ಫೆಡರರ್-ಬೆಡೆನ್ ಮೊದಲ ಮುಖಾಮುಖಿ
Team Udayavani, Jan 12, 2018, 9:32 AM IST
ಮೆಲ್ಬರ್ನ್: ಸ್ಲೊವೇನಿಯಾದ ಅಲ್ಜಾಜ್ ಬೆಡೆನ್ ಅವರನ್ನು ಎದುರಿಸುವ ಮೂಲಕ ರೋಜರ್ ಫೆಡರರ್ ತಮ್ಮ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಆರಂಭಿಸಲಿದ್ದಾರೆ. ಗುರುವಾರ ಆಸ್ಟ್ರೇಲಿಯನ್ ಓಪನ್ ಡ್ರಾ ಬಳಿಕ ಆಟಗಾರರ ಮುಖಾ ಮುಖಿಯನ್ನು ನಿರ್ಧರಿಸಲಾಯಿತು.
36ರ ಹರೆಯದ ಫೆಡರರ್ 20ನೇ ಗ್ರ್ಯಾನ್‌ಸ್ಲಾಮ್ ಜತೆಗೆ 6ನೇ ಆಸ್ಟ್ರೇಲಿಯನ್ ಓಪನ್ ಮೇಲೆ ಕಣ್ಣಿಟ್ಟಿದ್ದು, ಇವರ ಮೊದಲ ಸುತ್ತಿನ ಎದುರಾಳಿ ಬೆಡೆನ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 51ನೇ ಸ್ಥಾನದಲ್ಲಿದ್ದಾರೆ. ಫೆಡರರ್‌ಗೆ 4ನೇ ಸುತ್ತಿನಲ್ಲಿ ಕೆನಡಾದ ಬಿಗ್ ಸರ್ವಿಂಗ್ ಟೆನಿಸಿಗ ಮಿಲೋಸ್ ರಾನಿಕ್ ಎದುರಾಗುವ ಸಂಭವವಿದೆ.
ವಿಶ್ವದ ನಂಬರ್ ವನ್ ಆಟಗಾರ ರಫೆಲ್ ನಡಾಲ್ 83ನೇ ರ್‍ಯಾಂಕಿಂಗಿನ ಡೊಮಿನಿಕ್ ರಿಪಬ್ಲಿಕ್‌ನ ವಿಕ್ಟರ್ ಎಸ್ಟೆರ್ಲ ಬರ್ಗೋಸ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್‌ಗೆ ಕ್ರೊವೇಶಿಯಾದ ಮರಿನ್ ಸಿಲಿಕ್ ಎದುರಾಗಬಹುದು.
ಜೊಕೋವಿಕ್ ವರ್ಸಸ್ ಯಂಗ್
6 ಸಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿರುವ ನೊವಾಕ್ ಜೊಕೋವಿಕ್ ಅಮೆ ರಿಕದ ಡೊನಾಲ್ಡ್ ಯಂಗ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸುವರು. ದ್ವಿತೀಯ ಸುತ್ತಿನಲ್ಲಿ ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್ ಜತೆ ಸೆಣಸಾಡುವುದು ಬಹುತೇಕ ಖಚಿತ.
ವಿಂಬಲ್ಡನ್ ಬಳಿಕ ಇದೇ ಮೊದಲ ಸಲ ದೊಡ್ಡ ಕೂಟದಲ್ಲಿ ಆಡುತ್ತಿರುವ ಮಾಜಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕ ಅವರು ಮೊದಲ ಸುತ್ತಿನಲ್ಲಿ ಲಿಥುವಾನಿಯಾದ ರಿಚರ್ಡ್ಸ್ ಬೆರಂಕಿಸ್ ವಿರುದ್ಧ ಸೆಣಸುವರು. ತವರಿನ ಆಶಾಕಿರಣ ನಿಕ್ ಕಿರ್ಗಿಯೋಸ್ ಬ್ರಝಿಲ್‌ನ 100ನೇ ರ್‍ಯಾಂಕಿಂಗ್ ಟೆನಿಸಿಗ ರೊಜೇರಿಯೊ ಡುಟ್ರ ಸಿಲ್ವ ವಿರುದ್ಧ ಆಡಿ ಅಭಿಯಾನ ಆರಂಭಿಸುವರು.
ಶರಪೋವಾ-ತಜಾನಾ
ವನಿತಾ ಸಿಂಗಲ್ಸ್‌ನಲ್ಲಿ “ದಶಕದ ಹಿಂದಿನ ಚಾಂಪಿಯನ್’ ಮರಿಯಾ ಶರಪೋವಾ ಮೊದಲ ಸುತ್ತಿನಲ್ಲಿ ಜರ್ಮನಿಯ ತಜಾನಾ ಮರಿಯಾ ವಿರುದ್ಧ ಆಡುವರು. ಅಗ್ರ ಶ್ರೇಯಾಂಕದ ಸಿಮೋನಾ ಹಾಲೆಪ್ ತವರಿನ ವೈಲ್ಡ್‌ಕಾರ್ಡ್ ಆಟಗಾರ್ತಿ ಡೆಸ್ಟಾನಿ ಐವಾ ವಿರುದ್ಧ, ದ್ವಿತೀಯ ಶ್ರೇಯಾಂಕದ ಕ್ಯಾರೋಲಿನ್ ವೋಜ್ನಿಯಾಕಿ ರೊಮೇನಿಯಾದ ಮೈಕೆಲಾ ಬುಜರ್ನೆಸ್ಕಾ ವಿರುದ್ಧ, ಗಾರ್ಬಿನ್ ಮುಗುರುಜಾ ಫ್ರಾನ್ಸ್‌ನ ಜೆಸ್ಸಿಕಾ ಪೊಂಶೆಟ್ ವಿರುದ್ಧ ಕಣ ಕ್ಕಿಳಿದು ಅಭಿಯಾನ ಆರಂಭಿಸಲಿದ್ದಾರೆ.
ಬ್ರಿಟನ್ನಿನ ನಂ.1 ಆಟಗಾರ್ತಿ ಜೊಹಾನ್ನಾ ಕೊಂಟಾ ಅವರ ಪ್ರಥಮ ಸುತ್ತಿನ ಎದುರಾಳಿ ಅಮೆರಿಕದ ಮ್ಯಾಡಿಸನ್ ಬ್ರಿಂಗಲ್. ಆ್ಯಂಡಿ ಮರ್ರೆ ಹಿಂದೆ ಸರಿದುದರಿಂದ ಕೊಂಟಾ ಈಗ ಬ್ರಿಟನ್ನಿನ “ದೊಡ್ಡ ಭರವಸೆ’ಯಾಗಿ ಉಳಿದಿದ್ದಾರೆ. ಕಳೆದ ವರ್ಷದ ಫೈನಲ್‌ನಲ್ಲಿ ಸೋದರಿ ಸೆರೆನಾಗೆ ಶರಣಾಗಿದ್ದ ವೀನಸ್ ವಿಲಿಯಮ್ಸ್ ಸ್ವಿಸ್ ಆಟಗಾರ್ತಿ ಬೆಲಿಂಡಾ ಬೆನ್ಸಿಕ್ ವಿರುದ್ಧ ಮೊದಲ ಪಂದ್ಯ ಆಡುವರು. ಯುಎಸ್ ಓಪನ್ ಚಾಂಪಿಯನ್ ಸ್ಟೀಫನ್ ಸ್ಲೋನ್ ಕೂಡ ಇದೇ ವಿಭಾಗದಲ್ಲಿದ್ದಾರೆ. ಆಸ್ಟ್ರೇಲಿಯದ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ ಬೆಲರೂಸ್‌ನ ಅರಿನಾ ಸಬಲೆಂಕಾ ವಿರುದ್ಧ, ತವರಿನ ಮತ್ತೋರ್ವ ಆಟಗಾರ್ತಿ ಡರಿಯಾ ಗವ್ರಿಲೋವಾ ತಮ್ಮದೇ ದೇಶದ ಜೇಮಿ ಫೌರ್ಲಿಸ್ ಎದುರು ಹೋರಾಟ ಆರಂಭಿಸಲಿದ್ದಾರೆ.
ನಡಾಲ್, ಹಾಲೆಪ್‌ಗೆ ಅಗ್ರ ಶ್ರೇಯಾಂಕ
ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್‌ವ ಟೆನಿಸ್ ಪಂದ್ಯಾವಳಿಯ ಶ್ರೇಯಾಂಕ ವನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಪುರುಷರ ಸಿಂಗಲ್ಸ್‌ನಲ್ಲಿ ರಫೆಲ್ ನಡಾಲ್ ಮತ್ತು ಹಾಲಿ ಚಾಂಪಿಯನ್ ರೋಜರ್ ಫೆಡರರ್; ವನಿತಾ ಸಿಂಗಲ್ಸ್‌ನಲ್ಲಿ ಸಿಮೋನಾ ಹಾಲೆಪ್ ಹಾಗೂ ಕ್ಯಾರೋಲಿನ್ ವೋಜ್ನಿಯಾಕಿ ಅವರಿಗೆ ಮೊದಲೆರಡು ಶ್ರೇಯಾಂಕ ಲಭಿಸಿದೆ.
ಟೆನಿಸಿಗರ ವಿಶ್ವ ರ್‍ಯಾಂಕಿಂಗ್‌ಗೆ ಅನುಗುಣ
ವಾಗಿ ಆಸ್ಟ್ರೇಲಿಯನ್ ಓಪನ್ ಶ್ರೇಯಾಂಕ ನೀಡಲಾಗಿದೆ. ಹೀಗಾಗಿ ಫೆಡರರ್ ಚಾಂಪಿಯನ್ ಆದರೂ ನಡಾಲ್‌ಗಿಂತ ಹಿಂದುಳಿಯಬೇಕಾಯಿತು. ಫೆಡರರ್ ಇಲ್ಲಿ 20ನೇ ಗ್ರ್ಯಾನ್‌ಸ್ಲಾಮ್ ಕಿರೀಟವನ್ನು ಎದುರು ನೋಡುತ್ತಿದ್ದಾರೆ.
ಆ್ಯಂಡಿ ಮರ್ರೆ, ಕೀ ನಿಶಿಕೋರಿ, ಸೆರೆನಾ ಮೊದ ಲಾದ ಸ್ಟಾರ್ ಆಟಗಾರರು ಈ ಕೂಟದಿಂದ ಹಿಂದೆ ಸರಿದಿದುದರಿಂದ ಕೆಲವು ಯುವ ಆಟಗಾರರಿಗೆ ಶ್ರೇಯಾಂಕದ ಯಾದಿಯಲ್ಲಿ ಸ್ಥಾನ ಲಭಿಸಿತು.
ಜೊಕೋವಿಕ್ ನಂ. 14
ಮಣಿಗಂಟಿನ ನೋವಿನಿಂದ ವಿಶ್ರಾಂತಿಯಲ್ಲಿದ್ದ ಸ್ಟಾರ್ ಆಟಗಾರ, ಸರ್ಬಿಯಾದ ನೊವಾಕ್ ಜೊಕೋವಿಕ್ ಬುಧವಾರವಷ್ಟೇ ಟೆನಿಸ್ ಅಂಗಳಕ್ಕೆ ಮರಳಿದ ಕಾರಣ ಅವರ ಶ್ರೇಯಾಂಕ 14ಕ್ಕೆ ಕುಸಿದಿದೆ. 12 ಗ್ರ್ಯಾನ್‌ಸ್ಲಾಮ್ ವಿಜೇತ ಜೊಕೋವಿಕ್ “ಕೂಯಾಂಗ್ ಕ್ಲಾಸಿಕ್ ಟೆನಿಸ್’ ಕೂಟದ ಸಿಂಗಲ್ಸ್ ನಲ್ಲಿ ವಿಶ್ವದ ನಂ.5 ಆಟಗಾರ ಡೊಮಿನಿಕ್ ಥೀಮ್ ಅವರನ್ನು 6-1, 6-4ರಿಂದ ಮಣಿಸಿದರು. ವಿಂಬಲ್ಡನ್ ಕ್ವಾರ್ಟರ್ ಫೈನಲ್‌ನಲ್ಲಿ ಥಾಮಸ್ ಬೆರ್ಡಿಶ್‌ಗೆ ಶರಣಾದ ಬಳಿಕ ಜೊಕೋವಿಕ್ ಆಡಿದ ಮೊದಲ ಪಂದ್ಯ ಇದಾಗಿತ್ತು. ಥೀಮ್ ಆಸ್ಟ್ರೇಲಿಯನ್ ಓಪನ್‌ನಲ್ಲಿ 5ನೇ ಶ್ರೇಯಾಂಕ ಹೊಂದಿದ್ದಾರೆ.
ಪುರುಷರ ಸಿಂಗಲ್ಸ್ ಟಾಪ್-10 ಶ್ರೇಯಾಂಕ
1. ರಫೆಲ್ ನಡಾಲ್, 2. ರೋಜರ್ ಫೆಡರರ್,
3. ಗ್ರಿಗರ್ ಡಿಮಿಟ್ರೋವ್, 4. ಅಲೆಕ್ಸಾಂಡರ್ ಜ್ವೆರೇವ್, 5. ಡೊಮಿನಿಕ್ ಥೀಮ್, 6. ಮರಿನ್ ಸಿಲಿಕ್, 7. ಡೇವಿಡ್ ಗೊಫಿನ್, 8. ಜಾಕ್ ಸಾಕ್, 9. ಸ್ಟಾನಿಸ್ಲಾಸ್ ವಾವ್ರಿಂಕ, 10. ಪಾಬ್ಲೊ ಕರೆನೊ ಬುಸ್ಟ.
ವನಿತಾ ಸಿಂಗಲ್ಸ್ ಟಾಪ್-10 ಶ್ರೇಯಾಂಕ
1. ಸಿಮೋನಾ ಹಾಲೆಪ್, 2. ಕ್ಯಾರೋಲಿನ್ ವೋಜ್ನಿಯಾಕಿ, 3. ಗಾರ್ಬಿನ್ ಮುಗುರುಜಾ, 4. ಎಲಿನಾ ಸ್ವಿಟೋಲಿನಾ, 5. ವೀನಸ್ ವಿಲಿಯಮ್ಸ್, 6. ಕ್ಯಾರೋಲಿನಾ ಪ್ಲಿಸ್ಕೋವಾ, 7. ಜೆಲೆನಾ ಒಸ್ಟಾಪೆಂಕೊ, 8. ಕ್ಯಾರೋಲಿನ್ ಗಾರ್ಸಿಯಾ, 9. ಜೊಹಾನ್ನಾ ಕೊಂಟಾ, 10. ಕೊಕೊ ವಾಂಡೆವೇಘ….
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.