ಸಸ್ಯಕಾಶಿಯಲ್ಲಿ ಕಳೆಗಟ್ಟಿದ ಸುಗ್ಗಿ ಸಂಭ್ರಮ
Team Udayavani, Jan 15, 2018, 11:32 AM IST
ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಭಾನುವಾರ ಅಪ್ಪಟ ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮ ಕಳೆಗಟ್ಟಿತ್ತು. ವಾರಾಂತ್ಯ ಕಳೆಯಲು ಲಾಲ್‌ಬಾಗ್‌ಗೆ ಆಗಮಿಸಿದ್ದ ಸಾವಿರಾರು ಮಂದಿ ರಾಜ್ಯದ ವಿವಿಧ ಭಾಗಗಳ ಸಂಕ್ರಾಂತಿ ಹಬ್ಬದ ಆಚರಣೆ ಮಾದರಿ, ಗಾಳಿಪಟ ಉತ್ಸವ, ಜಾನಪದ ನೃತ್ಯಗಳು, ಎತ್ತುಗಳ ಕಿಚ್ಚು ಹಾಯಿಸುವ ಸಂಪ್ರದಾಯಗಳನ್ನು ಕಣ್ತುಂಬಿಕೊಂಡರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ” ಸುಗ್ಗಿ- ಹುಗ್ಗಿ’ ಸಂಕ್ರಾಂತಿ ಆಚರಣೆ ಇದಕ್ಕೆ ಕಾರಣವಾಗಿತ್ತು.
ಹೂವು ಹಾಗೂ ಧಾನ್ಯಗಳಿಂದ ಸಿಂಗರಿಸಿದ್ದ ಎತ್ತಿನ ಬಂಡಿ ಸವಾರಿ ಮೂಲಕ ಕೃಷಿ ಸಚಿವ ಕೃಷ್ಣ ಬೈರೇಗೌಡ “ಸುಗ್ಗಿ-ಹುಗ್ಗಿ’ಗೆ ಚಾಲನೆ ನೀಡಿದರು. ಕರ್ನಾಟಕದ ವಿವಿಧ ಭಾಗಗಳಲ್ಲಿ ಬೆಳೆದ ಬೆಳೆಗಳ ರಾಶಿ ಪೂಜೆ ಮಾಡುವ ಮೂಲಕ ಸಚಿವೆ ಉಮಾಶ್ರೀ ಸಿರಿಧಾನ್ಯಗಳ ಸಂಕ್ರಾಂತಿಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಡೀ ದಿನ ಮಹಿಳಾ ತಮಟೆ ವಾದನ, ಯುವತಿಯರ ವೀರಗಾಸೆ ನೃತ್ಯ, ದೇವರ ಪಟ ಕುಣಿತ, ಡೊಳ್ಳು ಕುಣಿತ, ಕೊಡಗಿನ ಜಾನಪದ ಕಲಾ ಉತ್ತರಿ ಕೋಲಾಟ, ಉಮ್ಮತಾಟ್ ನೃತ್ಯ, ಕರಾವಳಿಯ ಕಲೆ ಕಂಗೀಲು ನೃತ್ಯ, ನಂದಿ ಧ್ವಜ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನ ಜನರ ಮನಸೂರೆಗೊಂಡಿತು. ಎತ್ತುಗಳ ಸಾಂಪ್ರದಾಯಿಕ “ಕಿಚ್ಚು ಹಾಯಿಸುವಿಕೆ’ಯನ್ನು ಸುಡುಬಿಸಿಲಿನಲ್ಲಿಯೂ ನೂರಾರು ಮಂದಿ ನೋಡಿ ಸಂತಸಪಟ್ಟರು. ವಿವಿಧ ಭಾಗಗಳಿಂದ ಕರೆತಂದು ಸಿಂಗಾರಗೊಳಿಸಿದ್ದ ಎತ್ತುಗಳ ಕಿಚ್ಚು ಹಾಯುವಿಕೆಗೆ ಜನರ ಚಪ್ಪಾಳೆ, ಹರ್ಷೋದ್ಘಾರಗಳು ಮತ್ತಷ್ಟು
ಹುರುಪು ತುಂಬುತ್ತಿತ್ತು.
ಸಿರಿಧಾನ್ಯಗಳ ಸಂಕ್ರಾಂತಿ ವಿಶೇಷ! : ಸಿರಿಧಾನ್ಯಗಳ ಸಂಕ್ರಾಂತಿ ಸಂಭ್ರಮದಲ್ಲಿ ಕರ್ನಾಟಕದ ಎಲ್ಲಾ ಭಾಗದ ಆಚರಣೆಯ ಮಾದರಿಗಳು ಕಂಡು ಬಂದವು. ಬಯಲು ಸೀಮೆಯ ಸಂಕ್ರಾಂತಿ ಆಚರಣೆಯಲ್ಲಿ ನೇಗಿಲು, ಶಾವಿಗೆ ಕಟೀಲು, ಮಂಕರಿ,ಕೊಂಗು (ಮೊರ) ಪೊರಕೆ, ಅಪ್ಪಟ ಬಯಲು ಸೀಮೆ ಹೆಸರುಗಳಿಂದಲೇ ಅವುಗಳ ಹೆಸರನ್ನು ಬರೆದಿಡಲಾಗಿತ್ತು. ನೂರಾರು ಮಂದಿ ವಿವಿಧ ಪ್ರಾಂತಗಳ ರಾಶಿಪೂಜೆ ನೋಡುತ್ತಾ, ಸಿಹಿತಿಂಡಿಗಳನ್ನು ಸವಿದರು.
ಸಿರಿಧಾನ್ಯಗಳ ಖರಿದಿ ಭರಾಟೆಯೂ ಜೋರಾಗಿತ್ತು.
ಬಗೆ ಬಗೆಯ ಗಾಳಿಪಟಗಳ ಚಿತ್ತಾರ!: ಲಾಲ್‌ಬಾಗ್ ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಮಕ್ಕಳೂ ಸೇರಿದಂತೆ ಎಲ್ಲ ವಯೋಮಾನದ ಜನರು ಪಾಲ್ಗೊಂಡು, ಉಚಿತವಾಗಿ ಬಾನಂಗಳದಲ್ಲಿ ಗಾಳಿಪಟ ಹಾರಿಸಿ ಸಂಭ್ರಮಿಸಿದರು.
ಭಾನುವಾರವೇ ಸಂಕ್ರಾಂತಿ ಸಡಗರ
ಬೆಂಗಳೂರು: ವೈವಿಧ್ಯಮಯ ಸಂಸ್ಕೃತಿ ರೂಢಿಸಿಕೊಂಡಿರುವ ರಾಜಧಾನಿಯಲ್ಲಿ ಸಂಕ್ರಾಂತಿ ಸೊಬಗು. ಸಂಕ್ರಮಣದ ವೇಳೆ ಹಳ್ಳಿಯ ಸೊಗಡ ನ್ನು ನೆನಪಿಸುವ ಕಾರ್ಯಕ್ರಮಗಳು, ಮನೆ ಆವರಣದ ಮುಂದೆ ಸಂಕ್ರಾಂತಿ ಶುಭಾಶಯದ ರಂಗೋಲಿಗಳು ರಾರಾಜಿಸಿದವು. ನಂದಿನಿ ಲೇಔಟ್‌ನ ಕೆಲವು ಬಡಾವಣೆಗಳಲ್ಲಿ ಭಾನುವಾರವೇ ಸಂಕ್ರಮಣವನ್ನು ಸಂಭ್ರಮದಿಂದ ಆಚರಿಸಿದರೆ, ಇನ್ನೂ ಕೆಲವು ಕಡೆಗಳಲ್ಲಿ ಸೋಮ ವಾರ ಸಂಕ್ರಮಣದ ಆಚರಣೆ ನಡೆಯಲಿದೆ. ಸಂಕ್ರಮಣದ ಹಿನ್ನಲೆಯಲ್ಲಿ ನಂದಿನಿ ಲೇಔಟ್‌ನ ಮಾರುತಿನಗರ ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ನಡೆದ ಗೋವುಗಳನ್ನು ಕಿಚ್ಚಾಯಿಸುವ ಕಾರ್ಯಕ್ರಮ ನೆರೆದವರಲ್ಲಿ ಖುಷಿ ಕೊಟ್ಟಿತು.
ಶ್ರೀಮಂತ ಗ್ರಾಮೀಣ ಸಂಸ್ಕೃತಿಯನ್ನು ಮತ್ತೆ ನೆನೆಯುವ ಸಲುವಾಗಿ ನಂದಿನಿ ಲೇಔಟ್‌ನ ನವರಾತಿ ಉತ್ಸವ ಹಾಗೂ ನಂದಿನಿ ಉತ್ಸವ ಸಮಿತಿ ಸಂಕ್ರಮಣದ ವೇಳೆ ಪ್ರತಿ ವರ್ಷ ಗೋವುಗಳನ್ನು ಕಿಚ್ಚಾಯಿಸುವ ಕಾರ್ಯಕ್ರಮವನ್ನು ಆಯೋಜಿ ಸುತ್ತದೆ. ಸುಮಾರು 7 ವರ್ಷಗಳಿಂದ ಈ ಸಮಾರಂಭವನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಹಲವರ ಪ್ರಶಸಂಸೆಗೆ ಪಾತ್ರವಾಗಿದೆ. ಭಾನುವಾರ ಸಂಜೆ ಮಾರುತಿ ನಗರದಲ್ಲಿ ಹಮ್ಮಿಕೊಂಡಿದ್ದ ಗೋವುಗಳ ಕಿಚ್ಚಾಯಿಸುವ ಕಾರ್ಯಕ್ರಮ ಜನರಲ್ಲಿ ಹಳ್ಳಿಸೊಗಡಿನ ವಾತಾವರಣಕ್ಕೆ ಕರೆದೊಯ್ಯುವಲ್ಲಿ ಸಫಲವಾಯಿತು.
ಕಾರ್ಯಕ್ರಮದಲ್ಲಿ ಸುಮಾರು 80 ಗೋವುಗಳು ಪಾಲ್ಗೊಂಡಿದ್ದವು.ಬೆಂಕಿಯ ಮೇಲೆ ಹೋರಿಗಳು ಜಿಗಿಯುತ್ತಿದ್ದಂತೆ, ನೆರೆದಿದ್ದ ಜನರು ಸಿಳ್ಳೆ ಹಾಕಿ ಸಂಭ್ರಮಸಿದರು. ಕಾಕ್ಸ್ ಟೌನ್‌ನಲ್ಲಿ ಭಾರತಿ ನಗರ ಫೋರಂ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ತಾರಾ ಮತ್ತು ಚಿತ್ರ ನಟಿ ಸುಧಾರಾಣಿ ಪೌರ ಕಾರ್ಮಿಕರೊಂದಿಗೆ ಸಂಕ್ರಾಂತಿಯನ್ನು ಆಚರಿಸಿದ್ದು ವಿಶೇಷವಾಗಿತ್ತು. ನಗರದ ವಿವಿಧೆಡೆ ನೆಲೆಸಿರುವ ತಮಿಳು ಬಾಂಧ ವರು ಪೊಂಗಲ್ ಆಚರಿಸಿ ಸಂಭ್ರಮಿಸಿದರು.
ಆಧುನಿಕ ಜಗತ್ತಿಗೆ ಮೊರೆ ಹೋಗಿರುವ ಜನರು ನಮ್ಮ ಪರಂಪರೆ, ಸಂಸ್ಕೃತಿಯನ್ನು ಗೌರವಿಸುವ ಜತೆಗೆ ತಮ್ಮ ಮುಂದಿನ ಪೀಳಿಗೆಗೂ ಅದರ ಮಹತ್ವವನ್ನು ಮನಗಾಣಿಸಬೇಕು. ರೈತ ಮತ್ತು ಸಂಸ್ಕೃತಿ ಬೇರೆ ಬೇರೆಯಲ್ಲ. ಧರ್ಮ ಜಾತಿಗಳನ್ನು ಮೀರಿದ ಸಂಸ್ಕೃತಿ ಇಲ್ಲಿ ಅನಾವರಣಗೊಂಡಿದೆ.
●ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ
ಕಳೆದ ಹದಿನೈದು ವರ್ಷಗಳ ಹಿಂದೆ ಸಿರಿಧಾನ್ಯಗಳ ಬೇಸಾಯಕ್ಕೆ ಹೆಚ್ಚು ಪ್ರೋತ್ಸಾಹವಿರಲಿಲ್ಲ. ಆದರೆ, ಇತ್ತೀಚೆಗೆ ರೈತರು ಸ್ವಯಂಪ್ರೇರಿತವಾಗಿ ಸಿರಿಧಾನ್ಯಗಳನ್ನು ಬೆಳೆಯಲು ಆಸಕ್ತಿ ತೋರಿಸುತ್ತಿದ್ದು, 20 ಲಕ್ಷ ಹೆಕ್ಟೇರ್‌ನಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲೂ ಪ್ರಯತ್ನಿಸಲಾಗುತ್ತಿದೆ”
●ಕೃಷ್ಣಭೈರೇಗೌಡ, ಕೃಷಿ ಸಚಿವ
ಸೆಲ್ಫಿ ಸುಗ್ಗಿ!
ಪ್ರವೇಶ ದ್ವಾರದ ಆರಂಭದಲ್ಲೇ ಸಿಂಗಾರಗೊಂಡ ಸ್ಥಬ್ಧಚಿತ್ರಗಳು ಮತ್ತು ಕಮಾನು ಗಾಡಿಗಳು ಪ್ರೇಕ್ಷಕರನ್ನು ಸೆಳೆಯುತ್ತಿದ್ದವು. ಎತ್ತಿನ ಗಾಡಿ ಸವಾರಿಗೆ ದೊಡ್ಡವರಿಗೆ 20, ಮಕ್ಕಳಿಗೆ 10 ನಿಗದಿಪಡಿಸಲಾಗಿತ್ತು. ನೂರಾರು ಮಂದಿ ಖುಷಿಯಿಂದ ಎತ್ತಿನ ಗಾಡಿ ಸವಾರಿ ಮಾಡುತ್ತಾ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದ ಚಿತ್ರಣ ಕಂಡು ಬಂತು. ‘
ಉಚಿತ ಪೊಂಗಲ್ ವಿತರಣೆ!
ಸುಗ್ಗಿ-ಹುಗ್ಗಿ ಸಂಭ್ರಮದಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಉಚಿತವಾಗಿ ಪೊಂಗಲ್ ವಿತರಣೆ ಮಾಡಲಾಯಿತು. ಅಕ್ಷಯಪಾತ್ರ ಫೌಂಡೇಶನ್ ವತಿಯಿಂದ ನೀಡಿದ ಸಿಹಿ ಹಾಗೂ ಖಾರ ಪೊಂಗಲ್‌ನ್ನು ಸಾವಿರಾರು ಮಂದಿ ಸವಿದರು. ಕೆಲವೊಂದು ಮಳಿಗೆಗಳಲ್ಲಿ ಎಳ್ಳು- ಬೆಲ್ಲ ನೀಡಿ ಸತ್ಕರಿಸುತ್ತಿದ್ದದ್ದು ಕಂಡು ಬಂದಿತು.
ವೀಕೆಂಡ್ ಕಳೆಯೋಣ ಅಂತ ಸ್ನೇಹಿತೆಯರ ಜತೆ ಬಂದೆವು. ಆದರೆ, ನಮಗೆ ಕರ್ನಾಟಕ ಸಂಕ್ರಾಂತಿ ಹಬ್ಬದ ಆಚರಣೆ ತುಂಬಾ ಖುಷಿ ನೀಡಿತು. ಇಲ್ಲಿನ ಜಾನಪದ ನೃತ್ಯಗಳು ಹಾಗೂ ಆಚರಣೆ, ಎತ್ತುಗಳ ಕಿಚ್ಚು ಹಾಯುವಿಕೆ ಅತ್ಯಂತ ಸೊಗಸಾಗಿತ್ತು.
●ಚಂದ್ರಿಮಾ, ಪಶ್ಚಿಮ ಬಂಗಾಳ
ಉದ್ಯೋಗ ಸೇರಿ ಕೆಲವು ಅನಿವಾರ್ಯತೆಗಾಗಿ ಹಳ್ಳಿ ಬಿಟ್ಟು ಬೆಂಗಳೂರಿಗೆ ಬರಿತೀವಿ. ನಮ್ಮ ಸಂಸ್ಕೃತಿ ಆಚರಣೆಗಳು ತುಂಬಾ ಮಿಸ್ ಮಾಡ್ಕೊತಿವೆ. ಇವತ್ತು ಹಳ್ಳಿ ಸೊಗಡಿನ ಸಂಕ್ರಾಂತಿ ಸಂಭ್ರಮ ನೋಡಿದ ಖುಷಿಯಾಯಿತು. ಆಗಾಗ್ಗೆ ಇಂತಹ ಕಾರ್ಯಕ್ರಮಗಳು ನಡೆಯಬೇಕು.
●ಗಾಯತ್ರಿ ರಘುನಂದನ್, ಇಂದಿರಾನಗರ
ಸುಗ್ಗಿ-ಹುಗ್ಗಿ ಕಾರ್ಯಕ್ರಮ ಚೆನ್ನಾಗಿದೆ. ಕುಟುಂಬ ಸಮೇತ ಬಂದವರಿಗೆ ಇದೊಂದು ಸದಾವಕಾಶ. ಆದರೆ, ಸರ್ಕಾರಗಳು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಚಾರ ನೀಡಬೇಕು. ಇದರಿಂದ ನಮ್ಮ ಸಂಸ್ಕೃತಿ ಆಚರಣೆ ನೋಡುವ ಅವಕಾಶ ಕಲ್ಪಿಸಿದಂತಾಗುತ್ತದೆ.
●ಸುಮನ್, ಖಾಸಗಿ ಕಂಪನಿ ಉದ್ಯೋಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.