25ರಂದು ಕೆಎಸ್ಸಾರ್ಟಿಸಿ ನೌಕರರ ಧರಣಿ
Team Udayavani, Jan 12, 2018, 11:41 AM IST
ಬೆಂಗಳೂರು: ಸಾರಿಗೆ ನೌಕರರ ಬಾಕಿ ವೇತನ ನೀಡುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ನೌಕರರ ಒಕ್ಕೂಟ ಜ.25ರಂದು ಎಲ್ಲ ವಿಭಾಗಗಳ ಕಚೇರಿಗಳ ಎದುರು ಧರಣಿ ನಡೆಸಲು ಮುಂದಾಗಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಒಕ್ಕೂಟದ ಜಂಟಿ ಕಾರ್ಯದರ್ಶಿ ಎಸ್.ನಾಗರಾಜ್, ಒಂದು ವೇಳೆ ಸರ್ಕಾರ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸದಿದ್ದರೆ ಜ.30ರಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಸಾರಿಗೆ ನೌಕರರಿಗೆ ನೀಡಬೇಕಾದ ಬಾಕಿ ವೇತನ ಮತ್ತು ಗ್ರಾಚ್ಯುಟಿ ಹಣವನ್ನು ಇನ್ನೂ ನೀಡಿಲ್ಲ. ಕಾರ್ಮಿಕರ ವೇತನದಿಂದ ಹಿಡಿದುಕೊಂಡಿರುವ ಜೀವ ವಿಮಾ ಸಂಸ್ಥೆಯ ಪ್ರೀಮಿಯಂ ಮತ್ತು ಸಾರಿಗೆ ನೌಕರರ ಸಹಕಾರಿ ಸಂಘಗಳ ಸಾಲ ಮರುಪಾವತಿ ಮಾಡಿಲ್ಲ.
ಮೆಡಿಕಲ್ ಬಿಲ್ ಮತ್ತು ಭವಿಷ್ಯನಿಧಿಯ ಹಣವನ್ನೂ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ದೂರಿದ ಅವರು, ಸರ್ಕಾರ ಈ ಹಿಂದೆ ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ವಾಗ್ಧಾನ ಮಾಡಿತ್ತು. ಆದರೆ ಅದನ್ನು ಈಗ ಮರೆತಿದೆ. ನೂತನ ಸಾರಿಗೆ ಸಚಿವರು ನಮ್ಮ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ಹೀಗಾಗಿ ಎಲ್ಲ ವಿಭಾಗೀಯ ಕಚೇರಿಗಳ ಎದುರು ಧರಣಿ ನಡೆಸಲು ಮುಂದಾಗಿರುವುದಾಗಿ ತಿಳಿಸಿದರು.
ಅಕ್ರಮ ವರ್ಗಾವಣೆ ರದ್ದಾಗಲಿ: ಎಐಟಿಯುಸಿ ಕಾರ್ಯಕರ್ತರ ಅಕ್ರಮ ವರ್ಗಾವಣೆ ಕೂಡಲೇ ರದ್ದಾಗಬೇಕು. ನಾಲ್ಕು ಸಾರಿಗೆ ನಿಗಮಗಳನ್ನು ಒಂದೇ ನಿಗಮವನ್ನಾಗಿ ವಿಲೀನಗೊಳಿಸಬೇಕು, ಮಂಗಳೂರು ಹಾಗೂ ಪೂತ್ತೂರಿನಿಂದ ವರ್ಗಾವಣೆಗೊಂಡಿರುವ ಎಲ್ಲ ನೌಕರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಆಗ್ರಹಿಸಿದರು.
2016ರ ಜುಲೈನಲ್ಲಿ ನಡೆದ ಮಷ್ಕರದ ವೇಳೆ ವಜಾ ಮಾಡಲಾಗಿದ್ದ ಕಾರ್ಯಕರ್ತರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ಈ ಹಿಂದಿನ ಸಾರಿಗೆ ಸಚಿವರು ಭರವಸೆ ನೀಡಿದ್ದರು. ಆದರೆ ಅದು ಈಡೇರಿಲ್ಲ ಎಂದು ದೂರಿದರು.
ಸಾರಿಗೆ ನಿಗಮಗಳ ಆಡಳಿತ ವರ್ಗ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದೆ. ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೂ ಬೋನಸ್ ಪಾವತಿಸಿಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ಮುಂದಾಗದ ಕಾರಣ ಧರಣಿ ಅನಿವಾರ್ಯ.
-ಎಚ್.ಚಂದ್ರೇಗೌಡ, ಒಕ್ಕೂಟದ ಖಜಾಂಚಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.