ಕಪಿಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್
Team Udayavani, Jan 16, 2018, 6:30 AM IST
ಮಂಗಳೂರು: ತೆಂಗಿನಕಾಯಿ ಬೆಲೆ ಗಗನ ಕ್ಕೇರುತ್ತಿರಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನ ಕೃಷಿಕರ ಪಾಲಿಗೆ ಮಂಗಗಳ ಕಾಟ ಭಾರೀ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯ ಒಂದು ಊರಿನ ಕೃಷಿಕರೆಲ್ಲ ಜತೆಗೂಡಿ ಈಗ ಕೋತಿಗಳ ಮೇಲೆ “ಸರ್ಜಿಕಲ್ ಸ್ಟ್ರೈಕ್’ಗೆ ಮುಂದಾಗಿದ್ದು, ಇದಕ್ಕಾಗಿ ಸುಮಾರು 25 ವರ್ಷಗಳಿಂದ ಮಂಗ ಹಿಡಿಯುವುದನ್ನೇ ಕಾಯಕವಾಗಿಸಿಕೊಂಡಿರುವ ವ್ಯಕ್ತಿಯೊಬ್ಬರನ್ನು ಬಹು ದೂರದ ಅರಸೀಕೆರೆಯಿಂದ ದುಬಾರಿ ಸಂಭಾವನೆಗೆ ತಮ್ಮೂರಿಗೆ ಕರೆಸಿಕೊಂಡಿದ್ದಾರೆ!
ಕಾಟ ಕೊಡುತ್ತಿರುವ ಮಂಗಗಳನ್ನು ಹಿಡಿದು ಕಾಡಿಗೆ ಅಟ್ಟುವುದಕ್ಕೆ ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ ಕೃಷಿಕರು ಕೈಜೋಡಿಸಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ರಂಗಸ್ವಾಮಿ ಅವರನ್ನು ಕರೆಸಿಕೊಂಡಿದ್ದಾರೆ. ರಂಗಸ್ವಾಮಿ ಅವರ ಕಾಯಕ ಕೃಷಿಗೆ ಹಾನಿ ಮಾಡುತ್ತಿರುವ ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವುದು. ಅವರು ತನ್ನ ತಂದೆಯಿಂದ ಈ ವಿದ್ಯೆಯನ್ನು ಕಲಿತು ಅದನ್ನೇ ವೃತ್ತಿ ಮಾಡಿ ಕೊಂಡಿದ್ದಾರೆ. ಆಶ್ಚರ್ಯವೆಂದರೆ ರಂಗಸ್ವಾಮಿ ಮತ್ತವರ ಕುಟುಂಬಕ್ಕೆ 25 ವರ್ಷಗಳಿಂದ ಇದೇ ಪ್ರಮುಖ ಕಸುಬು ಮತ್ತು ಆದಾಯ ಮೂಲ. ಒಂದು ಊರಿನಲ್ಲಿ ತೋಟಕ್ಕೆ ಲಗ್ಗೆ ಹಾಕುವ ಕಪಿಗಳನ್ನು ಹಿಡಿದು ಕಾಡಿಗೆ ಬಿಡುವುದಕ್ಕೆ ಅವರು ವಿಧಿಸುವ ಶುಲ್ಕ 30ರಿಂದ 35 ಸಾವಿರ ರೂ.! ಸರಪಾಡಿ ಕೃಷಿಕರು 35,000 ರೂ. ಸಂಭಾವನೆಗೆ ರಂಗ ಸ್ವಾಮಿ, ತಂಡವನ್ನು ಕರೆಸಿಕೊಂಡಿದ್ದಾರೆ.
ನಷ್ಟವಿಲ್ಲ, ಲಾಭವೇ
ಸಾಮಾನ್ಯವಾಗಿ ವಾನರ ಸೇನೆ ಒಬ್ಬ ಕೃಷಿಕರ ತೋಟಕ್ಕೆ ಲಗ್ಗೆ ಇಟ್ಟರೆ ಆ ಬಳಿಕ ಅಕ್ಕಪಕ್ಕದ ತೋಟಗಳಿಗೂ ನುಗ್ಗಿ ಹಣ್ಣು
ಹಂಪಲು, ತರಕಾರಿ ಸಹಿತ ಫಸಲನ್ನು ಕಿತ್ತು, ತಿಂದು ಹಾಕುತ್ತವೆ. ಏನೂ ಸಿಗದಿದ್ದರೆ ಬಾಳೆತಿರಿ, ಎಳೆಯ ಬಾಳೆಗಿಡ, ಚಿಗುರು, ಹೂವುಗಳನ್ನೂ ಮುಕ್ಕುತ್ತವೆ. ಕೃಷಿಕರು ತಮಗೆ ತಿಳಿದಿರುವ ವಿಧಾನಗಳನ್ನೆಲ್ಲ ಪ್ರಯೋಗಿಸಿ ಕಪಿ ಓಡಿಸಿ ಸುಸ್ತಾಗುತ್ತಾರೆಯೇ ಹೊರತು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದೇ ಇಲ್ಲ. ಹೀಗಿರುವಾಗ ರಂಗಸ್ವಾಮಿ ಬಗ್ಗೆ ತಿಳಿದ ಸರಪಾಡಿ ಗ್ರಾಮಸ್ಥರು ಅವರನ್ನು ಕರೆಸಿಕೊಳ್ಳುವ ತೀರ್ಮಾನ ಮಾಡಿದ್ದರು. ಜಿಲ್ಲೆಯಲ್ಲಿ ರೋಗಬಾಧೆಯಿಂದ ತೆಂಗಿನಕಾಯಿ ಉತ್ಪಾದನೆ ಕುಂಠಿತವಾಗಿದೆ, ಬೆಲೆ ಗಗನಕ್ಕೇರಿದೆ; ಹೀಗಿರುವಾಗ ಅಧಿಕ ಸಂಭಾವನೆ ಪಾವತಿಸಿ ರಂಗಸ್ವಾಮಿ ಮತ್ತು ತಂಡವನ್ನು ಕರೆಸಿಕೊಂಡರೂ ಅದರಿಂದ ನಷ್ಟವಾಗದು ಎಂಬ ಲೆಕ್ಕಾಚಾರ ಹಾಕಿದ್ದಾರೆ. ಸದ್ಯ ರಂಗಸ್ವಾಮಿ ಮತ್ತು ಅವರ ಪತ್ನಿ ಸರಪಾಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಸರಪಾಡಿ ಗ್ರಾಮದಲ್ಲಿರುವ ಎಲ್ಲ ಕೋತಿಗಳನ್ನು ಸೆರೆಹಿಡಿದು ಕಾಡಿಗೆ ಬಿಡುವ ತನಕ ರಂಗಸ್ವಾಮಿ ತಂಡ ಇಲ್ಲೇ ಠಿಕಾಣಿ ಹೂಡಿರುತ್ತದೆ.
ಕಾರ್ಯಾಚರಣೆ ಹೇಗೆ ?
ಕೃಷಿಕರ ಜತೆ ಮಂಗ ಹಿಡಿಯುವ ಖರ್ಚುವೆಚ್ಚದ ಬಗ್ಗೆ ಒಪ್ಪಂದ ಮಾಡಿಕೊಂಡ ಬಳಿಕ ರಂಗಸ್ವಾಮಿ ಮತ್ತು ತಂಡ ಕೃಷಿಕರ ತೋಟಗಳಿಗೆ ಆಗಮಿಸುತ್ತದೆ. ಅನಂತರ ಕೋತಿಗಳ ಚಲನವಲನದ ಬಗ್ಗೆ ನಿಗಾ ವಹಿಸುತ್ತಾರೆ. ಜತೆಗೆ ವಾನರ ತಂಡ ರಾತ್ರಿ ಎಲ್ಲಿ ಉಳಿದುಕೊಳ್ಳುತ್ತದೆ ಎಂಬುದನ್ನು ಕೂಡ ಗಮನಿಸುತ್ತಾರೆ. ಮಂಗಗಳು ಹೆಚ್ಚಾಗಿ ಓಡಾಡುವ ತೋಟದೊಳಗೆ ಒಂದೆಡೆ ಅಡಿಕೆ ಮರದ ಸಲಿಕೆಗಳಿಂದ ವಿಶೇಷವಾದ ಗೂಡು ನಿರ್ಮಿಸುತ್ತಾರೆ. ಈ ಗೂಡಿಗೆ ಹತ್ತಿರದಲ್ಲೇ ತೆಂಗಿನ ಗರಿಗಳ
ಮತ್ತೂಂದು ಗೂಡನ್ನು ನಿರ್ಮಿಸಿ ಅದರೊಳಗೆ ಕೋತಿಗಳ ಆಗಮನವನ್ನು ಕಾಯುತ್ತಿರುತ್ತಾರೆ. ಮಂಗಗಳನ್ನು ಸೆರೆಹಿಡಿಯುವ ಗೂಡಿಗೂ ರಂಗಸ್ವಾಮಿ ತಂಡ ಅವಿತಿರುವ ಗೂಡಿಗೂ ಹಗ್ಗದ ಸಂಪರ್ಕ ಇದ್ದು, ಕೋತಿಗಳು ಗೂಡಿನೊಳಗೆ ಪ್ರವೇಶಿಸಿದ ತತ್‌ಕ್ಷಣ ಹಗ್ಗದ ಮೂಲಕ ಅದರ ಬಾಗಿಲು ಮುಚ್ಚಿ ಸೆರೆ ಹಿಡಿಯುತ್ತಾರೆ.
ಕೋತಿಗಳು ಮೊದಲ ಬಾರಿಗೆ ಗೂಡು ಪ್ರವೇಶಿಸಿದಾಗಲೇ ಸೆರೆಹಿಡಿಯುವುದಿಲ್ಲ. ಕಪಿಗಳು ಗೂಡಿನ ಒಳಗಡೆ ಇರಿಸಲಾಗುವ ತಿಂಡಿತಿನಿಸುಗಳನ್ನು ತಿಂದು ಹೋಗುತ್ತವೆ. 2-3 ದಿನ ಇದೇ ರೀತಿ ಗೂಡಿನೊಳಗೆ ಬಂದು ಆಹಾರ ತಿಂದು ತಮ್ಮ ಪಾಡಿಗೆ ಹೋಗುತ್ತವೆ. ಇದು ರೂಢಿಯಾಗುತ್ತಿದ್ದಂತೆ ಗುಂಪಾಗಿ ಗೂಡಿನೊಳಗೆ ಪ್ರವೇಶಿಸಿದಾಗ ಎಲ್ಲ ಕೋತಿಗಳನ್ನು ಸೆರೆ ಹಿಡಿಯಲಾಗುತ್ತದೆ. ಸೆರೆ ಸಿಕ್ಕ ಕೋತಿಗಳನ್ನು ಗೂಡಿನ ಒಳಗೆ ಇನ್ನೊಂದು ಕೋಣೆ ರಚಿಸಿ ಅಲ್ಲಿ ಕೂಡಿ ಹಾಕಲಾಗುತ್ತದೆ.
ಕೂಡಿ ಹಾಕಿದ ಕಪಿಗಳು ಗಲಾಟೆ ಮಾಡದಂತೆ ಆಹಾರ ನೀಡಿ ಸುಮ್ಮನಿರಿಸಲಾಗುತ್ತದೆ. ಹಿಡಿದ ಕೋತಿಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ವಾಹನದಲ್ಲಿ ಅವುಗಳನ್ನು ದೂರದ ಕಾಡಿಗೆ ಒಯ್ದು ಬಿಡಲಾಗುತ್ತದೆ. ಸಾಮಾನ್ಯವಾಗಿ ರಂಗಸ್ವಾಮಿ ಈ ರೀತಿ ಕೋತಿಗಳನ್ನು ಹಿಡಿದು ಕಾಡಿಗೆ ಬಿಟ್ಟ ಅನಂತರ ಕೃಷಿಕರಿಗೆ ಅವುಗಳ ಕಾಟವಿರುವುದಿಲ್ಲ.
ಕೋತಿ ಸೆರೆ ವೃತ್ತಿಗೆ 25 ವರ್ಷ
ಅರಸೀಕೆರೆ ತಾಲೂಕಿನ ಬಾಣಾವರ ಎಂಬ ಹಳ್ಳಿಯ ನಿವಾಸಿ ರಂಗಸ್ವಾಮಿಯವರ ತಂಡ ಕಳೆದ 25 ವರ್ಷಗಳಿಂದ ಕೋತಿ ಹಿಡಿದು ಕಾಡಿಗೆ ಬಿಡುವ ಕಾರ್ಯವನ್ನು ಮಾಡುತ್ತಿದೆ. ಒಂದು ಬಾರಿಗೆ ಗರಿಷ್ಠ ಸುಮಾರು 60 ಕೋತಿಗಳನ್ನು ಇವರು ಹಿಡಿದಿದ್ದಾರೆ. ಸ್ಥಳೀಯವಾಗಿ ಕೆಲವು ಮಂದಿ ಕೃಷಿಕರು ಸೇರಿ ಹಣಹೊಂದಿಸಿಕೊಂಡು ಇವರ ತಂಡವನ್ನು ಸಂಪರ್ಕಿಸುತ್ತಾರೆ. ಸೆರೆಹಿಡಿದ ಕೋತಿಗಳಿಗೆ ಆಹಾರವನ್ನು ಕೃಷಿಕರೇ ನೀಡಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.