ ಉದ್ದೇಶ ಏನು ಎಂದು ವಾಗ್ಧಾಳಿ ನಡೆಸಿದರು.
4 ವರ್ಷದ ನಂತರ ನಿದ್ದೆಯಿಂದ ಎಚ್ಚೆತ್ತು ರಾಜ್ಯ ಸುತ್ತುತ್ತಾ ಬಿಜೆಪಿಯವರ ಭಾಷೆಯಲ್ಲೇ ಮಾತನಾಡುತ್ತಿದ್ದೀರಿ, ರಾಜ್ಯದ ಮುಖ್ಯಮಂತ್ರಿಯಾದವರು ವೇದಿಕೆಯಲ್ಲಿ ನಿಂತು ಮಿಮಿಕ್ರಿ ಮಾಡುವುದಲ್ಲ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.
13ನೇ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದೀರಿ, ತೆರಿಗೆ ಸಂಗ್ರಹಣೆಯಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ? ಎಷ್ಟು ಸಾಲ ಮಾಡಿದ್ದೀರಿ? ತೆರಿಗೆ ಹಣದ ಶೇ.18 ಮಾತ್ರ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗುತ್ತಿದೆ. ಇನ್ನುಳಿದ ಶೇ.82
ಹಣ ದುಂದುವೆಚ್ಚ ಆಗುತ್ತಿದೆ ಎಂದು ಹರಿಹಾಯ್ದರು.
ನೀರಾವರಿ ಇಲಾಖೆಯಲ್ಲಿ ಇರುವ ಕಾಲುವೆಗಳಿಗೆ ಕಾಂಕ್ರೀಟ್ ಹಾಕಿಸಿ ಕಿಕ್ ಬ್ಯಾಕ್ ಪಡೆಯಲಾಗುತ್ತಿದೆ. ನವ ಕರ್ನಾಟಕ ನಿರ್ಮಾಣ ಕೇವಲ ಪತ್ರಿಕೆಗಳಲ್ಲಷ್ಟೇ ಆಗುತ್ತಿದೆ. ಜಾಹೀ ರಾತಿಗೆ 1300 ಕೋಟಿ ಖರ್ಚು ಮಾಡಿರುವ ನಿಮ್ಮದು ಪ್ರಚಾರದ ಸರ್ಕಾರ ಎಂದು ಲೇವಡಿ ಮಾಡಿದರು.
ಕೋಮುಗಲಭೆ ವಿಚಾರ ಮರೆ ಮಾಚಲು
ಹೇಳಿಕೆ: ಆರೆಸ್ಸೆಸ್, ಬಿಜೆಪಿ, ಭಜರಂಗದಳದವರು ಉಗ್ರಗಾಮಿಗಳು ಎಂಬ ಪದವನ್ನು ಮುಖ್ಯಮಂತ್ರಿ ಯಾದವರು ಬಳಸಬಾರದಿತ್ತು. ಮಂಗಳೂರಿನಲ್ಲಿ ನಡೆದಿರುವ ಕೋಮುಗಲಭೆ ವಿಚಾರವನ್ನು ಮರೆಮಾಚಲು ಈ ರೀತಿಯ ಹೇಳಿಕೆ ನೀಡಬೇಡಿ. ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ಎದುರಿಸುವ ಬದಲು ಎರಡೂ ರಾಷ್ಟ್ರೀಯ ಪಕ್ಷಗಳು ಕೋಮುಗಲಭೆಗೆ ಪ್ರಚೋದನೆ ನೀಡುತ್ತಿವೆ ಎಂದು ದೂರಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಮುಖಂಡರಾದ ಎ.ಎಸ್. ಚನ್ನಬಸಪ್ಪ, ಸೋಮಸುಂದರ ಇದ್ದರು.
ಸಿಎಂ ಸಿದ್ದರಾಮ್ಯ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ವಿಶ್ವಾನಾಥ್ ದೂರು
ಮೈಸೂರು: ನವ ಕರ್ನಾಟಕ ನಿರ್ಮಾಣ ಯಾತ್ರೆ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಖರ್ಚಿನಲ್ಲಿ ಚುನಾವಣಾ ಭಾಷಣ ಮಾಡುತ್ತಾ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಮಾಜಿ ಸಂಸದ ಎಚ್.ವಿಶ್ವನಾಥ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿರುವ ವಿಶ್ವನಾಥ್ ಅವರು, ತಮ್ಮ ಪರ್ಯಟನೆ, ಪ್ರಚಾರ, ಪೆಂಡಾಲು, ಭೂರಿ ಭೋಜನ, ಓಡಾಟ ಮುಂತಾಗಿ ಸರ್ಕಾರಿ ಖರ್ಚಿನಲ್ಲಿ ರಾಜಕೀಯದ ಚುನಾವಣಾ ಭಾಷಣ ಮಾಡಿ ಅಧಿಕಾರ ದುರುಪಯೋಗ ಮಾಡುತ್ತಿರುವುದಕ್ಕೆ ನಾಡಿನ ಜನತೆಯ ವಿರೋಧವಿದೆ ಎಂದಿದ್ದಾರೆ. ಇದೆಲ್ಲವನ್ನೂ ನೋಡಿ ಕೊಂಡು ಸುಮ್ಮನಿರುವ ಸರ್ಕಾರದ ಮುಖ್ಯಕಾರ್ಯದರ್ಶಿಗಳೇ, ತಕ್ಷಣ ಕಾರ್ಯೋನ್ಮುಖರಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳ ಮೇಲೆ ಕಾನೂನು ರೀತ್ಯಾ
ಕ್ರಮ ತೆಗೆದುಕೊಳ್ಳಿ. ನಿಮಗೆ ಆಗದಿದ್ದರೆ ಅಥವಾ ಹೆದರಿಕೆಯಿದ್ದರೆ ಭಾರತ ಮುಖ್ಯ ಚುನಾವಣಾಧಿಕಾರಿಗಳಿಗಾಗಲೀ ತಿಳಿಸಿ ಎಂದಿರುವ ಅವರು, ಜತೆಗೆ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದ ಪ್ರತಿಯನ್ನು ರಾಜ್ಯ ಮುಖ್ಯಚುನಾವಣಾಧಿಕಾರಿಗೂ ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.