ಶತ ಕೋಟಿಗಾಗಿ ಉದ್ಯಮಿ ಅಪಹರಿಸಿದ ನಾಲ್ವರ ಸೆರೆ
Team Udayavani, Jan 14, 2018, 11:42 AM IST
ಬೆಂಗಳೂರು: ನೂರು ಕೋಟಿ ಹಣಕ್ಕಾಗಿ ಸಿನಿಮೀಯ ರೀತಿಯಲ್ಲಿ ಉದ್ಯಮಿಯೊಬ್ಬರನ್ನು ಅಪಹರಣ ಮಾಡಿದ್ದ ಜೆಡಿಎಸ್ ಮಹಿಳಾ ಘಟಕದಿಂದ ವಜಾಗೊಂಡಿರುವ ಅಧ್ಯಕ್ಷೆ ಸೇರಿ ನಾಲ್ವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಾಗಲೂರಿನ ಶ್ರೀನಿವಾಸ್ ಗಾರ್ಡ್‌ನ್ ನಿವಾಸಿ ಅರ್ಷಿಯಾ (32), ರೇಣುಕಾ ಪ್ರಸಾದ್ (41), ಎಚ್‌ಬಿಆರ್ ಲೇಔಟ್‌ನ ಕಾಂತ್‌ರಾಜ್‌ಗೌಡ (30) ಹಾಗೂ ಹೊರಮಾವು ನಿವಾಸಿ, ಕಾರು ಚಾಲಕ ಪ್ರದೀಪ್ (27) ಬಂಧಿತ ಆರೋಪಿಗಳು. ಇವರು ಅಪಹರಿಸಿದ್ದ ಯಲಹಂಕದ ಉದ್ಯಮಿ ಮಲ್ಲಿಕಾರ್ಜುನಪ್ಪ (72) ಎಂಬುವರನ್ನು ರಕ್ಷಿಸಲಾಗಿದೆ.
ಇವರಿಂದ 1.04 ಕೋಟಿ ರೂ. ನಗದು, 3 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಪಿಸ್ತೂಲ್ ಹಾಗೂ 6 ಜೀವಂತ ಗುಂಡುಗಳು, ಎರಡು ಕಾರುಗಳು ಸೇರಿದಂತೆ ಒಟ್ಟು 1.32 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಕಾಂತರಾಜ್, ರೇಣುಕಾಪ್ರಸಾದ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಹಣಕ್ಕಾಗಿ ಅರ್ಷಿಯಾ ಜತೆ ಸೇರಿಕೊಂಡು ಸಂಚು ರೂಪಿಸಿ ಕೃತ್ಯವೆಸಗಿದ್ದಾರೆ.
ಅಪಹರಣ ಹೇಗೆ?: ಉದ್ಯಮಿ ಮಲ್ಲಿಕಾರ್ಜುನಪ್ಪ ಸಿಲ್ಕ್ ಹಾಗೂ ಲೇವಾದೇವಿ ವ್ಯವಹಾರ ನಡೆಸುತ್ತಿದ್ದು ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನಪ್ಪ ಬಗ್ಗೆ ತಿಳಿದಿದ್ದ ಅರ್ಷಿಯಾ, ಕಾಂತ್‌ರಾಜ್ ಮತ್ತು ರೇಣುಕಾಪ್ರಸಾದ್ ಜತೆ ಸೇರಿಕೊಂಡು ಅಪಹರಣದ ಸಂಚು ರೂಪಿಸಿದ್ದರು.
ಅದರಂತೆ ಜ.11ರಂದು ಬೆಳಗ್ಗೆ 7.45ರ ಸುಮಾರಿಗೆ ವಾಯುವಿಹಾರ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಕೋಗಿಲು ಮುಖ್ಯರಸ್ತೆ ಮಾರ್ಗವಾಗಿ ಹೋಗುತ್ತಿದ್ದರು. ಇದೇ ವೇಳೆ ಕಾರಿನಲ್ಲಿ ಬಂದ ಕಾಂತ್‌ರಾಜ್ ಹಾಗೂ ಚಾಲಕ ಪ್ರದೀಪ್ ಅಡ್ಡಗಟ್ಟಿ ಮಲ್ಲಿಕಾರ್ಜುನಪ್ಪರನ್ನು ಅಪಹರಣ ಮಾಡಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿಕ್ಕಬಳ್ಳಾಪುರದ ಬಾಗೇಪಲ್ಲಿಯ ಗೋದಾಮಿಗೆ ಕರೆದೊಯ್ದರು.
ಈ ವೇಳೆ ಪಿಸ್ತೂಲ್‌ನಿಂದ ಹೆದರಿಸಿ ಮೈಮೇಲಿದ್ದ ಚಿನ್ನದ ಸರ, ಉಂಗುರ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡಿದ್ದರು. ನಂತರ ಮಲ್ಲಿಕಾರ್ಜುನಪ್ಪರ ಮೊಬೈಲ್ ಮೂಲಕವೇ ಪುತ್ರ ಡಾ. ರವಿಕುಮಾರ್‌ಗೆ ಕರೆ ಮಾಡಿ “ನಿಮ್ಮ ತಂದೆ ಅಪಹರಣ ಮಾಡಿದ್ದೇವೆ. 100 ಕೋಟಿ ರೂ. ಕೊಡಬೇಕು. ಇಲ್ಲವಾದರೆ ಕೊಲೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದರು.
ಇದರಿಂದ ಆತಂಕಗೊಂಡ ಪುತ್ರ ಡಾ. ರವಿಕುಮಾರ್ ಹೈದರಾಬಾದ್‌ನಿಂದ ಬಂದು 60 ಲಕ್ಷ ರೂ. ಹಣ ಹೊಂದಿಸಿ ತಡರಾತ್ರಿ 1 ಗಂಟೆ ಸುಮಾರಿಗೆ ಬಾಗೇಪಲ್ಲಿಯ ಪರೆಸಂದ್ರದ ಬಳಿಯ ಪೆಟ್ರೋಲ್ ಬಂಕ್ ಬಳಿ ಆರೋಪಿಗಳಿಗೆ ಕೊಟ್ಟು ತಂದೆಯನ್ನು ಸುರಕ್ಷಿತವಾಗಿ ಕರೆತಂದಿದ್ದರು. ಈ ಹಿನ್ನೆಲೆಯಲ್ಲಿ ಪುತ್ರ ರವಿಕುಮಾರ್ ಯಲಹಂಕ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಡಿಸಿಪಿ ಗಿರೀಶ್ ನೇತೃತ್ವದ ತಂಡ ಆರೋಪಿಗಳ ಕರೆ ಹಾಗೂ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಕೃತ್ಯಕ್ಕೆ ಬಳಿಸಿದ್ದ ಕಾರು ಪತ್ತೆಯಾಗಿತ್ತು. ಮೊದಲಿಗೆ ಕಾಂತ್‌ರಾಜ್‌ಗೆ ಸೇರಿದ್ದ ಶೆಡ್‌ನಲ್ಲಿ ಅಡಗಿದ್ದ ಕಾರು ಚಾಲಕ ಪ್ರದೀಪ್‌ನನ್ನು ಬಂಧಿಸಲಾಯಿತು. ಈತನ ಮಾಹಿತಿ ಮೇರೆಗೆ ಕಾಂತ್‌ರಾಜ್ ಹಾಗೂ ರೇಣುಕಾಪ್ರಸಾದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅರ್ಷಿಯಾಗಳ ಹೆಸರು ಬಾಯಿಬಿಟ್ಟಿದ್ದರು ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಉದ್ಯಮಿ ಮಲ್ಲಿಕಾರ್ಜುನಪ್ಪ ಅಪಹರಿಸಲು ಕಳೆದೊಂದು ತಿಂಗಳಿಂದ ಸಂಚು ನಡೆದಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಮಲ್ಲಿಕಾರ್ಜುನಪ್ಪ ಪುತ್ರ ರವಿಕುಮಾರ್ ಮೂಲಕ 60 ಲಕ್ಷ ಹಣ ಪಡೆದುಕೊಂಡಿದ್ದ ಮೂವರು ಆರೋಪಿಗಳು ತಲಾ 20 ಲಕ್ಷ ಹಂಚಿಕೊಂಡಿದ್ದರು. ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಕಾಂತ್‌ರಾಜ್ ಬಳಿಯಿದ್ದ 19 ಲಕ್ಷ ರೂ. ಒಂದು ಚಿನ್ನದ ಸರ, ಒಂದು ಕಾರು,
ರೇಣುಕಾಪ್ರಸಾದ್‌ನಿಂದ ಒಂದು ಪಿಸ್ತೂಲ್, 6 ಜೀವಂತ ಗುಂಡುಗಳು, ಚಿನ್ನದ ಉಂಗುರ, 20 ಲಕ್ಷ ರೂ. ಮತ್ತು ಅರ್ಷಿಯಾಳಿಂದ 20 ಲಕ್ಷ ರೂ. ಹಣ, ಒಂದು ಇನೋವಾ ಕಾರು, ಚಾಲಕ ಪ್ರದೀಪ್‌ನಿಂದ ಉಂಗುರ, ಒಂದು ಚಾಕು ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಲಾಗಿರುವ ಪಿಸ್ತೂಲ್ ರೇಣುಕಾ ಪ್ರಸಾದ್‌ಗೆ ಸೇರಿದ್ದಾಗಿದ್ದು, ಈ ಪಿಸ್ತೂಲ್‌ಗಳಿಗೆ ಪರವಾನಗಿ ಹೊಂದಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದರು.
ಚುನಾವಣೆ ಖರ್ಚಿಗಾಗಿ ಕಿಡ್ನಾಪ್?: ಅರ್ಷಿಯಾ, ರೇಣುಕಾಪ್ರಸಾದ್ ಹಾಗೂ ಕಾಂತ್‌ರಾಜ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು. ಚುನಾವಣೆ ವೆಚ್ಚಕ್ಕೆ ಹಣಹೊಂದಿಸಲು ಅಪಹರಣ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಇದೇ ವೇಳೆ ಮಲ್ಲಿಕಾರ್ಜುಪ್ಪನ ಜತೆ ಭಾರೀ ಆತ್ಮೀಯತೆ ಬೆಳೆಸಿಕೊಂಡಿದ್ದ ಅರ್ಷಿಯಾ ತನ್ನ ಸಹಚರರೊಂದಿಗೆ ಅಪಹರಣ ಮಾಡಿ 100 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.